< ಕೀರ್ತನೆಗಳು 48 >

1 ಒಂದು ಗೀತೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ. ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ. 2 ಉತ್ತರ ದಿಕ್ಕಿನಲ್ಲಿರುವ ಮಹಾರಾಜರ ಪಟ್ಟಣವಾದ ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ. 3 ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ. ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ. 4 ಏಕೆಂದರೆ, ಇಗೋ, ಅರಸರು ಕೂಡಿಬಂದರು. ಅವರು ಒಟ್ಟಾಗಿ ದಾಳಿಮಾಡಲು ಬಂದರು. 5 ಅವರು ಪಟ್ಟಣವನ್ನು ಕಂಡು, ಬೆರಗಾದರು. ಅವರು ಭಯಪಟ್ಟು ಓಡಿಹೋದರು. 6 ಅಲ್ಲಿ ನಡುಕವವೂ ಹೆರುವವಳ ಹಾಗೆ ನೋವೂ ಅವರನ್ನು ಹಿಡಿಯಿತು. 7 ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್ ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ. 8 ನಾವು ಹೇಗೆ ಕೇಳಿದೆವೋ ಹಾಗೆಯೇ ಕಣ್ಣಾರೆ ಕಂಡೆವು, ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ, ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು: ದೇವರು ಪಟ್ಟಣವನ್ನು ಎಂದೆಂದಿಗೂ ಸ್ಥಿರಪಡಿಸುವರು. 9 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ. 10 ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ; ನಿಮ್ಮ ಬಲಗೈ ನೀತಿಯಿಂದ ತುಂಬಿದೆ. 11 ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದ ಪುತ್ರಿಯರು ಉಲ್ಲಾಸಪಡಲಿ. 12 ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ ಅದರ ಗೋಪುರಗಳನ್ನು ಎಣಿಸಿರಿ. 13 ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ ಅದರ ಗೋಪುರಗಳನ್ನು ಕಣ್ಣಿಟ್ಟು ನೋಡಿರಿ, ಅದರ ಅರಮನೆಗಳನ್ನು ಲಕ್ಷಿಸಿರಿ. 14 ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.

< ಕೀರ್ತನೆಗಳು 48 >