< ಕೀರ್ತನೆಗಳು 58 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಕೀರ್ತನೆ. ಜನನಾಯಕರೇ, ನೀವು ನ್ಯಾಯವಾಗಿ ತೀರ್ಪನ್ನು ನುಡಿಯುತ್ತೀರೋ? ಜನರಲ್ಲಿ ನೀವು ಯಥಾರ್ಥವಾಗಿ ನ್ಯಾಯತೀರಿಸುವಿರೋ?
೧ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ. ಅಧಿಕಾರಿಗಳೇ, ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ? ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ?
2 ಇಲ್ಲಾ, ನಿಮ್ಮ ಹೃದಯದಲ್ಲಿ ದುಷ್ಟತನವನ್ನು ಕಲ್ಪಿಸುತ್ತೀರಲ್ಲಾ, ದೇಶದಲ್ಲಿ ನಿಮ್ಮ ಕೈಗಳಿಂದ ಹಿಂಸಾಚಾರವನ್ನು ತೂಗುತ್ತೀರಲ್ಲಾ.
೨ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ; ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ.
3 ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ. ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.
೩ದುಷ್ಟರು ಜನ್ಮದಿಂದಲೇ ಧರ್ಮಭ್ರಷ್ಟರು; ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿ ದಾರಿ ತಪ್ಪಿದವರು.
4 ಹಾವಿನ ವಿಷದ ಹಾಗೆ ಅವರಲ್ಲಿ ವಿಷ ಇದೆ. ಘಟಸರ್ಪದ ಹಾಗೆ ಮಂದವಾಗಿದ್ದಾರೆ.
೪ಅವರು ಸರ್ಪದಂತೆ ವಿಷಭರಿತರು.
5 ಚಮತ್ಕಾರದಿಂದ ಆಕರ್ಷಿಸಿ, ಕೌಶಲ್ಯದಿಂದ ನುಡಿಸುವ ಹಾವಾಡಿಗನ ನಾದವನ್ನು ಕೇಳದ ಹಾವಿನಂತೆ ಇದ್ದಾರೆ.
೫ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದ ಅಥವಾ ಅದಕ್ಕೆ ಕಿವಿಗೊಡದ ಕಳ್ಳ ಹಾವಿನಂತೆ ಇರುತ್ತಾರೆ.
6 ಓ, ದೇವರೇ, ಅವರ ಹಲ್ಲುಗಳು ಮುರಿದು ಬೀಳಲಿ. ಯೆಹೋವ ದೇವರೇ, ಪ್ರಾಯದ ಸಿಂಹಗಳಂತಿರುವ ಅವರ ಕೋರೆಹಲ್ಲುಗಳು ನಾಶವಾಗಲಿ.
೬ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು; ಯೆಹೋವನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಕಿತ್ತುಹಾಕು.
7 ಅವರು ನೀರಿನಂತೆ ಕರಗಿಹೋಗಲಿ. ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.
೭ಕ್ಷಣದಲ್ಲಿ ಹರಿದು ಕಾಣದೆ ಹೋಗುವ ನೀರಿನಂತೆ ಅವರು ಮಾಯವಾಗಲಿ; ಬಾಣ ತಾಗಿತೋ ಎಂಬಂತೆ ಅವರು ಬೀಳಲಿ.
8 ಕರಗುವ ಗೊಂಡೆ ಹುಳದಂತೆ ಅವರು ನಾಶವಾಗಲಿ. ದಿನತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ಕಾಣದಿರಲಿ.
೮ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ; ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ.
9 ಗಡಿಗೆಗಳು ಮುಳ್ಳಿನ ಬೆಂಕಿಯ ಶಾಖವನ್ನು ಇನ್ನೂ ಹಸಿಯಾಗಿ ಇಲ್ಲವೆ ಒಣಗಿರುವಾಗಲೇ, ಬಿರುಗಾಳಿ ಹಾರಿಸಿಬಿಡುವಂತೆ ಅವರಿಗೆ ಆಗಲಿ.
೯ಇನ್ನೂ ಹಸಿರಿರುರುವಾಗಲೇ ಒಲೆಗೆ ಹಾಕಿದ ಮುಳ್ಳಿನ ಕೊಂಪೆಯನ್ನು ಬಿರುಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಿಶ್ಶೇಷಮಾಡಲಿ.
10 ನೀತಿವಂತರು ದುಷ್ಟರಿಗಾಗುವ ಪ್ರತಿದಂಡನೆಯನ್ನು ಕಂಡು ಹಿಗ್ಗಿ ತಮ್ಮ ಪಾದಗಳನ್ನು ದುಷ್ಟನ ರಕ್ತದ ಮೇಲಿಡಲಿ.
೧೦ದುಷ್ಟರಿಗಾಗುವ ಪ್ರತಿದಂಡನೆಯನ್ನು ಭಕ್ತರು ನೋಡಿ ಹರ್ಷಿಸಿ, ಅವರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರು ಹೀಗೆ ಹೇಳಿಕೊಳ್ಳುವರು, “ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ. ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”
೧೧ನೀತಿವಂತನಿಗೆ ಫಲವುಂಟೆಂತಲೂ, ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು.