< ಕೀರ್ತನೆಗಳು 119 >

1 ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು.
ಆಲೆಫ್. ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ, ಸದಾಚಾರಿಗಳಾಗಿ ನಡೆಯುವವರು ಧನ್ಯರು.
2 ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು
ಆತನ ಕಟ್ಟಳೆಗಳನ್ನು ಕೈಕೊಂಡು, ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಭಾಗ್ಯವಂತರು.
3 ಅಂಥವರು ಅನ್ಯಾಯವನ್ನು ಮಾಡದೆ, ದೇವರ ಮಾರ್ಗಗಳಲ್ಲಿ ನಡೆದುಕೊಳ್ಳುವರು.
ಅವರು ಆತನ ಮಾರ್ಗದಲ್ಲಿ ನಡೆಯುತ್ತಾರೆ, ಅನ್ಯಾಯ ಮಾಡುವುದೇ ಇಲ್ಲ.
4 ದೇವರೇ, ನಿಮ್ಮ ಸೂತ್ರಗಳನ್ನು ಪೂರ್ಣವಾಗಿ ಕೈಗೊಳ್ಳಬೇಕೆಂದು ನೀವು ಆಜ್ಞಾಪಿಸಿದ್ದೀರಿ.
ನಿನ್ನ ನಿಯಮಗಳನ್ನು ಜಾಗರೂಕತೆಯಿಂದ ಕೈಕೊಂಡು ನಡೆಸಬೇಕೆಂದು, ನೀನೇ ಆಜ್ಞಾಪಿಸಿರುತ್ತಿ.
5 ನಿಮ್ಮ ತೀರ್ಪುಗಳನ್ನು ಪಾಲಿಸುವುದರಲ್ಲಿ ನನ್ನ ಮಾರ್ಗಗಳು ಸ್ಥಿರವಾಗಿರಲಿ!
ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವುದರಲ್ಲಿ, ನಾನು ಸ್ಥಿರಮನಸ್ಸುಳ್ಳವನಾಗಿದ್ದರೆ ಒಳ್ಳೇಯದು!
6 ನಿಮ್ಮ ಎಲ್ಲಾ ಅಪ್ಪಣೆಗಳನ್ನು ಪರಿಗಣಿಸುವಾಗ ನಾನು ನಾಚಿಕೆಗೆ ಗುರಿಯಾಗುವುದಿಲ್ಲ.
ಹೀಗೆ ನಿನ್ನ ಆಜ್ಞೆಗಳನ್ನೆಲ್ಲಾ ಲಕ್ಷಿಸುವವನಾದರೆ, ನಾನು ಅಪಮಾನಕ್ಕೆ ಗುರಿಯಾಗುವುದಿಲ್ಲ.
7 ನಾನು ನಿಮ್ಮ ನೀತಿಯುಳ್ಳ ನಿಯಮಗಳನ್ನು ಕಲಿಯುತ್ತಿರುವಾಗೆಲ್ಲಾ, ಯಥಾರ್ಥ ಹೃದಯದಿಂದ ನಿಮ್ಮನ್ನು ಕೊಂಡಾಡುವೆನು.
ನಾನು ನಿನ್ನ ನೀತಿಯ ವಿಧಿಗಳನ್ನು ಕಲಿತ ಹಾಗೆಲ್ಲಾ, ನಿನ್ನನ್ನು ಯಥಾರ್ಥ ಹೃದಯದಿಂದ ಕೊಂಡಾಡುತ್ತಾ ಹೋಗುವೆನು.
8 ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು; ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡಿರಿ.
ನಿನ್ನ ಕಟ್ಟಳೆಗಳನ್ನು ಅನುಸರಿಸುವ ನನ್ನನ್ನು, ಸಂಪೂರ್ಣವಾಗಿ ಕೈಬಿಡಬೇಡ. ಬೇತ್.
9 ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.
ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವುದು ಯಾವುದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವುದರಿಂದಲೇ.
10 ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ.
೧೦ನಾನು ಪೂರ್ಣಮನಸ್ಸಿನಿಂದ ನಿನ್ನನ್ನು ಹುಡುಕುತ್ತೇನೆ, ನಿನ್ನ ಆಜ್ಞೆಗಳಿಗೆ ತಪ್ಪಿಹೋಗದಂತೆ ನನ್ನನ್ನು ಕಾಪಾಡು.
11 ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ.
೧೧ನಿನಗೆ ವಿರುದ್ಧವಾಗಿ ಪಾಪಮಾಡದಂತೆ, ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವ ದೇವರೇ, ನಿಮಗೆ ಸ್ತುತಿಯುಂಟಾಗಲಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
೧೨ಸ್ತುತಿಪಾತ್ರನಾದ ಯೆಹೋವನೇ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
13 ನಿಮ್ಮ ಬಾಯಿಂದ ಬರುವ ನಿಯಮಗಳನ್ನೆಲ್ಲಾ ನನ್ನ ತುಟಿಗಳಿಂದ ನಾನು ವರ್ಣಿಸಿದ್ದೇನೆ.
೧೩ನಿನ್ನ ಎಲ್ಲಾ ಉಪದೇಶಾಜ್ಞೆಗಳನ್ನು, ನನ್ನ ತುಟಿಗಳು ವರ್ಣಿಸುತ್ತವೆ.
14 ಮಹಾ ಸಂಪತ್ತಿನಲ್ಲಿ ಒಬ್ಬ ವ್ಯಕ್ತಿ ಆನಂದಿಸುವ ಹಾಗೆ ನಾನು ನಿಮ್ಮ ಶಾಸನಗಳನ್ನು ಅನುಸರಿಸುವುದರಲ್ಲಿ ಆನಂದಿಸುವೆನು.
೧೪ಸರ್ವಸಂಪತ್ತಿನಲ್ಲಿ ಹೇಗೋ, ಹಾಗೆಯೇ ನಿನ್ನ ಕಟ್ಟಳೆಯ ಮಾರ್ಗದಲ್ಲಿ ಆನಂದಿಸುತ್ತೇನೆ.
15 ನಿಮ್ಮ ಸೂತ್ರಗಳನ್ನು ಧ್ಯಾನಮಾಡಿ, ನಿಮ್ಮ ಮಾರ್ಗಗಳನ್ನು ದೃಷ್ಟಿಸುವೆನು.
೧೫ನಿನ್ನ ನಿಯಮಗಳನ್ನು ಧ್ಯಾನಿಸುತ್ತಾ, ನಿನ್ನ ದಾರಿಯನ್ನು ಲಕ್ಷಿಸುವೆನು.
16 ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು.
೧೬ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು, ನಿನ್ನ ವಾಕ್ಯವನ್ನು ಮರೆಯುವುದಿಲ್ಲ. ಗಿಮೆಲ್.
17 ನಾನು ಜೀವದಿಂದಿದ್ದು ನಿಮ್ಮ ವಾಕ್ಯವನ್ನು ಕೈಗೊಳ್ಳುವಂತೆ ನಿಮ್ಮ ಸೇವಕನ ಮೇಲೆ ದಯೆಯಿಡಿರಿ.
೧೭ನಿನ್ನ ಸೇವಕನಾದ ನನ್ನ ಮೇಲೆ ದಯವಿಡು, ಆಗ ಜೀವದಿಂದಿದ್ದು ನಿನ್ನ ವಾಕ್ಯವನ್ನು ಕೈಗೊಳ್ಳುವೆನು.
18 ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ ನನ್ನ ಕಣ್ಣುಗಳನ್ನು ತೆರೆಯಿರಿ.
೧೮ನನ್ನ ಕಣ್ಣುಗಳನ್ನು ತೆರೆ, ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು.
19 ಈ ಭೂಮಿಯಲ್ಲಿ ನಾನೊಬ್ಬ ಪ್ರವಾಸಿಯಾಗಿದ್ದೇನೆ; ನಿಮ್ಮ ಆಜ್ಞೆಗಳನ್ನು ನನಗೆ ಮರೆಮಾಡಬೇಡಿರಿ.
೧೯ನಾನು ಭೂಲೋಕದಲ್ಲಿ ಪ್ರವಾಸಿಯಾಗಿದ್ದೇನೆ, ನಿನ್ನ ಆಜ್ಞೆಗಳನ್ನು ನನಗೆ ಮರೆಮಾಡಬೇಡ.
20 ನಿಮ್ಮ ನಿಯಮಗಳನ್ನು ಯಾವಾಗಲೂ ಹಂಬಲಿಸುತ್ತಿರುವುದರಿಂದ, ನನ್ನ ಪ್ರಾಣವು ಕರಗಿಹೋಗುತ್ತಿದೆ.
೨೦ಯಾವಾಗಲೂ ನಿನ್ನ ವಿಧಿಗಳನ್ನೇ ಹಂಬಲಿಸುತ್ತಿರುವ ನನ್ನ ಪ್ರಾಣವು ಜಜ್ಜಿಹೋಗಿದೆ.
21 ನಿಮ್ಮ ಆಜ್ಞೆಗಳನ್ನು ಅನುಸರಿಸದೆ ತಪ್ಪಿಹೋಗುವ ಶಾಪಗ್ರಸ್ತರಾದ ಗರ್ವಿಷ್ಠರನ್ನು ನೀವು ಗದರಿಸುತ್ತೀರಿ.
೨೧ನೀನು ಗರ್ವಿಷ್ಠರನ್ನು ಗದರಿಸುತ್ತಿ, ನಿನ್ನ ಆಜ್ಞೆಗಳನ್ನು ಮೀರಿದವರು ಶಾಪಗ್ರಸ್ತರು.
22 ನಾನು ನಿಮ್ಮ ಶಾಸನಗಳನ್ನು ಕೈಗೊಂಡ ಕಾರಣ, ಗರ್ವಿಷ್ಠರ ನಿಂದೆಯನ್ನೂ, ತಿರಸ್ಕಾರವನ್ನೂ ನನ್ನಿಂದ ತೊಲಗಿಸಿರಿ.
೨೨ನಿನ್ನ ಕಟ್ಟಳೆಗಳನ್ನು ಕೈಕೊಂಡವನಾದರಿಂದ, ನನಗಿರುವ ನಿಂದೆ, ಅಪಮಾನಗಳನ್ನು ತೊಲಗಿಸು.
23 ಅಧಿಕಾರಿಗಳು ನನಗೆ ವಿರೋಧವಾಗಿ ಕುಳಿತುಕೊಂಡು ಮಾತನಾಡಿಕೊಂಡರೂ, ನಿಮ್ಮ ಸೇವಕನು ನಿಮ್ಮ ತೀರ್ಪುಗಳನ್ನೇ ಧ್ಯಾನಿಸುತ್ತಿರುವೆನು.
೨೩ಪ್ರಭುಗಳು ಕುಳಿತುಕೊಂಡು, ನನಗೆ ವಿರುದ್ಧವಾಗಿ ಒಳಸಂಚು ಮಾಡಿದರೂ, ನಿನ್ನ ಸೇವಕನು ನಿನ್ನ ನಿಬಂಧನೆಗಳನ್ನೇ ಧ್ಯಾನಿಸುತ್ತಿರುವನು.
24 ನಿಮ್ಮ ಶಾಸನಗಳು ನನಗೆ ಉಲ್ಲಾಸಕರವಾಗಿವೆ; ಅವೇ ನನ್ನ ಸಮಾಲೋಚಕರು.
೨೪ನಿನ್ನ ಕಟ್ಟಳೆಗಳು ನನ್ನ ಪರಮಾನಂದ, ಅವೇ ನನ್ನ ಮಾರ್ಗದರ್ಶನ. ದಾಲಿತ್.
25 ನಾನು ಧೂಳಿನಲ್ಲಿ ಬಿದ್ದಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸಿರಿ.
೨೫ನನ್ನ ಪ್ರಾಣವು ಧೂಳಿನಲ್ಲಿ ಸೇರಿಹೋಗುತ್ತದೆ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
26 ನಾನು ನನ್ನ ಮಾರ್ಗಗಳನ್ನು ಲೆಕ್ಕ ಒಪ್ಪಿಸಲು, ನೀವು ನನಗೆ ಸದುತ್ತರವನ್ನು ಕೊಟ್ಟಿರುವಿರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
೨೬ನನ್ನ ಯಾತ್ರಾನುಭವವನ್ನು ನಿನಗೆ ಹೇಳಿಕೊಂಡಾಗ, ನನಗೆ ಸದುತ್ತರವನ್ನು ದಯಪಾಲಿಸಿದಿ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿಮ್ಮ ಸೂತ್ರಗಳ ಮಾರ್ಗವನ್ನು ನಾನು ಅರ್ಥಮಾಡಿಕೊಳ್ಳಲು ಸಹಾಯಿಸಿರಿ, ಆಗ ನಿಮ್ಮ ಅದ್ಭುತಕಾರ್ಯಗಳನ್ನು ಧ್ಯಾನ ಮಾಡುವೆನು.
೨೭ನಿನ್ನ ನಿಯಮಗಳ ದಾರಿಯನ್ನು ತಿಳಿಯಪಡಿಸು, ಆಗ ನಿನ್ನ ಬೋಧನೆಗಳನ್ನು ಧ್ಯಾನಿಸುವೆನು.
28 ನನ್ನ ಪ್ರಾಣವು ದುಃಖದಿಂದ ಬಲಹೀನವಾಗಿದೆ; ನಿಮ್ಮ ವಾಕ್ಯದಿಂದ ನನ್ನನ್ನು ಬಲಪಡಿಸಿರಿ.
೨೮ಮನೋವ್ಯಥೆಯಿಂದ ಕಣ್ಣೀರು ಸುರಿಸುತ್ತೇನೆ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಬಲಪಡಿಸು.
29 ವಂಚನೆಯುಳ್ಳ ಮಾರ್ಗದಿಂದ ನನ್ನನ್ನು ಕಾಪಾಡಿರಿ; ನನಗೆ ಕೃಪೆ ನೀಡಿ ನಿಮ್ಮ ನಿಯಮವನ್ನು ನನಗೆ ಬೋಧನೆ ಮಾಡಿರಿ.
೨೯ತಪ್ಪಾದ ಮಾರ್ಗವನ್ನು ನನ್ನಿಂದ ದೂರಮಾಡು, ನಿನ್ನ ಧರ್ಮಶಾಸ್ತ್ರವನ್ನು ನನಗೆ ಅನುಗ್ರಹಿಸು.
30 ನಂಬಿಗಸ್ತಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ; ನಾನು ನಿಮ್ಮ ನಿಯಮಗಳ ಮೇಲೆ ನನ್ನ ಹೃದಯವನ್ನಿಟ್ಟುಕೊಂಡಿದ್ದೇನೆ.
೩೦ಭಕ್ತಿಮಾರ್ಗವನ್ನು ಆರಿಸಿಕೊಂಡಿದ್ದೇನೆ, ನಿನ್ನ ವಿಧಿಗಳನ್ನು ನನ್ನ ಮುಂದೆಯೇ ಇಟ್ಟುಕೊಂಡಿದ್ದೇನೆ.
31 ಯೆಹೋವ ದೇವರೇ, ನಾನು ನಿಮ್ಮ ಶಾಸನಗಳನ್ನು ಬಿಗಿಯಾಗಿಟ್ಟುಕೊಂಡಿದ್ದೇನೆ; ನನ್ನನ್ನು ನಾಚಿಕೆಗೆ ಗುರಿಪಡಿಸಬೇಡಿರಿ.
೩೧ನಾನು ನಿನ್ನ ಕಟ್ಟಳೆಗಳನ್ನು ಅಪ್ಪಿಕೊಂಡಿದ್ದೇನೆ, ಯೆಹೋವನೇ, ನನಗೆ ಆಶಾಭಂಗಪಡಿಸಬೇಡ.
32 ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ಓಡುವೆನು, ಏಕೆಂದರೆ ನೀವು ನನ್ನ ವಿವೇಕವನ್ನು ವಿಸ್ತಾರ ಮಾಡಿದ್ದೀರಿ.
೩೨ನೀನು ನನ್ನ ಅಂತರಾತ್ಮವನ್ನು ವಿಮೋಚಿಸು, ಆಗ ಆಸಕ್ತಿಯಿಂದ ನಿನ್ನ ಆಜ್ಞಾಮಾರ್ಗವನ್ನು ಅನುಸರಿಸುವೆನು. ಹೇ.
33 ಯೆಹೋವ ದೇವರೇ, ನಿಮ್ಮ ತೀರ್ಪುಗಳ ವಿವರವನ್ನು ನನಗೆ ಬೋಧಿಸಿರಿ; ಆಗ ನಾನು ಅವುಗಳನ್ನು ಅಂತ್ಯದವರೆಗೂ ಹಿಂಬಾಲಿಸುವೆನು.
೩೩ಯೆಹೋವನೇ, ನಿನ್ನ ಕಟ್ಟಳೆಗಳ ಮಾರ್ಗವನ್ನು ನನಗೆ ಉಪದೇಶಿಸು, ಕಡೆಯವರೆಗೂ ಅದನ್ನೇ ಅನುಸರಿಸಿ ನಡೆಯುವೆನು.
34 ನಿಮ್ಮ ನಿಯಮವನ್ನು ಹಿಂಬಾಲಿಸಿ, ಅದನ್ನು ಪೂರ್ಣಹೃದಯದಿಂದ ಕೈಕೊಳ್ಳಲು ನನಗೆ ವಿವೇಚನೆಯನ್ನು ನೀಡಿರಿ.
೩೪ನನಗೆ ತಿಳಿವಳಿಕೆಯನ್ನು ದಯಪಾಲಿಸು, ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.
35 ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸಿರಿ, ಏಕೆಂದರೆ ನಾನು ಅದರಲ್ಲಿ ಆನಂದಿಸುತ್ತೇನೆ.
೩೫ನಿನ್ನ ಆಜ್ಞಾಮಾರ್ಗದಲ್ಲಿ ನನ್ನನ್ನು ನಡೆಸು, ಅದೇ ನನ್ನ ಇಷ್ಟ.
36 ಸ್ವಾರ್ಥದ ಲಾಭಗಳ ಕಡೆಗಲ್ಲ, ಆದರೆ ನಿಮ್ಮ ಶಾಸನಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸಿರಿ.
೩೬ನನ್ನ ಮನಸ್ಸನ್ನು ದ್ರವ್ಯಾಶೆಗಲ್ಲ, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಸು.
37 ವ್ಯರ್ಥವಾದವುಗಳಿಂದ ನನ್ನ ಕಣ್ಣುಗಳನ್ನು ತಿರುಗಿಸಿ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
೩೭ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು, ನಿನ್ನ ಮಾರ್ಗದಲ್ಲಿ ನಡೆಯುವಂತೆ ನನ್ನನ್ನು ಚೈತನ್ಯಗೊಳಿಸು.
38 ನಿಮಗೆ ಭಯಪಡುವವರಿಗಾಗಿ ನೀಡುವ ವಾಗ್ದಾನವನ್ನು ನಿಮ್ಮ ಸೇವಕನಿಗೆ ನೆರವೇರಿಸಿರಿ.
೩೮ನಿನ್ನಲ್ಲಿ ಭಯಭಕ್ತಿಯುಳ್ಳವರಿಗಾಗಿ ನೀನು ಮಾಡಿದ ವಾಗ್ದಾನಗಳನ್ನು, ನಿನ್ನ ಸೇವಕನ ವಿಷಯದಲ್ಲಿ ನೆರವೇರಿಸು.
39 ನಾನು ಭಯಪಡುವ ನನ್ನ ನಿಂದೆಯನ್ನು ನನ್ನಿಂದ ತೊಲಗಿಸಿರಿ, ಏಕೆಂದರೆ ನಿಮ್ಮ ನಿಯಮಗಳು ಒಳ್ಳೆಯವುಗಳೇ.
೩೯ನನ್ನ ಅವಮಾನವನ್ನು ತೊಲಗಿಸು, ಅದಕ್ಕೋಸ್ಕರ ಅಂಜುತ್ತಿದ್ದೇನೆ. ನಿನ್ನ ಕಟ್ಟಳೆಗಳು ಹಿತಕರವಾಗಿವೆ.
40 ಇಗೋ ನಿಮ್ಮ ಸೂತ್ರಗಳಿಗಾಗಿ ನಾನು ಎಷ್ಟೋ ಹಂಬಲಿಸುತ್ತೇನೆ! ನಿಮ್ಮ ನೀತಿಗನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
೪೦ಇಗೋ, ನಿನ್ನ ನಿಯಮಗಳನ್ನು ಪ್ರೀತಿಸುತ್ತೇನೆ, ನಿನ್ನ ನೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು. ವಾವ್.
41 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ದೊರಕಲಿ, ನಿಮ್ಮ ವಾಗ್ದಾನದ ರಕ್ಷಣೆಯು ನನಗೆ ಉಂಟಾಗಲಿ;
೪೧ಯೆಹೋವನೇ, ನಿನ್ನ ಕೃಪೆಯು ನನಗೆ ದೊರಕಲಿ, ನಿನ್ನ ನುಡಿಗನುಸಾರವಾಗಿ ನನಗೆ ರಕ್ಷಣೆಯುಂಟಾಗಲಿ.
42 ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ಭರವಸೆಯಿಟ್ಟಿದ್ದೇನೆ.
೪೨ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನಲ್ಲಾ.
43 ಸತ್ಯವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡಿರಿ, ಏಕೆಂದರೆ ನಿಮ್ಮ ನಿಯಮಗಳಲ್ಲಿ ನಾನು ನನ್ನ ನಿರೀಕ್ಷೆಯನ್ನಿಟ್ಟಿದ್ದೇನೆ.
೪೩ಸತ್ಯ ವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡ. ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿಕೊಂಡಿದ್ದೇನೆ.
44 ನಾನು ನಿಮ್ಮ ನಿಯಮವನ್ನು ಯಾವಾಗಲೂ ಮತ್ತು ಎಂದೆಂದಿಗೂ ಪಾಲಿಸುವೆನು.
೪೪ನಿನ್ನ ಧರ್ಮಶಾಸ್ತ್ರವನ್ನು ಸದಾ ತಪ್ಪದೆ ಕೈಗೊಳ್ಳುವೆನು.
45 ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, ನಾನು ಸ್ವತಂತ್ರವಾಗಿಯೇ ಜೀವಿಸುವೆನು.
೪೫ನಾನು ನಿನ್ನ ನಿಯಮಗಳನ್ನು ಅಭ್ಯಾಸಿಸುವವನಾದುದರಿಂದ, ಸರಾಗವಾಗಿ ನಡೆಯುವೆನು.
46 ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ.
೪೬ನಿನ್ನ ಕಟ್ಟಳೆಗಳ ವಿಷಯವಾಗಿ, ಅರಸುಗಳ ಮುಂದೆಯೂ ಮಾತನಾಡುವೆನು, ನಾಚಿಕೆಪಡುವುದಿಲ್ಲ.
47 ನಿಮ್ಮ ಆಜ್ಞೆಗಳನ್ನು ನಾನು ಪ್ರೀತಿಸುವುದರಿಂದ, ನಾನು ಅವುಗಳಲ್ಲಿ ಆನಂದಿಸುವೆನು.
೪೭ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ, ಅವು ನನಗೆ ಇಷ್ಟವಾಗಿವೆ.
48 ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು.
೪೮ನಿನ್ನ ಆಜ್ಞೆಗಳನ್ನು ಗೌರವಿಸುತ್ತೇನೆ, ಅವುಗಳನ್ನು ನಾನು ಪ್ರೀತಿಸುತ್ತೇನೆ, ನಿನ್ನ ನಿಬಂಧನೆಗಳನ್ನು ಧ್ಯಾನಿಸುತ್ತೇನೆ. ಸಾಯಿನ್.
49 ನಿಮ್ಮ ಸೇವಕನಿಗೋಸ್ಕರ ನಿಮ್ಮ ವಾಕ್ಯವನ್ನು ನೀವು ಜ್ಞಾಪಕಮಾಡಿಕೊಳ್ಳಿರಿ, ಏಕೆಂದರೆ ನೀವು ನನಗೆ ನಿರೀಕ್ಷೆಯನ್ನು ಕೊಟ್ಟಿದ್ದೀರಿ.
೪೯ನಿನ್ನ ವಾಗ್ದಾನವನ್ನು ನಿನ್ನ ಸೇವಕನಿಗೋಸ್ಕರ ನೆನಪುಮಾಡಿಕೋ, ನನ್ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದಿಯಲ್ಲಾ!
50 ನಿಮ್ಮ ವಾಗ್ದಾನವು ನನ್ನ ಜೀವದ ಸಂರಕ್ಷಣೆಯಾಗಿದೆ. ಅವು ನನ್ನ ಸಂಕಷ್ಟಗಳಲ್ಲಿ ಆದರಣೆಯಾಗಿವೆ.
೫೦ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ, ಆಪತ್ಕಾಲದಲ್ಲಿ ಇದೇ ನನಗೆ ಆದರಣೆ.
51 ಅಹಂಕಾರಿಗಳು ನನ್ನನ್ನು ಕರುಣಿಸದೆ ಹಾಸ್ಯ ಮಾಡಿದರೂ, ನಾನು ನಿಮ್ಮ ನಿಯಮದಿಂದ ತೊಲಗುವುದಿಲ್ಲ.
೫೧ಗರ್ವಿಷ್ಠರು ನನ್ನನ್ನು ಬಹಳವಾಗಿ ಅಪಹಾಸ್ಯ ಮಾಡಿದರು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಬಿಡಲಿಲ್ಲ.
52 ಯೆಹೋವ ದೇವರೇ, ನಿಮ್ಮ ಪುರಾತನ ನಿಯಮಗಳನ್ನು ನಾನು ನೆನಪು ಮಾಡಿಕೊಂಡು, ಅವುಗಳಲ್ಲಿ ಆದರಣೆಯನ್ನು ಪಡೆದುಕೊಂಡಿದ್ದೇನೆ.
೫೨ಯೆಹೋವನೇ, ನಿನ್ನ ಪುರಾತನ ಉಪದೇಶಾಜ್ಞೆಗಳನ್ನು ನೆನಪುಮಾಡಿಕೊಂಡು, ನನ್ನನ್ನು ಸಂತೈಸಿಕೊಂಡಿದ್ದೇನೆ.
53 ನಿಮ್ಮ ನಿಯಮವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ, ರೋಷವು ನನ್ನನ್ನು ಆವರಿಸಿಕೊಂಡಿದೆ.
೫೩ನಿನ್ನ ಧರ್ಮಶಾಸ್ತ್ರ ಭ್ರಷ್ಟರಾದ ದುಷ್ಟರಿಗಾಗಿ, ಕೋಪಗೊಂಡಿದ್ದೇನೆ.
54 ನನ್ನ ಪ್ರವಾಸದ ಮನೆಯಲ್ಲಿ ನಿಮ್ಮ ತೀರ್ಪುಗಳು ನನಗೆ ಗಾನ ವಿಷಯವಾಗಿದೆ.
೫೪ನನ್ನ ಪ್ರವಾಸದ ಮನೆಯಲ್ಲಿ ನಿನ್ನ ಕಟ್ಟಳೆಗಳು ನನಗೆ ಗಾಯನವಾದವು.
55 ಯೆಹೋವ ದೇವರೇ, ರಾತ್ರಿಯಲ್ಲಿ ನಿಮ್ಮ ನಾಮಸ್ಮರಣೆ ಮಾಡುವುದರಿಂದ, ನಿಮ್ಮ ನಿಯಮವನ್ನು ಕೈಕೊಳ್ಳುತ್ತೇನೆ.
೫೫ಯೆಹೋವನೇ, ರಾತ್ರಿಯಲ್ಲಿ ನಿನ್ನ ನಾಮವನ್ನು ಸ್ಮರಿಸಿಕೊಳ್ಳುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಕೈಗೊಳ್ಳುತ್ತೇನೆ.
56 ನಾನು ನಿಮ್ಮ ಸೂತ್ರಗಳನ್ನು ಕೈಗೊಂಡಿದ್ದೇನೆ: ಇದೇ ನನ್ನ ಜೀವನದ ಶೈಲಿಯಾಗಿದೆ.
೫೬ನಿನ್ನ ನಿಯಮಗಳನ್ನು ಅನುಸರಿಸಿದ್ದರಿಂದ ಇದೆಲ್ಲಾ ನನಗೆ ಲಭಿಸಿತು. ಹೇತ್.
57 ಯೆಹೋವ ದೇವರೇ, ನೀವೇ ನನ್ನ ಪಾಲು; ನಿಮ್ಮ ವಾಕ್ಯಗಳನ್ನು ಪಾಲಿಸುವೆನೆಂದು ನಾನು ಪ್ರಮಾಣ ಮಾಡಿದ್ದೇನೆ.
೫೭ಯೆಹೋವನೇ, ನನ್ನ ಪಾಲು ನೀನೇ, ನಿನ್ನ ವಾಕ್ಯಗಳನ್ನು ಕೈಗೊಳ್ಳುವೆನೆಂದು ನಿರ್ಣಯಿಸಿಕೊಂಡಿದ್ದೇನೆ.
58 ಪೂರ್ಣಹೃದಯದಿಂದ ನಾನು ನಿಮ್ಮ ಮುಖವನ್ನು ಹುಡುಕಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಕರುಣಿಸಿರಿ.
೫೮ಪೂರ್ಣಮನಸ್ಸಿನಿಂದ ನಿನ್ನ ದಯೆಯನ್ನು ಅಪೇಕ್ಷಿಸಿದ್ದೇನೆ, ನಿನ್ನ ನುಡಿಗನುಸಾರವಾಗಿ ನನಗೆ ಪ್ರಸನ್ನನಾಗು.
59 ನಾನು ನನ್ನ ನಡತೆಯನ್ನು ಪರಿಶೋಧಿಸುತ್ತಾ ನನ್ನ ಹೆಜ್ಜೆಗಳನ್ನು ನಿಮ್ಮ ಶಾಸನಗಳ ಕಡೆಗೆ ತಿರುಗಿಸಿದ್ದೇನೆ.
೫೯ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ.
60 ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು ತಡಮಾಡದೆ ತ್ವರೆಪಟ್ಟಿದ್ದೇನೆ.
೬೦ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.
61 ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡಿದ್ದರೂ, ನಿಮ್ಮ ನಿಯಮವನ್ನು ನಾನು ಮರೆಯಲಿಲ್ಲ.
೬೧ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆಯಲಿಲ್ಲ.
62 ನಿಮ್ಮ ನೀತಿಯುಳ್ಳ ನಿಯಮಗಳಿಗಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳುವೆನು.
೬೨ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡಲು, ಮಧ್ಯರಾತ್ರಿಯಲ್ಲಿ ಏಳುವೆನು.
63 ನಿಮಗೆ ಭಯಪಡುವವರೆಲ್ಲರಿಗೂ, ನಿಮ್ಮ ಸೂತ್ರಗಳನ್ನು ಹಿಂಬಾಲಿಸುವವರಿಗೂ ನಾನು ಮಿತ್ರನಾಗಿದ್ದೇನೆ.
೬೩ನಿನ್ನ ನಿಯಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.
64 ಯೆಹೋವ ದೇವರೇ, ಭೂಮಿಯು ನಿಮ್ಮ ಪ್ರೀತಿಯಿಂದ ತುಂಬಿದೆ; ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
೬೪ಯೆಹೋವನೇ, ಭೂಲೋಕವು ನಿನ್ನ ಶಾಶ್ವತ ಪ್ರೀತಿಯಿಂದ ತುಂಬಿದೆ, ನಿನ್ನ ಕಟ್ಟಳೆಗಳನ್ನು ನನಗೆ ಬೋಧಿಸು. ಟೇತ್.
65 ಯೆಹೋವ ದೇವರೇ, ನಿಮ್ಮ ವಾಕ್ಯದ ಪ್ರಕಾರ ನಿಮ್ಮ ಸೇವಕನಿಗೆ ಒಳ್ಳೆಯದನ್ನು ಮಾಡಿರಿ.
೬೫ಯೆಹೋವನೇ, ನೀನು ನಿನ್ನ ವಾಗ್ದಾನಕ್ಕೆ ತಕ್ಕಂತೆ, ನಿನ್ನ ಸೇವಕನಿಗೆ ಮಹೋಪಕಾರ ಮಾಡಿದ್ದಿ.
66 ತಿಳುವಳಿಕೆಯನ್ನೂ ಒಳ್ಳೆಯ ವಿವೇಚನೆಯನ್ನೂ, ನನಗೆ ಕಲಿಸಿರಿ, ಏಕೆಂದರೆ ನಿಮ್ಮ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೇನೆ.
೬೬ಸುಜ್ಞಾನವನ್ನು, ವಿವೇಕಗಳನ್ನು ನನಗೆ ಕಲಿಸಿಕೊಡು, ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.
67 ನಾನು ಬಾಧೆಪಡುವುದಕ್ಕಿಂತ ಮುಂಚೆ ದಾರಿತಪ್ಪಿಹೋಗುತ್ತಿದ್ದೆನು, ಆದರೆ ಈಗ ನಿಮ್ಮ ವಾಕ್ಯವನ್ನು ಪಾಲಿಸುತ್ತಿದ್ದೇನೆ.
೬೭ಕಷ್ಟಾನುಭವಕ್ಕಿಂತ ಮೊದಲೇ ತಪ್ಪಿಹೋಗುತ್ತಿದ್ದೆನು, ಈಗಲಾದರೋ ನಿನ್ನ ನುಡಿಗಳನ್ನು ಕೈಗೊಳ್ಳುತ್ತೇನೆ.
68 ನೀವು ಒಳ್ಳೆಯವರೂ, ಒಳ್ಳೆಯದನ್ನು ಮಾಡುವವರೂ ಆಗಿದ್ದೀರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿರಿ.
೬೮ನೀನು ಒಳ್ಳೆಯವನು, ಒಳ್ಳೆಯದನ್ನು ಮಾಡುವವನೂ ಆಗಿದ್ದಿ, ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು.
69 ಅಹಂಕಾರಿಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು, ನಾನಾದರೋ ಪೂರ್ಣಹೃದಯದಿಂದ ನಿಮ್ಮ ಸೂತ್ರಗಳನ್ನು ಕೈಗೊಳ್ಳುವೆನು.
೬೯ಗರ್ವಿಷ್ಠರು ನನ್ನ ವಿರುದ್ಧವಾಗಿ ಸುಳ್ಳುಕಲ್ಪಿಸಿದ್ದಾರೆ, ನಾನಾದರೋ ಪೂರ್ಣಮನಸ್ಸಿನಿಂದ ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
70 ಅವರ ಹೃದಯವು ಕಠಿಣವೂ ಮಂದವೂ ಆಗಿದೆ, ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ.
೭೦ಅವರ ಹೃದಯದಲ್ಲಿ ಸತ್ಯವಿಲ್ಲ, ನಾನಾದರೋ ನಿನ್ನ ಧರ್ಮಶಾಸ್ತ್ರದಲ್ಲಿ ಉಲ್ಲಾಸಪಡುತ್ತೇನೆ.
71 ನಾನು ಶ್ರಮೆಪಟ್ಟದ್ದು ನನಗೆ ಒಳ್ಳೆಯದಾಯಿತು ಅದರಿಂದ ನಿಮ್ಮ ತೀರ್ಪುಗಳನ್ನು ಕಲಿತೆನು.
೭೧ಕಷ್ಟಾನುಭವವು ಹಿತಕರವಾಯಿತು, ಅದುದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.
72 ಸಾವಿರಾರು ಬೆಳ್ಳಿಬಂಗಾರ ನಾಣ್ಯಗಳಿಗಿಂತಲೂ ನಿಮ್ಮ ಬಾಯಿಯ ನಿಯಮವು ನನಗೆ ಹೆಚ್ಚು ಅಮೂಲ್ಯವಾದದ್ದಾಗಿದೆ.
೭೨ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ. ಯೋದ್.
73 ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ.
೭೩ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು, ನಿನ್ನ ಆಜ್ಞೆಗಳನ್ನು ಕಲಿಯುವುದಕ್ಕೆ ನನಗೆ ಬುದ್ಧಿಯನ್ನು ಕೊಡು.
74 ನಿಮಗೆ ಭಯಪಡುವವರು ನನ್ನನ್ನು ನೋಡಿ ಆನಂದಿಸಲಿ, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷಿಸಿಕೊಂಡಿದ್ದೇನೆ.
೭೪ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ, ನಾನು ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನಲ್ಲಾ.
75 ಯೆಹೋವ ದೇವರೇ, ನಿಮ್ಮ ನಿಯಮಗಳು ನೀತಿಯುಳ್ಳವುಗಳು; ನಿಮ್ಮ ನಂಬಿಗಸ್ತಿಕೆಯಿಂದಲೇ ನೀವು ನನ್ನನ್ನು ಕಷ್ಟಪಡಿಸಿದ್ದೀರಿ ಎಂದು ನನಗೆ ಗೊತ್ತಿದೆ.
೭೫ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ, ನೀನು ನಂಬಿಗಸ್ತಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.
76 ನೀವು ನಿಮ್ಮ ಸೇವಕನಿಗೆ ನೀಡಿದ ವಾಗ್ದಾನದ ಪ್ರಕಾರ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ಆದರಣೆಯಾಗಿರಲಿ.
೭೬ನಿನ್ನ ಸೇವಕನಿಗೆ ನುಡಿದ ಪ್ರಕಾರ, ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.
77 ನಾನು ಜೀವಿಸುವಂತೆ ನಿಮ್ಮ ಅನುಕಂಪವು ನನಗೆ ಬರಲಿ, ಏಕೆಂದರೆ ನಿಮ್ಮ ನಿಯಮವೇ ನನ್ನ ಆನಂದವಾಗಿದೆ.
೭೭ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ.
78 ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು.
೭೮ಗರ್ವಿಷ್ಠರು ಮಾನಭಂಗ ಹೊಂದಲಿ, ಅವರು ಮೋಸದಿಂದ ನನಗೆ ಕೇಡು ಮಾಡಿದ್ದಾರೆ. ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುತ್ತಿರುವೆನು.
79 ನಿಮಗೆ ಭಯಪಡುವವರು ನನ್ನ ಬಳಿಗೆ ಬರಲಿ, ನಿಮ್ಮ ಶಾಸನಗಳನ್ನು ಅರ್ಥಮಾಡಿಕೊಳ್ಳುವವರೂ ನನ್ನ ಬಳಿಗೆ ಬರಲಿ.
೭೯ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನ ಕಡೆಗೆ ತಿರುಗಿಕೊಂಡು, ನಿನ್ನ ಕಟ್ಟಳೆಗಳನ್ನು ಗ್ರಹಿಸಿಕೊಳ್ಳಲಿ.
80 ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು.
೮೦ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ. ಕಾಫ್.
81 ನನ್ನ ಪ್ರಾಣವು ನಿಮ್ಮ ರಕ್ಷಣೆಯ ಬಯಕೆಯಿಂದಲೇ ಕುಗ್ಗಿ ಹೋಗುತ್ತಿದೆ, ಆದರೂ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
೮೧ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.
82 ನನ್ನ ಕಣ್ಣುಗಳು ನಿಮ್ಮ ವಾಗ್ದಾನಕ್ಕಾಗಿ ಕಾಯುತ್ತಾ ಮಂದವಾಗುತ್ತಿವೆ; “ನೀವು ಯಾವಾಗ ನನಗೆ ಆದರಣೆ ನೀಡುವಿರಿ?” ಎಂದು ನಾನು ಕೇಳುತ್ತಿರುವೆನು.
೮೨ನಿನ್ನ ನುಡಿಯನ್ನು ನೆರವೇರಿಸಿ ಯಾವಾಗ ನನ್ನನ್ನು ಸಂತೈಸುವಿ? ಎಂಬುವುದಕ್ಕೋಸ್ಕರವೇ ನನ್ನ ದೃಷ್ಟಿಯು ಮಂದವಾಯಿತು.
83 ನಾನು ಹೊಗೆಯಲ್ಲಿರುವ ದ್ರಾಕ್ಷಾರಸದ ಚರ್ಮಚೀಲದಂತ್ತಿದ್ದರೂ, ನಿಮ್ಮ ತೀರ್ಪುಗಳನ್ನು ನಾನು ಮರೆಯಲಿಲ್ಲ.
೮೩ಹೊಗೆಯಲ್ಲಿ ನೇತು ಹಾಕಿರುವ ಬುದ್ದಲಿಯಂತಿದ್ದೇನೆ, ಆದರೂ ನಿನ್ನ ನಿಬಂಧನೆಗಳನ್ನು ಮರೆಯಲಿಲ್ಲ.
84 ಎಷ್ಟು ಕಾಲ ನಿಮ್ಮ ಸೇವಕನು ಕಾಯಬೇಕು? ನನ್ನ ಹಿಂಸಕರಿಗೆ ಯಾವಾಗ ನೀವು ಶಿಕ್ಷಿಸುವಿರಿ?
೮೪ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
85 ನಿಮ್ಮ ನಿಯಮಕ್ಕೆ ವಿರೋಧವಾಗಿ ಅಹಂಕಾರಿಗಳು ನನಗೆ ಬಲೆಹಿಡಿಯಲು ಕುಣಿಗಳನ್ನು ಅಗೆದಿದ್ದಾರೆ.
೮೫ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
86 ನಿಮ್ಮ ಆಜ್ಞೆಗಳೆಲ್ಲಾ ಭರವಸೆಗೆ ಯೋಗ್ಯವಾದವುಗಳೇ; ಕಾರಣವಿಲ್ಲದೆ ಜನರು ನನ್ನನ್ನು ಹಿಂಸಿಸುವುದರಿಂದ ನನಗೆ ಸಹಾಯಮಾಡಿರಿ.
೮೬ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
87 ಅವರು ನನ್ನನ್ನು ಬಹುಮಟ್ಟಿಗೆ ಭೂಮಿಯಿಂದ ಅಳಿಸಿಹಾಕಲು ನೋಡಿದರು, ಆದರೆ ನಾನು ನಿಮ್ಮ ಸೂತ್ರಗಳನ್ನು ತಿರಸ್ಕರಿಸಲಿಲ್ಲ.
೮೭ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
88 ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನ ಜೀವನವನ್ನು ಪರಿಪಾಲಿಸಿರಿ, ಆಗ ನಿಮ್ಮ ಬಾಯಿಂದ ಹೊರಡುವ ಶಾಸನಗಳನ್ನು ಪಾಲಿಸುವೆನು.
೮೮ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು. ಲಾಮೆದ್.
89 ಯೆಹೋವ ದೇವರೇ, ನಿಮ್ಮ ವಾಕ್ಯವು ಶಾಶ್ವತವಾಗಿದೆ; ಅದು ಪರಲೋಕದಲ್ಲಿ ಸ್ಥಿರವಾಗಿದೆ.
೮೯ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90 ನಿಮ್ಮ ನಂಬಿಗಸ್ತಿಕೆಯು ಎಲ್ಲಾ ತಲೆಮಾರಿಗೂ ಮುಂದುವರಿಯುವುದು; ನೀವು ಸ್ಥಾಪಿಸಿದ ಭೂಮಿಯು ನೆಲೆಯಾಗಿರುವುದು.
೯೦ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.
91 ನಿಮ್ಮ ನಿಯಮಗಳು ಇಂದಿನವರೆಗೂ ನಿಂತಿರುತ್ತವೆ, ಏಕೆಂದರೆ ಸೃಷ್ಟಿಗಳೆಲ್ಲವೂ ನಿಮ್ಮ ಸೇವೆಯನ್ನು ಮಾಡುತ್ತವೆ.
೯೧ನಿನ್ನ ವಿಧಿಗಳಿಗನುಸಾರವಾಗಿ ಅವು ಇಂದಿನವರೆಗೂ, ಸ್ಥಿರವಾಗಿ ನಿಂತಿರುತ್ತವೆ. ಏಕೆಂದರೆ ಸರ್ವವಸ್ತುಗಳೂ ನಿನ್ನ ಸೇವೆ ಮಾಡುತ್ತವೆ.
92 ನಿಮ್ಮ ನಿಯಮವು ನನಗೆ ಆನಂದವಾಗಿರದಿದ್ದರೆ, ನನ್ನ ಕಷ್ಟದಲ್ಲಿ ನಾನು ನಾಶವಾಗುತ್ತಿದ್ದೆನು.
೯೨ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ, ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು.
93 ನಿಮ್ಮ ಸೂತ್ರಗಳನ್ನು ನಾನು ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಅವುಗಳಿಂದ ನನ್ನ ಜೀವವನ್ನು ಪರಿಪಾಲಿಸಿದ್ದೀರಿ.
೯೩ನಾನು ನಿನ್ನ ನಿಯಮಗಳನ್ನು ಎಂದಿಗೂ ಮರೆಯುವುದಿಲ್ಲ, ಅವುಗಳಿಂದಲೇ ನನ್ನನ್ನು ಬದುಕಿಸಿದ್ದಿ.
94 ನನ್ನನ್ನು ರಕ್ಷಿಸಿರಿ, ಏಕೆಂದರೆ ನಾನು ನಿಮ್ಮವನೇ; ನಿಮ್ಮ ಸೂತ್ರಗಳನ್ನು ನಾನು ಹುಡುಕಿದ್ದೇನಲ್ಲಾ.
೯೪ನಾನು ನಿನ್ನವನು, ರಕ್ಷಿಸು, ನಿನ್ನ ನಿಯಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ.
95 ದುಷ್ಟರು ನನ್ನನ್ನು ನಾಶಮಾಡುವುದಕ್ಕೆ ನನಗಾಗಿ ಕಾಯುತ್ತಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಆಲೋಚಿಸುತ್ತಿರುವೆನು.
೯೫ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
96 ಸರ್ವ ಸಂಪೂರ್ಣತೆಗೂ ಒಂದು ಮಿತಿಯಿರುವುದನ್ನು ನಾನು ನೋಡಿದ್ದೇನೆ; ಆದರೆ ನಿಮ್ಮ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ.
೯೬ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು. ಮೆಮ್.
97 ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ! ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ.
೯೭ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
98 ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ.
೯೮ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
99 ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ. ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ.
೯೯ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಿಮ್ಮ ಸೂತ್ರಗಳನ್ನು ಕೈಗೊಂಡಿರುವುದರಿಂದ ನಾನು ಹಿರಿಯರಿಗಿಂತಲೂ ವಿವೇಕಿಯಾಗಿದ್ದೇನೆ.
೧೦೦ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನಿಮ್ಮ ವಾಕ್ಯವನ್ನು ಅನುಸರಿಸಬೇಕೆಂದು, ನಾನು ಪ್ರತಿಯೊಂದು ದುರ್ಮಾರ್ಗದಿಂದ ನನ್ನ ಹೆಜ್ಜೆಗಳನ್ನು ಹಿಂದೆಗೆದಿದ್ದೇನೆ.
೧೦೧ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
102 ನಿಮ್ಮ ನಿಯಮಗಳಿಂದ ನಾನು ತಪ್ಪಿಹೋಗಲಿಲ್ಲ, ಏಕೆಂದರೆ ನೀವೇ ನನಗೆ ಉಪದೇಶಿಸಿದ್ದೀರಿ.
೧೦೨ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
103 ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ!
೧೦೩ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
104 ನಾನು ನಿಮ್ಮ ಸೂತ್ರಗಳಿಂದ ತಿಳುವಳಿಕೆಯನ್ನು ಸಂಪಾದಿಸಿಕೊಂಡಿದ್ದೇನೆ; ಆದ್ದರಿಂದ ಪ್ರತಿಯೊಂದು ದುರ್ಮಾರ್ಗವನ್ನೂ ದ್ವೇಷಿಸುತ್ತೇನೆ.
೧೦೪ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ. ನೂನ್.
105 ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
೧೦೫ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
106 ನಿಮ್ಮ ನೀತಿಯ ನಿಯಮಗಳನ್ನು ಪಾಲಿಸುವೆನೆಂದು ನಾನು ಒಂದು ಶಪಥಮಾಡಿದ್ದೇನೆ; ಅದನ್ನು ನಾನು ದೃಢಪಡಿಸುವೆನು.
೧೦೬ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ನಾನು ಬಹಳ ಕಷ್ಟ ಅನುಭವಿಸಿದ್ದೇನೆ; ಯೆಹೋವ ದೇವರೇ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವನವನ್ನು ಕಾಪಾಡಿರಿ.
೧೦೭ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
108 ಯೆಹೋವ ದೇವರೇ, ನನ್ನ ಬಾಯಿಂದ ಸಿದ್ಧಮನಸ್ಸಿನ ಸ್ತೋತ್ರಗಳನ್ನು ಸ್ವೀಕರಿಸಿರಿ, ನಿಮ್ಮ ನಿಯಮಗಳನ್ನು ನನಗೆ ಬೋಧಿಸಿರಿ.
೧೦೮ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
109 ನನ್ನ ಜೀವನ ಆಗಾಗ ಅಪಾಯದಲ್ಲಿದೆ, ಆದಾಗ್ಯೂ ನಾನು ನಿಮ್ಮ ನಿಯಮವನ್ನು ಮರೆಯುವುದಿಲ್ಲ.
೧೦೯ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ; ಆದರೂ ನಾನು ನಿಮ್ಮ ಸೂತ್ರಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
೧೧೦ದುಷ್ಟರು ಬಲೆಯೊಡ್ಡಿದ್ದಾರೆ, ನಾನು ನಿನ್ನ ನಿಯಮಗಳಿಂದ ತಪ್ಪಿಹೋಗುವುದಿಲ್ಲ.
111 ನಿಮ್ಮ ಶಾಸನಗಳನ್ನು ನಿತ್ಯ ಸೊತ್ತಾಗಿ ತೆಗೆದುಕೊಂಡಿದ್ದೇನೆ; ಏಕೆಂದರೆ ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿದೆ.
೧೧೧ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ.
112 ನಿಮ್ಮ ತೀರ್ಪುಗಳನ್ನು ಕಡೆವರೆಗೂ ಪಾಲಿಸುವುದಕ್ಕೆ ನಾನು ನನ್ನ ಹೃದಯದಲ್ಲಿ ದೃಢಮಾಡಿಕೊಂಡಿದ್ದೇನೆ.
೧೧೨ಕಡೆಯವರೆಗು ಯಾವಾಗಲೂ ನಿನ್ನ ನಿಬಂಧನೆಗಳನ್ನು ಕೈಗೊಳ್ಳುವುದಕ್ಕೆ ಮನಸ್ಸುಮಾಡಿದ್ದೇನೆ. ಸಾಮೆಕ್.
113 ಎರಡು ಮನಸ್ಸುಳ್ಳವರನ್ನು ನಾನು ದ್ವೇಷಿಸುತ್ತೇನೆ, ಆದರೂ ನಿಮ್ಮ ನಿಯಮವನ್ನು ನಾನು ಪ್ರೀತಿಸುತ್ತೇನೆ.
೧೧೩ಚಂಚಲ ಮನಸ್ಸುಳ್ಳವರನ್ನು ದ್ವೇಷಿಸುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.
114 ನೀವೇ ನನ್ನ ಆಶ್ರಯವೂ, ಗುರಾಣಿಯೂ ಆಗಿದ್ದೀರಿ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟುಕೊಂಡಿದ್ದೇನೆ.
೧೧೪ನನ್ನ ಆಶ್ರಯವೂ, ಗುರಾಣಿಯೂ ನೀನೇ, ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನೆ.
115 ನಿಯಮ ಮೀರುವವರೇ, ನನ್ನಿಂದ ತೊಲಗಿರಿ, ನಾನು ನನ್ನ ದೇವರ ಆಜ್ಞೆಗಳನ್ನು ಪಾಲಿಸಲು ಬಿಡಿರಿ!
೧೧೫ದುಷ್ಟರೇ, ತೊಲಗಿರಿ, ನನ್ನ ದೇವರ ಆಜ್ಞೆಗಳನ್ನು ಕೈಗೊಳ್ಳುವೆನು.
116 ನನ್ನ ದೇವರೇ, ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ನೆಲೆಗೊಳಿಸಿರಿ, ಆಗ ನಾನು ಬದುಕುವೆನು; ನನ್ನ ನಿರೀಕ್ಷೆ ಮುರಿದುಹೋಗದಿರಲಿ.
೧೧೬ನಿನ್ನ ನುಡಿಯ ಪ್ರಕಾರ ನನ್ನನ್ನು ಉದ್ಧಾರಮಾಡು, ಆಗ ಬದುಕುವೆನು. ನಾನು ನಿರೀಕ್ಷೆಯುಳ್ಳವನಾಗಿದ್ದೇನೆ, ನನ್ನನ್ನು ನಿರಾಶೆಪಡಿಸಬೇಡ.
117 ನನ್ನನ್ನು ಎತ್ತಿ ಹಿಡಿಯಿರಿ, ಆಗ ನಾನು ಬಿಡುಗಡೆಯಾಗುವೆನು; ನಿಮ್ಮ ತೀರ್ಪುಗಳಿಗೆ ಯಾವಾಗಲೂ ಗಮನಕೊಡುವೆನು.
೧೧೭ನೀನು ನನಗೆ ಆಧಾರವಾಗಿರು, ಆಗ ನಾನು ಸುರಕ್ಷಿತನಾಗಿ ಸದಾ ನಿನ್ನ ನಿಬಂಧನೆಗಳನ್ನು ಲಕ್ಷಿಸುವೆನು.
118 ನಿಮ್ಮ ತೀರ್ಪುಗಳನ್ನು ಮೀರಿದವರನ್ನೆಲ್ಲಾ ನೀವು ತಿರಸ್ಕರಿಸುತ್ತೀರಿ, ಏಕೆಂದರೆ ಅವರ ಕುಯುಕ್ತಿಯು ವ್ಯರ್ಥವಾಗುವುದು.
೧೧೮ನಿನ್ನ ನಿಬಂಧನೆಗಳಿಗೆ ತಪ್ಪಿದವರೆಲ್ಲರನ್ನು ನೀನು ತಳ್ಳಿಬಿಡುತ್ತೀ, ಅವರ ಕುಯುಕ್ತಿಯು ವ್ಯರ್ಥವಾದದ್ದೇ.
119 ಭೂಮಿಯಲ್ಲಿರುವ ದುಷ್ಟರೆಲ್ಲರನ್ನು ಕಸದ ಹಾಗೆ ತೆಗೆದು ಹಾಕುತ್ತೀರಿ; ಆದ್ದರಿಂದ ನಾನು ನಿಮ್ಮ ಶಾಸನಗಳನ್ನು ಪ್ರೀತಿಸುತ್ತೇನೆ.
೧೧೯ಭೂಲೋಕದ ದುಷ್ಟರೆಲ್ಲರನ್ನು ಕಸದಂತೆ ತೆಗೆದುಬಿಡುತ್ತೀ, ಆದುದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ.
120 ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ.
೧೨೦ನಿನ್ನ ಭಯದಿಂದ ನನ್ನ ದೇಹದ ಮಾಂಸವು ಕಂಪಿಸುತ್ತದೆ, ನಿನ್ನ ನ್ಯಾಯವಿಧಿಗಳಿಗೆ ಹೆದರುತ್ತೇನೆ. ಆಯಿನ್.
121 ನಾನು ನೀತಿನ್ಯಾಯವನ್ನು ನಡೆಸಿದ್ದೇನೆ; ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಬೇಡಿರಿ.
೧೨೧ನಾನು ನಿನ್ನ ನೀತಿವಿಧಿಗಳನ್ನು ಅನುಸರಿಸಿದ್ದೇನೆ, ಬಲಾತ್ಕಾರಿಗಳಿಗೆ ನನ್ನನ್ನು ಒಪ್ಪಿಸಬೇಡ.
122 ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ.
೧೨೨ನಿನ್ನ ಸೇವಕನ ಮೇಲಿಗಾಗಿ ನೀನು ಹೊಣೆಗಾರನಾಗು, ಗರ್ವಿಷ್ಠರು ನನ್ನನ್ನು ಬಾಧಿಸದಿರಲಿ.
123 ನಿಮ್ಮ ರಕ್ಷಣೆಯನ್ನೂ ನಿಮ್ಮ ನೀತಿಯ ವಾಗ್ದಾನವನ್ನೂ ಕಾಯುತ್ತಾ, ನನ್ನ ಕಣ್ಣುಗಳು ಮಂದವಾದವು.
೧೨೩ನಿನ್ನ ರಕ್ಷಣೆಯನ್ನೂ, ನಿನ್ನ ನೀತಿಯುಳ್ಳ ನುಡಿಯು ನೆರವೇರುವುದನ್ನೂ ನಿರೀಕ್ಷಿಸುತ್ತಾ, ನನ್ನ ದೃಷ್ಟಿ ಮೊಬ್ಬಾಯಿತು.
124 ನಿಮ್ಮ ಪ್ರೀತಿಗೆ ಅನುಸಾರವಾಗಿ ನಿಮ್ಮ ಸೇವಕನೊಂದಿಗೆ ವ್ಯವಹರಿಸಿ, ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
೧೨೪ನಿನ್ನ ಸೇವಕನನ್ನು ಕೃಪೆಯಿಂದ ನಡೆಸು, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
125 ನಾನು ನಿಮ್ಮ ಸೇವಕನು, ನಿಮ್ಮ ಶಾಸನಗಳನ್ನು ನಾನು ಅರ್ಥಮಾಡಿಕೊಳ್ಳುವಂತೆ ನನಗೆ ವಿವೇಚನೆಯನ್ನು ಕೊಡಿರಿ.
೧೨೫ನಾನು ನಿನ್ನ ಸೇವಕನು, ನಿನ್ನ ಕಟ್ಟಳೆಗಳನ್ನು ತಿಳಿದುಕೊಳ್ಳುವಂತೆ ವಿವೇಕವನ್ನು ದಯಪಾಲಿಸು.
126 ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ.
೧೨೬ಯೆಹೋವನೇ, ನೀನು ಕಾರ್ಯ ನಡೆಸುವುದಕ್ಕೆ ಸಮಯ ಬಂದಿದೆ, ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ.
127 ಆದ್ದರಿಂದ ನಾನು ನಿಮ್ಮ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ,
೧೨೭ನಿಜವಾಗಿ ನಿನ್ನ ಆಜ್ಞೆಗಳು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ನನಗೆ ಬಹುಪ್ರಿಯವಾಗಿವೆ.
128 ಅದರ ನಿಮಿತ್ತ ನಿಮ್ಮ ಸೂತ್ರಗಳೆಲ್ಲವೂ ಸರಿಯಾದವುಗಳೆಂದು ನಾನು ಅಂಗೀಕರಿಸುತ್ತೇನೆ, ಪ್ರತಿಯೊಂದು ಮೋಸ ಮಾರ್ಗವನ್ನೂ ದ್ವೇಷಿಸುತ್ತೇನೆ.
೧೨೮ನಿಜವಾಗಿ ನಿನ್ನ ಎಲ್ಲಾ ನಿಯಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ, ಎಲ್ಲಾ ಸುಳ್ಳು ಮಾರ್ಗಗಳನ್ನು ದ್ವೇಷಿಸುತ್ತೇನೆ. ಪೆ.
129 ನಿಮ್ಮ ಶಾಸನಗಳು ಅದ್ಭುತವಾದವುಗಳೇ; ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ.
೧೨೯ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.
130 ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; ಅದು ಮುಗ್ಧರಿಗೆ ಅರಿವನ್ನು ನೀಡುವುದು.
೧೩೦ನಿನ್ನ ವಾಕ್ಯವಿವರಣೆ ಬೆಳಕನ್ನು ಕೊಡುತ್ತದೆ, ಸರಳ ಹೃದಯರಿಗೆ ವಿವೇಚನೆಯನ್ನು ನೀಡುತ್ತದೆ.
131 ನಿಮ್ಮ ಆಜ್ಞೆಗಳಿಗಾಗಿರುವ ಬಯಕೆಯು, ನಾನು ಬಾಯಿತೆರೆದು ಹಂಬಲಿಸುವಂತೆ ಮಾಡುತ್ತದೆ.
೧೩೧ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.
132 ನಿಮ್ಮ ನಾಮವನ್ನು ಪ್ರೀತಿಸುವವರಿಗೆ ನೀವು ಯಾವಾಗಲೂ ಮಾಡುವಂತೆ, ನೀವು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕರುಣಿಸಿರಿ.
೧೩೨ನನಗೆ ಅಭಿಮುಖನಾಗಿ ಕರುಣಿಸು, ನಿನ್ನ ಹೆಸರನ್ನು ಪ್ರೀತಿಸುವವರಿಗೆ ಹೀಗೆ ಮಾಡುವುದು ನಿನ್ನ ನಿಯಮವಲ್ಲವೇ?
133 ನನ್ನ ಹೆಜ್ಜೆಗಳನ್ನು ನಿಮ್ಮ ವಾಕ್ಯದ ಪ್ರಕಾರ ಮುನ್ನಡೆಸಿರಿ; ಯಾವ ಪಾಪವಾದರೂ ನನ್ನನ್ನು ಆಳದಿರಲಿ.
೧೩೩ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು, ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು.
134 ಜನರ ಬಲಾತ್ಕಾರದಿಂದ ನನ್ನನ್ನು ತಪ್ಪಿಸಿರಿ, ಆಗ ನಿಮ್ಮ ಸೂತ್ರಗಳನ್ನು ನಾನು ಪಾಲಿಸುವೆನು.
೧೩೪ನರ ಮನುಷ್ಯರ ಬಲಾತ್ಕಾರದಿಂದ ನನ್ನನ್ನು ಬಿಡಿಸು, ಆಗ ನಿನ್ನ ನಿಯಮಗಳನ್ನು ಕೈಗೊಳ್ಳುವೆನು.
135 ನಿಮ್ಮ ಮುಖವನ್ನು ನಿಮ್ಮ ಸೇವಕನ ಮೇಲೆ ಪ್ರಕಾಶಿಸಿರಿ ಮತ್ತು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
೧೩೫ನಿನ್ನ ದಾಸನ ಮೇಲೆ ನಿನ್ನ ಮುಖಪ್ರಸನ್ನತೆಯಿರಲಿ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
136 ನಿಮ್ಮ ನಿಯಮವನ್ನು ಕೈಗೊಳ್ಳದೇ ಇರುವಾಗ ನನ್ನ ಕಣ್ಣಿನಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿವೆ.
೧೩೬ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ. ಸಾದ್ದಿ.
137 ಯೆಹೋವ ದೇವರೇ, ನೀವು ನೀತಿವಂತರು, ನಿಮ್ಮ ನಿಯಮಗಳು ಸರಿಯಾದವುಗಳೇ.
೧೩೭ಯೆಹೋವನೇ, ನೀನು ನೀತಿಸ್ವರೂಪನು, ನಿನ್ನ ವಿಧಿಗಳು ನ್ಯಾಯವಾಗಿವೆ.
138 ನೀವು ಕೊಟ್ಟ ನಿಮ್ಮ ಶಾಸನಗಳು ನೀತಿಯುಳ್ಳವುಗಳು; ಪೂರ್ಣ ಭರವಸೆಗೆ ಅವು ಯೋಗ್ಯವಾದವುಗಳು.
೧೩೮ನೀತಿ, ಸತ್ಯತೆಗಳಿಂದಲೇ ನಿನ್ನ ಕಟ್ಟಳೆಗಳನ್ನು ಸ್ಥಾಪಿಸಿದ್ದಿ,
139 ನನ್ನ ವೈರಿಗಳು ನಿಮ್ಮ ಮಾತುಗಳನ್ನು ತಿರಸ್ಕರಿಸುವುದರಿಂದ, ನನ್ನ ಆಸಕ್ತಿಯು ನನ್ನನ್ನು ದಹಿಸಿಬಿಟ್ಟಿದೆ.
೧೩೯ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಟ್ಟಿದ್ದರಿಂದ ನಿನ್ನ ಮೇಲಿನ ಅಭಿಮಾನ ನನ್ನನ್ನು ದಹಿಸಿಬಿಟ್ಟಿತು,
140 ನಿಮ್ಮ ವಾಗ್ದಾನಗಳು ಬಹು ಪರಿಶೋಧಿತವಾಗಿವೆ, ಆದ್ದರಿಂದ ನಿಮ್ಮ ಸೇವಕನು ಅವುಗಳನ್ನು ಪ್ರೀತಿಸುತ್ತಾನೆ.
೧೪೦ನಿನ್ನ ನುಡಿಯು ಪರಿಶುದ್ಧವಾದದ್ದು, ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ.
141 ನಾನು ಅಲ್ಪನೂ, ತಿರಸ್ಕಾರ ಹೊಂದಿದವನು ಆಗಿದ್ದರೂ, ನಿಮ್ಮ ಸೂತ್ರಗಳನ್ನು ನಾನು ಮರೆಯುವುದಿಲ್ಲ.
೧೪೧ನಾನು ಅಲ್ಪನೂ, ತಿರಸ್ಕಾರ ಹೊಂದಿದವನೂ ಆಗಿದ್ದೇನೆ, ಆದರೂ ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142 ನಿಮ್ಮ ನೀತಿಯು ನಿತ್ಯವಾದದ್ದು ನಿಮ್ಮ ನಿಯಮವು ಸತ್ಯವಾದದ್ದು.
೧೪೨ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.
143 ಕಷ್ಟಸಂಕಟಗಳು ನನ್ನನ್ನು ಹಿಡಿದಿವೆ, ಆದರೂ ನಿಮ್ಮ ಆಜ್ಞೆಗಳು ನನಗೆ ಆನಂದದಾಯಕವಾಗಿವೆ.
೧೪೩ಕಷ್ಟ, ಸಂಕಟಗಳು ನನ್ನನ್ನು ಮುತ್ತಿಕೊಂಡಿವೆ, ಆದರೂ ನಿನ್ನ ಆಜ್ಞೆಗಳು ನನಗೆ ಸಂತೋಷಕರವಾಗಿವೆ.
144 ನಿಮ್ಮ ಶಾಸನಗಳು ಯಾವಾಗಲೂ ನೀತಿಯುಕ್ತವಾಗಿವೆ; ನಾನು ಬದುಕುವಂತೆ ನನಗೆ ವಿವೇಕವನ್ನು ಕೊಡಿರಿ.
೧೪೪ನಿನ್ನ ಕಟ್ಟಳೆಗಳು ಸದಾಕಾಲವೂ ನೀತಿಯುಳ್ಳವುಗಳು, ನನಗೆ ವಿವೇಕವನ್ನು ದಯಪಾಲಿಸು, ಆಗ ಬದುಕುವೆನು. ಖೋಫ್.
145 ಯೆಹೋವ ದೇವರೇ, ಪೂರ್ಣಹೃದಯದಿಂದ ನಾನು ಮೊರೆಯಿಟ್ಟಿದ್ದೇನೆ; ನನಗೆ ಸದುತ್ತರ ನೀಡಿರಿ; ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು.
೧೪೫ಯೆಹೋವನೇ, ಸಂಪೂರ್ಣಮನಸ್ಸಿನಿಂದ ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು, ನಿನ್ನ ನಿಬಂಧನೆಗಳನ್ನು ಅನುಸರಿಸುವೆನು.
146 ನಿಮಗೇ ಮೊರೆಯಿಟ್ಟಿದ್ದೇನೆ; ನನ್ನನ್ನು ರಕ್ಷಿಸಿರಿ ನಾನು ನಿಮ್ಮ ಶಾಸನಗಳನ್ನು ಪಾಲಿಸುವೆನು.
೧೪೬ನಿನಗೇ ಮೊರೆಯಿಟ್ಟಿದ್ದೇನೆ ರಕ್ಷಿಸು. ನಿನ್ನ ಕಟ್ಟಳೆಗಳನ್ನು ಕೈಗೊಳ್ಳುವೆನು.
147 ನಾನು ಸೂರ್ಯೋದಯಕ್ಕೆ ಮೊದಲು ಎದ್ದು ನಿಮಗೆ ಮೊರೆ ಇಟ್ಟಿದ್ದೇನೆ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟಿದ್ದೇನೆ.
೧೪೭ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು, ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.
148 ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ.
೧೪೮ನಿನ್ನ ನುಡಿಯನ್ನು ಧ್ಯಾನಿಸಲು, ನನ್ನ ಕಣ್ಣುಗಳು ಇರುಳಿನ ಒಂದೊಂದು ಜಾವದಲ್ಲೂ ತೆರೆದಿರುತ್ತವೆ.
149 ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಮೊರೆಯನ್ನು ಕೇಳಿರಿ; ನಿಮ್ಮ ನಿಯಮಗಳ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
೧೪೯ಯೆಹೋವನೇ, ನಿನ್ನ ಕೃಪೆಗೆ ತಕ್ಕಂತೆ ನನ್ನ ಮೊರೆಯನ್ನು ಕೇಳು, ನಿನ್ನ ವಿಧಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
150 ದುಷ್ಟತನಕ್ಕೆ ಒಳಸಂಚು ಮಾಡುವವರು ನನಗೆ ಸಮೀಪವಾಗಿದ್ದಾರೆ; ಆದರೆ ಅವರು ನಿಮ್ಮ ನಿಯಮಕ್ಕೆ ಅವರು ದೂರವಾಗಿದ್ದಾರೆ.
೧೫೦ನಿನ್ನ ಧರ್ಮಶಾಸ್ತ್ರವನ್ನು ಬಿಟ್ಟು ಕೆಟ್ಟದ್ದನ್ನು ಅನುಸರಿಸುವವರು, ನನ್ನ ಸಮೀಪಕ್ಕೆ ಬಂದಿದ್ದಾರೆ.
151 ಯೆಹೋವ ದೇವರೇ, ನೀವು ಸಮೀಪವಾಗಿದ್ದೀರಿ, ನಿಮ್ಮ ಆಜ್ಞೆಗಳೆಲ್ಲಾ ಸತ್ಯವಾಗಿವೆ.
೧೫೧ಯೆಹೋವನೇ, ನೀನು ನನ್ನ ಹತ್ತಿರವೇ ಇರುವೆ, ನಿನ್ನ ಆಜ್ಞೆಗಳೆಲ್ಲಾ ಯಥಾರ್ಥವಾಗಿವೆ.
152 ನಿಮ್ಮ ಶಾಸನಗಳು ಸದಾಕಾಲಕ್ಕೂ ಇರುವಂತೆ ಅವುಗಳನ್ನು ಸ್ಥಾಪಿಸಿದ್ದೀರೆಂದು ಬಹುಕಾಲದ ಹಿಂದೆಯೇ ನಾನು ಕಲಿತುಕೊಂಡಿದ್ದೇವೆ.
೧೫೨ನೀನು ನಿನ್ನ ಕಟ್ಟಳೆಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಿ ಎಂದು, ನಾನು ಮೊದಲಿನಿಂದಲೇ ಅವುಗಳ ಮೂಲಕ ತಿಳಿದುಕೊಂಡಿದ್ದೇನೆ. ರೇಷ್.
153 ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸಿರಿ; ಏಕೆಂದರೆ ನಿಮ್ಮ ನಿಯಮವನ್ನು ನಾನು ಮರೆತಿಲ್ಲ.
೧೫೩ನನ್ನ ಕಷ್ಟವನ್ನು ನೋಡಿ ನನ್ನನ್ನು ರಕ್ಷಿಸು, ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆತವನಲ್ಲ.
154 ನನ್ನ ಪರವಾಗಿ ವಾದಿಸಿ, ನನ್ನನ್ನು ವಿಮೋಚಿಸಿರಿ; ನಿಮ್ಮ ವಾಗ್ದಾನದ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
೧೫೪ನನ್ನ ವ್ಯಾಜ್ಯವನ್ನು ನಡೆಸಿ ನನ್ನನ್ನು ಬಿಡಿಸು, ನಿನ್ನ ನುಡಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
155 ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ಏಕೆಂದರೆ ಅವರು ನಿಮ್ಮ ತೀರ್ಪುಗಳನ್ನು ಹುಡುಕುವುದಿಲ್ಲ.
೧೫೫ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.
156 ಯೆಹೋವ ದೇವರೇ, ನಿಮ್ಮ ಅನುಕಂಪವು ಮಹತ್ತಾದವುಗಳು; ನಿಮ್ಮ ನಿಯಮಗಳ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
೧೫೬ಯೆಹೋವನೇ, ನಿನ್ನ ಕೃಪಾಕಾರ್ಯಗಳು ಬಹಳವಾಗಿವೆ, ನಿನ್ನ ವಿಧಿಗಳಿಗೆ ತಕ್ಕಂತೆ ನನ್ನನ್ನು ಚೈತನ್ಯಗೊಳಿಸು.
157 ನನ್ನನ್ನು ಹಿಂಸಿಸುವ ನನ್ನ ವೈರಿಗಳು ಅನೇಕರಾಗಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಬಿಟ್ಟುಬಿಡಲಿಲ್ಲ.
೧೫೭ನನ್ನನ್ನು ಹಿಂಸಿಸುವ ವೈರಿಗಳು ಅನೇಕರಿದ್ದರೂ, ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ನಡೆಯಲಿಲ್ಲ.
158 ನಾನು ಅಪನಂಬಿಗಸ್ತರನ್ನು ಕಂಡು ಅಸಹ್ಯಪಡುತ್ತೇನೆ, ಅವರು ನಿಮ್ಮ ಮಾತನ್ನು ಅಂಗೀಕರಿಸುತ್ತಾಯಿಲ್ಲಾ.
೧೫೮ನಿನ್ನ ನುಡಿಯನ್ನು ಕೈಗೊಳ್ಳದ ಧರ್ಮಭ್ರಷ್ಟರನ್ನು ನೋಡಿ ಅಸಹ್ಯಪಟ್ಟಿದ್ದೇನೆ.
159 ನಿಮ್ಮ ಸೂತ್ರಗಳನ್ನು ನಾನು ಎಷ್ಟು ಪ್ರೀತಿಸುತ್ತೇನೆ ನೋಡಿರಿ; ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
೧೫೯ಯೆಹೋವನೇ, ನೋಡು, ನಿನ್ನ ನಿಯಮಗಳು ನನಗೆ ಎಷ್ಟೋ ಪ್ರಿಯವಾಗಿವೆ, ನಿನ್ನ ಕೃಪಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
160 ನಿಮ್ಮ ಮಾತುಗಳೆಲ್ಲಾ ಸತ್ಯವಾದವುಗಳೇ; ನಿಮ್ಮ ನೀತಿ ನಿಯಮಗಳೆಲ್ಲಾ ನಿತ್ಯವಾದವುಗಳೇ.
೧೬೦ನಿನ್ನ ವಾಕ್ಯದ ಸಾರಾಂಶವು ಸತ್ಯವೇ, ನಿನ್ನ ನೀತಿವಿಧಿಗಳೆಲ್ಲಾ ಯುಗಯುಗಾಂತರಕ್ಕೂ ಇರುವವು. ಷಿನ್.
161 ಅಧಿಕಾರಿಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ಆದರೆ ನನ್ನ ಹೃದಯವು ನಿಮ್ಮ ವಾಕ್ಯಗಳಿಗೆ ನಡುಗುತ್ತದೆ.
೧೬೧ಪ್ರಭುಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ನನ್ನ ಹೃದಯವು ನಿನ್ನ ವಾಕ್ಯಕ್ಕೆ ಮಾತ್ರ ಭಯಪಡುತ್ತದೆ.
162 ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ.
೧೬೨ಒಬ್ಬನು ತಾನು ಸಂಪಾದಿಸಿದ ದೊಡ್ಡ ಕೊಳ್ಳೆಯಲ್ಲಿ ಹೇಗೋ, ಹಾಗೆಯೇ ನಾನು ನಿನ್ನ ನುಡಿಯಲ್ಲಿ ಆನಂದಿಸುತ್ತೇನೆ.
163 ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ.
೧೬೩ಮಿಥ್ಯವಾದದ್ದನ್ನು ದ್ವೇಷಿಸುತ್ತೇನೆ, ಅದು ನನಗೆ ಅಸಹ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.
164 ನಿಮ್ಮ ನೀತಿಯ ನಿಯಮಗಳ ನಿಮಿತ್ತ, ನಾನು ದಿನಕ್ಕೆ ಏಳು ಸಾರಿ ನಿಮ್ಮನ್ನು ಸ್ತುತಿಸುತ್ತೇನೆ.
೧೬೪ನಿನ್ನ ನೀತಿವಿಧಿಗಳಿಗೋಸ್ಕರ, ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ.
165 ನಿಮ್ಮ ನಿಯಮ ಪ್ರಿಯರಿಗೆ ಅಪಾರ ಸಮಾಧಾನವಿರುತ್ತದೆ, ಅಂಥವರಿಗೆ ಆತಂಕವೇನೂ ಇರುವುದಿಲ್ಲ.
೧೬೫ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ, ಸಂಪೂರ್ಣ ಸಮಾಧಾನವಿರುತ್ತದೆ, ಅಂಥವರಿಗೆ ವಿಘ್ನಕರವಾದದ್ದೇನೂ ಇರುವುದಿಲ್ಲ.
166 ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಕಾದುಕೊಂಡಿದ್ದೇನೆ; ನಾನು ನಿಮ್ಮ ಆಜ್ಞೆಗಳನ್ನು ಹಿಂಬಾಲಿಸುತ್ತಿದ್ದೇನೆ.
೧೬೬ಯೆಹೋವನೇ, ಯಾವಾಗ ರಕ್ಷಿಸುವಿಯೋ ಎಂದು, ನಿರೀಕ್ಷಿಸುತ್ತಾ ಇದ್ದೇನೆ, ನಿನ್ನ ಆಜ್ಞೆಗಳನ್ನು ಕೈಗೊಂಡಿದ್ದೇನೆ.
167 ನಾನು ನಿಮ್ಮ ಶಾಸನಗಳನ್ನು ಅನುಸರಿಸುವದರಿಂದ, ಅವುಗಳನ್ನು ಅತ್ಯಧಿಕವಾಗಿ ಪ್ರೀತಿಸುತ್ತೇನೆ.
೧೬೭ನಿನ್ನ ಕಟ್ಟಳೆಗಳನ್ನು ಮನಃಪೂರ್ವಕವಾಗಿ ಅನುಸರಿಸಿದ್ದೇನೆ, ಅವು ನನಗೆ ಬಹುಪ್ರಿಯವಾಗಿವೆ.
168 ನಾನು ನಿಮ್ಮ ಸೂತ್ರಗಳನ್ನೂ ಶಾಸನಗಳನ್ನೂ ಪಾಲಿಸುತ್ತೇನೆ, ಏಕೆಂದರೆ ನನ್ನ ಮಾರ್ಗಗಳೆಲ್ಲವೂ ನಿಮಗೆ ತಿಳಿದಿರುತ್ತವೆ.
೧೬೮ನಿನ್ನ ನಿಯಮಗಳನ್ನೂ, ಕಟ್ಟಳೆಗಳನ್ನೂ ಅನುಸರಿಸಿದ್ದೇನೆ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. ತಾವ್.
169 ಯೆಹೋವ ದೇವರೇ, ನನ್ನ ಮೊರೆ ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಕ್ಯದ ಪ್ರಕಾರ ನನಗೆ ಅರಿವನ್ನು ನೀಡಿರಿ.
೧೬೯ಯೆಹೋವನೇ, ನನ್ನ ಕೂಗು ನಿನ್ನ ಸನ್ನಿಧಿಯನ್ನು ಮುಟ್ಟಲಿ, ನಿನ್ನ ವಾಕ್ಯಾನುಸಾರವಾಗಿ ನನಗೆ ಜ್ಞಾನವನ್ನು ದಯಪಾಲಿಸು.
170 ನನ್ನ ಬೇಡಿಕೆಯು ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಗ್ದಾನದ ಪ್ರಕಾರ ನನ್ನನ್ನು ಬಿಡಿಸಿರಿ.
೧೭೦ನನ್ನ ವಿಜ್ಞಾಪನೆಯು ನಿನ್ನ ಸನ್ನಿಧಿಗೆ ಸೇರಲಿ, ನಿನ್ನ ನುಡಿಗೆ ತಕ್ಕಂತೆ ನನ್ನನ್ನು ರಕ್ಷಿಸು.
171 ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ.
೧೭೧ನಿನ್ನ ನಿಬಂಧನೆಗಳನ್ನು ನನಗೆ ಕಲಿಸಿದ್ದಿಯಲ್ಲಾ. ನನ್ನ ತುಟಿಗಳಿಂದ ಸದಾ ನಿನ್ನ ಸ್ತುತಿ ಹೊರಡಲಿ,
172 ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ.
೧೭೨ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ, ನಿನ್ನ ಆಜ್ಞೆಗಳೆಲ್ಲಾ ನೀತಿಯುಳ್ಳದ್ದು.
173 ನಾನು ನಿಮ್ಮ ಸೂತ್ರಗಳನ್ನು ಆರಿಸಿಕೊಂಡಿರುವುದರಿಂದ, ನಿಮ್ಮ ಕೈ ನನಗೆ ನೆರವಾಗಲಿ.
೧೭೩ನಿನ್ನ ನಿಯಮಗಳನ್ನು ಆರಿಸಿಕೊಂಡಿದ್ದೇನೆ, ನಿನ್ನ ಕೈ ನನಗೆ ನೆರವಾಗಲಿ.
174 ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಬಯಸುತ್ತಿದ್ದೇನೆ, ನಿಮ್ಮ ನಿಯಮವೇ ನನಗೆ ಆನಂದವಾಗಿದೆ.
೧೭೪ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಯನ್ನು ಕೋರುತ್ತೇನೆ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವು.
175 ನಿಮ್ಮನ್ನು ಸ್ತುತಿಸಲು ನಾನು ಬದುಕಿರಲಿ; ನಿಮ್ಮ ನಿಯಮಗಳು ನನ್ನನ್ನು ಕಾಪಾಡಲಿ.
೧೭೫ನನ್ನ ಪ್ರಾಣವನ್ನು ಉಳಿಸು, ಅದು ನಿನ್ನನ್ನು ಕೊಂಡಾಡಲಿ. ನಿನ್ನ ನಿಯಮಗಳಿಂದ ನನಗೆ ಸಹಾಯವಾಗಲಿ.
176 ತಪ್ಪಿಹೋದ ಕುರಿಯಂತೆ ನಾನು ದಾರಿತಪ್ಪಿದ್ದೇನೆ. ನಿಮ್ಮ ಸೇವಕನಾದ ನನ್ನನ್ನು ಬಂದು ಹುಡುಕಿರಿ, ಏಕೆಂದರೆ ನಿಮ್ಮ ಆಜ್ಞೆಗಳನ್ನು ನಾನು ಮರೆಯುವುದಿಲ್ಲ.
೧೭೬ನಾನು ತಪ್ಪಿಹೋದ ಕುರಿಯಂತೆ ಅಲೆಯುತ್ತಿದ್ದೇನೆ, ನಿನ್ನ ಸೇವಕನನ್ನು ಪರಾಂಬರಿಸು. ನಾನು ನಿನ್ನ ಆಜ್ಞೆಗಳನ್ನು ಮರೆಯುವುದಿಲ್ಲ.

< ಕೀರ್ತನೆಗಳು 119 >