< ಪ್ರಕಟಣೆ 4 >
1 ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
2 ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.
3 ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.
4 ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.
5 ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.
6 ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7 ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.
8 ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು:
9 ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ, (aiōn )
10 ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, (aiōn )
11 “ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.