< ಕೀರ್ತನೆಗಳು 31 >
1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿಕೊಂಡಿದ್ದೇನೆ; ನಾನು ಎಂದಿಗೂ ನಾಚಿಕೆಪಡದಂತೆ ಮಾಡಿರಿ; ನಿಮ್ಮ ನೀತಿಯಲ್ಲಿ ನನ್ನನ್ನು ವಿಮೋಚಿಸಿರಿ.
೧ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನಿನ್ನ ಮೊರೆಹೊಕ್ಕಿದ್ದೇನೆ; ನನ್ನನ್ನು ಎಂದಿಗೂ ಅವಮಾನಕ್ಕೆ ಗುರಿಪಡಿಸಬೇಡ. ನಿನ್ನ ನೀತಿಗನುಸಾರವಾಗಿ ನನ್ನನ್ನು ರಕ್ಷಿಸು.
2 ನಿಮ್ಮ ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ; ಬೇಗ ಬಂದು ನನ್ನನ್ನು ಬಿಡಿಸಿರಿ; ನನ್ನನ್ನು ರಕ್ಷಿಸುವುದಕ್ಕೆ ನನ್ನ ಆಶ್ರಯದ ಬಂಡೆಯೂ, ಬಲವಾದ ಕೋಟೆಯೂ ಆಗಿರಿ.
೨ಕಿವಿಗೊಟ್ಟು ಕೇಳಿ ಬೇಗನೆ ನನ್ನನ್ನು ಬಿಡಿಸು; ನನ್ನನ್ನು ರಕ್ಷಿಸುವ ಆಶ್ರಯಗಿರಿಯೂ, ದುರ್ಗಸ್ಥಾನವೂ ಆಗಿರು.
3 ನನ್ನ ಬಂಡೆಯೂ ನನ್ನ ಕೋಟೆಯೂ ನೀವೇ; ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ನಡೆಸಿರಿ; ನನಗೆ ಮಾರ್ಗದರ್ಶಕರಾಗಿರಿ.
೩ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ; ಆದುದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡೆಸು.
4 ವೈರಿಯು ಗುಪ್ತವಾಗಿ ಒಡ್ಡಿದ ಬಲೆಯೊಳಗಿಂದ ನನ್ನನ್ನು ಹೊರಗೆ ಎಳೆಯಿರಿ; ನೀವೇ ನನಗೆ ಆಶ್ರಯ.
೪ಶತ್ರುಗಳು ನನಗೆ ರಹಸ್ಯವಾಗಿ ಹಾಕಿದ ಬಲೆಯೊಳಗೆ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು;
5 ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ; ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.
೫ನೀನೇ ನನಗೆ ಆಧಾರವಲ್ಲವೇ; ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದೇನೆ. ಯೆಹೋವನೇ, ನಂಬಿಗಸ್ತನಾದ ದೇವರೇ, ನನ್ನನ್ನು ವಿಮೋಚಿಸಿದ್ದೀ.
6 ದೇವರಲ್ಲದವುಗಳನ್ನು ಅನುಸರಿಸುವವರಿಂದ ನಾನು ಪ್ರತ್ಯೇಕವಾಗಿದ್ದೇನೆ; ನಾನು ಯೆಹೋವ ದೇವರಲ್ಲಿಯೇ ಭರವಸೆ ಇಟ್ಟಿದ್ದೇನೆ.
೬ವ್ಯರ್ಥವಾದ ವಿಗ್ರಹಗಳನ್ನೂ ಅವಲಂಬಿಸಿದವರನ್ನು ನಾನು ದ್ವೇಷಿಸುತ್ತೇನೆ; ನಾನಾದರೋ ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.
7 ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಉಲ್ಲಾಸಿಸಿ ಸಂತೋಷ ಪಡುವೆನು; ಏಕೆಂದರೆ ನೀವು ನನ್ನ ಕಷ್ಟಗಳನ್ನು ಲಕ್ಷ್ಯಕ್ಕೆ ತಂದು, ನನ್ನ ಪ್ರಾಣದ ಸಂಕಟಗಳನ್ನು ಅರಿತಿದ್ದೀರಿ.
೭ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವುದನ್ನು ನೋಡಿ, ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.
8 ಶತ್ರುವಿನ ಕೈಯಲ್ಲಿ ನನ್ನನ್ನು ಒಪ್ಪಿಸಿ ಬಿಡಲಿಲ್ಲ; ನನ್ನ ಪಾದಗಳನ್ನು ವಿಶಾಲವಾದ ಸ್ಥಳದಲ್ಲಿ ನಿಲ್ಲಿಸಿದ್ದೀರಿ.
೮ನೀನು ನನ್ನನ್ನು ಶತ್ರುಗಳ ಕೈಕೆಳಗೆ ಬೀಳಿಸಲಿಲ್ಲ; ನಿರಾತಂಕ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಿದಿ.
9 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ, ನಾನು ಇಕ್ಕಟ್ಟಿನಲ್ಲಿದ್ದೇನೆ; ನನ್ನ ಕಣ್ಣೂ ನನ್ನ ಪ್ರಾಣವೂ ನನ್ನ ದೇಹವೂ ದುಃಖದಿಂದ ಕ್ಷೀಣವಾಗಿವೆ.
೯ಯೆಹೋವನೇ, ಕರುಣಿಸು; ಕಷ್ಟದಲ್ಲಿ ಬಿದ್ದಿದ್ದೇನೆ. ನನಗುಂಟಾದ ಬಾಧೆಯ ದೆಸೆಯಿಂದ ನನ್ನ ಕಣ್ಣು ಗುಡ್ಡೆ ಸೇದಿಹೋಗಿದೆ; ದೇಹಾತ್ಮಗಳು ಕುಗ್ಗಿಹೋದವು.
10 ನನ್ನ ಜೀವವು ಚಿಂತೆಯಿಂದಲೂ, ನನ್ನ ವರ್ಷಗಳು ನಿಟ್ಟುಸಿರಿನಿಂದಲೂ ಕಳೆದುಹೋಗಿವೆ; ನನ್ನ ಅಪರಾಧದಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಕ್ಷೀಣವಾಗಿವೆ.
೧೦ನನ್ನ ಜೀವಮಾನವೆಲ್ಲಾ ದುಃಖದಲ್ಲಿಯೂ, ನಿಟ್ಟುಸಿರಿನಲ್ಲಿಯೂ ಕಳೆದುಹೋಗುತ್ತಾ ಇದೆ; ನನ್ನ ಸಂಕಟಗಳಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಸವೆದುಹೋಗಿವೆ.
11 ನನ್ನ ವೈರಿಗಳೆಲ್ಲರ ನಿಮಿತ್ತವಾಗಿ ನನ್ನ ನೆರೆಯವರಿಗೆ ನಾನು ನಿಂದೆಯೂ, ಮಿತ್ರರಿಗೆ ಹೆದರಿಕೆಯೂ ಆಗಿದ್ದೇನೆ; ದಾರಿಯಲ್ಲಿ ನನ್ನನ್ನು ಕಂಡವರು ನನ್ನನ್ನು ಬಿಟ್ಟು ಓಡಿಹೋಗುತ್ತಾರೆ.
೧೧ನನ್ನ ಎಲ್ಲಾ ಹಿಂಸಕರ ದೆಸೆಯಿಂದ ದೂಷಣೆಗೆ ಗುರಿಯಾದೆನು; ವಿಶೇಷವಾಗಿ ನೆರೆಯವರು ನನ್ನನ್ನು ನಿಂದಿಸುತ್ತಾರೆ. ನನ್ನ ಪರಿಚಿತರಿಗೆ ನನ್ನಲ್ಲಿ ಭೀತಿಯುಂಟಾಯಿತು; ನನ್ನನ್ನು ದಾರಿಯಲ್ಲಿ ಕಂಡವರೆಲ್ಲರು ಓರೆಯಾಗಿ ಹೋಗುತ್ತಾರೆ.
12 ನಾನು ಸತ್ತುಹೋದವರಂತೆ ಎಲ್ಲರು ನನ್ನನ್ನು ಮರೆತುಬಿಟ್ಟಿದ್ದಾರೆ; ನಾನು ಒಡೆದ ಮಡಕೆಯಂತೆ ಇದ್ದೇನೆ.
೧೨ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು; ಒಡೆದ ಬೋಕಿಯಂತಿದ್ದೇನೆ.
13 ಅನೇಕರು ಹೀಗೆ ಪಿಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತಲೂ ಅಂಜಿಕೆ ಇದೆ; ಅನೇಕರು ನನ್ನ ಪ್ರಾಣವನ್ನು ತೆಗೆಯಬೇಕೆಂದು ಒಳಸಂಚು ಮಾಡುತ್ತಿದ್ದಾರೆ.
೧೩ಅನೇಕರು ನನ್ನ ಪ್ರಾಣ ತೆಗೆಯಬೇಕೆಂದು ಒಳ ಸಂಚುಮಾಡುತ್ತಿದ್ದಾರೆ; ಅವರು ಪಿಸುಗುಟ್ಟುವ ಮಾತುಗಳು ನನ್ನ ಕಿವಿಗೆ ಬಿದ್ದಿವೆ; ಎಲ್ಲಾ ಕಡೆಯಲ್ಲಿಯೂ ನನಗೆ ಭೀತಿಯುಂಟಾಗಿದೆ.
14 ಯೆಹೋವ ದೇವರೇ, ನಾನು ನಿಮ್ಮಲ್ಲಿ ಭರವಸೆ ಇಟ್ಟಿದ್ದೇನೆ; “ನನ್ನ ದೇವರು ನೀವೇ,” ಎಂದು ಹೇಳಿಕೊಂಡಿದ್ದೇನೆ.
೧೪ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.
15 ನನ್ನ ಸಮಯವು ನಿಮ್ಮ ಕೈಯಲ್ಲಿ ಇವೆ; ನನ್ನ ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸಿರಿ.
೧೫ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ; ಹಿಂದಟ್ಟುವ ಶತ್ರುಗಳಿಂದ ನನ್ನನ್ನು ತಪ್ಪಿಸಿ ಕಾಪಾಡು.
16 ನಿಮ್ಮ ಮುಖವು ನಿಮ್ಮ ಸೇವಕನ ಮೇಲೆ ಪ್ರಕಾಶಿಸಲಿ; ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನನ್ನು ರಕ್ಷಿಸಿರಿ.
೧೬ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ ನನ್ನನ್ನು ರಕ್ಷಿಸು.
17 ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ. (Sheol )
೧೭ಯೆಹೋವನೇ, ಮೊರೆಯಿಟ್ಟಿದ್ದೇನೆ; ನನ್ನನ್ನು ನಿರಾಶೆಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ. (Sheol )
18 ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ, ಕಠಿಣವಾಗಿಯೂ ಮಾತನಾಡುವ ಸುಳ್ಳಿನ ತುಟಿಗಳು ಮೌನವಾಗಲಿ.
೧೮ಯಾರು ನೀತಿವಂತರನ್ನು ತಾತ್ಸಾರಮಾಡಿ ಗರ್ವದಿಂದಲೂ, ಕೊಬ್ಬಿನಿಂದಲೂ ಅವರಿಗೆ ವಿರುದ್ಧವಾಗಿ ಸುಳ್ಳು ಹೇಳುತ್ತಾರೋ ಅವರ ತುಟಿಗಳು ಮುಚ್ಚಿಹೋಗಲಿ.
19 ನಿಮ್ಮ ಒಳ್ಳೆಯತನವು ಎಷ್ಟೋ ಸಮೃದ್ಧ; ನೀವು ನಿಮಗೆ ಭಯಪಡುವವರಿಗೋಸ್ಕರ ಆ ಒಳ್ಳೆಯತನವನ್ನಿಟ್ಟಿದ್ದೀರಿ, ನಿಮ್ಮನ್ನು ಆಶ್ರಯಿಸಿಕೊಳ್ಳುವವರಿಗೆ ನೀವು ನಿಮ್ಮ ಒಳ್ಳೆಯತನವನ್ನು ಎಲ್ಲರ ಮುಂದೆ ದಯಪಾಲಿಸಿದ್ದೀರಿ.
೧೯ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ, ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ ಎಷ್ಟೋ ವಿಶೇಷವಾಗಿವೆ.
20 ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ನೀವು ಅವರನ್ನು ನಿಮ್ಮ ಸಾನಿಧ್ಯದಲ್ಲಿಯೇ ಮರೆಮಾಡುತ್ತೀರಿ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ನಿಮ್ಮ ನಿವಾಸದಲ್ಲಿ ಅಡಗಿಸುತ್ತೀರಿ.
೨೦ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ಅವರನ್ನು ನಿನ್ನ ಸಾನ್ನಿಧ್ಯದಲ್ಲಿಯೇ ಮರೆಮಾಡುತ್ತೀ; ವಿವಾದಿಸುವ ನಾಲಿಗೆಗಳಿಂದ ಕೇಡಾಗದಂತೆ ಅವರನ್ನು ಗುಪ್ತಸ್ಥಳದಲ್ಲಿ ಅಡಗಿಸುತ್ತೀ.
21 ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಮುತ್ತಿಗೆ ಹಾಕಲಾದ ನಗರದಲ್ಲಿದ್ದ ನನಗೆ ದೇವರು ಆಶ್ಚರ್ಯಕರವಾದ ಒಡಂಬಡಿಕೆಯ ಪ್ರೀತಿಯನ್ನು ತೋರಿಸಿದ್ದಾರೆ.
೨೧ಮುತ್ತಿಗೆ ಹಾಕಲ್ಪಟ್ಟಿರುವ ನಗರದಲ್ಲಿದ್ದ ನನಗೆ, ತನ್ನ ಕೃಪೆಯನ್ನು ಆಶ್ಚರ್ಯಕರವಾಗಿ ತೋರಿಸಿದ ಯೆಹೋವನಿಗೆ ಸ್ತೋತ್ರ.
22 “ನಾನು ನಿಮ್ಮ ಕಣ್ಣುಗಳ ಎದುರಿನಿಂದ ತೆಗೆದು ಹಾಕಲಾಗಿದ್ದೇನೆ” ಎಂದು ನನ್ನ ಗಾಬರಿಯಲ್ಲಿ ಹೇಳಿದೆನು; ಆದರೂ ನಾನು ಸಹಾಯಕ್ಕಾಗಿ ನಿಮಗೆ ಮೊರೆಯಿಡಲು ನೀವು ಕರುಣೆಗಾಗಿ ಕೂಗಿದ್ದನ್ನು ಕೇಳಿದ್ದೀರಿ.
೨೨ನಾನಂತೂ ಭಯಭ್ರಾಂತನಾಗಿ, “ನಿನ್ನ ಸಾನ್ನಿಧ್ಯದಿಂದ ತೆಗೆದುಹಾಕಲ್ಪಟ್ಟೆನು” ಎಂದು ಅಂದುಕೊಂಡೆನು; ಆದರೂ ನಾನು ಮೊರೆಯಿಡಲು ನೀನು ಕೇಳಿದಿ.
23 ಭಕ್ತರೇ, ಯೆಹೋವ ದೇವರನ್ನು ಪ್ರೀತಿಸಿರಿ; ಯೆಹೋವ ದೇವರು ನಂಬಿಗಸ್ತರನ್ನು ಕಾಯುತ್ತಾರೆ; ಅಹಂಕಾರಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ.
೨೩ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ. ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ; ಅಹಂಕಾರಿಗಳಿಗೆ ಚೆನ್ನಾಗಿ ಮುಯ್ಯಿತೀರಿಸುತ್ತಾನೆ.
24 ಯೆಹೋವ ದೇವರಲ್ಲಿ ನಿರೀಕ್ಷಿಸುವವರೆಲ್ಲರೂ ದೃಢವಾಗಿರಿ; ನಿಮ್ಮ ಹೃದಯವು ಧೈರ್ಯದಿಂದ ಇರಲಿ.
೨೪ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.