< ಕೀರ್ತನೆಗಳು 143 >
1 ದಾವೀದನ ಕೀರ್ತನೆ. ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ವಿಜ್ಞಾಪನೆಗಳಿಗೆ ಕಿವಿಗೊಡಿರಿ; ನಿಮ್ಮ ನಂಬಿಗಸ್ತಿಕೆಯಲ್ಲಿಯೂ, ನಿಮ್ಮ ನೀತಿಯಲ್ಲಿಯೂ ನನಗೆ ಉತ್ತರಕೊಡಿರಿ.
೧ದಾವೀದನ ಕೀರ್ತನೆ. ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು; ನನ್ನ ಬಿನ್ನಹಕ್ಕೆ ಕಿವಿಗೊಡು; ನಿನ್ನ ನೀತಿ ಸತ್ಯತೆಗಳಿಗೆ ಅನುಸಾರವಾಗಿ ಸದುತ್ತರವನ್ನು ದಯಪಾಲಿಸು.
2 ನಿಮ್ಮ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡಿರಿ, ಏಕೆಂದರೆ ಜೀವಿಸುವರಲ್ಲಿ ಒಬ್ಬರೂ ನಿಮ್ಮ ಮುಂದೆ ನೀತಿವಂತರಲ್ಲ.
೨ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.
3 ಏಕೆಂದರೆ ಶತ್ರುವು ನನ್ನನ್ನು ಬೆನ್ನಟ್ಟಿ, ನಾನು ನೆಲಕಚ್ಚುವಂತೆ ಮಾಡಿದ್ದಾನೆ. ಬಹುಕಾಲದ ಹಿಂದೆ ಸತ್ತವರ ಹಾಗೆ ನನ್ನನ್ನು ಕತ್ತಲೆಯಲ್ಲಿ ವಾಸಿಸುವಂತೆ ಮಾಡಿದ್ದಾನೆ.
೩ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ; ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾನೆ. ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ; ಬಹು ಕಾಲದಿಂದ ಸತ್ತವರಂತಿದ್ದೇನೆ.
4 ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
೪ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.
5 ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿಮ್ಮ ಕೈಕೆಲಸವನ್ನು ಆಲೋಚಿಸುತ್ತೇನೆ.
೫ಹಳೆಯ ದಿನಗಳನ್ನು ನೆನಪುಮಾಡಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ;
6 ನನ್ನ ಕೈಗಳನ್ನು ನಿಮ್ಮ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿಮಗಾಗಿ ದಾಹಗೊಂಡಿದೆ.
೬ಕೈಚಾಚಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ, ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. (ಸೆಲಾ)
7 ಯೆಹೋವ ದೇವರೇ, ನನಗೆ ಬೇಗನೆ ಉತ್ತರಕೊಡಿರಿ; ನನ್ನ ಪ್ರಾಣವು ಕುಂದಿಹೋಗಿದೆ; ನಿಮ್ಮ ಮುಖವನ್ನು ನನಗೆ ಮರೆಮಾಡಬೇಡ; ಇಲ್ಲವಾದರೆ ಸಮಾಧಿಯಲ್ಲಿ ಇಳಿಯುವವರಿಗೆ ಸಮಾನನಾಗಿಬಿಡುತ್ತೇನೆ.
೭ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.
8 ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ವಾಕ್ಯವನ್ನು ತರಲಿ; ಏಕೆಂದರೆ ನಿಮ್ಮಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸಿರಿ, ಏಕೆಂದರೆ ನನ್ನ ಪ್ರಾಣವನ್ನು ನಿಮಗೇ ಒಪ್ಪಿಸಿದ್ದೇನೆ.
೮ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.
9 ಯೆಹೋವ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ; ನಾನು ನಿಮ್ಮಲ್ಲಿ ಅಡಗಿಕೊಳ್ಳುವಂತೆ ನಿಮ್ಮ ಬಳಿಗೆ ಬಂದಿದ್ದೇನೆ.
೯ಯೆಹೋವನೇ, ನಿನ್ನನ್ನೇ ಮೊರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು.
10 ನಿಮ್ಮ ಚಿತ್ತದಂತೆ ಮಾಡುವುದಕ್ಕೆ ನನಗೆ ಬೋಧಿಸಿರಿ, ಏಕೆಂದರೆ ನೀವು ನನ್ನ ದೇವರು; ನಿಮ್ಮ ಒಳ್ಳೆಯ ಆತ್ಮವು ನನ್ನನ್ನು ಸಮಹಾದಿಯಲ್ಲಿ ನಡೆಸಲಿ.
೧೦ನಿನ್ನ ಚಿತ್ತದಂತೆ ನಡೆಯಲು ನನಗೆ ಕಲಿಸು, ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಸಮದಾರಿಯಲ್ಲಿ ನಡೆಸಲಿ.
11 ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ, ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ.
೧೧ಯೆಹೋವನೇ, ನಿನ್ನ ಹೆಸರಿನ ನಿಮಿತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.
12 ನಿಮ್ಮ ಒಂಡಬಡಿಕೆಯ ಪ್ರೀತಿಯಿಂದ ನನ್ನ ಶತ್ರುಗಳನ್ನು ಸುಮ್ಮನಿರಿಸುವೆನು, ನನ್ನ ವೈರಿಗಳೆಲ್ಲರೂ ನಾಶವಾಗಲಿ, ನಾನು ನಿಮ್ಮ ಸೇವಕನಾಗಿದ್ದೇನೆ.
೧೨ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.