< ಜ್ಞಾನೋಕ್ತಿಗಳು 12 >

1 ಶಿಸ್ತನ್ನು ಪ್ರೀತಿಸುವವನು ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು.
ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ.
2 ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ.
ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು.
3 ಒಬ್ಬ ಮನುಷ್ಯನು ದುಷ್ಟತನದಿಂದ ಸ್ಥಿರವಾಗುವುದಿಲ್ಲ. ಆದರೆ ನೀತಿವಂತರನ್ನು ಕಿತ್ತುಹಾಕಲಾಗುವುದಿಲ್ಲ.
ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ.
4 ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು.
ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ.
5 ನೀತಿವಂತರ ಯೋಜನೆಗಳು ನ್ಯಾಯವಾಗಿವೆ; ದುಷ್ಟರ ಸಲಹೆ ಮೋಸಭರಿತ.
ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ.
6 ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು.
ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ.
7 ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.
ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು.
8 ತನ್ನ ಜ್ಞಾನಕ್ಕನುಸಾರವಾಗಿ ಮನುಷ್ಯನು ಗೌರವ ಹೊಂದುವನು; ವಕ್ರಹೃದಯವುಳ್ಳವನು ಕಡೆಗಣಿಸಲಾಗುವನು.
ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು.
9 ಹೊಟ್ಟೆಗೆ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸಾಮಾನ್ಯ ಸೇವಕನೇ ಮೇಲು.
ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು.
10 ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ.
೧೦ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ.
11 ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು.
೧೧ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.
12 ದುಷ್ಟರು ಕೆಟ್ಟವರ ಭದ್ರಕೋಟೆಯನ್ನು ಅಪೇಕ್ಷಿಸುತ್ತಾರೆ; ಆದರೆ ನೀತಿವಂತರ ಬೇರು ಫಲವನ್ನು ಕೊಡುತ್ತದೆ.
೧೨ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, ಆದರೆ ಶಿಷ್ಟರ ಬುಡ ಫಲದಾಯಕ.
13 ದುಷ್ಟನು ತನ್ನ ತಪ್ಪು ಮಾತುಗಳಿಂದ ಬಲೆಗೆ ಬೀಳುವನು, ಆದರೆ ನೀತಿವಂತರು ಇಕ್ಕಟ್ಟಿನೊಳಗಿಂದ ತಪ್ಪಿಸಿಕೊಳ್ಳುವರು.
೧೩ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು.
14 ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದರಿಂದ ತೃಪ್ತನಾಗುವನು, ಮನುಷ್ಯನ ಕೈಕೆಲಸಗಳು ಅವನಿಗೆ ಪ್ರತಿಫಲವನ್ನು ಕೊಡುವುವು.
೧೪ಬಾಯಿಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನು ಅನುಭವಿಸುವನು, ಅವನ ಕೈಕೆಲಸದ ಫಲವು ಅವನಿಗೆ ಪ್ರಾಪ್ತವಾಗುವುದು.
15 ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ, ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು.
೧೫ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು.
16 ಮೂರ್ಖನ ಕೋಪವು ತಟ್ಟನೆ ರಟ್ಟಾಗುವುದು, ಆದರೆ ಜಾಣನು ಅವಮಾನವನ್ನು ನಿರ್ಲಕ್ಷಿಸುತ್ತಾನೆ.
೧೬ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು, ಜಾಣನು ಅವಮಾನವನ್ನು ಮರೆಮಾಡುವನು.
17 ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.
೧೭ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು.
18 ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು.
೧೮ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು.
19 ಸತ್ಯದ ತುಟಿಯು ಸದಾ ಸ್ಥಿರಗೊಳ್ಳುವುದು, ಸುಳ್ಳಾಡುವ ನಾಲಿಗೆಯು ಕ್ಷಣಿಕ.
೧೯ಸತ್ಯದ ತುಟಿ ಶಾಶ್ವತ, ಸುಳ್ಳಿನ ನಾಲಿಗೆ ಕ್ಷಣಿಕ.
20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
೨೦ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ, ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ.
21 ನೀತಿವಂತನಿಗೆ ಯಾವ ಕೇಡೂ ಸಂಭವಿಸದು, ಆದರೆ ದುಷ್ಟರು ಕೇಡಿನಿಂದ ತುಂಬಿಕೊಳ್ಳುವರು.
೨೧ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು, ದುರ್ಜನರಿಗೆ ಕೇಡು ತುಂಬಿ ತುಳುಕುವುದು.
22 ಸುಳ್ಳಾಡುವ ತುಟಿಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಆದರೆ ಸತ್ಯವಂತರಲ್ಲಿ ಅವರು ಆನಂದಿಸುತ್ತಾರೆ.
೨೨ಸುಳ್ಳುತುಟಿ ಯೆಹೋವನಿಗೆ ಅಸಹ್ಯವಾಗಿವೆ. ಸತ್ಯವಂತರು ಆತನಿಗೆ ಆನಂದ ತರುತ್ತಾರೆ.
23 ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುತ್ತಾನೆ; ಆದರೆ ಮೂರ್ಖನ ಹೃದಯವು ಮೂರ್ಖತನವನ್ನು ಹೇಳುತ್ತದೆ.
೨೩ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು.
24 ಚುರುಕು ಕೈಯುಳ್ಳವನು ಆಳುವನು; ಸೋಮಾರಿಗಳು ಗುಲಾಮರಾಗುವರು.
೨೪ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು.
25 ಆತಂಕವು ಹೃದಯವನ್ನು ಕುಗ್ಗಿಸುವುದು, ಆದರೆ ಕನಿಕರದ ಮಾತು ಹುರಿದುಂಬಿಸುವುದು.
೨೫ಕಳವಳವು ಮನಸ್ಸನ್ನು ಕುಗ್ಗಿಸುವುದು, ಕನಿಕರದ ಮಾತು ಅದನ್ನು ಹಿಗ್ಗಿಸುವುದು.
26 ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ.
೨೬ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು.
27 ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವುದಿಲ್ಲ, ಆದರೆ ಶ್ರಮಪಡುವವರು ಅದನ್ನು ತೃಪ್ತಿಯಿಂದ ತಿನ್ನುತ್ತಾರೆ.
೨೭ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು.
28 ನೀತಿಯ ಮಾರ್ಗದಲ್ಲಿ ಜೀವವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.
೨೮ಧರ್ಮಮಾರ್ಗದಿಂದ ಜೀವಲಾಭವು, ಆ ಮಾರ್ಗದಲ್ಲಿ ಮರಣವಿಲ್ಲ.

< ಜ್ಞಾನೋಕ್ತಿಗಳು 12 >