< ಅರಣ್ಯಕಾಂಡ 17 >
1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
೧ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಗೋತ್ರಗಳ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ ಕೋಲುಗಳನ್ನು ತೆಗೆದುಕೊಂಡು, ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ನೀನು ಬರೆ.
೨“ನೀನು ಇಸ್ರಾಯೇಲರ ಸಂಗಡ ಮಾತನಾಡಿ, ‘ಅವರ ಪೂರ್ವಿಕರ ಒಂದೊಂದು ಕುಲದ ಅಧಿಪತಿಯಿಂದ ಗೋತ್ರಗಳ ಪ್ರಕಾರವಾಗಿ ಒಂದೊಂದು ಕೋಲುಗಳನ್ನು ತೆಗೆದುಕೊಳ್ಳಬೇಕು. ಗೋತ್ರಗಳ ಪ್ರಕಾರವಾಗಿ ಒಬ್ಬೊಬ್ಬ ಪ್ರಧಾನರ ಹೆಸರಿನಲ್ಲಿ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಅವರ ಹೆಸರನ್ನು ಬರೆಯಿಸಬೇಕು.
3 ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಏಕೆಂದರೆ ಅವರ ಪಿತೃಗಳ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.
೩ಲೇವಿ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು ಏಕೆಂದರೆ ಅವರ ಪೂರ್ವಿಕರ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.
4 ಅವುಗಳನ್ನು ದೇವದರ್ಶನ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಒಡಂಬಡಿಕೆಯ ಮಂಜೂಷದ ಮುಂದೆ ಇಡಬೇಕು.
೪ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು.
5 ನಾನು ಯಾವನನ್ನು ಆಯ್ದುಕೊಳ್ಳುತ್ತೇನೋ, ಆ ಮನುಷ್ಯನ ಕೋಲು ಚಿಗುರುವುದು. ಹೀಗೆ ಇಸ್ರಾಯೇಲರು ನಿಮಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ನಿಲ್ಲಿಸಿಬಿಡುವೆನು,” ಎಂದರು.
೫ನಾನು ಯಾರನ್ನು ಆಯ್ದುಕೊಳ್ಳುತ್ತೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲರು ನಿಮ್ಮಿಬ್ಬರ ವಿರುದ್ಧವಾಗಿ ಗುಣುಗುಟ್ಟುವುದನ್ನು ನಾನು ನಿಲ್ಲಿಸಿ ಬಿಡುವೆನು’” ಎಂದನು.
6 ಹಾಗೆಯೇ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಗೋತ್ರಗಳ ಪ್ರಕಾರ ಒಬ್ಬೊಬ್ಬ ಪ್ರಧಾನನಿಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು.
೬ಅದಕ್ಕೆ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು.
7 ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರದ ಒಳಗೆ ಯೆಹೋವ ದೇವರ ಸಮ್ಮುಖದಲ್ಲಿ ಇಟ್ಟನು.
೭ಮೋಶೆ ಆ ಕೋಲುಗಳನ್ನು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇಟ್ಟನು.
8 ಮರುದಿವಸದಲ್ಲಿ, ಮೋಶೆಯು ಸಾಕ್ಷಿ ಗುಡಾರದೊಳಗೆ ಪ್ರವೇಶಿಸುವಾಗ, ಲೇವಿಯ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ, ಮೊಗ್ಗು ಬಿಟ್ಟು, ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು.
೮ಮರುದಿನ ಮೋಶೆಯು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಹೋಗಿ ನೋಡಲಾಗಿ ಅಗೋ, ಲೇವಿ ಕುಲಕ್ಕೋಸ್ಕರ ಆರೋನನಿಗೆ ಕೊಟ್ಟಿದ್ದ ಕೋಲು ಚಿಗುರಿ, ಮೊಗ್ಗುಬಿಟ್ಟು ಹೂವಾಗಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು!
9 ಆಗ ಮೋಶೆಯು ಕೋಲುಗಳನ್ನು ಯೆಹೋವ ದೇವರ ಸನ್ನಿಧಿಯಿಂದ ಎಲ್ಲಾ ಇಸ್ರಾಯೇಲರಿಗೆ ತೋರಿಸುವುದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲುಗಳನ್ನು ತೆಗೆದುಕೊಂಡರು.
೯ಮೋಶೆ ಆ ಕೋಲುಗಳನ್ನೆಲ್ಲಾ ಯೆಹೋವನ ಸನ್ನಿಧಿಯಿಂದ ಇಸ್ರಾಯೇಲರ ಬಳಿಗೆ ತಂದು ತೋರಿಸಿದನು. ಅವರು ನೋಡಿ ತಮ್ಮತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು.
10 ಯೆಹೋವ ದೇವರು ಮೋಶೆಗೆ, “ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಇಟ್ಟುಕೊಳ್ಳುವುದಕ್ಕೆ ಒಡಂಬಡಿಕೆಯ ಮಂಜೂಷದ ಮುಂದೆ ತಿರುಗಿ ಇಡು. ಗೊಣಗುಟ್ಟುವುದನ್ನು ನೀನು ಸಂಪೂರ್ಣವಾಗಿ ತೆಗೆದುಬಿಡಬೇಕು,” ಎಂದರು.
೧೦ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು” ಎಂದು ಆಜ್ಞಾಪಿಸಿದನು.
11 ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಮೋಶೆ ಮಾಡಿದನು.
೧೧ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.
12 ಆಗ ಇಸ್ರಾಯೇಲರು ಮೋಶೆಯ ಸಂಗಡ ಮಾತನಾಡಿ, “ನಾವೆಲ್ಲರೂ ಸಾಯುತ್ತೇವೆ, ನಾಶವಾಗುತ್ತೇವೆ. ನಾವೆಲ್ಲರೂ ನಾಶವಾಗುತ್ತೇವೆ.
೧೨ಇಸ್ರಾಯೇಲರು ಮೋಶೆಯ ಬಳಿಗೆ ಬಂದು ಅವನಿಗೆ, “ನಾವು ಇಲ್ಲಿ ಸಾಯುತ್ತೇವೆ; ಇಲ್ಲವೇ ನಾಶವಾಗಿ ಹೋಗುತ್ತೇವೆ.
13 ಯೆಹೋವ ದೇವರ ಗುಡಾರದ ಸಮೀಪಕ್ಕೆ ಬರುವವರೆಲ್ಲರೂ ಸಾಯುವರು. ಹಾಗೆಯೇ ನಾವೆಲ್ಲರೂ ಸಾಯಬೇಕೋ?” ಎಂದರು.
೧೩ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು?” ಎಂದು ಕೇಳಿದರು.