< ಜೆಕರ್ಯನು 1 >
1 ಪರ್ಷಿಯಾದ ಅರಸ ದಾರ್ಯಾವೆಷನ ಎರಡನೆಯ ವರ್ಷ, ಎಂಟನೆಯ ತಿಂಗಳಿನಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು:
2 “ಯೆಹೋವ ದೇವರು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿದ್ದಾರೆ.
3 ಆದ್ದರಿಂದ ನೀನು ಅವರಿಗೆ ಹೇಳತಕ್ಕದ್ದೇನೆಂದರೆ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ಬಳಿಗೆ ತಿರುಗಿಕೊಳ್ಳಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆಗ, ‘ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
4 ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ, ನಿಮ್ಮ ಕೆಟ್ಟ ಮಾರ್ಗಗಳನ್ನೂ, ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸರ್ವಶಕ್ತರಾದ ಯೆಹೋವ ದೇವರು ಪ್ರಕಟಿಸುತ್ತಾರೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ. ನನ್ನಲ್ಲಿ ಲಕ್ಷ್ಯವಿಡಲಿಲ್ಲ ಎಂದು ಯೆಹೋವ ದೇವರು ಹೇಳುತ್ತಾರೆ.
5 ನಿಮ್ಮ ಪಿತೃಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ?
6 ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿ, ನನ್ನ ವಾಕ್ಯಗಳೂ, ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿಲ್ಲವೋ? “ಆಗ ಅವರು ತಿರುಗಿಕೊಂಡು, ‘ಸೇನಾಧೀಶ್ವರ ಯೆಹೋವ ದೇವರು ನಮಗೆ ಮಾಡುವುದಕ್ಕೆ ಯೋಚಿಸಿದ ಹಾಗೆಯೇ, ನಮ್ಮ ಮಾರ್ಗಗಳ ಪ್ರಕಾರವಾಗಿಯೂ, ನಮ್ಮ ಕ್ರಿಯೆಗಳ ಪ್ರಕಾರವಾಗಿಯೂ ನಮಗೆ ಮಾಡಿದ್ದಾರೆ,’ ಎಂದು ಹೇಳಿದರು.”
7 ದಾರ್ಯಾವೆಷನ ಎರಡನೆಯ ವರ್ಷದಲ್ಲಿ, ಹನ್ನೊಂದನೆಯ ತಿಂಗಳಾದ ಶೇಬಾಟ್ ಎಂಬ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು:
8 ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬನು, ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಬಣ್ಣದ ಹಾಗು ಬಿಳಿಯ ಕುದುರೆಗಳು ಇದ್ದವು.
9 ಆಗ ನಾನು, “ನನ್ನ ಒಡೆಯನೇ, ಇವೇನು?” ಎಂದೆನು. ಆಗ ನನ್ನ ಸಂಗಡ ಮಾತನಾಡಿದ ದೇವದೂತನು, “ಇವೇನೆಂದು ನಿನಗೆ ತೋರಿಸುತ್ತೇನೆ,” ಎಂದನು.
10 ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು, “ಇವರು ಭೂಮಿಯ ಸುತ್ತಲೂ ನಡೆದಾಡುವುದಕ್ಕೆ ಯೆಹೋವ ದೇವರಿಂದ ಕಳುಹಿಸಲಾದವರು,” ಎಂದನು.
11 ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಯೆಹೋವ ದೇವರ ದೂತನಿಗೆ, “ಭೂಮಿಯ ಸುತ್ತಲೂ ನಡೆದಾಡಿದ್ದೇವೆ. ಇಗೋ, ಭೂಮಿಯೆಲ್ಲಾ ನಿಶ್ಚಿಂತೆಯಿಂದ ಶಾಂತವಾಗಿದೆ,” ಎಂದನು.
12 ಆಗ ಯೆಹೋವ ದೇವರ ದೂತನು ಉತ್ತರಕೊಟ್ಟು: “ಸರ್ವಶಕ್ತರಾದ ಯೆಹೋವ ದೇವರೇ, ನೀವು ಯೆರೂಸಲೇಮನ್ನೂ, ಯೆಹೂದದ ಪಟ್ಟಣಗಳನ್ನೂ ಎಷ್ಟರವರೆಗೆ ಕನಿಕರಿಸದೆ ಇರುವಿರಿ? ಅವುಗಳ ಮೇಲೆ ಈ ಎಪ್ಪತ್ತು ವರ್ಷಗಳು ಸಿಟ್ಟು ಮಾಡಿದ್ದೀರಲ್ಲವೋ?” ಎಂದನು.
13 ಆಗ ಯೆಹೋವ ದೇವರು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೆಯ ಮಾತುಗಳಿಂದಲೂ, ಆದರಣೆಯ ಮಾತುಗಳಿಂದಲೂ ಉತ್ತರಕೊಟ್ಟರು.
14 ನನ್ನ ಸಂಗಡ ಮಾತನಾಡಿದ ದೂತನು ನನಗೆ, “ಇದನ್ನು ಸಾರಿ ಹೇಳು: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯೆರೂಸಲೇಮಿಗಾಗಿಯೂ, ಚೀಯೋನಿಗಾಗಿಯೂ ಮಹಾ ರೋಷವುಳ್ಳವನಾಗಿದ್ದೇನೆ.
15 ನಿಶ್ಚಿಂತೆಯುಳ್ಳವರಾಗಿರುವ ಇತರ ರಾಷ್ಟ್ರಗಳ ಮೇಲೆ ನಾನು ಬಹಳ ಕೋಪವಾಗಿದ್ದೇನೆ. ಆದರೆ ಯೆರೂಸಲೇಮಿನ ಮೇಲೆ ನಾನು ಸ್ವಲ್ಪ ಮಾತ್ರ ಸಿಟ್ಟುಗೊಂಡಿರಲು, ಅವರು ಸಂಕಟಕ್ಕೆ ಇನ್ನು ಹೆಚ್ಚು ಕೇಡು ಕೂಡಿಸಿದರು.
16 “ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾನೆ: ‘ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ. ನನ್ನ ಆಲಯವು ಅದರಲ್ಲಿ ಕಟ್ಟಲಾಗುವುದು. ಯೆರೂಸಲೇಮಿನ ಮೇಲೆ ಅಳತೆಯ ನೂಲು ಚಾಚಲಾಗುವುದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
17 “ಪುನಃ ನೀನು ಸಾರಿ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವುವು. ಯೆಹೋವ ದೇವರು ಚೀಯೋನನ್ನು ಆದರಿಸುವರು. ಯೆರೂಸಲೇಮನ್ನು ಆರಿಸಿಕೊಳ್ಳುವರು, ಎಂದು ಹೇಳಿದನು.”
18 ನಾನು ನನ್ನ ಕಣ್ಣುಗಳನ್ನು ಎತ್ತಿದಾಗ, ನಾಲ್ಕು ಕೊಂಬುಗಳನ್ನು ನೋಡಿದೆನು.
19 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು.
20 ಆಗ ಯೆಹೋವ ದೇವರು ನನಗೆ ನಾಲ್ಕು ಕಮ್ಮಾರರನ್ನು ತೋರಿಸಿದರು.
21 ನಾನು, “ಇವರು ಏನು ಮಾಡುವುದಕ್ಕೆ ಬರುತ್ತಾರೆ?” ಎಂದೆನು. ಅದಕ್ಕೆ ಅವರು, “ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಆದರೆ ಇವರು ಯೆಹೂದ ದೇಶವನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೇ ಚದರಿಸಿ, ಅದರ ಕೊಂಬುಗಳನ್ನು ಕೆಡವಿ ಹಾಕುವುದಕ್ಕೆ ಬಂದಿದ್ದಾರೆ,” ಎಂದು ಹೇಳಿದರು.