< ಜ್ಞಾನೋಕ್ತಿಗಳು 23 >

1 ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ, ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು.
ನೀನು ಅಧಿಪತಿಯ ಸಂಗಡ ಊಟಕ್ಕೆ ಕುಳಿತುಕೊಂಡಿರುವಾಗ, ನಿನ್ನ ಮುಂದಿಟ್ಟಿರುವುದರ ಬಗ್ಗೆ ಎಚ್ಚರಿಕೆಯಾಗಿರು.
2 ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ.
ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಗಂಟಲಿಗೆ ಕತ್ತಿಹಾಕಿಕೋ.
3 ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ; ಏಕೆಂದರೆ ಅದು ಮೋಸದ ಆಹಾರವು.
ಅವನ ರುಚಿಪದಾರ್ಥಗಳನ್ನು ಬಯಸಬೇಡ, ಅದು ಮೋಸದ ಆಹಾರವೇ ಸರಿ.
4 ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ; ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
ದುಡ್ಡಿನಾಶೆಯಿಂದ ದುಡಿಯಬೇಡ, ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
5 ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ. ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು.
ನಿನ್ನ ದೃಷ್ಟಿಯು ಐಶ್ವರ್ಯದ ಮೇಲೆ ಎರಗುತ್ತದೋ? ಐಶ್ವರ್ಯವು ಅಷ್ಟರೊಳಗೆ ಮಾಯವಾಗುವುದು, ಆಕಾಶದ ಕಡೆಗೆ ಹಾರುವ ಹದ್ದಿನಂತೆ, ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.
6 ಜಿಪುಣನ ಆಹಾರವನ್ನು ತಿನ್ನಬೇಡ; ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.
ಲೋಭಿಯ ಅನ್ನವನ್ನು ಉಣ್ಣದಿರು, ಅವನ ರುಚಿಪದಾರ್ಥಗಳನ್ನು ಬಯಸಬೇಡ.
7 ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ ಯೋಚನೆಯುಳ್ಳವನಂತೆ ಇದ್ದಾನೆ; ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.
ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ, ಉಣ್ಣು, ಕುಡಿ ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ.
8 ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ; ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ.
ನೀನು ತಿಂದ ತುತ್ತನ್ನು ಕಕ್ಕಿಬಿಡುವಿ, ನಿನ್ನ ಸವಿಮಾತುಗಳು ವ್ಯರ್ಥ.
9 ಬುದ್ಧಿಹೀನರ ಸಂಗಡ ಮಾತಾಡಬೇಡ; ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು.
ಮೂಢನ ಸಂಗಡ ಮಾತನಾಡಬೇಡ, ನಿನ್ನ ಮಾತುಗಳ ವಿವೇಕವನ್ನು ತಿರಸ್ಕರಿಸುವನು.
10 ಪೂರ್ವಕಾಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ.
೧೦ಪೂರ್ವಕಾಲದ ಮೇರೆಯನ್ನು ತೆಗೆದುಹಾಕಬೇಡ, ಅನಾಥರ ಹೊಲಗಳಲ್ಲಿ ನುಗ್ಗಬೇಡ.
11 ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ; ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು.
೧೧ಅವರ ರಕ್ಷಕನು ಬಲಶಾಲಿಯಾಗಿದ್ದಾನೆ, ಅವರಿಗಾಗಿ ನಿನ್ನ ಸಂಗಡ ವ್ಯಾಜ್ಯವಾಡುವನು.
12 ಶಿಸ್ತಿಗೆ ನಿನ್ನ ಹೃದಯವನ್ನೂ ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು.
೧೨ಉಪದೇಶವನ್ನು ಮನಸ್ಸಿಗೆ ತೆಗೆದುಕೋ, ತಿಳಿವಳಿಕೆಯ ಮಾತುಗಳಿಗೆ ಕಿವಿಗೊಡು.
13 ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ; ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ.
೧೩ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ, ಅವನು ಬೆತ್ತದ ಏಟಿಗೆ ಸಾಯನು.
14 ಅವರನ್ನು ಬೆತ್ತದಿಂದ ಹೊಡೆದು, ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ. (Sheol h7585)
೧೪ಬೆತ್ತದಿಂದ ಹೊಡೆ, ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು. (Sheol h7585)
15 ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ, ನನ್ನ ಹೃದಯವು ಹರ್ಷಿಸುವುದು.
೧೫ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು.
16 ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ, ನನ್ನ ಅಂತರಾತ್ಮವು ಸಂತೋಷಿಸುವುದು.
೧೬ಹೌದು, ನಿನ್ನ ತುಟಿಗಳು ನೀತಿಯ ನುಡಿಗಳನ್ನಾಡಿದರೆ ನನ್ನ ಅಂತರಾತ್ಮವು ಹಿಗ್ಗುವುದು.
17 ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ; ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು.
೧೭ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಯೆಹೋವನಲ್ಲಿ ನಿರಂತರವಾಗಿ ಭಯಭಕ್ತಿಯುಳ್ಳವನಾಗಿರು.
18 ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
೧೮ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.
19 ಮಗನೇ, ಕೇಳಿ ಜ್ಞಾನವಂತನಾಗು; ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು.
೧೯ಕಂದಾ, ಕೇಳು, ಜ್ಞಾನವಂತನಾಗಿರು, ನಿನ್ನ ಮನಸ್ಸನ್ನು ಜ್ಞಾನದ ಮಾರ್ಗದಲ್ಲಿ ಮುಂದೆ ನಡೆಯಿಸು.
20 ಅತಿ ಮದ್ಯಪಾನ ಮಾಡುವವರಲ್ಲಿ ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ.
೨೦ಕುಡುಕರಲ್ಲಿಯೂ, ಅತಿಮಾಂಸಭಕ್ಷಕರಲ್ಲಿಯೂ ಸೇರದಿರು.
21 ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು; ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು.
೨೧ಕುಡುಕರು, ಹೊಟ್ಟೆಬಾಕರು ದುರ್ಗತಿಗೆ ಬರುವರು, ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವುದು.
22 ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು, ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ.
೨೨ಹೆತ್ತ ತಂದೆಯ ಮಾತಿಗೆ ಕಿವಿಗೊಡು, ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.
23 ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; ಆದರೆ ಅವುಗಳನ್ನು ಮಾರಬೇಡ.
೨೩ಸತ್ಯವನ್ನು ಎಂದರೆ ಜ್ಞಾನ, ಸುಶಿಕ್ಷೆ, ವಿವೇಕಗಳನ್ನು ಕೊಂಡುಕೋ, ಮಾರಿ ಬಿಡಬೇಡ.
24 ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು; ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು.
೨೪ಧರ್ಮಿಯ ತಂದೆಯು ಅತಿ ಸಂತೋಷಪಡುವನು, ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು.
25 ನಿನ್ನ ತಂದೆತಾಯಿಗಳು ಸಂತೋಷಿಸುವರು; ನಿನ್ನ ಹೆತ್ತ ತಾಯಿ ಆನಂದಿಸುವಳು.
೨೫ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.
26 ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.
೨೬ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.
27 ವೇಶ್ಯೆಯು ಆಳವಾದ ಕುಣಿ; ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ.
೨೭ಸೂಳೆಯು ಆಳವಾದ ಹಳ್ಳ, ಜಾರಸ್ತ್ರೀಯು ಇಕ್ಕಟ್ಟಾದ ಗುಂಡಿ.
28 ಕಳ್ಳನಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
೨೮ಹೌದು, ಕಳ್ಳನಂತೆ ಹೊಂಚುಹಾಕುತ್ತಾಳೆ, ಜನರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
29 ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು?
೨೯ಅಯ್ಯಯ್ಯೋ ಅನ್ನುವವರು ಯಾರು? ಅಕಟಾ ಎಂದು ಕೂಗಿಕೊಳ್ಳುವವರು ಯಾರು? ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಕೆಂಪೇರಿದ ಕಣ್ಣುಳ್ಳವರು ಯಾರು?
30 ಮದ್ಯಪಾನದಲ್ಲಿ ಆಸಕ್ತರಾಗಿ, ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ!
೩೦ಅವರು ಮಿಶ್ರಮದ್ಯಪಾನಾಸಕ್ತರಾಗಿ, ದ್ರಾಕ್ಷಾರಸವನ್ನು ಕುಡಿಯುತ್ತಾ, ಕಾಲಹರಣಮಾಡುವವರೇ.
31 ದ್ರಾಕ್ಷಾರಸವು ಕೆಂಪಾಗಿದ್ದು, ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ, ಅದನ್ನು ನೋಡಬೇಡ.
೩೧ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ. ಅದು ಗಂಟಲಿನೊಳಗೆ ಮೆಲ್ಲಗೆ ಇಳಿದುಹೋಗಿ
32 ಕೊನೆಗೆ ಅದು ಹಾವಿನಂತೆ ಕಚ್ಚುವುದು ಮತ್ತು ಸರ್ಪದಂತೆ ವಿಷವುಕ್ಕಿಸುವುದು.
೩೨ಆಮೇಲೆ ಹಾವಿನಂತೆ ಕಚ್ಚುತ್ತದೆ, ಹೌದು, ನಾಗರ ಹಾವಿನ ಹಾಗೆ ಕಡಿಯುತ್ತದೆ.
33 ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ. ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ.
೩೩ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವುದು, ಮನಸ್ಸು ವಿಪರೀತಗಳನ್ನು ಹೊರಪಡಿಸುವುದು.
34 ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ.
೩೪ನೀನು ಸಮುದ್ರದ ನಡುವೆಯಾಗಲಿ, ಹಡಗಿನ ಕಂಬದ ತುದಿಯಲ್ಲಿಯಾಗಲಿ ಮಲಗಿರುವವನಂತೆ ಇರುವಿ.
35 “ಜನರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ನಾನು ಎಚ್ಚರವಾಗುವುದು ಯಾವಾಗ? ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ.
೩೫ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ, ಬಡಿದರೂ ತಿಳಿಯಲಿಲ್ಲ, ಯಾವಾಗ ಎಚ್ಚೆತ್ತೇನು? ಪುನಃ ಅದನ್ನೇ ಹುಡುಕೇನು ಎಂದುಕೊಳ್ಳುವಿ.

< ಜ್ಞಾನೋಕ್ತಿಗಳು 23 >