< ಕೀರ್ತನೆಗಳು 8 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಲ್ಲಿ ಹಾಡತಕ್ಕದ್ದು. ದಾವೀದನ ಕೀರ್ತನೆ. ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ವೈಭವವುಳ್ಳದ್ದಾಗಿದೆ! ನೀವು ನಿಮ್ಮ ಮಹಿಮೆಯನ್ನು ಆಕಾಶಗಳಲ್ಲಿ ಸ್ಥಾಪಿಸಿದ್ದೀರಿ. 2 ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಸ್ತೋತ್ರದ ಮೂಲಕ ನಿಮ್ಮ ಶತ್ರುಗಳ ವಿರೋಧವಾಗಿ ಭದ್ರಕೋಟೆಯನ್ನು ಸ್ಥಾಪಿಸಿ, ನಿಮ್ಮ ವೈರಿಗಳನ್ನೂ ಮುಯ್ಯಿ ತೀರಿಸುವವರನ್ನೂ ನೀವು ಸುಮ್ಮಗಿರಿಸಿದ್ದೀರಿ. 3 ನಿಮ್ಮ ಬೆರಳಿನ ಸೃಷ್ಟಿಯಾದ ಆಕಾಶಮಂಡಲವನ್ನೂ ನೀವು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡಿದಾಗ, 4 ನೀವು ಮಾನವರನ್ನು ನೆನಸಲು ಅವರು ಎಷ್ಟರವರು? ಮನುಷ್ಯಪುತ್ರನನ್ನು ಲಕ್ಷ್ಯವಿಡಲು ಅವನು ಯಾರು? 5 ನೀವು ಮನುಷ್ಯಪುತ್ರನನ್ನು ದೇವರಿಗಿಂತಲೂ ಸ್ವಲ್ಪ ಕಡಿಮೆ ಮಾಡಿ, ಮಹಿಮೆಯನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿಟ್ಟಿದ್ದೀರಿ. 6 ನೀವು ನಿಮ್ಮ ಕೈಕೃತಿಗಳ ಮೇಲೆ ಅವನನ್ನು ಅಧಿಕಾರಿಯನ್ನಾಗಿ ಮಾಡಿ, ಸಮಸ್ತವನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ: 7 ಎಲ್ಲಾ ಕುರಿದನಗಳನ್ನೂ ಅಡವಿಯ ಮೃಗಗಳನ್ನೂ 8 ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ಸಮುದ್ರದ ಹಾದಿಗಳಲ್ಲಿ ಸಂಚರಿಸುವ ಎಲ್ಲ ವಿಧವಾದ ಜೀವಜಂತುಗಳನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ. 9 ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದಾಗಿದೆ!

< ಕೀರ್ತನೆಗಳು 8 >