< ಕೀರ್ತನೆಗಳು 88 >
1 ೧ ಹಾಡು; ಕೋರಹೀಯರ ಕೀರ್ತನೆ; ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ಜೇರಹ ಕುಲದವನಾದ ಹೇಮಾನನ ಪದ್ಯ. ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ, ಹಗಲಿರುಳು ನಿನಗೆ ಮೊರೆಯಿಡುತ್ತೇನೆ.
ದುಃಖದಲ್ಲಿ ಮುಳುಗಿರುವವನ ಮೊರೆ; ಕೋರಹೀಯರ ಕೀರ್ತನೆ; ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ಜೇರಹ ಕುಲದವನಾದ ಹೇಮಾನನ ಪದ್ಯ. ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ, ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.
2 ೨ ನನ್ನ ಪ್ರಾರ್ಥನೆಯು ನಿನ್ನ ಸನ್ನಿಧಿಯನ್ನು ಮುಟ್ಟಲಿ; ಕಿವಿಗೊಟ್ಟು ನನ್ನ ಕೂಗನ್ನು ಕೇಳು.
ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ. ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.
3 ೩ ನನ್ನ ಜೀವವು ಕಷ್ಟಗಳಿಂದ ತುಂಬಿಹೋಯಿತು; ನನ್ನ ಪ್ರಾಣವು ಪಾತಾಳಕ್ಕೆ ಹತ್ತಿರವಾಯಿತು. (Sheol )
ನನ್ನ ಪ್ರಾಣವು ಕಷ್ಟದಿಂದ ತುಂಬಿದೆ; ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ. (Sheol )
4 ೪ ಸಮಾಧಿಯಲ್ಲಿ ಸೇರುವವರೊಳಗೆ ಎಣಿಸಲ್ಪಟ್ಟಿದ್ದೇನೆ; ನಿತ್ರಾಣ ಮನುಷ್ಯನಂತಿದ್ದೇನೆ.
ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ; ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.
5 ೫ ಸತ್ತವನ ಹಾಗೆ ನನ್ನನ್ನು ಹೊರಗೆ ಹಾಕಿದ್ದಾರೆ; ಹತನಾದವನಂತೆ ಸಮಾಧಿಯಲ್ಲಿ ಬಿದ್ದಿದ್ದೇನೆ. ಹತರಾದವರು ನಿನ್ನ ಪರಿಪಾಲನೆ ಇಲ್ಲದವರು; ಅಂಥವರನ್ನು ನೀನು ನೆನಪು ಮಾಡಿಕೊಳ್ಳುವುದಿಲ್ಲ.
ಹತರಾದವರು ಸಮಾಧಿಯಲ್ಲಿ ಮಲಗಿದಂತೆ ನಾನೂ ಸತ್ತವರೊಂದಿಗೆ ಸೇರಿರುತ್ತೇನೆ. ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ. ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.
6 ೬ ಅಧೋಲೋಕದಲ್ಲಿಯೂ, ಗಾಢಾಂಧಕಾರದಲ್ಲಿಯೂ, ಅಗಾಧ ಸ್ಥಳದಲ್ಲಿಯೂ ನನ್ನನ್ನು ತಳ್ಳಿಬಿಟ್ಟಿದ್ದಿ.
ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.
7 ೭ ನಿನ್ನ ಕೋಪಭಾರವು ನನ್ನನ್ನು ಕುಗ್ಗಿಸಿಬಿಟ್ಟಿದೆ; ನಿನ್ನ ಎಲ್ಲಾ ತೆರೆಗಳಿಂದ ನನ್ನನ್ನು ಬಾಧಿಸಿದ್ದಿ. (ಸೆಲಾ)
ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ. ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.
8 ೮ ನನ್ನ ಆಪ್ತರು ನನ್ನನ್ನು ನೋಡಿ ಅಸಹ್ಯಪಟ್ಟರು, ನನ್ನನ್ನು ಅವರು ಹೇಸಿ ಬಿಟ್ಟುಹೋಗುವಂತೆ ಮಾಡಿದ್ದೀ; ಸಿಕ್ಕಿಬಿಟ್ಟಿದ್ದೇನೆ, ಬಿಡಿಸಿಕೊಳ್ಳಲಾರೆನು.
ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.
9 ೯ ಬಾಧೆಯಿಂದ ನನ್ನ ಕಣ್ಣುಗಳು ಮೊಬ್ಬಾಗಿ ಹೋಗಿವೆ. ಯೆಹೋವನೇ, ಹಗಲೆಲ್ಲಾ ಕೈಚಾಚಿ ನಿನಗೆ ಮೊರೆಯಿಡುತ್ತೇನೆ.
ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ. ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ. ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.
10 ೧೦ ನೀನು ಸತ್ತವರಿಗೆ ಅದ್ಭುತಕಾರ್ಯಗಳನ್ನು ತೋರಿಸುವಿಯೋ? ಪ್ರೇತಗಳು ಎದ್ದು ನಿನ್ನನ್ನು ಕೊಂಡಾಡುವವೋ? (ಸೆಲಾ)
ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ? ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?
11 ೧೧ ಸಮಾಧಿಯಲ್ಲಿ ನಿನ್ನ ಕೃಪೆಯನ್ನೂ, ನಾಶನಲೋಕದಲ್ಲಿ ನಿನ್ನ ಸತ್ಯತೆಯನ್ನು ಸಾರುವುದುಂಟೋ?
ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ? ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?
12 ೧೨ ಕತ್ತಲೆಯ ಲೋಕದಲ್ಲಿ ನಿನ್ನ ಮಹತ್ಕಾರ್ಯಗಳೂ, ಮರೆಯುವ ದೇಶದಲ್ಲಿ ನಿನ್ನ ನೀತಿಯು ತಿಳಿಯಲ್ಪಡುವವೋ?
ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ ನಿಮ್ಮ ನೀತಿಯೂ ತಿಳಿಯಲಾಗುವುದೋ?
13 ೧೩ ನಾನಾದರೋ ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಮುಂಜಾನೆಯಲ್ಲಿ ನನ್ನ ವಿಜ್ಞಾಪನೆಯು ನಿನ್ನ ಮುಂದೆ ಬರುವುದು.
ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ. ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.
14 ೧೪ ಯೆಹೋವನೇ, ನನ್ನ ಪ್ರಾಣವನ್ನೇಕೆ ತಳ್ಳಿಬಿಟ್ಟಿ? ನಿನ್ನ ಮುಖವನ್ನು ಮರೆಮಾಡಿದ್ದೇಕೆ?
ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ. ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?
15 ೧೫ ಯೌವನಾರಭ್ಯ ಕುಗ್ಗಿದವನೂ, ಮೃತಪ್ರಾಯನೂ, ನಿನ್ನ ಗದರಿಕೆಯಿಂದ ದೆಸೆಗೆಟ್ಟವನೂ ಆಗಿದ್ದೇನಲ್ಲಾ.
ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ. ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
16 ೧೬ ನಿನ್ನ ಕೋಪಜ್ವಾಲೆಯು ನನ್ನನ್ನು ಕವಿದಿದೆ; ನಿನ್ನಿಂದುಂಟಾದ ದಿಗಿಲಿನಿಂದ ಹಾಳಾದೆನು.
ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ. ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.
17 ೧೭ ಅವು ದಿನವೆಲ್ಲಾ ನೀರಿನಂತೆ ನನ್ನನ್ನು ಆವರಿಸಿಕೊಂಡಿವೆ; ಒಟ್ಟುಗೂಡಿ ನನ್ನನ್ನು ಸುತ್ತಿಬಿಟ್ಟಿವೆ.
ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ; ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.
18 ೧೮ ನನ್ನ ಆಪ್ತಮಿತ್ರರನ್ನು ದೂರಮಾಡಿದಿ; ಅಂಧಕಾರವೇ ನನ್ನ ಒಡನಾಡಿ.
ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ. ಅಂಧಕಾರವೇ ನನ್ನ ಪರಿಚಯವು.