< ಕೀರ್ತನೆಗಳು 68 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಒಂದು ಗೀತೆ. ದೇವರು ಕ್ರಿಯಾಶೀಲರಾಗಲಿ. ಅವರ ಶತ್ರುಗಳು ಚದರಿಹೋಗಲಿ. ದೇವರನ್ನು ವಿರೋಧಿಸುವವರು ಅವರ ಸಮ್ಮುಖದಿಂದ ಓಡಿಹೋಗಲಿ.
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ದಾವೀದನ ಕೀರ್ತನೆ; ಹಾಡು. ದೇವರು ಎದ್ದು ಹೊರಡುವಾಗ, ಆತನ ವೈರಿಗಳು ಚದರಿಹೋಗಲಿ; ಆತನ ಹಗೆಗಾರರು ಆತನ ಎದುರಿನಿಂದ ಓಡಿಹೋಗಲಿ.
2 ಗಾಳಿಯಿಂದ ಹೊಗೆ ಹಾರಿಹೋಗುವಂತೆ ಅವರು ಹಾರಿಹೋಗಲಿ. ಮೇಣವು ಬೆಂಕಿಯ ಮುಂದೆ ಕರಗುವಂತೆ, ದುಷ್ಟರು ದೇವರ ಮುಂದೆ ನಾಶವಾಗಲಿ.
ಹೊಗೆಯು ಗಾಳಿಯಿಂದ ಹೇಗೋ, ಹಾಗೆ ಅವರು ಆತನಿಂದ ಹಾರಿಹೋಗಲಿ; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ, ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗಲಿ.
3 ಆದರೆ ನೀತಿವಂತರು ಸಂತೋಷಿಸಲಿ. ದೇವರ ಮುಂದೆ ಉಲ್ಲಾಸಪಡಲಿ. ಹೌದು, ಅವರು ಹರ್ಷಾನಂದರಾಗಲಿ.
ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ.
4 ದೇವರಿಗೆ ಹಾಡಿರಿ, ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ. ಮೇಘಾರೂಢರಾಗಿರುವ ದೇವರನ್ನು ಕೊಂಡಾಡಿರಿ. ಅವರ ಹೆಸರು ಯೆಹೋವ ದೇವರು, ಅವರ ಮುಂದೆ ಉಲ್ಲಾಸಪಡಿರಿ.
ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.
5 ದೇವರು ತಮ್ಮ ಪರಿಶುದ್ಧ ಸ್ಥಳದಲ್ಲಿ ದಿಕ್ಕಿಲ್ಲದವರಿಗೆ ತಂದೆ, ವಿಧವೆಯರಿಗೆ ರಕ್ಷಕರಾಗಿದ್ದಾರೆ.
ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.
6 ದೇವರು ಒಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾರೆ. ಸೆರೆಯವರನ್ನು ಹರ್ಷಗೊಳಿಸಿ ಬಿಡುಗಡೆ ಮಾಡುತ್ತಾರೆ. ಆದರೆ ಎದುರು ಬೀಳುವವರು ಒಣಭೂಮಿಯಲ್ಲಿ ವಾಸಿಸುತ್ತಾರೆ.
ಒಬ್ಬೊಂಟಿಗರನ್ನು ಸಂಸಾರಿಕರಾಗುವಂತೆ ಮಾಡುತ್ತಾನೆ; ಸೆರೆಯಲ್ಲಿರುವವರನ್ನು ಬಿಡಿಸಿ ಸುಖಾವಸ್ಥೆಗೆ ತರುತ್ತಾನೆ. ದ್ರೋಹಿಗಳಾದರೋ ಮರುಭೂಮಿಯಲ್ಲಿ ಉಳಿಯಬೇಕಾಗುವುದು.
7 ದೇವರೇ, ನೀವು ನಿಮ್ಮ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ,
ದೇವರೇ, ನೀನು ನಿನ್ನ ಪ್ರಜೆಯ ಮುಂದೆ ಹೊರಟು, ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಾ ಬರುವಾಗ, (ಸೆಲಾ)
8 ಭೂಮಿಯು ಕದಲಿತು, ಆಕಾಶಗಳು ಸಹ ನಿಮ್ಮ ಮುಂದೆ ಮಳೆಗರೆದವು. ಇಸ್ರಾಯೇಲರ ದೇವರ ಮುಂದೆ, ಹೌದು, ದೇವರ ಮುಂದೆಯೇ ಸೀನಾಯಿ ಸಹ ಕದಲಿತು.
ದೇವರು ಪ್ರತ್ಯಕ್ಷನಾಗಿದ್ದಾನೆಂದು ಭೂಮಿಯು ಕಂಪಿಸಿತು; ಮೇಘಮಂಡಲವು ಮಳೆಸುರಿಸಿತು. ಇಸ್ರಾಯೇಲರ ದೇವರು ಪ್ರತ್ಯಕ್ಷನಾಗಿದ್ದಾನೆಂದು, ಆ ಸೀನಾಯ್ ಬೆಟ್ಟವು ಕದಲಿತು.
9 ದೇವರೇ, ನೀವು ಹೇರಳವಾಗಿ ಮಳೆಯನ್ನು ಸುರಿಸಿ, ದಣಿದ ನಿಮ್ಮ ಬಾಧ್ಯತೆಯನ್ನು ನೀವು ಉತ್ಸಾಹಪಡಿಸಿದಿರಿ.
ದೇವರೇ, ನೀನು ಹೇರಳವಾಗಿ ಮಳೆಸುರಿಸಿ, ಬಾಯ್ದೆರೆದಿದ್ದ ನಿನ್ನ ಸ್ವತ್ತನ್ನು ಶಾಂತಪಡಿಸಿದಿ.
10 ನಿಮ್ಮ ಪ್ರಜೆಗಳು ಅದರಲ್ಲಿ ವಾಸಮಾಡಿದರು. ದೇವರೇ, ನಿಮ್ಮ ಒಳ್ಳೆಯತನದಿಂದ ಬಡವರಿಗೋಸ್ಕರ ಒದಗಿಸಿದ್ದೀರಿ.
೧೦ನಿನ್ನ ಪ್ರಜಾಮಂಡಲಿಯು ಅದರಲ್ಲಿ ವಾಸಮಾಡಿತು. ದೇವರೇ, ನೀನು ದಯಾಪರನಾಗಿ ದರಿದ್ರರಿಗೆ ಬೇಕಾದದ್ದೆಲ್ಲವನ್ನು ಒದಗಿಸಿಕೊಟ್ಟಿ.
11 ಯೆಹೋವ ದೇವರು ವಾಕ್ಯವನ್ನು ಕೊಟ್ಟರು. ಆ ವಾಕ್ಯವನ್ನು ಹೀಗೆಂದು ಪ್ರಕಟಿಸಿದ ಮಹಿಳೆಯರ ಗುಂಪು ದೊಡ್ಡದಾಗಿತ್ತು:
೧೧ಕರ್ತನು ಆಜ್ಞಾಪಿಸಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.
12 “ಸೈನ್ಯದೊಡನೆ ಅರಸರು ಓಡಿಹೋದರು. ಪಾಳೆಯದಲ್ಲಿರುವ ಮಹಿಳೆಯರು ಕೊಳ್ಳೆಯನ್ನು ಹಂಚಿಕೊಳ್ಳುವರು.
೧೨ಓಡಿ ಹೋಗುತ್ತಾರೆ; ಸೈನ್ಯದೊಡನೆ ಅರಸುಗಳು ಓಡಿ ಹೋಗುತ್ತಾರೆ; ಮನೆಯಲ್ಲಿದ್ದ ಸ್ತ್ರೀಯರು ಕೊಳ್ಳೆಯನ್ನು ಹಂಚುತ್ತಾರೆ.
13 ನೀವು ಪಾಳೆಯದ ಬೆಂಕಿಯ ಬಳಿ ಮಲಗಿದರೂ, ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಹೊಳೆಯುವಂತಿರುವಿರಿ.”
೧೩ನೀವು ಕುರಿಹಟ್ಟಿಗಳಲ್ಲಿ ಮಲಗಿಕೊಂಡಿರುವುದೇನು? ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುತ್ತವೆ.
14 ಸರ್ವಶಕ್ತರಾದ ದೇವರು ಅರಸರನ್ನು ಅಲ್ಲಿ ಚದರಿಸಿದಾಗ ಸಲ್ಮೋನಿನಲ್ಲಿ ಬಿಳೀ ಹಿಮ ಬಿದ್ದಂತಿತ್ತು.
೧೪ಸರ್ವಶಕ್ತನು ಅಲ್ಲಿ ರಾಜರನ್ನು ಚದುರಿಸಿದಾಗ, ಸಲ್ಮೋನಿನ ಮೇಲೆ ಹಿಮವು ಬಿದ್ದಿತು.
15 ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
೧೫ಬಾಷಾನಿನ ಪರ್ವತವು ಮಹೋನ್ನತವಾಗಿದೆ; ಆ ಬಾಷಾನ್ ಗಿರಿಯು ಶಿಖರಗಳುಳ್ಳದ್ದೇ.
16 ಉನ್ನತ ಬೆಟ್ಟಗಳೇ, ಏಕೆ ಕುಣಿಯುತ್ತೀರಿ? ದೇವರು ನಿವಾಸಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಯೆಹೋವ ದೇವರು ಅದರಲ್ಲಿ ಸದಾಕಾಲವೂ ವಾಸಿಸುವರು.
೧೬ಎಲೈ, ಶಿಖರೋನ್ನತಪರ್ವತಗಳೇ, ದೇವರು ತನ್ನ ನಿವಾಸಕ್ಕಾಗಿ ಆರಿಸಿಕೊಂಡಿರುವ ಈ ಪರ್ವತವನ್ನು ನೀವು ಓರೆಗಣ್ಣಿನಿಂದ ನೋಡುವುದೇಕೆ? ಯೆಹೋವನು ಸದಾಕಾಲವೂ ಇದರಲ್ಲೇ ವಾಸಿಸುವನು.
17 ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತ ಆಗಿರುವ ಯೆಹೋವ ದೇವರು ಅವುಗಳ ಸಮೇತವಾಗಿ ಸೀನಾಯಿ ಬೆಟ್ಟದಲ್ಲಿದ್ದ ಹಾಗೆ ಪವಿತ್ರಾಲಯದಲ್ಲಿದ್ದಾರೆ.
೧೭ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತನಾದ ಯೆಹೋವನು ಅವುಗಳ ಸಮೇತವಾಗಿ, ಸೀನಾಯ್ ಬೆಟ್ಟದಿಂದ ಪವಿತ್ರಾಲಯಕ್ಕೆ ಬಂದಿದ್ದಾನೆ.
18 ನೀವು ಅನೇಕ ಸೆರೆಯವರ ಹಿಡಿದುಕೊಂಡು ಉನ್ನತಕ್ಕೆ ಹೋದಾಗ, ಯೆಹೋವ ದೇವರು ತಿರುಗಿಬೀಳುವವರ ಮಧ್ಯದಲ್ಲಿ ಸಹ ನಿವಾಸಿಸುವಂತೆ ಆ ತಿರುಗಿಬಿದ್ದ ಮನುಷ್ಯರಿಂದ ದಾನಗಳನ್ನು ಅಂಗೀಕರಿಸಿದ್ದೀರಿ.
೧೮ನೀನು ಜಯಿಸಿದ ಬಹು ಜನರನ್ನು ಸೆರೆಹಿಡಿದುಕೊಂಡು ಹೋಗಿ, ನಿನಗೆ ದ್ರೋಹಿಗಳಾದ ಮನುಷ್ಯರಿಂದಲೇ ಕಪ್ಪಗಳನ್ನು ಸಂಗ್ರಹಿಸಿ, ದೇವನಾದ ಯಾಹುವು ಅಲ್ಲೇ ವಾಸಿಸುವಂತೆ, ಉನ್ನತಸ್ಥಾನಕ್ಕೆ ಏರಿದ್ದೀ.
19 ಪ್ರತಿದಿನವೂ ನಮ್ಮ ಭಾರವನ್ನು ಹೊರುವ ಕರ್ತದೇವರಿಗೆ ಸ್ತೋತ್ರ. ನಮ್ಮನ್ನು ರಕ್ಷಿಸುವ ದೇವರು ಸ್ತುತಿಹೊಂದಲಿ.
೧೯ಅನುದಿನವೂ ನಮ್ಮ ಭಾರವನ್ನು ಹೊರುತ್ತಿರುವ ಕರ್ತನಿಗೆ ಸ್ತೋತ್ರವಾಗಲಿ. ನಮ್ಮನ್ನು ರಕ್ಷಿಸುವ ದೇವರು ಆತನೇ. (ಸೆಲಾ)
20 ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾರೆ. ಸಾರ್ವಭೌಮ ಯೆಹೋವ ದೇವರು ಮರಣದಿಂದ ಬಿಡುಗಡೆ ಮಾಡುತ್ತಾರೆ.
೨೦ನಮ್ಮ ದೇವರು ನಮ್ಮನ್ನು ವಿಮೋಚಿಸುವುದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.
21 ದೇವರು ತಮ್ಮ ಶತ್ರುಗಳ ತಲೆಯನ್ನೂ, ತನ್ನ ಅಪರಾಧಗಳಲ್ಲಿ ಇನ್ನೂ ಮುಂದುವರಿಯುವವರ ಕೂದಲುಳ್ಳ ಮಂಡೆಯನ್ನೂ ಗಾಯಮಾಡುವರು.
೨೧ಆಹಾ, ಆತನು ತನ್ನ ವೈರಿಗಳ ಶಿರಸ್ಸುಗಳನ್ನೂ, ಸ್ವೇಚ್ಛೆಯಿಂದ ಪಾಪದಲ್ಲಿ ಪ್ರವರ್ತಿಸುವವರ ತುಂಬುಗೂದಲಿನ ತಲೆಗಳನ್ನೂ ಒಡೆದು ನಿರ್ಮೂಲ ಮಾಡುವನು.
22 ಯೆಹೋವ ದೇವರು ಹೀಗೆ ಹೇಳುತ್ತಾರೆ, “ಬಾಷಾನಿನಿಂದ ಅವರನ್ನು ತಿರುಗಿ ಬರಮಾಡುವೆನು; ಸಮುದ್ರದ ಅಗಾಧಗಳಿಂದ ಜನರನ್ನು ತಿರುಗಿ ಬರಮಾಡುವೆನು.
೨೨ಕರ್ತನು, “ನಾನು ಅವರನ್ನು ಬಾಷಾನಿನಿಂದಲೂ, ಸಮುದ್ರ ತಳದಿಂದಲೂ ಹಿಡಿದು ತರುವೆನು.
23 ಆಗ ನಿಮ್ಮ ಪಾದಗಳು ನಿಮ್ಮ ವೈರಿಗಳ ರಕ್ತದ ಮೇಲಿರಲಿ. ನಾಯಿಗಳು ಅದನ್ನು ನೆಕ್ಕಲಿ.”
೨೩ಆಗ ನೀನು ನಿನ್ನ ಶತ್ರುಗಳ ರಕ್ತದಲ್ಲಿ ಕಾಲಾಡಿಸುವಿ. ನಿನ್ನ ನಾಯಿಗಳ ನಾಲಿಗೆಗಳಿಗೆ ವೈರಿಗಳ ದೇಹದಲ್ಲಿ ಪಾಲುಸಿಕ್ಕುವುದು” ಎಂದು ನುಡಿದನು.
24 ದೇವರೇ, ನಿಮ್ಮ ಮೆರವಣಿಗೆಯು ಪ್ರಕಟವಾಗಿದೆ. ನನ್ನ ಅರಸರಾಗಿರುವ ದೇವರ ಮೆರವಣಿಗೆಯು ಪರಿಶುದ್ಧ ಸ್ಥಳವನ್ನು ಪ್ರವೇಶಿಸುವುದು.
೨೪ದೇವರೇ, ನಿನ್ನ ಮೆರವಣಿಗೆ ಶೋಭಿಸುತ್ತದೆ; ನನ್ನ ಅರಸನಾದ ದೇವರು ತನ್ನ ಪರಿಶುದ್ಧಾಲಯಕ್ಕೆ ಮೆರವಣಿಗೆಯಾಗಿ ಪ್ರವೇಶಿಸುತ್ತಾನೆ.
25 ಹಾಡುವವರು ಮುಂದಾಗಿಯೂ, ಬಾರಿಸುವವರು ಹಿಂದಾಗಿಯೂ, ದಮ್ಮಡಿ ಬಡಿಯುವ ಕನ್ಯೆಯರು ಮಧ್ಯದಲ್ಲಿಯೂ ಹಿಂಬಾಲಿಸುವರು.
೨೫ಮುಂಭಾಗದಲ್ಲಿ ಹಾಡುವವರೂ, ಹಿಂಭಾಗದಲ್ಲಿ ವಾದ್ಯಬಾರಿಸುವವರೂ, ಸುತ್ತಲೂ ದಮ್ಮಡಿಬಡಿಯುವ ಸ್ತ್ರೀಯರೂ ಹೋಗುತ್ತಾ,
26 ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.
೨೬“ಇಸ್ರಾಯೇಲ್ ವಂಶಸ್ಥರೇ, ಸಮೂಹವಾಗಿ ದೇವರಾದ ಕರ್ತನನ್ನು ಕೊಂಡಾಡಿರಿ” ಎಂದು ಹಾಡುತ್ತಾರೆ.
27 ಬೆನ್ಯಾಮೀನನ ಚಿಕ್ಕ ಗೋತ್ರವು ಅವರನ್ನು ನಡೆಸುವುದು. ಯೆಹೂದದ ಪ್ರಧಾನರೂ, ಜೆಬುಲೂನನ ಪ್ರಧಾನರೂ ನಫ್ತಾಲಿಯ ಪ್ರಧಾನರೂ ಅಲ್ಲಿ ಇದ್ದಾರೆ.
೨೭ಅಲ್ಲಿ ಎಲ್ಲರಿಗೆ ನಾಯಕರಾಗಿರುವ ಬೆನ್ಯಾಮೀನ್ ಎಂಬ ಸಣ್ಣ ಗೋತ್ರದವರೂ, ಗುಂಪಾಗಿ ಬರುವ ಯೆಹೂದ ಕುಲದ ಪ್ರಭುಗಳೂ, ಜೆಬುಲೂನ್, ನಫ್ತಾಲಿ ಗೋತ್ರಗಳ ಪ್ರಧಾನರೂ ಇದ್ದಾರೆ.
28 ದೇವರೇ, ನಿಮ್ಮ ಶಕ್ತಿಯನ್ನು ಪ್ರಕಟಿಸಿರಿ, ಮೊದಲು ಮಾಡಿದಂತೆಯೇ ಈಗಲೂ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ.
೨೮ದೇವರೇ, ನಿನ್ನ ಪ್ರತಾಪವನ್ನು ಆಜ್ಞಾಪಿಸು. ನಿನ್ನ ಮಂದಿರದಲ್ಲಿ ಆಸೀನನಾಗಿ ನಮಗೋಸ್ಕರ ಮಹತ್ಕಾರ್ಯಗಳನ್ನು ನಡೆಸಿದ ದೇವರೇ, ನಿನ್ನ ಬಲವನ್ನು ಪ್ರಕಟಿಸು.
29 ಯೆರೂಸಲೇಮಿನ ನಿಮ್ಮ ಮಂದಿರದ ನಿಮಿತ್ತ ಅರಸರು ನಿಮಗೆ ಕಾಣಿಕೆಗಳನ್ನು ಸಮರ್ಪಿಸಲಿ.
೨೯ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.
30 ಆಪು ಹುಲ್ಲಿನ ಮಧ್ಯದಲ್ಲಿರುವ ಕಾಡುಮೃಗಗಳ ಹಾಗೆಯೂ ಕರುಗಳ ಮಧ್ಯದಲ್ಲಿರುವ ಹೋರಿಗಳ ಹಾಗೆಯೂ ಇರುವ ಜನಾಂಗವನ್ನು ಗದರಿಸಿರಿ. ಮೃಗದಂಥವರು ತಗ್ಗಿಸಿಕೊಂಡು ಬೆಳ್ಳಿ ಗಟ್ಟಿಗಳನ್ನು ನಿಮಗೆ ತರಲಿ. ಆದರೆ ಯುದ್ಧದಲ್ಲಿ ಆನಂದಿಸುವ ರಾಷ್ಟ್ರಗಳನ್ನು ಚದರಿಸಿರಿ.
೩೦ಆಪಿನೊಳಗೆ ವಾಸಿಸುವ ನೀರಾನೆ, ಕರುಗಳ ಸಹಿತವಾದ ಹೋರಿಗಳ ಗುಂಪು, ಇವುಗಳಂತಿರುವ ಶತ್ರುಜನಾಂಗಗಳನ್ನು ಬೆದರಿಸು. ಅವು ಬೆಳ್ಳಿಗಟ್ಟಿಗಳನ್ನು ತಂದು ನಿನಗೆ ಅಡ್ಡಬೀಳಲಿ. ಯುದ್ಧಾಸಕ್ತ ಜನಾಂಗಗಳನ್ನು ಚದುರಿಸಿಬಿಡು.
31 ಈಜಿಪ್ಟಿನಿಂದ ರಾಯಭಾರಿಗಳು ಬರುವರು. ಕೂಷ್ ದೇಶದವರು ತಾವಾಗಿಯೇ ಬಂದು ದೇವರಿಗೆ ಅಧೀನವಾಗುವರು.
೩೧ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.
32 ಭೂಮಿಯ ರಾಜ್ಯಗಳೇ, ದೇವರಿಗೆ ಹಾಡಿರಿ. ಯೆಹೋವ ದೇವರನ್ನು ಕೀರ್ತಿಸಿರಿ.
೩೨ಭೂರಾಜ್ಯಗಳೇ, ದೇವರಿಗೆ ಗಾಯನಮಾಡಿರಿ; ಕರ್ತನನ್ನು ಸಂಕೀರ್ತಿಸಿರಿ. (ಸೆಲಾ)
33 ಪೂರ್ವದ ಆಕಾಶಗಳಲ್ಲಿ ಸವಾರಿ ಮಾಡುವ ದೇವರಿಗೆ ಹಾಡಿರಿ. ದೇವರ ಸ್ವರವು ಗುಡುಗಿನಂತೆ ಇರುವುದು.
೩೩ಅನಾದಿಕಾಲದಿಂದಿರುವ ಮಹೋನ್ನತಾಕಾಶದಲ್ಲಿ ವಾಹನಾರೂಢನಾಗಿ ಇರುವಾತನನ್ನು ಸ್ತುತಿಸಿರಿ. ಕೇಳಿರಿ; ಆತನ ಗರ್ಜನೆಯು ಮಹಾಘೋರವಾದದ್ದು.
34 ದೇವರ ಶಕ್ತಿಯನ್ನು ಘೋಷಿಸಿರಿ. ಇಸ್ರಾಯೇಲರ ಮೇಲೆ ಅವರ ಪ್ರಭಾವವಿರುತ್ತದೆ. ಮೇಘಗಳಲ್ಲಿ ಅವರ ಶಕ್ತಿಯು ಇರುತ್ತದೆ.
೩೪ದೇವರ ಪ್ರತಾಪವನ್ನು ಕೊಂಡಾಡಿರಿ. ಆತನ ಗಾಂಭೀರ್ಯವು ಇಸ್ರಾಯೇಲರ ಆಶ್ರಯವಾಗಿದೆ; ಆತನ ಶಕ್ತಿಯು ಮೇಘಮಾರ್ಗದಲ್ಲೆಲ್ಲಾ ವ್ಯಾಪಿಸಿದೆ.
35 ದೇವರೇ, ನಿಮ್ಮ ಪರಿಶುದ್ಧ ಸ್ಥಳದಲ್ಲಿ ನೀವು ಅತಿಶಯವಾಗಿದ್ದೀರಿ. ಇಸ್ರಾಯೇಲರ ದೇವರೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುವರು. ದೇವರಿಗೆ ಸ್ತುತಿಯಾಗಲಿ.
೩೫ದೇವರೇ, ಪರಿಶುದ್ಧಾಲಯದಲ್ಲಿರುವ ನೀನು ಮಹಾಭಯಂಕರನು. ಇಸ್ರಾಯೇಲರ ದೇವರು ತನ್ನ ಪ್ರಜೆಗೆ ಬಲಪರಾಕ್ರಮಗಳನ್ನು ದಯಪಾಲಿಸುವನು. ದೇವರಿಗೆ ಸ್ತೋತ್ರ.

< ಕೀರ್ತನೆಗಳು 68 >