< ಕೀರ್ತನೆಗಳು 61 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ. ದೇವರೇ, ನನ್ನ ಮೊರೆಯನ್ನು ಕೇಳಿರಿ. ನನ್ನ ಪ್ರಾರ್ಥನೆಯನ್ನು ಆಲಿಸಿರಿ. 2 ನನ್ನ ಹೃದಯವು ಕುಂದಿ ಹೋಗಿರಲಾಗಿ ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು. ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ. 3 ನೀವೇ ನನಗೆ ಆಶ್ರಯವಾಗಿದ್ದೀರಿ. ಶತ್ರುವಿಗೆ ಎದುರಾಗಿ ಬಲವಾದ ಬುರುಜಾಗಿದ್ದೀರಿ. 4 ನಿಮ್ಮ ಗುಡಾರದಲ್ಲಿ ನಿತ್ಯವಾಗಿ ನಿವಾಸಿಸಲು ಹಾರೈಸುತ್ತಿದ್ದೇನೆ. ನಿಮ್ಮ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು. 5 ದೇವರೇ, ನೀವು ನನ್ನ ಹರಕೆಗಳನ್ನು ಕೇಳಿದ್ದೀರಿ. ನಿಮ್ಮ ಹೆಸರಿಗೆ ಭಯಪಡುವವರಿಗೆ ಕೊಡುವ ಸೊತ್ತನ್ನು ನನಗೂ ಕೊಟ್ಟಿದ್ದೀರಿ. 6 ಅರಸನ ಜೀವನದ ದಿನಗಳನ್ನು ಹೆಚ್ಚಿಸಿರಿ. ಆತನ ವರ್ಷಗಳನ್ನು ತಲತಲಾಂತರಗಳವರೆಗೆ ವೃದ್ಧಿಪಡಿಸಿರಿ. 7 ಆತನು ಎಂದೆಂದಿಗೂ ದೇವರ ಮುಂದೆ ಆಳಿಕೆಮಾಡಲಿ. ಆತನನ್ನು ಕಾಯುವ ಹಾಗೆ ನಿಮ್ಮ ಪ್ರೀತಿ, ಸತ್ಯವನ್ನು ನೇಮಿಸಿರಿ. 8 ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು. ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು.

< ಕೀರ್ತನೆಗಳು 61 >