< ಕೀರ್ತನೆಗಳು 97 >

1 ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋಷಪಡಲಿ. 2 ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ; ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ. 3 ಬೆಂಕಿಯು ಅವರ ಮುಂದೆ ಹೋಗಿ ಅವರ ವೈರಿಗಳನ್ನು ಸುತ್ತಲೂ ದಹಿಸುವುದು. 4 ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ಕಂಡು ನಡುಗುತ್ತದೆ. 5 ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ, ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ. 6 ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ; ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ. 7 ವಿಗ್ರಹಗಳನ್ನು ಪೂಜಿಸಿ, ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ! 8 ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ. 9 ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ; ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ. 10 ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು; ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು. 11 ನೀತಿವಂತನಿಗೋಸ್ಕರ ಬೆಳಕೂ, ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು. 12 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ; ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.

< ಕೀರ್ತನೆಗಳು 97 >