< ಕೀರ್ತನೆಗಳು 11 >

1 ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ. ಹಾಗಾದರೆ, “ಒಂದು ಪಕ್ಷಿಯಂತೆ ನಿನ್ನ ಪರ್ವತಕ್ಕೆ ಹಾರಿ ಹೋಗು,” ಎಂದು ನೀವು ನನಗೆ ಹೇಗೆ ಹೇಳುವಿರಿ? 2 “ಇಗೋ, ದುಷ್ಟರು ತಮ್ಮ ಬಿಲ್ಲು ಬಗ್ಗಿಸಿ; ಬಾಣವನ್ನು ಬಿಲ್ಲಿಗೆ ಹೂಡಿ, ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವುದಕ್ಕೆ ಸಿದ್ಧಮಾಡಿದ್ದಾರೆ. 3 ಅಸ್ತಿವಾರಗಳೇ ಕೆಡವುತ್ತಿರಲು, ನೀತಿವಂತನು ಏನು ಮಾಡಲು ಸಾಧ್ಯ?” 4 ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ; ಯೆಹೋವ ದೇವರು ತಮ್ಮ ಪರಲೋಕ ಸಿಂಹಾಸನದಲ್ಲಿ ಇದ್ದಾರೆ. ಅವರು ಭೂಮಿಯಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾರೆ; ಅವರ ಕಣ್ಣುಗಳು ಮಾನವರೆಲ್ಲರನ್ನು ಪರಿಶೋಧಿಸುತ್ತವೆ. 5 ಯೆಹೋವ ದೇವರು ನೀತಿವಂತನನ್ನು ಪರೀಕ್ಷಿಸುತ್ತಾರೆ, ಆದರೆ ಅವರು ದುಷ್ಟರನ್ನೂ ಹಿಂಸಾತ್ಮಕರನ್ನೂ ವಿರೋಧಿಸುತ್ತಾರೆ. 6 ಅವರು ದುಷ್ಟರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಸುರಿಸಲಿ; ಇವೇ ದುಷ್ಟರ ಪಾಲಾಗಿರಲಿ. 7 ಏಕೆಂದರೆ ಯೆಹೋವ ದೇವರು ನೀತಿಯುಳ್ಳವರು. ಅವರು ನ್ಯಾಯವನ್ನು ಪ್ರೀತಿಸುತ್ತಾರೆ; ಯಥಾರ್ಥರು ಅವರ ಮುಖವನ್ನು ದೃಷ್ಟಿಸುವರು.

< ಕೀರ್ತನೆಗಳು 11 >