< ಚೆಫನ್ಯನು 2 >

1 ನಾಚಿಕೆ ಇಲ್ಲದ ಜನಾಂಗದವರೇ, ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ,
ನಾಚಿಕೆಗೇಡಿ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ, ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವುದಕ್ಕೆ ಮೊದಲೇ ಯೆಹೋವನ ಸಿಟ್ಟಿನ ದಿನವೂ ಉರಿದು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ, ನೀವೆಲ್ಲರೂ ಸೇರಿ ಬನ್ನಿರಿ, ಒಟ್ಟಾಗಿ ಕೂಡಿರಿ.
2 ತೀರ್ಪು ಕಾರ್ಯಗತಗೊಳ್ಳುವ ಮುಂಚೆ ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ ಯೆಹೋವ ದೇವರ ಉಗ್ರಕೋಪವು ನಿಮ್ಮ ಮೇಲೆ ಬರುವ ಮುಂಚೆ, ಯೆಹೋವ ದೇವರ ಕೋಪದ ದಿನವು ನಿಮ್ಮ ಮೇಲೆ ಬರುವ ಮುಂಚೆ,
ಆ ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ.
3 ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ ಯೆಹೋವ ದೇವರನ್ನು ಹುಡುಕಿರಿ. ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ. ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.
ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ, ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ; ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.
4 ಗಾಜವು ಕೈಬಿಡಲಾಗುವುದು; ಅಷ್ಕೆಲೋನ್ ಹಾಳಾಗುವುದು; ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು, ಎಕ್ರೋನ್ ಕಿತ್ತೆಸೆಯಲಾಗುವುದು.
ಗಾಜ ಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು, ಅಷ್ಡೋದ್ ನಿವಾಸಿಗಳನ್ನು ನಡು ಮಧ್ಯಾಹ್ನದಲ್ಲಿ ಆಕ್ರಮಿಸಿ ಓಡಿಸಿಬಿಡುವರು, ಎಕ್ರೋನ್ ನಗರ ನಿರ್ಮೂಲವಾಗುವುದು.
5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ! ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ, “ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,” ಎಂದು ಅವರು ಹೇಳುತ್ತಾರೆ.
ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ! ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ವಾಸಿಸುವ ಜನರೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು.
6 ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.
ಸಮುದ್ರ ತೀರದ ಆ ಪ್ರಾಂತ್ಯವು ಹುಲ್ಲುಗಾವಲಾಗಿ, ಕುರುಬರ ಗುಡಿಸಲಾಗಿ, ಹಿಂಡುಗಳ ದೊಡ್ಡಿಗಳು ಇವೇ ಅಲ್ಲಿರುವವು.
7 ಅದು ಯೆಹೂದದ ಮನೆತನದಲ್ಲಿ ಉಳಿದವರ ವಶವಾಗುವುದು. ಅದರ ಮೇಲೆ ಮೇಯಿಸುವರು. ಅಷ್ಕೆಲೋನಿನ ಮನೆತನಗಳಲ್ಲಿ ಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು. ಏಕೆಂದರೆ ಅವರ ದೇವರಾದ ಯೆಹೋವ ದೇವರು, ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು.
ಆ ಕರಾವಳಿಯು ಉಳಿದ ಯೆಹೂದ್ಯರ ಪಾಲಾಗುವುದು; ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು; ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು.
8 “ಮೋವಾಬಿನ ನಿಂದೆಯನ್ನೂ ಅಮ್ಮೋನ್ಯರ ಬೈಗಳವನ್ನೂ ಅವರು ನನ್ನ ಜನರನ್ನೂ ನಿಂದಿಸಿ, ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.
ಮೋವಾಬ್ಯರೂ, ಅಮ್ಮೋನ್ಯರೂ ಅಹಂಕಾರದಿಂದ ನನ್ನ ಜನರ ಮೇರೆಯನ್ನು ಮೀರಿ, ಅವರನ್ನು ನಿಂದಿಸಿ, ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.
9 ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಜೀವದಾಣೆ,” “ನಿಶ್ಚಯವಾಗಿ ಮೋವಾಬು ಸೊದೋಮಿನ ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು. ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ ನಿತ್ಯವಾಗಿ ಹಾಳಾದ ಸ್ಥಳವಾಗುವರು. ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು. ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”
ಇಸ್ರಾಯೇಲರ ದೇವರಾದ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೂ ಆಗುವುದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವುದು; ಆ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ, ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು; ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು. ಅಳಿದುಳಿದ ನನ್ನ ಜನರಿಗೆ ಅವು ಸ್ವಾಸ್ತ್ಯವಾಗುವವು.”
10 ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನು ಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇ ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು.
೧೦ಆ ಪ್ರಾಂತ್ಯಗಳವರು ಸೇನಾಧೀಶ್ವರನಾದ ಯೆಹೋವನ ಜನರನ್ನು ದೂಷಿಸಿ, ಅವರ ಮೇಲೆ ಉಬ್ಬಿಕೊಂಡು ಬಂದುದ್ದರಿಂದ ಅವರ ಅಹಂಕಾರದ ನಿಮಿತ್ತವೇ ಅವರಿಗೆ ಈ ಗತಿಯಾಗುವುದು!
11 ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ, ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು. ಇತರ ಜನಾಂಗಗಳ ದ್ವೀಪಗಳವರೆಲ್ಲರು ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.
೧೧ಯೆಹೋವನು ಅವರಿಗೆ ಭಯಂಕರನಾಗುವನು; ಲೋಕದ ದೇವರುಗಳನ್ನೆಲ್ಲಾ ನಾಶಮಾಡುವನು; ಸಮಸ್ತ ಜನರು, ಪ್ರತಿಯೊಂದು ಪ್ರಾಂತ್ಯದ ನಿವಾಸಿಗಳು ಸಕಲ ಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು.
12 ಕೂಷ್ ದೇಶದವರೇ, ನೀವೂ ಸಹ ನನ್ನ ಖಡ್ಗದಿಂದ ಹತರಾಗುವಿರಿ.
೧೨ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ.
13 ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ, ಅಸ್ಸೀರಿಯರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು.
೧೩ಯೆಹೋವನು ಉತ್ತರಕ್ಕೆ ಕೈಚಾಚಿ ಅಶ್ಶೂರವನ್ನು ಧ್ವಂಸ ಮಾಡುವನು; ನಿನವೆಯನ್ನು ಹಾಳುಮಾಡಿ ನೀರಿಲ್ಲದ ಮರುಭೂಮಿಯಂತೆ ಒಣಗಿಸಿಬಿಡುವನು.
14 ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು, ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು, ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು, ದೇವದಾರು ಮರದ ತೊಲೆಗಳು ಕಳಚಿಬೀಳುವುವು.
೧೪ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು; ಕೊಕ್ಕರೆಯೂ, ಮುಳ್ಳುಹಂದಿಯೂ ಹಟ್ಟಿಗಳಲ್ಲಿ ವಾಸಮಾಡಿಕೊಳ್ಳುವವು. ಗೂಬೆಯು ಕಿಟಕಿಗಳಲ್ಲಿ ಮನೆಕಂಬಗಳ ಮೇಲೆ ಚಿಲಿಪಿಲಿ ಗಾನವು ತಂಗುವವು; ಕಾಗೆಗಳ ಕೂಗು ಹೊಸ್ತಿಲುಗಳಲ್ಲಿ ಕೇಳುವುದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು.
15 “ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,” ಎಂದು ತನ್ನೊಳಗೆ ಎಂದುಕೊಂಡಂಥ ಸುಭದ್ರ ನಿನೆವೆ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದರಲ್ಲಿ ಹಾದುಹೋಗುವವರೆಲ್ಲರೂ ನಿಂದಿಸಿ ಅಪಹಾಸ್ಯ ಮಾಡುವರು.
೧೫ಈ ನಿನವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು ತನ್ನ ಹೃದಯದೊಳಗೆ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಅಂದುಕೊಳ್ಳುತ್ತಿತ್ತು; ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಕೊಟ್ಟಿಗೆಯ ಬೀಡಾಗಿದೆ! ಅದರ ಮುಂದೆ ಹಾದುಹೋಗುವವರೆಲ್ಲರು ಸಿಳ್ಳು ಹಾಕಿ ಅಪಹಾಸ್ಯ ಮಾಡುತ್ತಾರೆ.

< ಚೆಫನ್ಯನು 2 >