< ಕೀರ್ತನೆಗಳು 103 >
1 ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ನನ್ನ ಅಂತರಾತ್ಮವೇ ಅವರ ಪರಿಶುದ್ಧ ನಾಮವನ್ನು ಸ್ತುತಿಸು.
೧ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ.
2 ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ಅವರ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
೨ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
3 ದೇವರು ನಿಮ್ಮ ಪಾಪಗಳನ್ನೆಲ್ಲಾ ಕ್ಷಮಿಸುತ್ತಾರೆ. ನಿಮ್ಮ ರೋಗಗಳನ್ನೆಲ್ಲಾ ವಾಸಿಮಾಡುತ್ತಾರೆ.
೩ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತ ರೋಗಗಳನ್ನು ವಾಸಿಮಾಡುವವನೂ,
4 ದೇವರು ನಿಮ್ಮ ಜೀವವನ್ನು ಪಾತಾಳದಿಂದ ವಿಮೋಚಿಸುವರು; ಪ್ರೀತಿ ಅನುಕಂಪವನ್ನು ನಿನಗೆ ಕಿರೀಟವಾಗಿ ಶೃಂಗರಿಸುವರು.
೪ನಿನ್ನ ಜೀವವನ್ನು ನಾಶನದಿಂದ ತಪ್ಪಿಸುವವನೂ, ಶಾಶ್ವತ ಪ್ರೀತಿ ಮತ್ತು ಕರುಣೆಯೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ.
5 ನಿಮ್ಮ ಯೌವನವು ಹದ್ದಿನ ಹಾಗೆ ನವೀಕರಿಸುವಂತೆ ಮಾಡುವರು. ಅವರು ನಿಮ್ಮ ಆಶೆಗಳನ್ನು ಒಳ್ಳೆಯವುಗಳಿಂದ ತೃಪ್ತಿಪಡಿಸುವರು.
೫ಶ್ರೇಷ್ಠ ವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ.
6 ಯೆಹೋವ ದೇವರು ಕುಗ್ಗಿದವರೆಲ್ಲರಿಗೂ ನೀತಿಯನ್ನೂ, ನ್ಯಾಯವನ್ನೂ ಕಾರ್ಯರೂಪಕ್ಕೆ ತರುವರು.
೬ಯೆಹೋವನು ನೀತಿಯನ್ನು ಸಾಧಿಸುವವನಾಗಿ, ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ.
7 ಅವರು ತಮ್ಮ ಮಾರ್ಗಗಳನ್ನು ಮೋಶೆಗೂ, ತಮ್ಮ ಕ್ರಿಯೆಗಳನ್ನು ಇಸ್ರಾಯೇಲರಿಗೂ ಪ್ರಕಟಿಸಿದರು:
೭ಆತನು ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.
8 ಯೆಹೋವ ದೇವರು, ಅನುಕಂಪವೂ ದಯೆಯೂ ದೀರ್ಘಶಾಂತಿಯೂ ಪೂರ್ಣ ಪ್ರೀತಿಯೂ ಉಳ್ಳವರಾಗಿದ್ದಾರೆ.
೮ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು.
9 ಅವರು ಯಾವಾಗಲೂ ತಪ್ಪುಹುಡುಕುವವರಲ್ಲ; ದೇವರು ತಮ್ಮ ಕೋಪವನ್ನು ಎಂದೆಂದಿಗೂ ಕೂಡಿಟ್ಟುಕೊಳ್ಳುವವರು ಅಲ್ಲ;
೯ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.
10 ದೇವರು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಧರ್ಮಗಳ ಪ್ರಕಾರ ನಮಗೆ ಮುಯ್ಯಿತೀರಿಸಲಿಲ್ಲ.
೧೦ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.
11 ಏಕೆಂದರೆ, ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ದೇವರ ಪ್ರೀತಿಯು ತಮಗೆ ಭಯಪಡುವವರ ಮೇಲೆ ಅಷ್ಟು ಮಹೋನ್ನತವಾಗಿದೆ;
೧೧ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ, ಅವರು ನಮ್ಮ ಅತಿಕ್ರಮಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾರೆ.
೧೨ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.
13 ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.
೧೩ತಂದೆಯು ಮಕ್ಕಳನ್ನು ಕನಿಕರಿಸುವಂತೆ, ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.
14 ದೇವರು ನಮ್ಮ ಪ್ರಕೃತಿಯನ್ನು ಬಲ್ಲವರಾಗಿದ್ದಾರೆ; ನಾವು ಧೂಳಾಗಿದ್ದೇವೆಂದು ಅವರು ನೆನಪುಮಾಡಿ ಕೊಳ್ಳುತ್ತಾರೆ.
೧೪ನಾವು ರೂಪಗೊಂಡಿದ್ದನ್ನು ಆತನು ಬಲ್ಲನು; ನಾವು ಧೂಳಾಗಿದ್ದೇವೆ ಎಂಬುವುದನ್ನು ನೆನಪುಮಾಡಿಕೊಳ್ಳುತ್ತಾನೆ.
15 ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ, ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ;
೧೫ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ; ಅವನು ಅಡವಿಯ ಹೂವಿನ ಹಾಗೆ ಶೋಭಿಸುತ್ತಾನೆ.
16 ಗಾಳಿಯು ಅದರ ಮೇಲೆ ಬೀಸುತ್ತಲೇ ಹೂವು ಇಲ್ಲದೆ ಹೋಗುತ್ತದೆ; ಅದು ಇದ್ದ ಸ್ಥಳವನ್ನು ಪುನಃ ಕಾಣುವುದಿಲ್ಲ.
೧೬ಗಾಳಿ ಬಡಿಯುತ್ತಲೇ ಅದು ಹೋಗುವುದು; ಅದರ ಸ್ಥಳವು ಅದನ್ನು ತಿರುಗಿ ಕಾಣುವುದಿಲ್ಲ.
17 ಆದರೆ ಯೆಹೋವ ದೇವರ ಪ್ರೀತಿಯು ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು, ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು.
೧೭ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ.
18 ದೇವರ ಒಡಂಬಡಿಕೆಯನ್ನು ಕೈಕೊಂಡು, ಅವರ ಸೂತ್ರಗಳನ್ನು ಪಾಲಿಸಲು ನೆನಸುವವರಿಗೂ ಅವರ ನೀತಿಯು ನೆಲೆಸಿರುವುದು.
೧೮ಆತನ ನಿಬಂಧನೆಗಳನ್ನು ಕೈಕೊಂಡು, ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳು ಮೊಮ್ಮಕ್ಕಳವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು.
19 ಯೆಹೋವ ದೇವರು ಪರಲೋಕದಲ್ಲಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ, ಅವರ ಸಾಮ್ರಾಜ್ಯದ ಆಳಿಕೆಯು ಎಲ್ಲರ ಮೇಲೆ ಇರುವುದು.
೧೯ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.
20 ದೇವರ ದೂತರೇ, ಅವರ ಮಾತನ್ನು ಕೇಳಿ, ಅವರಿಗೆ ವಿಧೇಯರಾಗುವ ಪರಾಕ್ರಮಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ.
೨೦ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೆ ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.
21 ದೇವರ ಇಷ್ಟವನ್ನು ನಡೆಸುವ ಸೇವಕರೇ, ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ.
೨೧ಆತನ ಸೈನ್ಯಗಳೇ, ಆತನ ಚಿತ್ತವನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.
22 ದೇವರ ಆಳಿಕೆಯ ಎಲ್ಲಾ ಕಡೆಗಳಲ್ಲಿಯೂ ಇರುವುದು. ಅವರ ಎಲ್ಲಾ ಸೃಷ್ಟಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು.
೨೨ಆತನ ರಾಜ್ಯದ ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು.