< ಕೀರ್ತನೆಗಳು 7 >

1 ಬೆನ್ಯಾಮೀನವನಾದ ಕೂಷನ ಮಾತುಗಳ ನಿಮಿತ್ತ ದಾವೀದನು ಯೆಹೋವ ದೇವರಿಗೆ ಹಾಡಿದ ಶಿಗ್ಗಯೋನ್ ಗೀತೆ. ನನ್ನ ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿದ್ದೇನೆ; ನನ್ನನ್ನು ಬೆನ್ನಟ್ಟಿದ ಎಲ್ಲರಿಂದಲೂ ನನ್ನನ್ನು ರಕ್ಷಿಸಿ ಕಾಪಾಡಿರಿ,
ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ದಾವೀದನು ಯೆಹೋವನಿಗಾಗಿ ಹಾಡಿದ ಗೀತೆ. ಯೆಹೋವನೇ, ನನ್ನ ದೇವರೇ, ನಿನ್ನ ಮೊರೆಹೊಕ್ಕಿದ್ದೇನೆ; ಬೆನ್ನಟ್ಟುವವರೆಲ್ಲರಿಂದ ತಪ್ಪಿಸಿ ನನ್ನನ್ನು ಕಾಪಾಡು.
2 ಇಲ್ಲದಿದ್ದರೆ, ನನ್ನನ್ನು ಸಿಂಹದಂತೆ ಅವರು ಹರಿದುಬಿಡುವರು ರಕ್ಷಿಸಲು ಯಾರೂ ಇಲ್ಲವೆಂದು ನನ್ನನ್ನು ನಾಶಮಾಡಿಬಿಡುವರು.
ಇಲ್ಲವಾದರೆ ನನಗೆ ರಕ್ಷಕನಿಲ್ಲವೆಂದು ತಿಳಿದು, ಶತ್ರುವು ಸಿಂಹದಂತೆ ಮೇಲೆ ಬಿದ್ದು ನನ್ನನ್ನು ಹರಿದುಬಿಟ್ಟಾನು.
3 ನನ್ನ ಯೆಹೋವ ದೇವರೇ, ನಾನು ಅನ್ಯಾಯ ಮಾಡಿದ್ದರೆ, ನನ್ನ ಕೈಗಳಲ್ಲಿ ಅಪರಾಧವಿದ್ದರೆ,
ಯೆಹೋವನೇ, ನನ್ನ ದೇವರೇ, ನಾನು ಕೈಗಳಲ್ಲಿ ಅನ್ಯಾಯವುಳ್ಳವನೂ,
4 ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡುಮಾಡಿದ್ದರೆ, ಕಾರಣವಿಲ್ಲದೆ ನನ್ನ ವೈರಿಯಿಂದ ಏನನ್ನಾದರೂ ಸುಲಿದುಕೊಂಡಿದ್ದರೆ,
ಮಿತ್ರದ್ರೋಹಿಯೂ ಆಗಿದ್ದರೆ ಶತ್ರುವು ಹಿಂದಟ್ಟಿ ಬಂದು, ನನ್ನನ್ನು ಹಿಡಿದು, ನೆಲಕ್ಕೆ ಕೆಡವಿ ತುಳಿಯಲಿ;
5 ಆಗ ನನ್ನ ವೈರಿಯು ಬೆನ್ನಟ್ಟಿ ನನ್ನನ್ನು ಹಿಡಿದುಕೊಳ್ಳಲಿ. ನನ್ನ ಜೀವವನ್ನು ನೆಲಕ್ಕೆ ಹಾಕಿ ತುಳಿದು ಬಿಡಲಿ ಮತ್ತು ನನ್ನ ಮಾನವನ್ನು ಮಣ್ಣು ಪಾಲಾಗುವಂತೆ ಮಾಡಲಿ.
ನನ್ನ ಮಾನವನ್ನು ಮಣ್ಣುಪಾಲು ಮಾಡಲಿ. ನಾನಂಥವನಲ್ಲ; ನಿಷ್ಕಾರಣ ವೈರಿಯನ್ನು ರಕ್ಷಿಸಿದೆನಲ್ಲ. (ಸೆಲಾ)
6 ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ; ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ. ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.
ಯೆಹೋವನೇ, ನ್ಯಾಯಸ್ಥಾಪಕನೇ, ನನಗೋಸ್ಕರ ಎಚ್ಚರವಾಗು. ಮಹಾಕೋಪದಿಂದ ಎದ್ದುಬಂದು ನನ್ನ ವಿರೋಧಿಗಳ ಕ್ರೋಧವನ್ನು ಭಂಗಪಡಿಸು.
7 ರಾಷ್ಟ್ರಗಳು ನಿಮ್ಮ ಸುತ್ತಲು ಬಂದು ಸೇರಲಿ, ಉನ್ನತದಿಂದ ನೀವು ಅವರ ಮೇಲೆ ಸಿಂಹಾಸನದಲ್ಲಿದ್ದು ಆಳಿರಿ.
ಎಲ್ಲಾ ಜನಾಂಗಗಳು ನಿನ್ನ ಸುತ್ತಲು ಸಭೆಯಾಗಿ ಕೂಡಿರುವಲ್ಲಿ ನೀನು ಪುನಃ ಆರೋಹಣಮಾಡು.
8 ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ. ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ, ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.
ಯೆಹೋವನು ಎಲ್ಲಾ ಜನಾಂಗಳಿಗೂ ನ್ಯಾಯತೀರಿಸುವವನಾಗಿದ್ದಾನೆ. ಯೆಹೋವನೇ, ನಿರಪರಾಧಿಯೂ, ನೀತಿವಂತನೂ ಆಗಿರುವ ನನಗೋಸ್ಕರ ನ್ಯಾಯತೀರಿಸು.
9 ದುಷ್ಟರ ಕೆಟ್ಟತನವು ಅಂತ್ಯವಾಗುವಂತೆಯೂ ನೀತಿವಂತರ ಭದ್ರತೆಯು ನಿಶ್ಚಯವಾಗುವಂತೆಯೂ ಮಾಡಿರಿ. ನೀತಿಯುಳ್ಳ ದೇವರೇ, ನೀವು ಹೃದಯವನ್ನೂ ಮನಸ್ಸನ್ನೂ ಪರಿಶೋಧಿಸುವವರಾಗಿದ್ದೀರಿ.
ಮನುಷ್ಯರ ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ದುಷ್ಟರ ಕೆಟ್ಟತನವು ಇಲ್ಲದೆ ಹೋಗುವಂತೆ ಮಾಡು; ನೀತಿವಂತರನ್ನು ದೃಢಪಡಿಸು.
10 ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ, ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.
೧೦ನನ್ನನ್ನು ರಕ್ಷಿಸುವ ಗುರಾಣಿಯು ದೇವರೇ; ಆತನು ಯಥಾರ್ಥರನ್ನು ಕಾಪಾಡುತ್ತಾನೆ.
11 ದೇವರು ನೀತಿಯುಳ್ಳ ನ್ಯಾಯಾಧಿಪತಿಯಾಗಿದ್ದಾರೆ. ದೇವರು ದುಷ್ಟನ ಮೇಲೆ ಸದಾ ರೋಷವುಳ್ಳವರಾಗಿದ್ದಾರೆ.
೧೧ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಆತನು ಯಾವಾಗಲೂ ದುಷ್ಟರ ವಿಷಯದಲ್ಲಿ ಕೋಪವುಳ್ಳವನು.
12 ಅಂಥವರು ತಿರುಗಿಕೊಳ್ಳದಿದ್ದರೆ ದೇವರು ತಮ್ಮ ಖಡ್ಗ ಮಸೆಯುವರು; ತಮ್ಮ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡುವರು.
೧೨ದೋಷಿಯು ಮನಸ್ಸನ್ನು ಬದಲಾಯಿಸಿಕೊಳ್ಳದೆ ಹೋದರೆ ಆತನು ತನ್ನ ಕತ್ತಿಯನ್ನು ಮಸೆಯುವನು. ತನ್ನ ಬಿಲ್ಲನ್ನು ಬಗ್ಗಿಸಿ ಸಿದ್ಧಮಾಡಿದ್ದಾನೆ.
13 ಅಂಥವರಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿದ್ದಾರೆ; ತಮ್ಮ ಅಗ್ನಿಬಾಣಗಳನ್ನು ಸಿದ್ಧಮಾಡುತ್ತಾರೆ.
೧೩ಆತನು ಅದಕ್ಕೆ ಮರಣಕರವಾದ ಅಗ್ನಿಬಾಣಗಳನ್ನು ಹೂಡಿ ಅವನ ಮೇಲೆ ಪ್ರಯೋಗಿಸುವುದಕ್ಕೆ ಗುರಿಯಿಟ್ಟು ನಿಂತಿದ್ದಾನೆ.
14 ಅಂಥವರು ದುಷ್ಟತನವನ್ನು ಗರ್ಭಧರಿಸಿ, ಸೇಡನ್ನು ಗರ್ಭದಲ್ಲಿಟ್ಟುಕೊಂಡು ಸುಳ್ಳನ್ನು ಹೆರುವರು.
೧೪ನನ್ನ ಶತ್ರುವು ಬದಲಾಯಿಸಿಕೊಳ್ಳದೆ ಕೇಡನ್ನು ಹೆರಬೇಕೆಂದು ಪ್ರಸವವೇದನೆಯಲ್ಲಿದ್ದಾನೆ; ಅವನು ಹಾನಿಯನ್ನು ಹಡೆಯುವೆನೆಂದು ನೆನಸಿಕೊಂಡರೂ, ಶೂನ್ಯವನ್ನೇ ಹೆತ್ತನು ನೋಡಿರಿ.
15 ಅಂಥವರು ಕುಣಿಯನ್ನು ಅಗೆದಿದ್ದಾರೆ. ಆದರೆ ತಾವು ಅಗೆದ ಕುಣಿಯೊಳಗೆ ತಾವೇ ಬೀಳುವರು.
೧೫ಅವನು ಅಗೆದು ಅಗೆದು ಗುಂಡಿಯನ್ನು ತೋಡಿ, ಅದರೊಳಗೆ ತಾನೇ ಬಿದ್ದುಹೋದನಲ್ಲಾ.
16 ಅಂಥವರ ಕೇಡು ಅವರ ಮೇಲೆಯೇ ತಿರುಗುವುದು; ಅವರ ತಲೆಯ ಮೇಲೆ ಅವರ ಬಲಾತ್ಕಾರವೇ ಇಳಿಯುವುದು.
೧೬ಅವನು ಮಾಡಿದ ಕುಯುಕ್ತಿ ಅವನ ತಲೆಯ ಮೇಲೆಯೇ ಬರುವುದು; ಅವನು ಮಾಡಬೇಕೆಂದಿದ್ದ ಅನ್ಯಾಯವು ಸ್ವಂತ ತಲೆಯ ಮೇಲೆ ಬೀಳುವುದು.
17 ನಾನು ಯೆಹೋವ ದೇವರನ್ನು ಕೊಂಡಾಡುವೆನು; ಏಕೆಂದರೆ, ಅವರು ನೀತಿಯುಳ್ಳವರು. ಮಹೋನ್ನತರಾದ ಯೆಹೋವ ದೇವರ ಹೆಸರನ್ನು ಕೀರ್ತನೆ ಮಾಡುವೆನು.
೧೭ಯೆಹೋವನು ಮಾಡಿದ ನ್ಯಾಯವಾದ ತೀರ್ಪಿಗಾಗಿ, ನಾನು ಆತನನ್ನು ಕೊಂಡಾಡುವೆನು. ಪರಾತ್ಪರ ದೇವನಾದ ಯೆಹೋವನ ನಾಮವನ್ನು ಸಂಕೀರ್ತಿಸುವೆನು.

< ಕೀರ್ತನೆಗಳು 7 >