< ನೆಹೆಮೀಯನು 1 >
1 ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ, ಕಿಸ್ಲೇವ್ ಎಂಬ ಮಾರ್ಗಶಿರ ತಿಂಗಳಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆನು.
೧ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ,
2 ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಯೆಹೂದದಿಂದ ನನ್ನ ಬಳಿಗೆ ಬಂದರು. ಸೆರೆ ಹೋದವರಿಂದ ಉಳಿದಿರುವ ಯೆಹೂದ್ಯರ ಮತ್ತು ಯೆರೂಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆನು.
೨ನನ್ನ ಸಹೋದರಲ್ಲಿ ಒಬ್ಬನಾದ ಹನಾನೀಯನೂ, ಬೇರೆ ಕೆಲವರು ಯೆಹೂದ ಜನರೊಂದಿಗೆ, ನನ್ನ ಬಳಿಗೆ ಬಂದರು. ಸೆರೆಯಾಳುಗಳಾಗಿ ಹೋಗಿದ್ದವರಲ್ಲಿ ಕೆಲವು ಯೆಹೂದ್ಯರು ತಪ್ಪಿಸಿಕೊಂಡು ನನ್ನ ಬಳಿಗೆ ಬಂದಾಗ ಯೆರೂಸಲೇಮಿನ ಸಮಾಚಾರವನ್ನು ನಾನು ಅವರ ಹತ್ತಿರ ವಿಚಾರಿಸಿದೆನು.
3 ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟ ನಿಂದೆಗಳಿಗೆ ಒಳಗಾಗಿದ್ದಾರೆ. ಯೆರೂಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.
೩ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು.
4 ನಾನು ಈ ಸಮಾಚಾರವನ್ನು ಕೇಳಿದಾಗ, ನೆಲದ ಮೇಲೆ ಕೂತುಕೊಂಡು ಅತ್ತೆನು. ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.
೪ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು.
5 ನಾನು ನನ್ನ ಪ್ರಾರ್ಥನೆಯಲ್ಲಿ: “ಪರಲೋಕ ದೇವರಾದ ಯೆಹೋವ ದೇವರೇ, ನೀವು ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿದ್ದೀರಿ. ನಿಮ್ಮನ್ನು ಪ್ರೀತಿಸಿ ನಿಮ್ಮ ಆಜ್ಞೆಗಳಿಗೆ ವಿಧೇಯರಾಗಿರುವವರೊಂದಿಗೆ, ನಿಮ್ಮ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವವರೇ, ಭಯಭಕ್ತಿಗೆ ಪಾತ್ರರಾದ ದೇವರೇ,
೫ಆ ವಿಜ್ಞಾಪನೆಗಳಲ್ಲಿ ನಾನು, “ಯೆಹೋವನೇ, ಮಹೋನ್ನತನೂ, ಭಯಭಕ್ತಿಗೂ ಪಾತ್ರನಾಗಿರುವ ಪರಲೋಕದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ,
6 ಕೃಪೆಮಾಡಿ ನನಗೆ ಕಿವಿಗೊಡಿರಿ, ಕಟಾಕ್ಷಿಸಿ ನೋಡಿರಿ, ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿರಿ. ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಾಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ. ಅವರು ನಿಮಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆಮಾಡುತ್ತಾ ಇದ್ದೇನೆ. ನಾನೂ, ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು.
೬ಕೃಪೆಮಾಡಿ ನನ್ನ ಮೊರೆಗೆ ಕಿವಿಗೊಡು, ನನ್ನನ್ನು ಕಟಾಕ್ಷಿಸು, ನಿನ್ನ ಸೇವಕನ ಪ್ರಾರ್ಥನೆಯನ್ನು ಲಾಲಿಸಬೇಕು. ನಾನು ಈಗ ಹಗಲಿರುಳೂ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವಕರಾದ ಇಸ್ರಾಯೇಲರಿಗಾಗಿ ಪ್ರಾರ್ಥಿಸುತ್ತಾ ಅವರು ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆ ಮಾಡುತ್ತಾ ಇದ್ದೇನೆ; ನಾನೂ, ನನ್ನ ಪೂರ್ವಿಕರೂ ಆ ಪಾಪಗಳಲ್ಲಿ ಪಾಲುಗಾರರಾಗಿದ್ದೇವೆ.
7 ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು. ನೀವು ನಿಮ್ಮ ದಾಸನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
೭ನಾವು ನಿನಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀನು ನಿನ್ನ ಸೇವಕನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
8 “ದಯಮಾಡಿ ನಿಮ್ಮ ಸೇವಕನಾದ ಮೋಶೆಗೆ ಹೇಳಿದ ಈ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಮೋಶೆಯ ಮುಖಾಂತರ, ‘ನೀವು ದ್ರೋಹ ಮಾಡಿದರೆ, ನಾನು ನಿಮ್ಮನ್ನು ಜನಾಂಗಗಳ ನಡುವೆ ಚದರಿಸಿಬಿಡುವೆನು.
೮ಆದರೂ, ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ; ‘ನೀವು ಅವಿಧೇಯರಾಗಿ ನಡೆಯುವುದಾದರೆ ನಾನು ನಿಮ್ಮನ್ನು ಜನಾಂಗಗಳ ಮದ್ಯ ಚದುರಿಸಿಬಿಡುವೆನು;
9 ಆದರೆ ನೀವು ನನ್ನ ಕಡೆಗೆ ತಿರುಗಿಕೊಂಡು ನನ್ನ ಆಜ್ಞೆಗಳನ್ನು ಅನುಸರಿಸಿ, ಅವುಗಳ ಪ್ರಕಾರ ನಡೆದರೆ, ನಿಮ್ಮಲ್ಲಿರುವವರು ಆಕಾಶದ ಅಂತ್ಯದವರೆಗೂ ಸೆರೆಯಾಗಿ ಹೋಗಿದ್ದರೂ, ನಾನು ಅಲ್ಲಿಂದ ಅವರನ್ನು ಕೂಡಿಸಿ, ನನ್ನ ಹೆಸರನ್ನಿಡಲು ಆಯ್ದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು,’ ಎಂದು ಹೇಳಿದ್ದೀರಿ.
೯ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವುದಾದರೆ ನಿಮ್ಮ ಜನರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ, ನನ್ನ ನಾಮಸ್ಥಾಪನೆಗೋಸ್ಕರ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು’ ಎಂದು ಹೇಳಿರುವೆಯಲ್ಲಾ; ಆ ಮಾತನ್ನು ನೆನಪು ಮಾಡಿಕೊಳ್ಳಿರಿ.
10 “ಅವರು ನಿಮ್ಮ ಮಹಾಶಕ್ತಿಯಿಂದಲೂ, ನಿಮ್ಮ ಭುಜಪರಾಕ್ರಮಗಳಿಂದ ನೀವು ವಿಮೋಚಿಸಿದ ನಿಮ್ಮ ಸೇವಕರೂ, ನಿಮ್ಮ ಜನರೂ ಆಗಿರುತ್ತಾರೆ.
೧೦“ಅವರು ನಿನ್ನ ಸೇವಕರೂ, ನೀನು ನಿನ್ನ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿನ್ನ ಪ್ರಜೆಗಳೂ ಆಗಿರುತ್ತಾರಲ್ಲಾ.
11 ದೇವರೇ, ನಿಮ್ಮ ಹೆಸರಲ್ಲಿ ಭಯಭಕ್ತಿಯಿಂದ ಹರ್ಷಿಸುವ ನಿಮ್ಮ ಸೇವಕರ ಪ್ರಾರ್ಥನೆಗೆ ಕಿವಿಗೊಡಿರಿ. ಇಂದು ನಿಮ್ಮ ಸೇವಕನಾದ ನನಗೆ ಯಶಸ್ವಿಯನ್ನು ಕೊಟ್ಟು, ಈ ಅರಸನ ದೃಷ್ಟಿಯಲ್ಲಿ ನನಗೆ ದಯೆ ದೊರಕುವಂತೆ ಮಾಡಿರಿ,” ಎಂದು ಬೇಡಿಕೊಂಡೆನು. ಆ ದಿವಸಗಳಲ್ಲಿ ನಾನು ಅರಸನಿಗೆ ಪಾನ ಸೇವಕನಾಗಿದ್ದೆನು.
೧೧ಯೆಹೋವನೇ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮ ಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಈ ಮನುಷ್ಯನ ದಯೆಗೆ ಪಾತ್ರನಾಗಿ ಸಫಲನಾಗುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದೆನು.