< ಕೀರ್ತನೆಗಳು 101 >

1 ದಾವೀದನ ಕೀರ್ತನೆ. ನಿಮ್ಮ ಪ್ರೀತಿ ನೀತಿಗಳನ್ನು ಕುರಿತು ಹಾಡುವೆನು; ಯೆಹೋವ ದೇವರೇ, ನಿಮ್ಮನ್ನು ಸ್ತುತಿಸುವೆನು.
ದಾವೀದನ ಕೀರ್ತನೆ. ಪ್ರೀತಿ, ನೀತಿಗಳನ್ನು ಕುರಿತು ಹಾಡುವೆನು; ಯೆಹೋವನೇ, ನಿನ್ನನ್ನು ಕೊಂಡಾಡುವೆನು.
2 ದೋಷರಹಿತ ಮಾರ್ಗದಲ್ಲಿ ನಡೆಯಲು ಜಾಗರೂಕನಾಗಿರುವೆನು; ನೀವು ಯಾವಾಗ ನನ್ನ ಬಳಿಗೆ ಬರುವಿರಿ? ನಾನು ನಿರ್ದೋಷ ಹೃದಯದಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ನನಗೆ ಯಾವಾಗ ದರ್ಶನಕೊಡುವಿ? ಮನೆಯೊಳಗೂ ಯಥಾರ್ಥ ಹೃದಯದಿಂದಲೇ ನಡೆದುಕೊಳ್ಳುವೆನು.
3 ನಾನು ಕೆಟ್ಟ ಕಾರ್ಯವನ್ನು ನನ್ನ ಕಣ್ಣುಗಳ ಮುಂದೆ ಒಪ್ಪಿಗೆಯಿಂದ ನೋಡುವುದಿಲ್ಲ. ಅವಿಶ್ವಾಸಿಗಳು ಮಾಡುವುದನ್ನು ದ್ವೇಷಿಸುವೆನು; ಅದರಲ್ಲಿ ನಾನು ಭಾಗವಹಿಸುವುದಿಲ್ಲ.
ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವುದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ.
4 ಮೂರ್ಖಜನರು ನನ್ನಿಂದ ದೂರವಿರುವರು; ದುಷ್ಟತನವನ್ನು ಅರಿಯದಿರುವೆನು.
ಮೂರ್ಖತನವು ನನ್ನನ್ನು ಬಿಟ್ಟು ಹೋಗಲಿ; ಕೆಟ್ಟತನವನ್ನು ಅರಿಯದಿರುವೆನು.
5 ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸುಮ್ಮನಿರಿಸುವೆನು; ಗರ್ವದ ಕಣ್ಣೂ, ಅಹಂಕಾರದ ಹೃದಯವೂ ಉಳ್ಳವನನ್ನು ಸಹಿಸಲಾರೆನು.
ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.
6 ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು; ನಿಷ್ಕಳಂಕವಾಗಿ ನಡೆಯುವವರೇ ನನ್ನ ಸೇವೆಯಲ್ಲಿರಬೇಕು.
ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು, ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು.
7 ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು; ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನಿಂತುಕೊಳ್ಳನು.
ಮೋಸಗಾರನು ನನ್ನ ಮನೆಯಲ್ಲಿ ಇರಲೇಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು.
8 ದುಷ್ಟತನ ಮಾಡುವವರೆಲ್ಲರನ್ನು ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು; ಯೆಹೋವ ದೇವರ ಪಟ್ಟಣದೊಳಗಿಂದ ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು.
ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.

< ಕೀರ್ತನೆಗಳು 101 >