< ಪರಮಗೀತೆ 2 >
1 ಶಾರೋನಿನ ಗುಲಾಬಿ ಹೂವೂ, ತಗ್ಗಿನ ತಾವರೆಯೂ ನಾನೇ.
2 ಮುಳ್ಳುಪೊದರಿನ ನಡುವೆ ತಾವರೆಯಂತೆ ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು.
3 ಅಡವಿಯ ಮರಗಳಲ್ಲಿ ಸೇಬಿನ ಮರದಂತೆ ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು.
4 ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ.
5 ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.
6 ಅವನ ಎಡಗೈ ನನ್ನ ತಲೆದಿಂಬಾಗಿರಲಿ. ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
7 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
8 ನನ್ನ ಪ್ರಿಯನ ಸ್ವರವು! ಇಗೋ! ಅವನು ಪರ್ವತಗಳ ಮೇಲೆ ಹಾರುತ್ತಾ, ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ.
9 ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: “ನನ್ನ ಪ್ರಿಯಳೇ ಎದ್ದು ಬಾ, ನನ್ನ ಸುಂದರಿಯೇ, ಹೊರಟು ಬಾ.
11 ಇಗೋ! ಚಳಿಗಾಲ ಕಳೆಯಿತು, ಮಳೆ ನಿಂತುಹೋಯಿತು.
12 ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. ಪಕ್ಷಿಗಳು ಹಾಡುವ ಕಾಲ ಬಂತು. ಪಾರಿವಾಳಗಳ ಸ್ವರ ನಮ್ಮ ಊರಲ್ಲಿ ಕೇಳಿಸುತ್ತಿದೆ.
13 ಅಂಜೂರದ ಕಾಯಿಗಳು ಹಣ್ಣಾಗಿವೆ. ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. ಎದ್ದು ಬಾ, ನನ್ನ ಪ್ರಿಯಳೇ, ನನ್ನ ಸುಂದರಿಯೇ, ನನ್ನೊಂದಿಗೆ ಬಾ.”
14 ಬಂಡೆಯ ಬಿರುಕುಗಳಲ್ಲಿಯೂ ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. ನಿನ್ನ ಮುಖವನ್ನು ನನಗೆ ತೋರಿಸು. ನಿನ್ನ ಸ್ವರವನ್ನು ನನಗೆ ಕೇಳಿಸು. ನಿನ್ನ ಸ್ವರವು ಇಂಪಾಗಿದೆ. ನಿನ್ನ ಮುಖವು ಸುಂದರವಾಗಿಯೂ ಇದೆ.
15 ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ. ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ.
16 ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.
17 ನನ್ನ ಪ್ರಿಯನೇ, ಹೊತ್ತು ಮೂಡುವ ಮುಂಚೆ ಕತ್ತಲು ಕವಿಯುವ ಮೊದಲು ಹೊರಟು ಬಾ. ಒರಟಾದ ಪರ್ವತಗಳ ಮೇಲಿರುವ ಜಿಂಕೆಯಂತಿರು. ಹೌದು, ಪ್ರಾಯದ ದುಪ್ಪಿಯಂತೆಯೂ ಇರು.