< ಜ್ಞಾನೋಕ್ತಿಗಳು 1 >

1 ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.
ಇಸ್ರಾಯೇಲರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಜ್ಞಾನೋಕ್ತಿಗಳು:
2 ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು, ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.
ಜನರು ಜ್ಞಾನವನ್ನೂ ಶಿಸ್ತನ್ನೂ ಪಡೆದುಕೊಳ್ಳುವುದಕ್ಕೆ; ವಿವೇಕದ ಮಾತುಗಳನ್ನು ಗ್ರಹಿಸುವುದಕ್ಕೆ;
3 ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ, ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.
ಅಂದರೆ, ಶಿಕ್ಷಣ, ವಿವೇಕ ನಡವಳಿ, ಸರಿಯಾದದ್ದನ್ನು ಮಾಡುವುದು ನ್ಯಾಯ ಮತ್ತು ಯುಕ್ತವಾದವುಗಳನ್ನು ನಡೆಸುವ ಜ್ಞಾನೋಕ್ತಿಗಳು;
4 ಈ ನುಡಿಗಳು ಮೂಢರಿಗೆ ಜಾಣತನವನ್ನೂ, ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.
ಮುಗ್ಧರಿಗೆ ವಿವೇಕವನ್ನೂ ಯೌವನಸ್ಥರಿಗೆ ತಿಳುವಳಿಕೆ ಹಾಗೂ ಸ್ವವಿವೇಚನೆಯನ್ನೂ ಕೊಡುವುದಕ್ಕಾಗಿ ಈ ಜ್ಞಾನೋಕ್ತಿಗಳಿವೆ.
5 ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ; ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
6 ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
ಜ್ಞಾನೋಕ್ತಿಗಳನ್ನು, ಸಾಮ್ಯಗಳನ್ನು, ಜ್ಞಾನಿಗಳ ಮಾತು ಹಾಗೂ ಒಗಟುಗಳನ್ನು ಅರ್ಥಮಾಡಿಕೊಳ್ಳಲು ಇವು ಬರೆಯಲಾಗಿವೆ.
7 ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ. ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ.
8 ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
ಮಗನೇ, ನಿನ್ನ ತಂದೆಯ ಶಿಕ್ಷಣಗಳನ್ನು ಕೇಳು, ನಿನ್ನ ತಾಯಿಯ ಉಪದೇಶವನ್ನು ತೊರೆಯಬೇಡ.
9 ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ, ಕೊರಳಿಗೆ ಹಾರದಂತಿರುವುದು.
ಅವು ನಿನ್ನ ತಲೆಗೆ ಸುಂದರ ಕಿರೀಟ ನಿನ್ನ ಕೊರಳನ್ನು ಅಲಂಕರಿಸುವ ಹಾರ.
10 ೧೦ ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.
ಮಗನೇ, ಪಾಪಿಗಳು ನಿನ್ನನ್ನು ಸೆಳೆದರೆ ನೀನು ಒಪ್ಪಬೇಡ.
11 ೧೧ ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.
ಒಂದು ವೇಳೆ ಅವರು ನಿನಗೆ, “ನಮ್ಮೊಂದಿಗೆ ಬಾ, ಜನರ ರಕ್ತಕ್ಕಾಗಿ ಒಳಸಂಚು ಮಾಡೋಣ, ನಿರಪರಾಧಿಯ ರಕ್ತಕ್ಕಾಗಿ;
12 ೧೨ ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ, ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ. (Sheol h7585)
ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ. (Sheol h7585)
13 ೧೩ ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು, ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.
ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;
14 ೧೪ ನಮ್ಮ ಸಂಗಡ ಚೀಟು ಹಾಕು; ನಮ್ಮೆಲ್ಲರ ಹಣದ ಚೀಲ ಒಂದೇ ಆಗಿರಲಿ” ಎಂದು ಹೇಳಿದರೆ,
ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಾವೆಲ್ಲರೂ ಹಣಹಂಚಿಕೊಳ್ಳೋಣ,” ಎಂದು ಹೇಳುವುದಾದರೆ.
15 ೧೫ ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು, ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.
ಮಗನೇ, ಅವರೊಂದಿಗೆ ಸೇರಬೇಡ, ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
16 ೧೬ ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು, ಅವರು ರಕ್ತವನ್ನು ಸುರಿಸಲು ಆತುರಪಡುವರು.
ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತಸುರಿಸುವುದಕ್ಕೆ ಆತುರಪಡುತ್ತವೆ.
17 ೧೭ ಪಕ್ಷಿಗಳ ಕಣ್ಣೆದುರಿಗೆ ಬಲೆಯನ್ನೊಡ್ಡುವುದು ವ್ಯರ್ಥ.
ಪಕ್ಷಿಗಳ ಕಣ್ಣೆದುರಿಗೆ ಕಾಣುವಂತೆ ಬಲೆಯನ್ನು ಹರಡುವುದು ವ್ಯರ್ಥವಲ್ಲವೇ!
18 ೧೮ ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವುದಕ್ಕೆ ಹೊಂಚುಹಾಕುತ್ತಾರೆ, ಸ್ವಜೀವವನ್ನು ತೆಗೆದುಕೊಳ್ಳುವುದಕ್ಕೆ ಕಾದಿರುತ್ತಾರೆ.
ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ. ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.
19 ೧೯ ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.
ಅಕ್ರಮ ಲಾಭದ ಬೆನ್ನಟ್ಟಿ ಹೋಗುವವರೆಲ್ಲರ ಗತಿ ಇದೇ. ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.
20 ೨೦ ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಮಾಡುತ್ತಾಳೆ.
ಜ್ಞಾನವೆಂಬಾಕೆಯು ಬೀದಿಯಲ್ಲಿ ಕೂಗುತ್ತಾಳೆ, ಬಹಿರಂಗ ಸ್ಥಳಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
21 ೨೧ ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ, ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ,
ಜನಭರಿತ ಬೀದಿಗಳಲ್ಲಿ ಆಕೆ ಕರೆಯುತ್ತಾಳೆ, ಪಟ್ಟಣದ ಹೆಬ್ಬಾಗಿಲುಗಳಲ್ಲಿ ಹೀಗೆಂದು ಭಾಷಣ ಮಾಡುತ್ತಾಳೆ:
22 ೨೨ “ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು? ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು?
“ಮುಗ್ಧರೇ ನೀವು ಎಷ್ಟು ಕಾಲ ಮುಗ್ಧತೆಯನ್ನು ಪ್ರೀತಿಸುವಿರಿ. ಕುಚೋದ್ಯಗಾರರೇ ಎಷ್ಟು ಕಾಲ ಕುಚೋದ್ಯಗಾರರಾಗಿರಲು ಇಚ್ಛಿಸುವಿರಿ? ಜ್ಞಾನಹೀನರೇ, ಎಷ್ಟು ಕಾಲ ಪರಿಜ್ಞಾನವನ್ನು ಹಗೆ ಮಾಡುವಿರಿ?
23 ೨೩ ನನ್ನ ಗದರಿಕೆಗೆ ಲಕ್ಷ್ಯಕೊಡಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು.
ನನ್ನ ಗದರಿಕೆ ಕೇಳಿ ನೀವು ಪಶ್ಚಾತ್ತಾಪಪಡಿರಿ! ಆಗ ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನಿಮಗೆ ನನ್ನ ಬೋಧನೆಗಳನ್ನು ಪ್ರಕಟಿಸುವೆನು.
24 ೨೪ ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;
ನಾನು ಕರೆದಾಗ ನೀವು ನನ್ನನ್ನು ತಿರಸ್ಕರಿಸಿದ್ದೀರಿ ನಾನು ನನ್ನ ಕೈಚಾಚಿದಾಗ ಯಾರೂ ಮನುಷ್ಯನೂ ಗಮನಿಸಲಿಲ್ಲ.
25 ೨೫ ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.
ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ; ನನ್ನ ಗದರಿಕೆಯನ್ನು ನೀವು ಬೇಡವೆಂದು ತಳ್ಳಿಬಿಟ್ಟಿದ್ದರಿಂದ
26 ೨೬ ಆದಕಾರಣ ಬಿರುಗಾಳಿಯಂತೆ ಅಪಾಯವೂ, ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ
ಬಿರುಗಾಳಿಯಂತೆ ನಿಮಗೆ ವಿಪತ್ತು ಬಂದಾಗ ನಾನು ನಗುವೆನು. ಆಪತ್ತು ನಿಮ್ಮನ್ನು ಹಿಂದಿಕ್ಕಿದಾಗ, ನಾನು ಪರಿಹಾಸ್ಯ ಮಾಡುವೆನು.
27 ೨೭ ನಿಮ್ಮ ಅಪಾಯದಲ್ಲಿ ನಾನೂ ನಗುವೆನು; ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು.
ಚಂಡಮಾರುತವು ನಿಮ್ಮನ್ನು ಬಿರುಗಾಳಿಯಂತೆ ತಾಕಿದಾಗ, ವಿಪತ್ತು ಸುಂಟರಗಾಳಿಯಂತೆ ನಿಮ್ಮ ಮೇಲೆ ಬೀಸಿದಾಗ, ಯಾತನೆ ಮತ್ತು ತೊಂದರೆ ನಿಮ್ಮನ್ನು ಆವರಿಸಿದಾಗಲೂ ಪರಿಹಾಸ್ಯಕ್ಕೆ ಒಳಗಾಗುವಿರಿ.
28 ೨೮ ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು, ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು.
“ಆಗ ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರ ಕೊಡೆನು. ಅವರು ನನ್ನನ್ನು ಆತುರದಿಂದ ಹುಡುಕುವರು, ಆದರೆ ಅವರು ನನ್ನನ್ನು ಕಂಡುಕೊಳ್ಳುವುದಿಲ್ಲ.
29 ೨೯ ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು.
ಏಕೆಂದರೆ ಅವರು ಅರಿವನ್ನು ಹಗೆಮಾಡಿ, ಯೆಹೋವ ದೇವರಿಗೆ ಭಯಪಡುವುದನ್ನು ಆರಿಸಿಕೊಳ್ಳದೆ ಹೋದರು.
30 ೩೦ ನನ್ನ ಬೋಧನೆಯನ್ನು ಕೇಳಲೊಲ್ಲದೆ, ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು.
ನನ್ನ ಬುದ್ಧಿವಾದವನ್ನು ಸ್ವೀಕರಿಸದೆ, ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದರು.
31 ೩೧ ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ, ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು.
ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ, ತಮ್ಮ ಸ್ವಂತ ಕುಯುಕ್ತಿಗಳಿಂದಲೇ ಹೊಟ್ಟೆ ತುಂಬಿಕೊಳ್ಳುವರು.
32 ೩೨ ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.
ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು. ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.
33 ೩೩ ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು, ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.
ನನಗೆ ಕಿವಿಗೊಡುವವರಾದರೋ ಸುರಕ್ಷಿತರಾಗಿ ಜೀವಿಸುವರು, ಕೇಡಿನ ಭಯವಿಲ್ಲದೇ ನೆಮ್ಮದಿಯಿಂದ ಇರುವರು.”

< ಜ್ಞಾನೋಕ್ತಿಗಳು 1 >