< ರೋಮಾಪುರದವರಿಗೆ 4 >
1 ಹಾಗಾದರೆ ವಂಶಾನುಕ್ರಮವಾಗಿ ನಮ್ಮ ಮೂಲ ಪಿತೃವಾಗಿರುವ ಅಬ್ರಹಾಮನು, ಈ ವಿಷಯದಲ್ಲಿ ಏನು ಕಂಡುಕೊಂಡನೆಂದು ಹೇಳಬೇಕು?
2 ಅಬ್ರಹಾಮನು ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯ ಹೊಂದಿದವನಾಗಿದ್ದರೆ, ದೇವರ ಮುಂದೆ ಹೊಗಳಿಸಿಕೊಳ್ಳಲು ಅವನಿಗೆ ಆಸ್ಪದ ಇರುವುದಿಲ್ಲ.
3 ಏಕೆಂದರೆ ಪವಿತ್ರ ವೇದವು: “ಅಬ್ರಹಾಮನು ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂದು ಹೇಳುತ್ತದೆ.
4 ಕೆಲಸ ಮಾಡಿದವನಿಗೆ ದೊರೆಯುವ ಕೂಲಿಯು, ಉಚಿತ ದಾನವಲ್ಲ ಅದು ಅವನ ದುಡಿದ ಸಂಪಾದನೆ.
5 ಆದರೆ ಯಾರು ಕೃತ್ಯಗಳನ್ನು ಮಾಡದೆ, ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವ ದೇವರಲ್ಲಿ ನಂಬಿಕೆ ಇಡುತ್ತಾರೋ ಅವರ ನಂಬಿಕೆಯೇ ನೀತಿ ಎಂದು ಎಣಿಸಲಾಗುವುದು.
6 ದೇವರು ಯಾರನ್ನು ಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾರೋ ಅವನೇ ಧನ್ಯನು. ಇದರ ಬಗ್ಗೆ ದಾವೀದನು ಹೀಗೆ ಹೇಳುತ್ತಾನೆ:
7 “ಯಾರ ಅಪರಾಧಗಳು ಕ್ಷಮಿಸಲಾಗಿವೆಯೋ, ಯಾರ ಪಾಪಗಳು ಮುಚ್ಚಲಾಗಿವೆಯೋ ಅವರೇ ಧನ್ಯರು.
8 ಯಾರ ಪಾಪಗಳನ್ನು ಕರ್ತನು ಅವರ ಲೆಕ್ಕಕ್ಕೆ ಎಣಿಸುವುದಿಲ್ಲವೋ, ಆ ಮನುಷ್ಯನು ಧನ್ಯನು.”
9 ಈ ಧನ್ಯತೆಯು ಕೇವಲ ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೂ ಇರುತ್ತದೆಯೋ? ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿ ಎಂದು ಎಣಿಸಲಾಗಿತೆಂದು ಹೇಳುತ್ತೇವಲ್ಲಾ.
10 ಅದು ಯಾವಾಗ ಎಣಿಸಲಾಯಿತು? ಅವನಿಗೆ ಸುನ್ನತಿ ಆದ ಬಳಿಕವೋ? ಅಥವಾ ಸುನ್ನತಿಯಾಗುವುದಕ್ಕೆ ಮೊದಲೋ? ಅದು ನಂತರವಲ್ಲ, ಮೊದಲೇ!
11 ಹೌದು, ಸುನ್ನತಿಯಾಗುವ ಮೊದಲೇ ಅಬ್ರಹಾಮನಿಗಿದ್ದ ನಂಬಿಕೆಯಿಂದ ಅವನು ನೀತಿಯ ಮುದ್ರೆಯನ್ನು ಹೊಂದಿದನು. ಹೀಗಿರುವಲ್ಲಿ, ಸುನ್ನತಿಯಿಲ್ಲದೆ ನಂಬುವವರೆಲ್ಲರಿಗೂ ಅಬ್ರಹಾಮನು ತಂದೆಯಾಗಿರುತ್ತಾನೆ. ಹೀಗೆ ಅವರಿಗೆ ನೀತಿಯು ಎಣಿಕೆಯಾಗುವುದು.
12 ನಮ್ಮ ಪಿತೃವಾದ ಅಬ್ರಹಾಮನು ಸುನ್ನತಿ ಹೊಂದಿದವರಿಗೆ ಮಾತ್ರವೇ ತಂದೆಯಾಗಿರದೆ ಅವನಿಗೆ ಸುನ್ನತಿ ಆಗುವ ಮೊದಲು ಇದ್ದ ನಂಬಿಕೆಯ ಹೆಜ್ಜೆಯಲ್ಲಿ ನಡೆಯುವವರಿಗೂ ತಂದೆಯಾಗಿರುತ್ತಾನೆ.
13 ಅಬ್ರಹಾಮನು ಮತ್ತು ಅವನ ಸಂತತಿಯವರು ಜಗತ್ತಿಗೇ ಹಕ್ಕುದಾರರಾಗುವರೆಂಬ ವಾಗ್ದಾನವು ನಿಯಮದಿಂದ ಆದದ್ದಲ್ಲ. ನಂಬಿಕೆಯಿಂದುಂಟಾದ ನೀತಿಯ ಮೂಲಕವೇ ಬರುವಂಥದ್ದಾಗಿದೆ.
14 ನಿಯಮಕ್ಕೆ ಒಳಗಾಗುವವರೇ ಬಾಧ್ಯರಾದರೆ, ನಂಬಿಕೆಗೆ ಬೆಲೆಯಿಲ್ಲದಂತಾಯಿತು. ವಾಗ್ದಾನವೂ ನಿರರ್ಥಕ.
15 ನಿಯಮವು ದೇವರ ಕೋಪವನ್ನು ತರುತ್ತದೆ. ಎಲ್ಲಿ ನಿಯಮವು ಇರುವುದಿಲ್ಲವೋ ಅಲ್ಲಿ ಅದರ ಉಲ್ಲಂಘನೆಯೂ ಇರುವುದಿಲ್ಲ.
16 ಆದ್ದರಿಂದ ಆ ಬಾಧ್ಯತೆಯು ಕೃಪೆಯಿಂದಲೇ, ನಂಬಿಕೆಯ ಮೂಲಕ ದೊರಕುತ್ತದೆ. ಈ ವಾಗ್ದಾನವು ನಿಯಮದ ಸಂತತಿಯವರಿಗೆ ಮಾತ್ರವಲ್ಲ ಅಬ್ರಹಾಮನಲ್ಲಿ ಇದ್ದ ನಂಬಿಕೆ ಇರುವವರ ಸಂತತಿಯವರೆಲ್ಲರಿಗೂ ಶಾಶ್ವತವಾಗಿ ದೊರಕುವುದು. ಏಕೆಂದರೆ ಅವನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ.
17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಒಬ್ಬ ತಂದೆಯನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರ ವೇದದಲ್ಲಿ ಲಿಖಿತವಾಗಿದೆ. ದೇವರು ಸತ್ತವರಿಗೆ ಜೀವಕೊಡುವವರೂ ಇಲ್ಲದವುಗಳನ್ನು ಇರುವವುಗಳೋ ಎಂಬಂತೆ ಕರೆಯುವವರೂ ಆಗಿರುತ್ತಾರೆಂದು ಅಬ್ರಹಾಮನು ದೇವರ ಸನ್ನಿಧಿಯಲ್ಲಿ ನಂಬಿದನು.
18 ಅವನು ತನಗೆ ದೇವರಿಂದ ಹೇಳಲಾದ ನಿರೀಕ್ಷೆಗೆ ಯಾವ ಆಸ್ಪದವು ಇಲ್ಲದಿರುವಾಗಲೂ ನಿರೀಕ್ಷೆಯಿಂದ ನಂಬಿ, “ನಿನ್ನ ಸಂತಾನವು ನಕ್ಷತ್ರಗಳಷ್ಟು ಇರುವುದು,” ಎಂಬ ಹೇಳಿಕೆಯಂತೆ ಅವನು ಅನೇಕ ಜನಾಂಗಗಳಿಗೆ ತಂದೆಯಾದನು.
19 ಅವನು ಆಗಲೇ ಸುಮಾರು ನೂರು ವರ್ಷದವನಾಗಿದ್ದು, ತನ್ನ ದೇಹವು ದುರ್ಬಲವಾಗಿದ್ದರೂ ಹೆಂಡತಿಯಾದ ಸಾರಳಿಗೆ ಗರ್ಭಧರಿಸುವ ಕಾಲ ಮುಗಿದು ಹೋಗಿದ್ದರೂ ನಂಬಿಕೆಯಲ್ಲಿ ಬಲಹೀನನಾಗಲಿಲ್ಲ.
20 ಅವನು ದೇವರು ಮಾಡಿದ ವಾಗ್ದಾನಕ್ಕೆ ವಿರುದ್ಧ ಅಪನಂಬಿಕೆಯಿಂದ ಚಂಚಲಚಿತ್ತನಾಗದೆ, ನಂಬಿಕೆಯಿಂದ ಶಕ್ತಿವಂತನಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಿದನು.
21 ಅವನು ವಾಗ್ದಾನವನ್ನು ನೆರವೇರಿಸಲು ದೇವರು ಶಕ್ತರಾಗಿದ್ದಾರೆಂದು ಪೂರ್ಣ ದೃಢತೆಯುಳ್ಳವನಾದನು.
22 ಆದ್ದರಿಂದ, “ಅದು ಅವನ ಪಾಲಿಗೆ ನೀತಿ ಎಂಬುದಾಗಿ ಎಣಿಸಲಾಯಿತು.”
23 ಹೀಗೆ, “ಅವನ ಪಾಲಿಗೆ ನೀತಿ ಎಂದು ಎಣಿಸಲಾಯಿತು,” ಎಂದು ಬರೆದ ಮಾತು ಅವನಿಗೋಸ್ಕರ ಮಾತ್ರವೇ ಆಗಿರದೆ,
24 ನಮಗೋಸ್ಕರವೂ ಅಂದರೆ, ನಮ್ಮ ಕರ್ತ ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿರುವ ದೇವರನ್ನು ನಂಬುವ ನಮ್ಮ ಪಾಲಿಗೂ ನೀತಿಯೆಂದು ಎಣಿಸಲಾಗುವುದು.
25 ನಮ್ಮ ಪಾಪಗಳ ನಿಮಿತ್ತವಾಗಿ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು ಮತ್ತು ನಮ್ಮನ್ನು ನೀತಿವಂತರನ್ನಾಗಿ ನಿರ್ಣಯಿಸಲು, ಜೀವದಿಂದ ಎಬ್ಬಿಸಲಾಯಿತು.