< ಪರಮಗೀತೆ 5 >
1 ನನ್ನ ಪ್ರಿಯಳೇ, ನನ್ನ ವಧುವೇ, ನಾನು ನನ್ನ ತೋಟಕ್ಕೆ ಬಂದಿರುವೆ. ನನ್ನ ರಕ್ತಬೋಳ ಸುಗಂಧಗಳನ್ನೂ ಕೂಡಿಸಿರುವೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರು ಸ್ನೇಹಿತರೇ, ಊಟಮಾಡಿರಿ, ಕುಡಿಯಿರಿ. ಹೌದು ಪ್ರಿಯರೇ, ಸಮೃದ್ಧಿಯಾಗಿ ಪಾನಮಾಡಿರಿ.
2 ನಾನು ನಿದ್ರಿಸುತ್ತಿದ್ದರೂ, ನನ್ನ ಹೃದಯವು ಎಚ್ಚರವಾಗಿತ್ತು. ಇಗೋ! ಬಾಗಿಲು ತಟ್ಟುವ ನನ್ನ ಪ್ರಿಯನ ಶಬ್ದವಿದು: “ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಪಾರಿವಾಳವೇ, ಪರಿಪೂರ್ಣಳೇ, ಬಾಗಿಲು ತೆಗೆ! ನನ್ನ ತಲೆ ಮಂಜಿನಿಂದ ನೆನೆದಿದೆ. ನನ್ನ ಕೂದಲು ರಾತ್ರಿಯ ಹನಿಗಳಿಂದ ತೋಯ್ದಿದೆ.”
3 ನಾನು ನನ್ನ ಅಂಗಿಯನ್ನು ತೆಗೆದು ಹಾಕಿರಲು, ಅದನ್ನು ಮತ್ತೆ ಹಾಕಿಕೊಳ್ಳುವುದು ಹೇಗೆ? ನಾನು ನನ್ನ ಕಾಲುಗಳನ್ನು ತೊಳೆದುಕೊಂಡಿರಲು, ನಾನು ಮತ್ತೆ ಅವುಗಳನ್ನು ಕೊಳೆ ಮಾಡುವುದು ಹೇಗೆ?
4 ಅನಂತರ ನನ್ನ ಪ್ರಿಯನು ಬಾಗಿಲ ಸಂದಿನಲ್ಲಿ ತನ್ನ ಕೈ ಹಾಕಿದನು. ನನ್ನ ಹೃದಯವು ಅವನಿಗಾಗಿ ಮಿಡಿಯಿತು.
5 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ಎದ್ದಾಗ, ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವು ತೊಟ್ಟಿಕ್ಕಿತು. ನನ್ನ ಬೆರಳುಗಳಿಂದಲೂ ರಕ್ತಬೋಳವು ಸುರಿಯಿತು.
6 ನಾನು ನನ್ನ ಪ್ರಿಯನಿಗೆ ಬಾಗಿಲು ತೆರೆದೆನು. ಆದರೆ ಅಷ್ಟರಲ್ಲಿ ನನ್ನ ಪ್ರಿಯನು ಹಿಂದಿರುಗಿ ಹೋಗಿಬಿಟ್ಟಿದ್ದನು. ಅವನು ಹೋಗಿದ್ದರಿಂದ ನನ್ನ ಹೃದಯ ಕುಗ್ಗಿಹೋಯಿತು. ಅವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ. ಅವನನ್ನು ಕರೆದೆನು, ಉತ್ತರವೇ ಇಲ್ಲ.
7 ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡುಹಿಡಿದರು. ನನ್ನನ್ನು ಹೊಡೆದು, ಗಾಯ ಮಾಡಿದರು. ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಿದುಕೊಂಡರು.
8 ಯೆರೂಸಲೇಮಿನ ಪುತ್ರಿಯರೇ, ನಿಮಗೆ ಆಣೆಯಿಟ್ಟು ಹೇಳುತ್ತೇನೆ. ನೀವು ನನ್ನ ಪ್ರಿಯನನ್ನು ಕಂಡರೆ, ನಾನು ಪ್ರೀತಿಯಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ.
9 ಸ್ತ್ರೀಯರಲ್ಲಿ ಅತಿ ಸುಂದರಿಯೇ, ಬೇರೆಯವರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? ನೀನು ನಮಗೆ ಹೀಗೆ ಆಣೆ ಇಡುವುದಕ್ಕೆ ಬೇರೆಯವರ ಪ್ರಿಯರಿಗಿಂತ ನಿನ್ನ ಪ್ರಿಯನ ವಿಶೇಷವೇನು?
10 ನನ್ನ ಪ್ರಿಯನು, ತೇಜೋಮಯನು, ಕೆಂಪೂ ಬಣ್ಣವುಳ್ಳವನು. ಹತ್ತು ಸಾವಿರ ಜನರಲ್ಲಿ ಶ್ರೇಷ್ಠನು.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ. ಅವನ ಗುಂಗುರು ಕೂದಲು ಕಾಗೆಯಂತೆ ಕಪ್ಪಾಗಿದೆ.
12 ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ, ಹಾಲಿನಿಂದ ತೊಳೆದಿರುವ, ಪಾರಿವಾಳಗಳ ಕಣ್ಣುಗಳಂತಿವೆ.
13 ಅವನ ಕೆನ್ನೆಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳಂತಿವೆ. ಅವನ ತುಟಿಗಳು ಸುಗಂಧ ರಕ್ತಬೋಳವನ್ನು ಸುರಿಸುವ ಕೆಂದಾವರೆಗಳು.
14 ಅವನ ಕೈಗಳು ಗೋಮೇಧಿಕ ರತ್ನದ ಬಂಗಾರದ ಸಲಾಕೆಗಳಂತಿವೆ. ಅವನ ದೇಹ ಇಂದ್ರನೀಲಗಳಿಂದ ಹೊಳೆಯುವ ದಂತದ ಹಾಗೆ ಇದೆ.
15 ಅವನ ಕಾಲುಗಳು ಶುದ್ಧ ಬಂಗಾರದ ಮೇಲೆ ನಿಂತಿರುವ ಚಂದ್ರಕಾಂತ ಸ್ತಂಭಗಳು. ಅವನ ತೋರಿಕೆಯು ಲೆಬನೋನಿನ ದೇವದಾರುಗಳ ಹಾಗೆ ಶ್ರೇಷ್ಠವಾಗಿವೆ.
16 ಅವನ ಬಾಯಿ ಮಾತು ಬಹು ಮಧುರ. ಹೌದು, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಪುತ್ರಿಯರೇ, ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.