< ನೆಹೆಮೀಯನು 6 >
1 ನಾನು ಹೆಬ್ಬಾಗಿಲುಗಳಲ್ಲಿ ಬಾಗಿಲುಗಳನ್ನು ಇಡುವುದಕ್ಕಿಂತ ಮುಂಚೆ ನಾನು ಗೋಡೆಯಲ್ಲಿ ಒಂದು ಸಂದನ್ನೂ ಬಿಡದೆ ಪುನಃ ಕಟ್ಟಿದೆನೆಂದು ಸನ್ಬಲ್ಲಟನೂ, ಟೋಬೀಯನೂ, ಅರಬಿಯನಾದ ಗೆಷೆಮನೂ, ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ,
2 ಸನ್ಬಲ್ಲಟನೂ, ಗೆಷೆಮನೂ ನನಗೆ, “ಓನೋ ಎಂಬ ಬಯಲಿನಲ್ಲಿರುವ ಗ್ರಾಮಗಳಲ್ಲಿ ಎದುರುಗೊಳ್ಳೋಣ ಬಾ,” ಎಂದರು. ಆದರೆ ಅವರು ನನಗೆ ಕೇಡು ಮಾಡಲು ಯೋಜಿಸಿಕೊಂಡಿದ್ದರು.
3 ಆದಕಾರಣ ನಾನು ಅವರ ಬಳಿಗೆ ದೂತರನ್ನು ಕಳುಹಿಸಿ, “ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ, ಬರಲಾರೆನು. ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವುದು,” ಎಂದು ಹೇಳಿದೆನು.
4 ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಉತ್ತರ ಕಳುಹಿಸಿದೆನು.
5 ಐದನೆಯ ಸಾರಿ ಸನ್ಬಲ್ಲಟನು ತನ್ನ ದೂತನ ಕೈಯಲ್ಲಿ ಮುಚ್ಚದಿದ್ದ ಒಂದು ಪತ್ರವನ್ನು ಕಳುಹಿಸಿದನು.
6 ಅದರಲ್ಲಿ ಹೀಗೆ ಬರೆದಿತ್ತು: “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ, ಯೆಹೂದ್ಯರೂ ತಿರುಗಿಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಪುನಃ ಕಟ್ಟಿಸುತ್ತಿದ್ದೀ.
7 ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದೂ ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವುದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದ್ದಿ ಎಂಬುದಾಗಿಯೂ ಜನಾಂಗಗಳಲ್ಲಿ ಸುದ್ದಿ ಉಂಟು. ಈಗ ಈ ವರ್ತಮಾನ ಅರಸನಿಗೆ ತಿಳಿಸಲಾಗುವುದು. ಆದಕಾರಣ ನಾವು ಕೂಡಿಕೊಂಡು ಯೋಚನೆ ಮಾಡಿಕೊಳ್ಳೋಣ ಬಾ.”
8 ಆಗ ನಾನು, “ನೀನು ಹೇಳಿದ ಕಾರ್ಯಗಳಲ್ಲಿ ಯಾವುದೂ ಮಾಡಿದ್ದಿಲ್ಲ. ನೀವು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸಿಕೊಂಡಿರುವೆ,” ಎಂದು ಹೇಳಿ ಕಳುಹಿಸಿದೆನು.
9 ಹೀಗೆ, “ಅವರ ಕೈಗಳು ಬಲಹೀನವಾಗುವುವು. ಕೆಲಸವು ಪೂರ್ತಿಯಾಗುವುದಿಲ್ಲ,” ಎಂದುಕೊಂಡು ಅವರೆಲ್ಲರು ನಮ್ಮನ್ನು ಭಯಪಡಿಸಿದರು. ನಾನಾದರೋ, “ದೇವರೇ, ನನ್ನ ಕೈಗಳನ್ನು ಬಲಪಡಿಸಿರಿ,” ಎಂದು ಪ್ರಾರ್ಥಿಸಿದೆನು.
10 ತರುವಾಯ ನಾನು ಅಡಗಿಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯ, ಇವನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನು, “ನಾವಿಬ್ಬರೂ ದೇವರ ಆಲಯದಲ್ಲಿ ಪವಿತ್ರಸ್ಥಾನದೊಳಗೆ ಹೋಗಿ, ಮಂದಿರದ ಬಾಗಿಲನ್ನು ಮುಚ್ಚಿಕೊಳ್ಳೋಣ ಬಾ, ಏಕೆಂದರೆ ಈ ರಾತ್ರಿಯೇ ನಿನ್ನನ್ನು ಕೊಂದುಹಾಕಲು ಬರುತ್ತಾರೆ,” ಎಂದು ಹೇಳಿದನು.
11 ಅದಕ್ಕೆ ನಾನು, “ನನ್ನಂಥಾ ಮನುಷ್ಯನು ಓಡಿ ಹೋಗುವನೋ? ನನ್ನಂಥವನು ಬದುಕಬೇಕೆಂದು ದೇವರ ಆಲಯದೊಳಗೆ ಹೋಗಬಹುದೇ? ನಾನು ಒಳಗೆ ಹೋಗುವುದಿಲ್ಲ,” ಎಂದೆನು.
12 ಆಗ ದೇವರು ಅವನನ್ನು ಕಳುಹಿಸಲಿಲ್ಲ. ಟೋಬೀಯನೂ, ಸನ್ಬಲ್ಲಟನೂ ಶೆಮಾಯನಿಗೆ ಲಂಚಕೊಟ್ಟು, ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿಸಿದರೆಂದು ನನಗೆ ಗೊತ್ತಾಯಿತು.
13 ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವಂತೆಯೂ ಅವರು ನನ್ನನ್ನು ನಿಂದಿಸುವುದಕ್ಕೆ ಅಪಕೀರ್ತಿಯ ಕಾರಣವು ಅವರಿಗೆ ಸಿಕ್ಕುವಂತೆಯೂ ಶೆಮಾಯನಿಗೆ ಲಂಚಕೊಟ್ಟಿದ್ದರು.
14 ನನ್ನ ದೇವರೇ, ನೀವು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ, ಸನ್ಬಲ್ಲಟನನ್ನೂ, ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
15 ಹೀಗೆ ಗೋಡೆಯು ಐವತ್ತೆರಡು ದಿವಸಗಳಲ್ಲಿ ಏಲುಲ್ ತಿಂಗಳದ ಇಪ್ಪತ್ತೈದನೆಯ ದಿವಸದಲ್ಲಿ ಮುಗಿಯಿತು.
16 ಈ ಸುದ್ದಿ ಸುತ್ತಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.
17 ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಶ್ರೇಷ್ಠರು ಟೋಬೀಯನ ಬಳಿಗೆ ಬಹಳ ಪತ್ರಗಳನ್ನು ಕಳುಹಿಸಿದರು. ಟೋಬೀಯನಿಂದ ಉತ್ತರ ಅವರಿಗೆ ಬರುತ್ತಿದ್ದವು.
18 ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾದುದರಿಂದ ಅವನ ಮಗ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತೆಗೆದುಕೊಂಡಿದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ನಂಬಿಗಸ್ತರಾಗಿರುವುದಾಗಿ ಪ್ರಮಾಣ ಮಾಡಿದರು.
19 ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ, ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀಯನೂ ನನ್ನನ್ನು ಭಯಪಡಿಸುವುದಕ್ಕೆ ಪತ್ರಗಳನ್ನು ಕಳುಹಿಸಿದನು.