< ಜ್ಞಾನೋಕ್ತಿಗಳು 9 >
1 ಜ್ಞಾನ ಎಂಬಾಕೆಯು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬಗಳನ್ನು ಕೆತ್ತಿಸಿದ್ದಾಳೆ.
2 ಆಕೆಯು ಮಾಂಸದ ಆಹಾರನ್ನು ತಯಾರಿಸಿ, ತನ್ನ ದ್ರಾಕ್ಷಾರಸವನ್ನು ಬೆರೆಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.
3 ಆಕೆಯು ತನ್ನ ದಾಸಿಯರನ್ನು ಕಳುಹಿಸುತ್ತಾಳೆ; ಆಕೆಯು ಪಟ್ಟಣದ ಅತಿ ಉನ್ನತ ಸ್ಥಳದಿಂದ ಕೂಗುತ್ತಾಳೆ,
4 “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
5 “ಬಾ, ನನ್ನ ಆಹಾರವನ್ನು ತಿಂದು, ನಾನು ಬೆರೆಸಿದ ದ್ರಾಕ್ಷಾರಸವನ್ನು ಕುಡಿ,” ಎಂದೂ
6 “ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ ಮತ್ತು ವಿವೇಕದ ಮಾರ್ಗದಲ್ಲಿ ಹೋಗು,” ಎಂದೂ ಕೂಗುತ್ತಾಳೆ.
7 ಪರಿಹಾಸ್ಯ ಮಾಡುವವನನ್ನು ಗದರಿಸುವವನು ತನ್ನನ್ನು ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
8 ಪರಿಹಾಸ್ಯ ಮಾಡುವವನನ್ನು ಗದರಿಸಬೇಡ ಅವನು ನಿನ್ನನ್ನು ಹಗೆ ಮಾಡುವನು; ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
9 ಜ್ಞಾನಿಗೆ ಶಿಕ್ಷಣ ನೀಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿಕೊಳ್ಳುವನು.
10 ಯೆಹೋವ ದೇವರ ಭಯವೇ ಜ್ಞಾನಕ್ಕೆ ಮೂಲವು. ಪರಿಶುದ್ಧರ ಪರಿಜ್ಞಾನವೇ ತಿಳುವಳಿಕೆಯಾಗಿದೆ.
11 ಏಕೆಂದರೆ ಜ್ಞಾನದ ಮೂಲಕ ನಿನ್ನ ಜೀವನದ ದಿನಗಳು ಹೆಚ್ಚುವುವು; ನಿನ್ನ ಜೀವನದ ವರ್ಷಗಳು ವೃದ್ಧಿಯಾಗುವುವು.
12 ನೀನು ಜ್ಞಾನಿಯಾದರೆ, ನಿನ್ನ ಜ್ಞಾನವು ನಿನಗೆ ಪ್ರತಿಫಲ ಕೊಡುವುದು; ನೀನು ನಿಂದಿಸುವವನಾದರೆ, ನೀನೇ ಅದರ ಫಲವನ್ನು ಅನುಭವಿಸುವಿ.
13 ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು; ಅವಳು ಅರಿವಿಲ್ಲದವಳು, ಏನೂ ತಿಳಿಯದವಳು.
14 ಅವಳು ತನ್ನ ಮನೆಯ ಬಾಗಿಲಿನಲ್ಲಿ ಕುಳಿತು, ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ನಿಂತು,
15 ತಮ್ಮ ಮಾರ್ಗವನ್ನು ಹಿಡಿದು ಹೋಗುವ ಪ್ರಯಾಣಿಕರನ್ನು ಕರೆಯುತ್ತಾಳೆ,
16 “ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
17 “ಕದ್ದ ನೀರು ಸಿಹಿಯಾಗಿದೆ; ರಹಸ್ಯದಲ್ಲಿ ತಿನ್ನುವ ಆಹಾರವು ರುಚಿಯಾಗಿದೆ,” ಎಂದು ಹೇಳುತ್ತಾಳೆ.
18 ಆದರೆ ಆ ಮನೆ ಸತ್ತವರ ಸ್ಥಾನವಾಗಿದೆ. ಅವಳ ಅತಿಥಿಗಳು ಪಾತಾಳದ ಅಗಾಧದಲ್ಲಿ ಬಿದ್ದಿದ್ದಾರೆಂದು ಅವನಿಗೆ ತಿಳಿಯದು. (Sheol )