< ಕೀರ್ತನೆಗಳು 137 >

1 ಬಾಬಿಲೋನಿನ ನದಿಗಳ ಹತ್ತಿರ ನಾವು ಕುಳಿತುಕೊಂಡು, ಚೀಯೋನನ್ನು ಜ್ಞಾಪಕ ಮಾಡಿಕೊಂಡಾಗ ಅತ್ತೆವು. 2 ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗು ಹಾಕಿದೆವು. 3 ಏಕೆಂದರೆ ಅಲ್ಲಿ ನಮ್ಮನ್ನು ಸೆರೆಹಿಡಿದು ಬಂಧಿಸಿದವರು, ನಮಗೆ ಹಾಡನ್ನು ಹಾಡಲು ಹೇಳಿದ್ದರು; ನಮ್ಮನ್ನು ಪೀಡಿಸುವವರು ವಿನೋದಕ್ಕಾಗಿ ಹಾಡನ್ನು ಕೇಳಲು ಬಯಸಿದ್ದರು; “ಚೀಯೋನಿನ ಹಾಡುಗಳಲ್ಲಿ ಒಂದು ನಮಗೆ ಹಾಡಿರಿ,” ಎಂದರು. 4 ಅನ್ಯದೇಶದಲ್ಲಿ ನಾವು ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ? 5 ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ, ನನ್ನ ಬಲಗೈಯ ಕೌಶಲ್ಯ ಮರೆತು ಹೋಗಲಿ. 6 ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದಿದ್ದರೆ, ಯೆರೂಸಲೇಮನ್ನು ನನ್ನ ಎಲ್ಲಾ ಸಂತೋಷಕ್ಕಿಂತಲೂ ಹೆಚ್ಚಾಗಿಡದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ. 7 ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ, “ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,” ಎಂದು ಹೇಳಿದ ಎದೋಮಿನವರನ್ನು ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ. 8 ಹಾಳಾಗಲಿಕ್ಕಿರುವ ಬಾಬಿಲೋನ್ ನಗರವೇ, ನೀನು ನಮಗೆ ಮಾಡಿದ್ದಕ್ಕೆ ಪ್ರತೀಕಾರವನ್ನು ನಿನಗೆ ಸಲ್ಲಿಸುವವನು ಧನ್ಯನು. 9 ನಿಮ್ಮ ಚಿಕ್ಕ ಕೂಸುಗಳನ್ನು ಹಿಡಿದು, ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.

< ಕೀರ್ತನೆಗಳು 137 >