< ಕೀರ್ತನೆಗಳು 70 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಬೇಡಿಕೆ. ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ; ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು, ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ದೇವರೇ, ದಯವಿಟ್ಟು ನನ್ನನ್ನು ರಕ್ಷಿಸು. ಯೆಹೋವನೇ, ಬೇಗನೆ ಬಂದು ಸಹಾಯ ಮಾಡು.
2 ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು ನಾಚಿಕೆಪಟ್ಟು ಗಲಿಬಿಲಿಯಾಗಲಿ. ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ ಹಿಂಜರಿದು ಅವಮಾನ ಹೊಂದಲಿ.
ನನ್ನ ಪ್ರಾಣಕ್ಕಾಗಿ ಸಮಯನೋಡುವವರು ಆಶಾಭಂಗಪಟ್ಟು ಅಪಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.
3 “ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯ ಫಲಕ್ಕಾಗಿ ಬೆಂಗೊಟ್ಟು ಓಡಲಿ.
ಆಹಾ, ಆಹಾ ಎಂದು ಪರಿಹಾಸ್ಯಮಾಡುವವರು ತಮಗಾಗುವ ಅಪಮಾನದಿಂದ ಬೆನ್ನು ಕೊಟ್ಟು ಓಡಿಹೋಗಲಿ.
4 ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ. ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.
ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು, “ದೇವರು ಮಹೋನ್ನತನು” ಎಂದು ಯಾವಾಗಲೂ ಹೇಳಲಿ.
5 ಆದರೆ ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ. ದೇವರೇ, ಬೇಗನೆ ನನ್ನ ಬಳಿಗೆ ಬನ್ನಿರಿ. ನನ್ನ ಸಹಾಯವೂ ನನ್ನನ್ನು ಬಿಡಿಸುವವರೂ ನೀವೇ, ಯೆಹೋವ ದೇವರೇ, ತಡಮಾಡದೆ ಬನ್ನಿರಿ.
ನಾನಾದರೋ ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ; ದೇವರೇ, ಬೇಗನೆ ಬಾ. ಯೆಹೋವನೇ, ನೀನೇ ನನಗೆ ಸಹಾಯಕನೂ, ರಕ್ಷಕನೂ ಆಗಿದ್ದೀ; ತಡಮಾಡಬೇಡ.

< ಕೀರ್ತನೆಗಳು 70 >