< ಕೀರ್ತನೆಗಳು 16 >

1 ಮಿಕತಾಮ ಗೀತೆ. ದಾವೀದನ ಕೀರ್ತನೆ. ನನ್ನ ದೇವರೇ, ನನ್ನನ್ನು ಕಾಪಾಡು, ಏಕೆಂದರೆ ನಿಮ್ಮಲ್ಲಿ ಆಶ್ರಯಪಡೆದಿದ್ದೇನೆ.
ದಾವೀದನ ಕಾವ್ಯ. ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.
2 ನಾನು ಯೆಹೋವ ದೇವರಿಗೆ, “ನೀವೇ ನನ್ನ ಕರ್ತ; ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು,” ಎಂದು ಹೇಳಿದೆನು.
ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು.
3 ಭೂಲೋಕದಲ್ಲಿರುವ ದೇವಜನರ ಕುರಿತು, “ಇವರೇ ನನಗೆ ಶ್ರೇಷ್ಠರು. ಇವರಲ್ಲಿಯೇ ನನ್ನ ಎಲ್ಲಾ ಆನಂದವು,” ಎಂದು ಹೇಳುವೆನು.
ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ, “ಇವರೇ ಶ್ರೇಷ್ಠರು, ಇವರೇ ನನಗೆ ಇಷ್ಟರಾದವರು” ಎಂದು ಹೇಳುವೆನು.
4 ಇತರ ದೇವರುಗಳನ್ನು ಅವಲಂಬಿಸಿರುವವರಿಗೆ ವ್ಯಥೆಗಳು ಹೆಚ್ಚೆಚ್ಚಾಗುವವು. ಅವರಂತೆ ರಕ್ತ ಬಲಿಗಳನ್ನು ನಾನು ಅರ್ಪಿಸುವುದಿಲ್ಲ. ಅವರ ಹೆಸರುಗಳನ್ನೂ ನನ್ನ ತುಟಿಗಳಲ್ಲಿ ಉಚ್ಚರಿಸುವುದಿಲ್ಲ.
ಇತರ ದೇವರುಗಳನ್ನು ಅವಲಂಬಿಸಿದವರಿಗೆ ಬಹಳ ಕಷ್ಟನಷ್ಟಗಳು ಉಂಟಾಗುವವು. ಅವರಂತೆ ನಾನು ರಕ್ತವನ್ನು ಪಾನದ್ರವ್ಯವಾಗಿ ಸಮರ್ಪಿಸುವುದೇ ಇಲ್ಲ; ಅವರ ನಾಮಗಳನ್ನಾದರೂ ಉಚ್ಚರಿಸುವುದಿಲ್ಲ.
5 ಯೆಹೋವ ದೇವರೇ, ನೀವೇ ನನ್ನ ಪಾಲೂ, ನನ್ನ ಪಾತ್ರೆಯೂ ಆಗಿದ್ದೀರಿ; ನನ್ನ ಸ್ವಾಸ್ತ್ಯವನ್ನು ಸುರಕ್ಷಿತವಾಗಿ ಇಡುವವರು ನೀವೇ.
ನನ್ನ ಪಾಲೂ, ನನ್ನ ಪಾನವೂ ಯೆಹೋವನೇ, ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ.
6 ನನ್ನ ಪಾಲಿಗೆ ಬಂದ ಮೇರೆಯ ಸ್ಥಳವೂ ಸುಂದರವಾದದ್ದು; ನಿಶ್ಚಯವಾಗಿಯೂ, ನನಗೆ ದೊರೆತ ಸ್ವತ್ತು ಆನಂದಕರವಾದದ್ದು.
ನನಗೆ ಪ್ರಾಪ್ತವಾಗಿರುವ ಸ್ವತ್ತು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.
7 ನನಗೆ ಸಮಾಲೋಚನೆ ನೀಡುತ್ತಿರುವ ಯೆಹೋವ ದೇವರನ್ನು ನಾನು ಸ್ತುತಿಸುತ್ತಿರುವೆನು; ರಾತ್ರಿಯಲ್ಲಿಯೂ ನನ್ನ ಹೃದಯವು ನನಗೆ ಬೋಧಿಸುತ್ತದೆ.
ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ನಾನು ಆತನನ್ನು ಕೊಂಡಾಡುವೆನು. ರಾತ್ರಿಯ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.
8 ನಾನು ಯೆಹೋವ ದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ಅವರು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲೆನು.
ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ.
9 ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ಸುರಕ್ಷಿತವಾಗಿ ವಿಶ್ರಮಿಸುವುದು.
ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು.
10 ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ; ನಿಮ್ಮ ನಂಬಿಗಸ್ತನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ. (Sheol h7585)
೧೦ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ. (Sheol h7585)
11 ಜೀವಮಾರ್ಗವನ್ನು ನನಗೆ ತಿಳಿಯಪಡಿಸುವಿರಿ. ನಿಮ್ಮ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ; ನಿಮ್ಮ ಬಲಗಡೆಯಲ್ಲಿ ನಿತ್ಯಾನಂದವೂ ಇರುತ್ತದೆ.
೧೧ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.

< ಕೀರ್ತನೆಗಳು 16 >