< ಅರಣ್ಯಕಾಂಡ 32 >

1 ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.
ರೂಬೇನ್ ಕುಲದವರಿಗೂ, ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶವನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.
2 ಆದ್ದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆ ಮತ್ತು ಯಾಜಕನಾದ ಎಲಿಯಾಜರನ ಬಳಿಗೂ ಸಭೆಯ ಪ್ರಧಾನರಿಗೂ ಬಳಿಗೂ ಬಂದು ಮಾತನಾಡಿ:
ಗಾದ್ ಮತ್ತು ರೂಬೇನ್ ಸಂತತಿಯವರು ಮೋಶೆ ಮತ್ತು ಮಹಾಯಾಜಕನಾದ ಎಲ್ಲಾಜಾರನು ಬಳಿಗೂ, ಸಮೂಹದ ಪ್ರಧಾನರ ಬಳಿಗೂ ಬಂದು ಹೇಳಿದ್ದೇನೆಂದರೆ,
3 “ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು,
“ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್,
4 ಯೆಹೋವ ದೇವರು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪ್ರದೇಶವು ಪಶುಗಳ ಮೇವಿಗೆ ಸೂಕ್ತವಾಗಿದೆ. ನಿಮ್ಮ ಸೇವಕರಿಗೂ ಪಶುಗಳು ಉಂಟು.
ಇವು ಯೆಹೋವನು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪಟ್ಟಣಗಳು. ದನಕುರಿಗಳ ಮೇವಿಗೆ ತಕ್ಕ ಪ್ರದೇಶವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ದನ ಕುರಿಗಳುಂಟು.
5 ಆದ್ದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯೆಯು ಸಿಕ್ಕಿದ್ದಾದರೆ, ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು. ನಮ್ಮನ್ನು ಯೊರ್ದನ್ ನದಿಯ ಆಚೆಗೆ ತೆಗೆದುಕೊಂಡು ಹೋಗಬೇಡಿರಿ,” ಎಂದರು.
ಆದಕಾರಣ ನೀವು, ದಾಸರಾದ ನಮ್ಮ ಮೇಲೆ ದಯೆ ಇಟ್ಟು ನಮ್ಮನ್ನು ಯೊರ್ದನ್ ನದಿಯ ಆಚೆಗೆ ಬರಮಾಡಿದ ಈ ಪ್ರದೇಶವನ್ನೇ ಸ್ವತ್ತಾಗಿ ಕೊಡಬೇಕು” ಎಂದು ಕೇಳಿಕೊಂಡರು.
6 ಆಗ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲಿ ಕುಳಿತಿರಬೇಕೋ?
ಮೋಶೆಯು ಗಾದ್ ಮತ್ತು ರೂಬೇನ್ ಸಂತಾನದವರಿಗೆ, “ನಿಮ್ಮ ಸಹೋದರರು ಯದ್ಧಕ್ಕೆ ಹೋಗುವಾಗ ನೀವು ಅಲ್ಲೇ ಕುಳಿತುಕೊಂಡಿರಬೇಕೇನು?
7 ಯೆಹೋವ ದೇವರು ಅವರಿಗೆ ಕೊಟ್ಟ ದೇಶಕ್ಕೆ ಹೋಗುವುದಕ್ಕೆ ನೀವು ಇಸ್ರಾಯೇಲರ ಹೃದಯಗಳನ್ನು ಅಧೈರ್ಯಪಡಿಸುವುದು ಏಕೆ?
ಯೆಹೋವನು ಇಸ್ರಾಯೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಏಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ?
8 ನಾನು ದೇಶವನ್ನು ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ಅವರನ್ನು ಕಳುಹಿಸಿದಾಗ, ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ತಂದೆಯರನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರು.
9 ಹೇಗೆಂದರೆ ಅವರು ಎಷ್ಕೋಲೆಂಬ ಹಳ್ಳದವರೆಗೆ ಬಂದು, ದೇಶವನ್ನು ನೋಡಿದಾಗ, ಇಸ್ರಾಯೇಲರ ಹೃದಯವನ್ನು ಯೆಹೋವ ದೇವರು ಅವರಿಗೆ ಕೊಟ್ಟ ದೇಶದ ಒಳಗೆ ಹೋಗದ ಹಾಗೆ ಅಧೈರ್ಯಪಡಿಸಿದನು.
ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರಾಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರಾಯೇಲರು ತಮಗೆ ಯೆಹೋವನು ವಾಗ್ದಾನಮಾಡಿದ ದೇಶಕ್ಕೆ ಹೋಗಲು ಆಗಲಿಲ್ಲ.
10 ಯೆಹೋವ ದೇವರು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವರಾಗಿ ಪ್ರಮಾಣಮಾಡಿ,
೧೦ಆ ಕಾಲದಲ್ಲಿ ಯೆಹೋವನು ಕೋಪಗೊಂಡವನಾಗಿ ಪ್ರಮಾಣಮಾಡಿ,
11 ಅವರು ನನ್ನನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸದೆ ಇರುವುದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶವನ್ನು ಈಜಿಪ್ಟಿನೊಳಗಿಂದ ಹೊರಬಂದ ಇಪ್ಪತ್ತು ವರ್ಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ
೧೧‘ಐಗುಪ್ತ ದೇಶದೊಳಗಿಂದ ಬಂದ ಈ ಜನರೊಳಗೆ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದುದರಿಂದ ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಪೂರ್ವಕವಾಗಿ ಕೊಟ್ಟ ದೇಶವನ್ನು, ಅವರೊಳಗೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರಲ್ಲಿ
12 ಯೆಹೋವ ದೇವರನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸಿದ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಬೇರಾರೂ ನೋಡುವುದಿಲ್ಲ.
೧೨ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನೂ ಮತ್ತು ನೂನನ ಮಗನಾದ ಯೆಹೋಶುವನೂ ಇವರಿಬ್ಬರೇ ಹೊರತು ಯಾರೂ ನೋಡುವುದೇ ಇಲ್ಲ’” ಎಂದು ಖಂಡಿತವಾಗಿ ಹೇಳಿದನು.
13 ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು.
೧೩ಯೆಹೋವನು ಇಸ್ರಾಯೇಲರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ ನಲ್ವತ್ತು ವರ್ಷ, ಇಸ್ರಾಯೇಲರನ್ನು ಮರುಭೂಮಿಯಲ್ಲೇ ತಿರುಗಾಡುವಂತೆ ಮಾಡಿದನು.
14 “ನಿಮ್ಮ ಪಿತೃಗಳ ಬದಲಾಗಿ ಬಂದಿರುವ ನೀವು, ಪಾಪಿಗಳಾಗಿ ಇಸ್ರಾಯೇಲ್ ಕುರಿತು ಯೆಹೋವ ದೇವರ ಕೋಪವನ್ನೂ ಮತ್ತಷ್ಟು ಹೆಚ್ಚಿಸುತ್ತಿದ್ದೀರಲ್ಲಾ.
೧೪“ಈ ದುಷ್ಟ ಸಂತತಿಯವರಾದ ನೀವು ನಿಮ್ಮ ತಂದೆಗಳಿಗೆ ಬದಲಾಗಿ ಬಂದು ಇಸ್ರಾಯೇಲರ ಮೇಲಿದ್ದ ಯೆಹೋವನ ರೋಷಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತೀರಿ.
15 ಏಕೆಂದರೆ ನೀವು ದೇವರ ಕಡೆಯಿಂದ ತೊಲಗಿದರೆ, ದೇವರು ಅವರನ್ನು ಮರುಭೂಮಿಯಲ್ಲಿಯೇ ಇರಿಸಿಬಿಡುವನು. ನೀವು ಈ ಸಮಸ್ತ ಜನರ ನಾಶಕ್ಕೆ ನೀವೇ ಕಾರಣರಾಗುವಿರಿ,” ಎಂದು ಹೇಳಿದನು.
೧೫ನೀವು ಆತನನ್ನು ಹಿಂಬಾಲಿಸದೆ ಇರುವ ಕಾರಣ ಆತನು ಆ ಜನರನ್ನು ಮರುಭೂಮಿಯಲ್ಲಿ ಇರಿಸಿದರೆ, ಈ ಸಮಸ್ತ ಜನಾಂಗವನ್ನು ನೀವೇ ನಾಶ ಮಾಡುವಿರಿ” ಎಂದು ಹೇಳಿದನು.
16 ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ, ನಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು.
೧೬ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ, ನಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನು ಕಟ್ಟಿಕೊಳ್ಳುವೆವು.
17 ಆದರೆ ನಾವು ಇಸ್ರಾಯೇಲರ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವವರೆಗೆ ಯುದ್ಧಕ್ಕೆ ಸಿದ್ಧರಾಗಿ ಓಡುವೆವು. ನಮ್ಮ ಸ್ತ್ರೀಯರು ಮತ್ತು ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು.
೧೭ನಾವಾದರೋ ಇಸ್ರಾಯೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೂ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆ ನಡೆಯುವೆವು. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಈ ದೇಶದ ನಿವಾಸಿಗಳ ಭಯದ ದೆಸೆಯಿಂದ ಕೋಟೆಕೋತ್ತಲುಗಳುಳ್ಳ ಊರುಗಳಲ್ಲಿ ವಾಸಿಸಲಿ.
18 ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಸೊತ್ತನ್ನು ಹೊಂದಿಕೊಳ್ಳುವವರೆಗೆ, ನಾವು ನಮ್ಮ ಮನೆಗಳಿಗೆ ತಿರುಗುವುದಿಲ್ಲ.
೧೮ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವತ್ತುಗಳನ್ನು ಸ್ವತಂತ್ರಿಸಿಕೊಳ್ಳುವ ವರೆಗೂ ನಾವು ನಮ್ಮ ಮನೆಗಳಿಗೆ ತಿರುಗಿ ಹೋಗುವುದಿಲ್ಲ.
19 ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸೊತ್ತನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಸೊತ್ತು ನಮಗೆ ಯೊರ್ದನ್ ನದಿಯ ಈಚೆ ಪೂರ್ವದಿಕ್ಕಿನಲ್ಲಿ ಬಂತು,” ಎಂದನು.
೧೯ನಮಗೆ ಯೊರ್ದನ್ ನದಿಯ ಆಚೆ ಪೂರ್ವ ದಿಕ್ಕಿನಲ್ಲಿ ಸ್ವತ್ತನ್ನು ಅಪೇಕ್ಷಿಸುವುದಿಲ್ಲ” ಎಂದರು.
20 ಮೋಶೆಯು ಅವರಿಗೆ, “ನೀವು ಈ ಕಾರ್ಯವನ್ನು ಮಾಡಿದರೆ, ನೀವು ಯೆಹೋವ ದೇವರ ಮುಂದೆ ಯುದ್ಧಕ್ಕೆ ಸಿದ್ಧವಾಗಿದ್ದರೆ,
೨೦ಅದಕ್ಕೆ ಮೋಶೆ ಅವರಿಗೆ, “ನೀವು ಯೆಹೋವನ ಮಾತಿನಂತೆ ನಡೆದರೆ ನಿಮ್ಮಲ್ಲಿರುವ ಭಟರೆಲ್ಲರೂ ಯುದ್ಧಸನ್ನದ್ಧರಾಗಿ,
21 ನಿಮ್ಮಲ್ಲಿ ಸಿದ್ಧವಾದವರೆಲ್ಲರೂ ಯೆಹೋವ ದೇವರು ತಮ್ಮ ಶತ್ರುಗಳನ್ನು ತಮ್ಮ ಸನ್ನಿಧಿಯಿಂದ ಹೊರಡಿಸುವವರೆಗೆ, ಯೆಹೋವ ದೇವರ ಮುಂದೆ ಯೊರ್ದನ್ ನದಿಯನ್ನು ದಾಟಿದರೆ,
೨೧ಯೊರ್ದನ್ ನದಿಯ ಆಚೆಗೆ ಹೋಗಿ ಯೆಹೋವನು ತನ್ನ ವೈರಿಗಳನ್ನು ಹೊರಡಿಸಿಬಿಟ್ಟು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವ ತನಕ ಆತನ ಮುಂದೆ
22 ದೇಶವು ಯೆಹೋವ ದೇವರ ಮುಂದೆ ವಶವಾದ ತರುವಾಯ, ನೀವು ಯೆಹೋವ ದೇವರ ಮತ್ತು ಇಸ್ರಾಯೇಲರ ದೃಷಿಯಲ್ಲಿ ನಿರಪರಾಧಿಗಳಾಗಿದ್ದು, ಈ ದೇಶವು ಯೆಹೋವ ದೇವರ ಮುಂದೆ ನಿಮ್ಮ ಸೊತ್ತಾಗುವುದು.
೨೨ಯುದ್ಧಮಾಡಿ ತರುವಾಯ ನೀವು ತಿರುಗಿ ಬಂದು ಆತನ ದೃಷ್ಟಿಯಲ್ಲೂ, ಇಸ್ರಾಯೇಲರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ ಮತ್ತು ಈ ದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವತ್ತಾಗಿರುವುದು.
23 “ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಯೆಹೋವ ದೇವರ ವಿರೋಧವಾಗಿ ಪಾಪಮಾಡಿದವರಾಗುವಿರಿ, ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವುದೆಂದು ತಿಳಿದುಕೊಳ್ಳಿರಿ.
೨೩“ಆದರೆ ನೀವು ಹಾಗೆ ಮಾಡದೆ ಹೋದರೆ, ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರಾಗುವಿರಿ ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ತಿಳಿದುಕೊಳ್ಳಿರಿ.
24 ನಿಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿ, ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ,” ಎಂದು ಹೇಳಿದನು.
೨೪ನೀವು ನಿಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನೂ, ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ ಕಟ್ಟಿಕೊಂಡ ತರುವಾಯ ನಿಮ್ಮ ಮಾತಿನ ಪ್ರಕಾರ ಮಾಡಿರಿ” ಎಂದನು.
25 ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ, “ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು.
೨೫ಅದಕ್ಕೆ ಗಾದ್ಯರೂ ಮತ್ತು ರೂಬೇನ್ಯರೂ ಮೋಶೆಗೆ, “ಸ್ವಾಮಿಯವರ ಅಪ್ಪಣೆಯ ಪ್ರಕಾರ ದಾಸರಾದ ನಾವು ಮಾಡುತ್ತೇವೆ ಎಂದರು.
26 ನಮ್ಮ ಮಕ್ಕಳೂ, ನಮ್ಮ ಹೆಂಡತಿಯರೂ, ನಮ್ಮ ಸಂಪತ್ತೂ ನಮ್ಮ ಪಶುಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ.
೨೬ನಮ್ಮ ಮಕ್ಕಳು, ಹೆಂಡತಿಯರೂ, ದನಕುರಿಗಳು ನಮ್ಮ ಸಂಪತ್ತು ಇಲ್ಲೇ ಗಿಲ್ಯಾದ್ ದೇಶದ ಊರುಗಳಲ್ಲಿ ಇರಲಿ.
27 ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರೂ ನಮ್ಮ ಒಡೆಯನು ಹೇಳಿದ ಪ್ರಕಾರ ಯೆಹೋವ ದೇವರ ಮುಂದೆ ಯುದ್ಧಕ್ಕೆ ದಾಟಿಹೋಗುವರು,” ಎಂದರು.
೨೭ನಿನ್ನ ದಾಸರಾದ ನಮ್ಮಲ್ಲಿ ಯುದ್ಧಸನ್ನದ್ಧರೆಲ್ಲರೂ ಸ್ವಾಮಿಯವರ ಅಪ್ಪಣೆಯ ಪ್ರಕಾರ ಯೆಹೋವನ ಮುಂದುಗಡೆಯಲ್ಲಿ ಹೊರಟು ನದಿಯನ್ನು ದಾಟಿ ಯುದ್ಧಮಾಡುವೆವು” ಎಂದು ಉತ್ತರ ಕೊಟ್ಟರು.
28 ಆಗ ಮೋಶೆಯು ಅವರ ವಿಷಯವಾಗಿ ಯಾಜಕನಾದ ಎಲಿಯಾಜರನಿಗೂ, ನೂನನ ಮಗ ಯೆಹೋಶುವನಿಗೂ, ಇಸ್ರಾಯೇಲರ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದರು.
೨೮ಆದಕಾರಣ ಮೋಶೆ ಅವರ ವಿಷಯವಾಗಿ ಮಹಾಯಾಜಕ ಎಲ್ಲಾಜಾರನಿಗೂ, ನೂನನ ಮಗನಾದ ಯೆಹೋಶುವನಿಗೂ ಇಸ್ರಾಯೇಲರ ಮತ್ತು ಗೋತ್ರಗಳ ಕುಲಾಧಿಪತಿಗಳಿಗೂ ಆಜ್ಞೆಮಾಡಿದನು.
29 ಮೋಶೆಯು ಅವರಿಗೆ, “ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಎಲ್ಲರೂ ಯುದ್ಧಕ್ಕೆ ಸಿದ್ಧವಾಗಿದ್ದು, ನಿಮ್ಮ ಸಂಗಡ ಯೊರ್ದನ್ ನದಿಯನ್ನು ಯೆಹೋವ ದೇವರ ಮುಂದೆ ದಾಟಿದರೆ, ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸೊತ್ತಾಗಿ ಕೊಡಬೇಕು.
೨೯ಮೋಶೆಯು ಅವರಿಗೆ, “ಗಾದ್ಯರಲ್ಲಿಯೂ, ರೂಬೇನ್ಯರಲ್ಲಿಯೂ ಯುದ್ಧಸನ್ನದ್ಧರಾದವರೆಲ್ಲರೂ ನಿಮ್ಮೊಡನೆ ಯೊರ್ದನ್ ನದಿಯನ್ನು ದಾಟಿ ಯೆಹೋವನ ಮುಂದೆ ಯುದ್ಧಮಾಡಿದರೆ ಕಾನಾನ್ ದೇಶವನ್ನು ನೀವು ಸ್ವಾಧೀನಮಾಡಿಕೊಂಡಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸ್ವಾಸ್ತ್ಯವಾಗುವುದಕ್ಕೆ ಕೊಡಬೇಕು.
30 ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟಿ ಬಾರದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿಯೇ ಸೊತ್ತನ್ನು ಹೊಂದಿಕೊಳ್ಳಬೇಕು,” ಎಂದನು.
೩೦ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ದೇಶದಲ್ಲಿಯೇ ಅವರಿಗೆ ಸ್ವಾಸ್ತ್ಯವಾಗಬೇಕು” ಎಂದು ಹೇಳಿದನು.
31 ಆಗ ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಉತ್ತರವಾಗಿ, “ಯೆಹೋವ ದೇವರು ನಿನ್ನ ಸೇವಕರಿಗೆ ಹೇಳಿದ್ದಂತೆಯೇ ನಾವು ಮಾಡುವೆವು.
೩೧ಅದಕ್ಕೆ ಗಾದ್ಯರೂ ರೂಬೇನ್ಯರೂ ಉತ್ತರವಾಗಿ, “ಯೆಹೋವನು ನಿನ್ನ ದಾಸರಾದ ನಮಗೆ ಆಜ್ಞಾಪಿಸಿದಂತೆಯೇ ಮಾಡುವೆವು.
32 ನಾವು ಯುದ್ಧಕ್ಕೆ ಸಿದ್ಧವಾಗಿ ಯೆಹೋವ ದೇವರ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು. ಆದರೆ ಯೊರ್ದನ್ ನದಿಯ ಈಚೆಯಲ್ಲಿರುವ ನಮ್ಮ ಸೊತ್ತಿನ ಭಾಗವೇ ನಮಗಿರಲಿ,” ಎಂದು ಹೇಳಿದರು.
೩೨ನಾವು ಯೆಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು, ಆಗ ಯೊರ್ದನ್ ನದಿಯ ಆಚೆಯೇ ನಮಗೆ ಸ್ವತ್ತು ದೊರಕಬೇಕು” ಎಂದರು.
33 ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಅರಸನಾದ ಓಗನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅದರ ಭೂಮಿಯನ್ನೂ, ಅದರ ಮೇರೆಗಳಲ್ಲಿ ಸುತ್ತಮುತ್ತಲ ಪಟ್ಟಣಗಳನ್ನೂ ಕೊಟ್ಟನು.
೩೩ಹೀಗೆ ಮೋಶೆಯು ಗಾದ್ಯರಿಗೂ, ರೂಬೇನ್ಯರಿಗೂ, ಯೋಸೇಫನ ಮಗನಾದ ಮನಸ್ಸೆಯ ಕುಲದವರಲ್ಲಿ ಅರ್ಧಜನರಿಗೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅವುಗಳ ಎಲ್ಲಾ ಊರುಗಳನ್ನೂ ಮತ್ತು ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.
34 ಗಾದನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್,
೩೪ಗಾದ್ಯನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು.
35 ಅಟ್ರೋತ್ಷೋಫಾನ್, ಯಜ್ಜೇರ್, ಯೊಗ್ಬೆಹಾ,
೩೫ಆಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ,
36 ಬೇತ್ ನಿಮ್ರಾ ಮತ್ತು ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ, ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದರು.
೩೬ಬೇತ್‌ನಿಮ್ರಾ ಮತ್ತು ಬೇತ್ ಹಾರಾನಿನ ಸುತ್ತ ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು. ತಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನು ಕಟ್ಟಿಕೊಂಡರು.
37 ರೂಬೇನನ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್,
೩೭ರೂಬೇನ್ಯರ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು.
38 ನೆಬೋ, ಬಾಳ್ ಮೆಯೋನ್ ಎಂದು ಬೇರೆ ಈ ಹೆಸರು ಹೊಂದಿದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ, ತಾವು ಕಟ್ಟಿದ ಪಟ್ಟಣಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
೩೮ಸಿಬ್ಮಾ ಎಂಬ ಊರುಗಳನ್ನೂ, ಬೇರೆ ಹೆಸರಿನಿಂದ ಉಚ್ಚರಿಸತಕ್ಕ ನೆಬೋ, ಬಾಳ್ಮೆಯೋನ್ ಎಂಬವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
39 ಮನಸ್ಸೆಯ ಮಗ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ, ಅದನ್ನು ತೆಗೆದುಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು.
೩೯ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದಿಗೆ ಹೋಗಿ ಅದನ್ನು ಸ್ವಾಧೀನಮಾಡಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
40 ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗ ಮಾಕೀರನಿಗೆ ಕೊಟ್ಟಿದ್ದರಿಂದ, ಅವನು ಅದರಲ್ಲಿ ವಾಸಿಸಿದನು.
೪೦ಮೋಶೆಯು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಗಿಲ್ಯಾದ್ ಪ್ರದೇಶವನ್ನು ಕೊಡಲಾಗಿ ಅವರು ಅಲ್ಲೇ ವಾಸಮಾಡಿಕೊಂಡರು.
41 ಆದರೆ ಮನಸ್ಸೆಯ ಮಗ ಯಾಯೀರನು ಹೋಗಿ, ಅವರ ನಗರಗಳನ್ನು ತೆಗೆದುಕೊಂಡು, ಅವುಗಳಿಗೆ ಯಾಯೀರನ ಹಳ್ಳಿಗಳೆಂದು ಹೆಸರಿಟ್ಟನು.
೪೧ಮನಸ್ಸೆಯ ವಂಶದವನಾದ ಯಾಯೀರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಮಾಡಿಕೊಂಡು ಅವುಗಳಿಗೆ ಯಾಯೀರನ ಗ್ರಾಮಗಳೆಂದು ಹೆಸರಿಟ್ಟನು.
42 ನೋಬಹನು ಹೋಗಿ ಕೆನಾತ್ ಎಂಬ ಪಟ್ಟಣವನ್ನೂ, ಅದರ ಗ್ರಾಮಗಳನ್ನೂ ತೆಗೆದುಕೊಂಡು, ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂಬ ಹೆಸರಿಟ್ಟನು.
೪೨ನೋಬಹನು ಯುದ್ಧಕ್ಕೆ ಹೊರಟು ಕೆನಾತ್ ಎಂಬ ಪಟ್ಟಣವನ್ನೂ ಮತ್ತು ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿ ಅದಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.

< ಅರಣ್ಯಕಾಂಡ 32 >