< ಅರಣ್ಯಕಾಂಡ 20 >

1 ಇಸ್ರಾಯೇಲರ ಸರ್ವ ಸಮೂಹದವರು ಚಿನ್ ಎಂಬ ಮರುಭೂಮಿಗೆ ಮೊದಲನೆಯ ತಿಂಗಳಿನಲ್ಲಿ ಬಂದರು. ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಮರಣಹೊಂದಿದಳು, ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು.
ಮೊದಲನೆಯ ತಿಂಗಳಿನಲ್ಲಿ ಇಸ್ರಾಯೇಲರ ಸರ್ವಸಮೂಹದವರು “ಚಿನ್” ಎಂಬ ಮರುಭೂಮಿಗೆ ಬಂದು, ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ತೀರಿಹೋದಳು. ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು.
2 ಆಗ ಜನರಿಗೆ ನೀರು ಇಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡರು.
ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಕೂಡಿಕೊಂಡರು.
3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಸಹೋದರರು ಯೆಹೋವ ದೇವರ ಮುಂದೆ ಸತ್ತು ಹೋದಾಗಲೇ, ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.
ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತುಹೋದಾಗಲೇ ನಾವೂ ಸಹ ಸತ್ತುಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
4 ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಏಕೆ ಯೆಹೋವ ದೇವರ ಸಭೆಯವರಾದ ನಮ್ಮನ್ನೂ ಈ ಮರುಭೂಮಿಗೆ ತಂದಿರಿ.
ನೀವು ಯೆಹೋವನ ಸಮೂಹದವರಾದ ನಮ್ಮನ್ನೂ, ನಮ್ಮ ಪಶುಗಳನ್ನೂ ಈ ಮರಳುಗಾಡಿಗೆ ಕರೆದುಕೊಂಡು ಬಂದು ಯಾಕೆ ಸಾಯಿಸುತ್ತೀರಿ?
5 ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವುದಕ್ಕೆ ಏಕೆ ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಕರಕೊಂಡು ಬಂದಿರಿ. ಈ ಸ್ಥಳದಲ್ಲಿ ಧಾನ್ಯವಾದರೂ ಅಂಜೂರವಾದರೂ ದ್ರಾಕ್ಷಿ ತೋಟವಾದರೂ ದಾಳಿಂಬೆ ಹಣ್ಣಾದರೂ ಇಲ್ಲ. ಕುಡಿಯುವುದಕ್ಕೆ ನೀರು ಸಹ ಇಲ್ಲ,” ಎಂದರು.
ನಮ್ಮನ್ನು ಐಗುಪ್ತ ದೇಶದಿಂದ ಬರಮಾಡಿ ಈ ಕೆಟ್ಟ ಸ್ಥಳಕ್ಕೆ ಯಾಕೆ ಕರೆದುಕೊಂಡು ಬಂದಿದ್ದೀರಿ? ಈ ನೆಲದಲ್ಲಿ ಧಾನ್ಯವೂ, ಅಂಜೂರವೂ, ದ್ರಾಕ್ಷಿಯೂ, ದಾಳಿಂಬೆಯೂ ಮತ್ತು ಕುಡಿಯುವುದಕ್ಕೆ ನೀರೂ ಸಹ ಸಿಕ್ಕುವುದಿಲ್ಲ” ಎಂದು ಹೇಳುತ್ತಿದ್ದರು.
6 ಆಗ ಮೋಶೆ, ಆರೋನನೂ ಜನಸಮೂಹದ ಎದುರಿನಿಂದ ದೇವದರ್ಶನ ಗುಡಾರದ ಬಾಗಿಲಿನೊಳಗೆ ಹೋಗಿ, ಸಾಷ್ಟಾಂಗವೆರಗಿದರು. ಯೆಹೋವ ದೇವರ ಮಹಿಮೆಯು ಅವರಿಗೆ ಕಾಣಬಂತು.
ಮೋಶೆ ಮತ್ತು ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಹೋಗಿ ಬೋರಲುಬಿದ್ದಾಗ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.
7 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
ಆಗ ಯೆಹೋವನು ಮೋಶೆ ಸಂಗಡ ಮಾತನಾಡಿ,
8 “ಕೋಲನ್ನು ತೆಗೆದುಕೊಂಡು ನೀನು ನಿನ್ನ ಸಹೋದರ ಆರೋನನು ಜನರನ್ನು ಕೂಡಿಸಿಕೊಂಡು, ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ. ಅದು ತನ್ನ ನೀರನ್ನು ಕೊಡುವುದು. ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವೆ, ಜನರಿಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡಬಹುದು,” ಎಂದು ಹೇಳಿದರು.
“ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರುಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟುಬರುವುದು, ನೀನು ಸಮೂಹದವರಿಗೂ, ಅವರ ಪಶುಗಳಿಗೂ ನೀರನ್ನು ಕುಡಿಯುವುದಕ್ಕೆ ಕೊಡಬಹುದು” ಎಂದು ಹೇಳಿದನು.
9 ಆಗ ಮೋಶೆಯು ಯೆಹೋವ ದೇವರ ಸನ್ನಿಧಿಯಿಂದ ಹೊರಟು, ತನಗೆ ಆಜ್ಞಾಪಿಸಿದ ಹಾಗೆ ಕೋಲನ್ನು ತೆಗೆದುಕೊಂಡನು.
ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಆ ಕೋಲನ್ನು ಆತನ ಸನ್ನಿಧಿಯಿಂದ ತೆಗೆದುಕೊಂಡನು.
10 ಮೋಶೆಯೂ, ಆರೋನನೂ ಜನರನ್ನು ಬಂಡೆಯ ಮುಂದೆ ಕೂಡಿಸಿ, ಅವರಿಗೆ, “ತಿರುಗಿ ಬಿದ್ದವರೇ ಕೇಳಿರಿ, ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ?” ಎಂದರು.
೧೦ಮೋಶೆ ಮತ್ತು ಆರೋನರು ಸಮೂಹದವರನ್ನು ಆ ಕಡಿದಾದ ಬಂಡೆಗೆ ಎದುರಾಗಿ ಕೂಡಿಸಿದರು. ಮೋಶೆ ಅವರಿಗೆ, “ದ್ರೋಹಿಗಳೇ, ಕೇಳಿರಿ, ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?”
11 ಮೋಶೆಯು ತನ್ನ ಕೈಯನ್ನು ಎತ್ತಿ, ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ಬಹಳ ನೀರು ಹೊರಗೆ ಬಂತು, ಜನರೂ ಅವರ ಪಶುಗಳೂ ಕುಡಿದರು.
೧೧ಆಗ ಮೋಶೆ ತನ್ನ ಕೈಯನ್ನು ಮೇಲಕ್ಕೆ ಎತ್ತಿ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ನೀರು ಪ್ರವಾಹವಾಗಿ ಹೊರಟಿತು. ಸಮೂಹದವರೂ ಮತ್ತು ಅವರ ಪಶುಗಳೂ ನೀರು ಕುಡಿದರು.
12 ಆಗ ಯೆಹೋವ ದೇವರು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ, “ನನ್ನಲ್ಲಿ ವಿಶ್ವಾಸವಿಡದೆ ಹೋದಕಾರಣ ನೀವು ಇಸ್ರಾಯೇಲರ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧನಾಗಿ ಗೌರವಿಸುವುದಕ್ಕೆ, ನಾನು ಅವರಿಗೆ ಕೊಡುವ ದೇಶದಲ್ಲಿ ನೀವು ಅವರನ್ನು ಸೇರಿಸುವುದಿಲ್ಲ,” ಎಂದರು.
೧೨ಆಗ ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರಾಯೇಲರ ಎದುರಿನಲ್ಲಿ ನನ್ನ ಗೌರವವನ್ನು ಕಾಪಾಡದೆ ಹೋದುದರಿಂದ ಈ ಸಮೂಹದವರಿಗೆ ವಾಗ್ದಾನಮಾಡಿದ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗಬಾರದು” ಎಂದು ಹೇಳಿದನು.
13 ಇಸ್ರಾಯೇಲರು ಯೆಹೋವ ದೇವರ ಸಂಗಡ ವ್ಯಾಜ್ಯವಾಡಿದ್ದಕ್ಕಾಗಿ ದೇವರು ಅವರಲ್ಲಿ ತಮ್ಮನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾ ಸ್ಥಳದ ನೀರು ಇದೇ.
೧೩ಇಸ್ರಾಯೇಲರು ಅಲ್ಲಿ ಯೆಹೋವನ ಸಂಗಡ ವಾದಮಾಡಿದ್ದರಿಂದ ಆ ನೀರು ಬಂದ ಸ್ಥಳಕ್ಕೆ “ಮೆರೀಬಾ” ಎಂದು ಹೆಸರಾಯಿತು. ಅದಲ್ಲದೆ ಅಲ್ಲಿ ಯೆಹೋವನು ತನ್ನ ಪರಿಶುದ್ಧತೆಯನ್ನು ತೋರಿಸಿದನು.
14 ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಿಮ್ಮ ಸಹೋದರರಾದ ಇಸ್ರಾಯೇಲರು ಹೇಳುವುದೇನೆಂದರೆ, ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
೧೪ಮೋಶೆ ಕಾದೇಶಿನಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಮ್ಮ ಸಂಬಂಧಿಕರಾದ ಇಸ್ರಾಯೇಲರು ಕೇಳಿಕೊಳ್ಳುವುದೇನೆಂದರೆ, ನಮಗೆ ಸಂಭವಿಸಿದ ಎಲ್ಲಾ ಕಷ್ಟವನ್ನು ತಾವು ಕೇಳಿದ್ದೀರಿ.
15 ನಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಜಿಪ್ಟಿನಲ್ಲಿ ಬಹಳ ದಿವಸ ವಾಸವಾಗಿದ್ದೆವು ಮತ್ತು ಈಜಿಪ್ಟಿನವರು ನಮಗೂ, ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದರು.
೧೫ನಮ್ಮ ಪೂರ್ವಿಕರು ಐಗುಪ್ತ ದೇಶಕ್ಕೆ ಇಳಿದು ಹೋದರು. ಅವರು ಅಲ್ಲಿ ಬಹುದಿನ ವಾಸವಾಗಿದ್ದರು. ಐಗುಪ್ತ್ಯರು ನಮ್ಮನ್ನೂ ಮತ್ತು ನಮ್ಮ ಪೂರ್ವಿಕರನ್ನೂ ಉಪದ್ರವಪಡಿಸಿದ್ದರು.
16 ಆದಕಾರಣ ನಾವು ಯೆಹೋವ ದೇವರಿಗೆ ಕೂಗಿದೆವು. ಅವರು ನಮ್ಮ ಧ್ವನಿಯನ್ನು ಕೇಳಿ, ದೂತನನ್ನು ಕಳುಹಿಸಿ, ನಮ್ಮನ್ನು ಈಜಿಪ್ಟಿನೊಳಗಿಂದ ನಮ್ಮನ್ನು ಹೊರಗೆ ತಂದರು. “ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿಯದಲ್ಲಿ ಇದ್ದೇವೆ.
೧೬ನಾವು ಯೆಹೋವನಿಗೆ ಮೊರೆಯಿಡಲಾಗಿ, ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ, ನಮ್ಮನ್ನು ಐಗುಪ್ತ ದೇಶದಿಂದ ಬಿಡುಗಡೆಮಾಡಿದನು. ಈಗ ನಾವು ನಮ್ಮ ರಾಜ್ಯದ ಗಡಿಯಲ್ಲಿರುವ ಕಾದೇಶ್ ಎಂಬ ಊರಿನಲ್ಲಿದ್ದೇವೆ.
17 ನಮ್ಮನ್ನು ನಿನ್ನ ದೇಶದೊಳಗಿಂದ ದಾಟಿ ಹೋಗಗೊಡಿಸು; ನಾವು ಹೊಲವನ್ನಾದರೂ, ದ್ರಾಕ್ಷಿ ತೋಟವನ್ನಾದರೂ ದಾಟಿ ಹೋಗುವುದಿಲ್ಲ; ರಾಜಮಾರ್ಗದಲ್ಲಿ ಮಾತ್ರ ಹೋಗುತ್ತೇವೆ; ನಿನ್ನ ಮೇರೆಯನ್ನು ನಾವು ದಾಟುವವರೆಗೆ ಬಲಗಡೆಗಾದರೂ, ಎಡಗಡೆಗಾದರೂ ನಾವು ತಿರುಗುವುದಿಲ್ಲ,” ಎಂದು ವಿನಂತಿಸಿದನು.
೧೭ತಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲವನ್ನಾದರೂ, ದ್ರಾಕ್ಷಿತೋಟವನ್ನಾದರೂ ದಾಟಿ ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ನಮ್ಮ ದೇಶದ ಗಡಿಯನ್ನು ದಾಟುವ ತನಕ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು.
18 ಎದೋಮ್ಯರು ದೂತರಿಗೆ, “ನೀನು ಈ ಕಡೆಯಲ್ಲಿ ದಾಟಿ ಹೋಗಬೇಡ. ಹೋದರೆ ನಾನು ಖಡ್ಗದಿಂದ ನಿನ್ನ ಮೇಲೆ ದಾಳಿಗೆ ಬರುವೆನು,” ಎಂದನು.
೧೮ಆದರೆ ಎದೋಮ್ಯರು, “ನಮ್ಮ ದೇಶವನ್ನು ನೀವು ದಾಟಿ ಹೋಗಬಾರದು. ದಾಟುವುದಾದರೆ ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರಕೊಟ್ಟರು.
19 ಅದಕ್ಕೆ ಇಸ್ರಾಯೇಲರು ಅವನಿಗೆ, “ನಾವು ರಾಜಮಾರ್ಗದಲ್ಲಿ ಹೋಗುತ್ತೇವೆ. ನಮ್ಮ ಪಶುಗಳು ನಿನ್ನ ನೀರು ಕುಡಿದರೆ, ಅದರ ಕ್ರಯವನ್ನು ಕೊಡುತ್ತೇವೆ. ನಮ್ಮ ಕಾಲುಗಳಿಂದ ದಾಟಿ ಹೋಗುವುದೇ ಹೊರತು ಮತ್ತೇನೂ ಮಾಡುವುದಿಲ್ಲ,” ಎಂದು ಹೇಳಿ ಕಳುಹಿಸಿದನು.
೧೯ಅದಕ್ಕೆ ಇಸ್ರಾಯೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ಮತ್ತು ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದರ ಬೆಲೆ ಕೊಡುವೆವು. ಬೇರೆ ಏನನ್ನು ಮಾಡದೆ, ಕಾಲ್ನಡೆಯಾಗಿ ದಾಟಿಹೋಗುವುದಕಷ್ಟೇ ನಮಗೆ ಅಪ್ಪಣೆಯಾಗಬೇಕು” ಎಂದು ಹೇಳಿದರು.
20 ಆದರೆ ಅವನು, “ನೀವು ದಾಟಬಾರದು,” ಎಂದನು. ಎದೋಮ್ಯರು ಬಹುಜನರಿಂದಲೂ, ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಯುದ್ಧಕ್ಕೆ ಬಂದರು.
೨೦ಆದರೆ ಎದೋಮ್ಯರು, “ನೀವು ದಾಟಲೇ ಬಾರದು” ಎಂದು ಉತ್ತರಕೊಟ್ಟು ಬಹುಜನರನ್ನು ಕೂಡಿಸಿಕೊಂಡು ಇಸ್ರಾಯೇಲರಿಗೆ ಎದುರಾಗಿ ಯುದ್ಧಕ್ಕೆ ಬಂದರು.
21 ಈ ಪ್ರಕಾರ ಎದೋಮ್ಯನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸಲಿಲ್ಲ. ಆದಕಾರಣ ಇಸ್ರಾಯೇಲರು ಅವನ ಕಡೆಯಿಂದ ತಿರುಗಿಕೊಂಡು ಹೊರಟು ಹೋದರು.
೨೧ಎದೋಮ್ಯರು ಇಸ್ರಾಯೇಲರಿಗೆ ತಮ್ಮ ಪ್ರದೇಶದೊಳಗೆ ದಾಟಿಹೋಗುವುದಕ್ಕೆ ಅಪ್ಪಣೆಕೊಡದೆ ಹೋದುದರಿಂದ ಇಸ್ರಾಯೇಲರು ಅವರ ಕಡೆಯಿಂದ ತಿರುಗಿಕೊಂಡು ಬೇರೊಂದು ಮಾರ್ಗವಾಗಿ ಹೊರಟರು.
22 ಇಸ್ರಾಯೇಲರ ಸಮಸ್ತ ಸಮೂಹದವರು ಕಾದೇಶಿನಿಂದ ಪ್ರಯಾಣಮಾಡಿ, ಹೋರ್ ಎಂಬ ಬೆಟ್ಟದ ಬಳಿಗೆ ಬಂದರು.
೨೨ಆಗ ಇಸ್ರಾಯೇಲರ ಸರ್ವಸಮೂಹದವರು ಕಾದೇಶಿನಿಂದ ಹೊರಟು ಹೋರ್ ಎಂಬ ಬೆಟ್ಟಕ್ಕೆ ಬಂದರು.
23 ಆಗ ಯೆಹೋವ ದೇವರು ಎದೋಮ್ಯ ದೇಶದ ಮೇರೆಯ ಮೇಲಿರುವ ಹೋರ್ ಎಂಬ ಬೆಟ್ಟದಲ್ಲಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
೨೩ಯೆಹೋವನು ಎದೋಮ್ಯರ ದೇಶದ ಗಡಿಯ ಹತ್ತಿರವಿರುವ ಹೋರ್ ಎಂಬ ಬೆಟ್ಟದ ಬಳಿಯಲ್ಲಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
24 “ಆರೋನನು ತನ್ನ ಪಿತೃಗಳ ಸಂಗಡ ಸೇರುವನು, ಏಕೆಂದರೆ ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿಬಿದ್ದದರಿಂದ, ನಾನು ಇಸ್ರಾಯೇಲರಿಗೆ ಕೊಡುವ ದೇಶಕ್ಕೆ ಅವನು ಪ್ರವೇಶಿಸುವುದಿಲ್ಲ.
೨೪“ಆರೋನನು ತನ್ನ ಪೂರ್ವಿಕರ ಬಳಿಗೆ ಸೇರುವನು. ನೀವಿಬ್ಬರೂ ಮೆರೀಬಾ ಪ್ರವಾಹದ ಹತ್ತಿರ ನನ್ನ ಮಾತಿಗೆ ವಿರುದ್ಧವಾಗಿ ತಿರುಗಿಬಿದ್ದುದರಿಂದ ನಾನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶದೊಳಗೆ ಆರೋನನು ಸೇರಬಾರದು.
25 ಆರೋನನನ್ನೂ, ಅವನ ಮಗ ಎಲಿಯಾಜರನನ್ನೂ ತೆಗೆದುಕೊಂಡು, ಅವರನ್ನು ಹೋರ್ ಬೆಟ್ಟಕ್ಕೆ ಕರೆದುಕೊಂಡು ಬಾ.
೨೫ನೀನು ಆರೋನನನ್ನೂ, ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ.
26 ಆರೋನನ ವಸ್ತ್ರಗಳನ್ನು ತೆಗೆದು, ಅವುಗಳನ್ನು ಅವನ ಮಗ ಎಲಿಯಾಜರನಿಗೆ ತೊಡಿಸು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಬೇಕು,” ಎಂದರು.
೨೬ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಬೇಕು. ಆರೋನನು ಅಲ್ಲಿ ತನ್ನ ಪೂರ್ವಿಕರ ಬಳಿಗೆ ಸೇರಬೇಕು” ಎಂದು ಆಜ್ಞಾಪಿಸಿದನು.
27 ಮೋಶೆಯು ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಮಾಡಿದನು. ಅವರು ಸಮಸ್ತ ಸಭೆಯವರು ನೋಡುತ್ತಿರುವಾಗ ಹೋರ್ ಬೆಟ್ಟವನ್ನೇರಿದರು.
೨೭ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಹೀಗೆ ಮಾಡಿದನು. ಸರ್ವಸಮೂಹದವರು ನೋಡುತ್ತಿರಲಾಗಿ ಅವರು ಹೋರ್ ಬೆಟ್ಟವನ್ನು ಹತ್ತಿದರು.
28 ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು, ಅವನ ಮಗ ಎಲಿಯಾಜರನಿಗೆ ತೊಡಿಸಿದನು. ಆಗ ಆರೋನನು ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ, ಎಲಿಯಾಜರನೂ ಬೆಟ್ಟದಿಂದ ಇಳಿದರು.
೨೮ಮೋಶೆ ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು. ಆರೋನನು ಅಲ್ಲೇ ಬೆಟ್ಟದ ತುದಿಯಲ್ಲಿ ಸತ್ತುಹೋದನು. ತರುವಾಯ ಮೋಶೆಯೂ ಮತ್ತು ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.
29 ಆರೋನನು ತೀರಿಹೋದನೆಂದು ಸಭೆಯೆಲ್ಲಾ ನೋಡಿದಾಗ, ಇಸ್ರಾಯೇಲರೆಲ್ಲರೂ ಆರೋನನಿಗೋಸ್ಕರ ಮೂವತ್ತು ದಿವಸಗಳವರೆಗೂ ದುಃಖಿಸಿದರು.
೨೯ಆರೋನನು ಸತ್ತುಹೋದ ಸಂಗತಿಯನ್ನು ಇಸ್ರಾಯೇಲ್ ಸಮೂಹದವರು ಕೇಳಿ ಮೂವತ್ತು ದಿನಗಳು ಅವನಿಗಾಗಿ ಶೋಕಿಸಿದರು.

< ಅರಣ್ಯಕಾಂಡ 20 >