< ಕೀರ್ತನೆಗಳು 94 >

1 ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ. ಮುಯ್ಯಿ ತೀರಿಸುವವರು ನೀವೇ; ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.
ಯೆಹೋವನೇ, ಮುಯ್ಯಿತೀರಿಸುವ ದೇವರೇ, ಮುಯ್ಯಿತೀರಿಸುವ ದೇವರೇ, ಕೋಪವನ್ನು ತೋರ್ಪಡಿಸು.
2 ಭೂಲೋಕದ ನ್ಯಾಯಾಧಿಪತಿಯೇ, ಗರ್ವಿಷ್ಠರಿಗೆ ತಕ್ಕ ಪ್ರತೀಕಾರವನ್ನು ಸಲ್ಲಿಸ ಬನ್ನಿರಿ.
ಲೋಕದ ನ್ಯಾಯಾಧಿಪತಿಯೇ, ಏಳು; ಗರ್ವಿಷ್ಠರಿಗೆ ತಕ್ಕ ಶಿಕ್ಷೆಯನ್ನು ಕೊಡು.
3 ಯೆಹೋವ ದೇವರೇ, ಎಲ್ಲಿಯವರೆಗೆ? ದುಷ್ಟರು ಎಷ್ಟರವರೆಗೆ ಹಿಗ್ಗುತ್ತಿರಬೇಕು?
ಯೆಹೋವನೇ, ದುಷ್ಟರು ಎಲ್ಲಿಯವರೆಗೆ, ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು?
4 ಕೆಡುಕರು ಉಬ್ಬಿಕೊಂಡು ಮಾತನಾಡುತ್ತಾರೆ. ಕೇಡು ಮಾಡುವವರೆಲ್ಲರೂ ಕೊಚ್ಚಿಕೊಳ್ಳುತ್ತಾರೆ.
ಕೆಡುಕರೆಲ್ಲರು ಉಬ್ಬಿಕೊಂಡು, ಅಹಂಕಾರವನ್ನು ಕಕ್ಕುತ್ತಾರೆ.
5 ಯೆಹೋವ ದೇವರೇ, ನಿಮ್ಮ ಜನರನ್ನು ಅವರು ಕುಗ್ಗಿಸುತ್ತಾರೆ. ನಿಮ್ಮ ಬಾಧ್ಯತೆಯನ್ನು ಬಾಧಿಸುತ್ತಾರೆ.
ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; ನಿನ್ನ ಸ್ವತ್ತನ್ನು ಕುಗ್ಗಿಸಿಬಿಡುತ್ತಾರೆ;
6 ವಿಧವೆಯನ್ನೂ ಪರದೇಶಸ್ಥನನ್ನೂ ಅವರು ಹತ್ಯಮಾಡುತ್ತಾರೆ. ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
ವಿಧವೆಯರನ್ನೂ, ಪರದೇಶಿಯನ್ನೂ ಕೊಲ್ಲುತ್ತಾರೆ; ಅನಾಥರನ್ನು ಹತಮಾಡುತ್ತಾರೆ.
7 “ಯೆಹೋವ ದೇವರು ನೋಡುವುದಿಲ್ಲ, ಯಾಕೋಬನ ದೇವರು ಗ್ರಹಿಸುವುದಿಲ್ಲ,” ಎಂದು ಅವರು ಹೇಳುತ್ತಾರೆ.
ಅವರು, “ಯಾಹುವು ನೋಡುವುದೇ ಇಲ್ಲ; ಯಾಕೋಬ್ಯರ ದೇವರು ಲಕ್ಷಿಸುವುದೇ ಇಲ್ಲ” ಅನ್ನುತ್ತಾರೆ.
8 ಜನರಲ್ಲಿ ಬುದ್ಧಿಹೀನರೇ, ನೀವು ಗ್ರಹಿಸಿರಿ. ಮೂರ್ಖರೇ, ಯಾವಾಗ ಬುದ್ಧಿವಂತರಾಗುವಿರಿ?
ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ; ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ?
9 ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ? ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?
ಕಿವಿಮಾಡಿದವನು ಕೇಳನೋ? ಕಣ್ಣುಕೊಟ್ಟವನು ನೋಡನೋ?
10 ರಾಷ್ಟ್ರಗಳಿಗೆ ಶಿಕ್ಷಣ ಕೊಡುವ ದೇವರು ಶಿಕ್ಷಿಸುವುದಿಲ್ಲವೋ? ಮಾನವನಿಗೆ ಕಲಿಸುವ ದೇವರಲ್ಲಿ ಜ್ಞಾನದ ಕೊರತೆಯಿದೆಯೋ?
೧೦ಜನಾಂಗಗಳನ್ನು ಶಿಕ್ಷಿಸುವವನೂ, ಮನುಷ್ಯರಿಗೆ ಬುದ್ಧಿಕಲಿಸುವವನೂ ಗದರಿಸನೋ?
11 ಮನುಷ್ಯನ ಯೋಚನೆಗಳು ವ್ಯರ್ಥವಾದವುಗಳೆಂದು ಯೆಹೋವ ದೇವರು ತಿಳಿದುಕೊಳ್ಳುತ್ತಾರೆ.
೧೧ಮನುಷ್ಯನ ಯೋಚನೆಗಳು, “ಉಸಿರೇ” ಎಂದು ಯೆಹೋವನು ತಿಳುಕೊಳ್ಳುತ್ತಾನೆ.
12 ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು. ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.
೧೨ಯಾಹುವೇ, ನೀನು ಯಾರನ್ನು ಶಿಕ್ಷಿಸಿ, ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು.
13 ದುಷ್ಟನಿಗಾಗಿ ಕುಣಿಯು ಅಗಿಯುವವರೆಗೆ ಅಂಥವನಿಗೆ ವಿಶ್ರಾಂತಿಯನ್ನು ಕೊಡುವಿರಿ.
೧೩ಅಂಥವನನ್ನು, ದುಷ್ಟನಿಗೋಸ್ಕರ ಗುಂಡಿಯು ಅಗೆಯಲ್ಪಡುವ ತನಕ, ಆಪತ್ತಿನಲ್ಲಿಯೂ ನೀನು ಸಂರಕ್ಷಿಸುತ್ತಿ.
14 ಯೆಹೋವ ದೇವರು ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ. ದೇವರು ತಮ್ಮ ಬಾಧ್ಯತೆಯಾಗಿರುವವರನ್ನು ಎಂದೂ ಮರೆಯುವುದಿಲ್ಲ.
೧೪ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ; ತನ್ನ ಸ್ವತ್ತನ್ನು ಕೈಬಿಡುವುದಿಲ್ಲ.
15 ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು; ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.
೧೫ನ್ಯಾಯತೀರ್ಪು ನೀತಿಗೆ ತಿರುಗಿಕೊಳ್ಳುವುದು; ಯಥಾರ್ಥಚಿತ್ತರೆಲ್ಲರೂ ಅದನ್ನೇ ಅನುಸರಿಸುವರು.
16 ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು? ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?
೧೬ದುಷ್ಟರಿಗೆ ವಿರುದ್ಧವಾಗಿ ನನಗೋಸ್ಕರ ಏಳುವವರು ಯಾರು? ಕೆಡುಕರಿಗೆ ವಿರುದ್ಧವಾಗಿ ನನಗೋಸ್ಕರ ಎದ್ದು ನಿಲ್ಲುವವರು ಯಾರು?
17 ಯೆಹೋವ ದೇವರು ನನಗೆ ಸಹಾಯ ಕೊಡದಿದ್ದರೆ, ನಾನು ಬೇಗನೇ ಮರಣದ ಮೌನದಲ್ಲಿ ವಾಸಿಸುತ್ತಿದ್ದೆನು.
೧೭ಯೆಹೋವನ ಸಹಾಯವಿಲ್ಲದಿದ್ದರೆ ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 “ನನ್ನ ಕಾಲು ಜಾರುತ್ತಿದೆ,” ಎಂದು ನಾನು ಹೇಳುತ್ತಿರುವಾಗಲೇ, ಯೆಹೋವ ದೇವರೇ, ನಿಮ್ಮ ಪ್ರೀತಿಯು ನನ್ನನ್ನು ಎತ್ತಿ ಹಿಡಿಯಿತು.
೧೮ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದುಕೊಂಡಾಗಲೇ, ನಿನ್ನ ಕೃಪೆಯು ನನಗೆ ಆಧಾರವಾಯಿತು.
19 ನನ್ನ ಚಿಂತೆಗಳು ನನ್ನೊಳಗೆ ಹೆಚ್ಚುತ್ತಿರುವಾಗ, ನಿಮ್ಮ ಸಂತೈಸುವಿಕೆಯು ನನ್ನ ಮನಸ್ಸನ್ನು ಆನಂದಪಡಿಸುತ್ತದೆ.
೧೯ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ, ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.
20 ತೀರ್ಪುಗಳಿಂದ ಕೇಡನ್ನು ಕಲ್ಪಿಸುವ ಅಪರಾಧದ ನ್ಯಾಯಾಸನವು ನಿಮ್ಮ ಸಂಗಡ ಅನ್ಯೋನ್ಯವಾಗಿರುವುದೋ?
೨೦ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, ನಿನಗೂ ಸಂಬಂಧವೇನು?
21 ನೀತಿವಂತನ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ಅವರ ನಿರಪರಾಧಿಗಳನ್ನು ಮರಣಕ್ಕೆ ಒಪ್ಪಿಸುತ್ತಾರೆ.
೨೧ಜೀವವನ್ನು ತೆಗೆಯಬೇಕೆಂದು ನೀತಿವಂತರ ಮೇಲೆ ಬೀಳುತ್ತಾರೆ; ನಿರಪರಾಧಿಗಳಿಗೆ ಮರಣಶಿಕ್ಷೆ ವಿಧಿಸುತ್ತಾರೆ.
22 ಆದರೆ ಯೆಹೋವ ದೇವರು ನನಗೆ ದುರ್ಗವೂ, ನನ್ನ ದೇವರೂ, ನನ್ನ ಆಶ್ರಯದ ಬಂಡೆಯೂ ಆಗಿದ್ದಾರೆ.
೨೨ಆದರೆ ಯೆಹೋವನು ನನ್ನ ದುರ್ಗವೂ, ನನ್ನ ದೇವರು ಆಶ್ರಯಗಿರಿಯೂ ಆಗಿದ್ದಾನೆ.
23 ವೈರಿಯ ಅಪರಾಧವು ಅವರ ಮೇಲೆಯೇ ತಿರುಗಿ ಬೀಳಲಿ; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಯೆಹೋವ ದೇವರು ಅವರನ್ನು ಸಂಹರಿಸಿ ಬಿಡುವನು.
೨೩ಅವರ ಕೆಟ್ಟತನವನ್ನು ಅವರಿಗೇ ತಿರುಗಿಸುವನು; ಅವರ ದುಷ್ಟತನದಿಂದಲೇ ಅವರನ್ನು ನಿರ್ಮೂಲಮಾಡುವನು. ನಮ್ಮ ಯೆಹೋವ ದೇವರು ಅವರನ್ನು ಸಂಹರಿಸಿಬಿಡುವನು.

< ಕೀರ್ತನೆಗಳು 94 >