< ಕೀರ್ತನೆಗಳು 30 >

1 ದೇವಾಲಯದ ಸಮರ್ಪಣೆಗಾಗಿ ದಾವೀದನು ಸಂಯೋಜಿಸಿದ ಹಾಡು. ದಾವೀದನ ಕೀರ್ತನೆ. ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು; ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ. ನನ್ನನ್ನು ಮೇಲಕ್ಕೆ ಎತ್ತಿದ್ದೀರಿ. 2 ನನ್ನ ದೇವರಾದ ಯೆಹೋವ ದೇವರೇ, ಸಹಾಯಕ್ಕಾಗಿ ನಿಮಗೆ ಮೊರೆಯಿಡಲು, ನನ್ನನ್ನು ಸ್ವಸ್ಥಮಾಡಿದ್ದೀರಿ. 3 ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ; ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ. (Sheol h7585) 4 ಯೆಹೋವ ದೇವರ ವಿಶ್ವಾಸಿಗಳೇ ಅವರನ್ನು ಕೊಂಡಾಡಿರಿ; ಅವರ ಪರಿಶುದ್ಧ ನಾಮವನ್ನು ಕೊಂಡಾಡಿರಿ. 5 ಅವರ ಕೋಪವು ಕ್ಷಣಮಾತ್ರವೇ; ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ; ರಾತ್ರಿಯಲ್ಲಿ ದುಃಖ ಬಂದಿದ್ದರೂ; ಬೆಳಿಗ್ಗೆ ಆನಂದವು ಬರುವುದು. 6 ನಾನು ಸುರಕ್ಷಿತನಾಗಿದ್ದಾಗ, “ನಾನೆಂದೂ ಕದಲುವುದಿಲ್ಲ,” ಎಂದು ಹೇಳಿಕೊಂಡೆನು. 7 ಯೆಹೋವ ದೇವರೇ, ನಿಮ್ಮ ದಯೆಯಿಂದ ನನ್ನ ರಾಜ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀರಿ ಆದರೆ ನೀವು ನಿಮ್ಮ ಮುಖವನ್ನು ಮರೆಮಾಡಲು ನಾನು ಕಳವಳಗೊಂಡೆನು. 8 ಯೆಹೋವ ದೇವರೇ, ನಾನು ನಿಮಗೆ ಮೊರೆಯಿಟ್ಟೆನು; ಕರುಣೆಗಾಗಿ ಯೆಹೋವ ಕರ್ತ ಆಗಿರುವವರಿಗೆ ಬಿನ್ನವಿಸಿದೆನು. 9 ನಾನು ಸಮಾಧಿಯಲ್ಲಿ ಇಳಿದು ಹೋಗಿ ನಾಶವಾದರೆ, ಅದರಿಂದ ನಿಮಗೆ ಆಗುವ ಲಾಭವೇನು? ಧೂಳು ನಿಮ್ಮನ್ನು ಸ್ತುತಿಸುವುದೋ? ಅದು ನಿಮ್ಮ ನಂಬಿಗಸ್ತಿಕೆಯನ್ನು ಪ್ರಕಟಿಸುವುದೋ? 10 ಯೆಹೋವ ದೇವರೇ, ಲಾಲಿಸು; ನನ್ನನ್ನು ಕರುಣಿಸಿರಿ; ಯೆಹೋವ ದೇವರೇ, ನನಗೆ ಸಹಾಯಕರಾಗಿರಿ. 11 ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ; ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ. 12 ಆದ್ದರಿಂದ ನನ್ನ ಹೃದಯವು ಮೌನವಿರದೆ ನಿಮ್ಮನ್ನು ಯುಗಯುಗಕ್ಕೂ ಕೊಂಡಾಡುತ್ತಿರುವುದು. ನನ್ನ ದೇವರಾದ ಯೆಹೋವ ದೇವರೇ, ನಾನು ನಿಮ್ಮನ್ನು ಸದಾಕಾಲವೂ ಸ್ತುತಿಸುವೆನು.

< ಕೀರ್ತನೆಗಳು 30 >