< ಕೀರ್ತನೆಗಳು 63 >

1 ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ. 2 ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ. 3 ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು. 4 ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು. 5 ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು. 6 ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು. 7 ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು. 8 ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ. 9 ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು. 10 ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು. 11 ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.

< ಕೀರ್ತನೆಗಳು 63 >