< ಅರಣ್ಯಕಾಂಡ 10 >
1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದು:
2 “ನಕ್ಷೆಯ ಕೆಲಸದಿಂದ ಹೊಡೆದು ಮಾಡಿದ ಬೆಳ್ಳಿಯ ತಗಡಿನ ಎರಡು ತುತೂರಿಗಳನ್ನು ನೀನು ಮಾಡಿಸಬೇಕು. ಸಭೆಯನ್ನು ಕರೆಯುವುದಕ್ಕಾಗಿಯೂ, ಪಾಳೆಯಗಳ ಪ್ರಯಾಣಕ್ಕಾಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು.
3 ಅವುಗಳನ್ನು ಊದುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
4 ಒಂದನ್ನು ಮಾತ್ರ ಊದುವಾಗ, ಇಸ್ರಾಯೇಲರಲ್ಲಿ ಮುಖ್ಯಸ್ಥರಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.
5 ನೀವು ಜಯಧ್ವನಿಯಂತೆ ಊದುವಾಗ ಪೂರ್ವದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಮುಂದೆ ಹೊರಡಬೇಕು.
6 ನೀವು ಎರಡನೆಯ ಸಾರಿ ಆರ್ಭಟವಾಗಿ ಊದುವಾಗ, ದಕ್ಷಿಣದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಪ್ರಯಾಣ ಮಾಡಬೇಕು. ಅವರ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿ ಊದಬೇಕು.
7 ಆದರೆ ಸಭೆಯನ್ನು ಕೂಡಿಸುವಾಗ ನೀವು ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬೇಡಿರಿ.
8 “ಯಾಜಕರಾಗಿರುವ ಆರೋನನ ಪುತ್ರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು.
9 ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರವಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ಜನರನ್ನು ಎಚ್ಚರಿಸುವಂತೆ ತುತೂರಿಗಳನ್ನು ಆರ್ಭಟವಾಗಿ ಊದಬೇಕು. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನೆನಪು ಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ಬಿಡಿಸುವನು.
10 ನಿಮ್ಮ ಸಂತೋಷದ ದಿವಸದಲ್ಲಿಯೂ, ನಿಮ್ಮ ಹಬ್ಬಗಳಲ್ಲಿಯೂ ನಿಮ್ಮ ತಿಂಗಳಿನ ಆರಂಭದಲ್ಲಿಯೂ ತುತೂರಿಗಳನ್ನು ಊದಬೇಕು. ನಿಮ್ಮ ದಹನಬಲಿಗಳನ್ನೂ ಸಮಾಧಾನದ ಬಲಿಯನ್ನೂ ಅರ್ಪಿಸುವಾಗ ಅವುಗಳನ್ನು ಊದಬೇಕು. ಅವುಗಳ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.”
11 ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎದ್ದಿತು.
12 ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.
13 ಆಗ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಪ್ರಯಾಣಮಾಡಿದ್ದು ಇದು ಮೊದಲನೇ ಸಾರಿ.
14 ಯೆಹೂದನ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀನಾದಾಬನ ಮಗ ನಹಶೋನನು ಇದ್ದನು.
15 ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗ ನೆತನೆಯೇಲ್ ಇದ್ದನು.
16 ಜೆಬುಲೂನನ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗ ಎಲೀಯಾಬನು ಇದ್ದನು.
17 ಆಗ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ, ಮೆರಾರೀಯರೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
18 ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಶೆದೇಯೂರನ ಮಗ ಎಲೀಚೂರನು ಇದ್ದನು.
19 ಸಿಮೆಯೋನನ ಗೋತ್ರದ ಸೈನ್ಯದ ಮೇಲೆ ಚುರೀಷದ್ದೈಯನ ಮಗ ಶೆಲುಮೀಯೇಲನು ಇದ್ದನು.
20 ಗಾದನ ಗೋತ್ರದ ಸೈನ್ಯದ ಮೇಲೆ ದೆವುಯೇಲನ ಮಗ ಎಲ್ಯಾಸಾಫನು ಇದ್ದನು.
21 ಅವರ ಹಿಂದೆ ಪರಿಶುದ್ಧ ವಸ್ತುಗಳನ್ನು ಹೊರುವ ಕೊಹಾತ್ಯರು ಹೊರಟರು. ಇವರು ಬರುವಷ್ಟರೊಳಗೆ ಉಳಿದ ಲೇವಿಯರು ಗುಡಾರವನ್ನು ನಿಲ್ಲಿಸಿದರು.
22 ಎಫ್ರಾಯೀಮನ ಪಾಳೆಯದ ಧ್ವಜವು ಅವನ ಸೈನ್ಯಗಳ ಪ್ರಕಾರ ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀಹೂದನ ಮಗ ಎಲೀಷಾಮನು ಇದ್ದನು.
23 ಮನಸ್ಸೆಯ ಗೋತ್ರದ ಮೇಲೆ ಪೆದಾಚೂರನ ಮಗ ಗಮಲಿಯೇಲನು ಇದ್ದನು.
24 ಬೆನ್ಯಾಮೀನನ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗ ಅಬೀದಾನನು ಇದ್ದನು.
25 ದಾನನ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಇದ್ದನು.
26 ಆಶೇರನ ಗೋತ್ರದ ಸೈನ್ಯಗಳ ಮೇಲೆ ಒಕ್ರಾನನ ಮಗ ಪಗೀಯೇಲನು ಇದ್ದನು.
27 ನಫ್ತಾಲಿಯ ಗೋತ್ರದ ಸೈನ್ಯದ ಮೇಲೆ ಏನಾನ ಮಗ ಅಹೀರನು ಇದ್ದನು.
28 ಈ ಪ್ರಕಾರ ಇಸ್ರಾಯೇಲರು ತಮ್ಮ ಗೋತ್ರಗಳ ಪ್ರಕಾರ ಪ್ರಯಾಣವಾಗಿ ಹೊರಟರು.
29 ಮೋಶೆ ತನ್ನ ಮಾವನಾಗಿದ್ದ ಮಿದ್ಯಾನನಾದ ರೆಯೂವೇಲನ ಮಗ ಹೊಬಾಬನಿಗೆ, “ಯೆಹೋವ ದೇವರು ನಮಗೆ ಕೊಡುತ್ತೇನೆಂದು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸಂಗಡ ನೀನೂ ಬಾ, ನಾವು ನಿನಗೆ ಒಳ್ಳೆಯದನ್ನು ಮಾಡುವೆವು. ಏಕೆಂದರೆ ಯೆಹೋವ ದೇವರು ಇಸ್ರಾಯೇಲರನ್ನು ಕುರಿತು ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾರೆ,” ಎಂದು ಹೇಳಿದನು.
30 ಆಗ ಅವನು ಅವನಿಗೆ, “ನಾನು ಬರುವುದಿಲ್ಲ. ನನ್ನ ದೇಶಕ್ಕೂ ನನ್ನ ಬಂಧುಗಳ ಬಳಿಗೂ ನಾನು ಹೋಗುತ್ತೇನೆ,” ಎಂದನು.
31 ಅದಕ್ಕೆ ಮೋಶೆ, “ನಮ್ಮನ್ನು ಬಿಡಬೇಡ. ಏಕೆಂದರೆ ನಾವು ಎಲ್ಲಿ ಇಳಿದುಕೊಳ್ಳಬೇಕೆಂಬುದು ನಿನಗೆ ಮಾತ್ರ ತಿಳಿದಿದೆ. ನೀನು ನಮಗೆ ಕಣ್ಣುಗಳಾಗಿರುವೆ.
32 ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.
33 ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು.
34 ಅವರು ಪಾಳೆಯದಿಂದ ಹೊರಟಾಗ, ಯೆಹೋವ ದೇವರ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು.
35 ಇದಲ್ಲದೆ ಮಂಜೂಷವು ಹೊರಡುವಾಗ ಮೋಶೆಯು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಎದ್ದೇಳಿರಿ, ನಿಮ್ಮ ಶತ್ರುಗಳು ಚದರಿಹೋಗಲಿ. ನಿಮ್ಮನ್ನು ಹಗೆ ಮಾಡುವವರು ನಿಮ್ಮ ಎದುರಿನಿಂದ ಓಡಿಹೋಗಲಿ.”
36 ಮಂಜೂಷವು ನಿಂತಾಗ ಅವನು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಸಾವಿರಾರು ಇಸ್ರಾಯೇಲರ ಕುಟುಂಬಗಳ ಬಳಿಗೆ ಹಿಂದಿರುಗು.”