< ಮೀಕನು 4 >

1 ಅಂತ್ಯಕಾಲದಲ್ಲಿ, ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು, ಆಗ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡ ಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವರು.
2 ಅನೇಕ ಜನಾಂಗಗಳು ಬಂದು ಹೀಗೆಂದು ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ಅವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು. ನಾವು ಅವರ ದಾರಿಗಳಲ್ಲಿ ನಡೆಯುವೆವು. ಚೀಯೋನಿನಿಂದ ದೇವರ ನಿಯಮವೂ ಯೆರೂಸಲೇಮಿನಿಂದ ದೇವರ ವಾಕ್ಯವೂ ಹೊರಡುವುವು.”
ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.
3 ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗಗಳಿಗೆ ತೀರ್ಪುಕೊಡುವನು. ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ. ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು. ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.
4 ಆದರೆ ಒಬ್ಬಬ್ಬನು ತನ್ನ ತನ್ನ ದ್ರಾಕ್ಷಿಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕುಳಿತುಕೊಳ್ಳುವನು. ಭಯಪಡಿಸುವವನು ಯಾರೂ ಇರುವುದಿಲ್ಲ. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಇದನ್ನು ನುಡಿದಿದ್ದಾರೆ.
ಒಬ್ಬೊಬ್ಬನು ತನ್ನ ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರನ್ನು ಯಾರೂ ಹೆದರಿಸರು. ಸೇನಾಧೀಶ್ವರನಾದ ಯೆಹೋವನೇ ಇದನ್ನು ನುಡಿದಿದ್ದಾನೆ.
5 ಎಲ್ಲಾ ಜನಾಂಗಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆಯುವನು. ಆದರೆ ನಾವು ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು.
ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ. ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತದವರೆಗೆ ನಡೆಯುವೆವು.
6 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಆ ದಿವಸದಲ್ಲಿ” ನಾನು ಕುಂಟಾದವರನ್ನು ಒಟ್ಟುಗೂಡಿಸುವೆನು. ನಾನು ತಳ್ಳಿಬಿಟ್ಟದ್ದನ್ನೂ ಕಷ್ಟಪಡಿಸಿದವರನ್ನೂ ಒಂದಾಗಿ ಸೇರಿಸುವೆನು.
ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ದೈಹಿಕವಾಗಿ ಊನವಾದ ಜನಾಂಗವನ್ನು ಒಟ್ಟುಗೂಡಿಸುವೆನು, ನಾನು ಬಾಧಿಸಿ ತಳ್ಳಿದ ಪ್ರಜೆಯನ್ನು ಸೇರಿಸುವೆನು.
7 “ಕುಂಟಾದದ್ದನ್ನು ಉಳಿದದ್ದನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾಗಿಯೂ ಮಾಡುವೆನು. ಯೆಹೋವ ದೇವರು ಇಂದಿನಿಂದ ಸದಾಕಾಲವೂ ಚೀಯೋನ್ ಪರ್ವತದಲ್ಲಿ ಅವರ ಮೇಲೆ ಆಳುವರು.
ಆ ಊನವಾದ ಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು, ಯೆಹೋವನು ಚೀಯೋನ್ ಪರ್ವತದಲ್ಲಿ ಈ ದಿನದಿಂದ ಎಂದೆಂದಿಗೂ ಅವರ ರಾಜನಾಗಿರುವನು.
8 ಕುರಿಮಂದೆಯ ಬುರುಜೇ, ಚೀಯೋನ್ ಪುತ್ರಿಯ ದುರ್ಗವೇ, ಮೊದಲಿದ್ದ ರಾಜ್ಯಾಧಿಕಾರವೂ ನಿಮಗೆ ಲಭಿಸುವುದು. ಯೆರೂಸಲೇಮಿನ ಪುತ್ರಿಗೆ ರಾಜ್ಯತ್ವವೂ ಬರುವುದು.”
ಕುರಿಮಂದೆಗೆ ರಕ್ಷಣೆ ಕೊಡುವ ಗೋಪುರವೇ, ಚೀಯೋನ್ ಯುವತಿಯ ಸುಭದ್ರ ಕೋಟೆಯೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವುದು. ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವುದು.
9 ಈಗ ಏಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಅಧಿಕಾರಿಯು ನಾಶವಾದನೋ? ಹೆರುವವಳಂತೆ ನಿನಗೆ ವೇದನೆ ಬಂದಿರುವುದೋ?
ನೀನೀಗ ರೋದಿಸುತ್ತಿರುವುದೇಕೆ? ಪ್ರಸವವೇದನೆಯಷ್ಟು ಕಠಿಣವಾದ ಯಾತನೆಯು ನಿನ್ನನ್ನು ಬಾಧಿಸುತ್ತಿರುವುದಕ್ಕೆ ಕಾರಣವೇನು? ನಿನ್ನಲ್ಲಿ ರಾಜನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶವಾದನೋ?
10 ಚೀಯೋನ್ ಪುತ್ರಿಯೇ ಹೆರುವವಳಂತೆ ವೇದನೆ ತಾಳಿಕೋ, ಏಕೆಂದರೆ ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬಿಲೋನಿಗೆ ಹೋಗುವೆ, ಅಲ್ಲಿ ನಿನಗೆ ಬಿಡುಗಡೆಯಾಗುವುದು. ಅಲ್ಲಿ ಯೆಹೋವ ದೇವರು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿಸುವರು.
೧೦ಚೀಯೋನ್ ಯುವತಿಯೇ, ಹೆರುವವಳಂತೆ ವೇದನೆಗೆ ಒಳಗಾಗು, ಯಾತನೆಪಡು. ನೀನೀಗ ಪಟ್ಟಣದಿಂದ ಹೊರಟು ಕಾಡಿನಲ್ಲಿ ವಾಸಿಸುತ್ತಾ ಬಾಬೆಲಿಗೆ ಸೇರುವಿ. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ಯೆಹೋವನು ಶತ್ರುಗಳ ಕೈಯಿಂದ ನಿನ್ನನ್ನು ಬಿಡಿಸುವನು.
11 ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ. ಅವರು, “ಯೆರೂಸಲೇಮನ್ನು ಕೆಡಿಸೋಣ. ಚೀಯೋನಿನ ನಾಶನವನ್ನು ಕಣ್ಣಾರೆ ನೋಡೋಣ,” ಎಂದು ಹೇಳುತ್ತಾರೆ.
೧೧‘ಯೆರೂಸಲೇಮ್ ಹೊಲಸಾಗಿ ಹೋಗಲಿ. ಚೀಯೋನಿನ ನಾಶನವನ್ನು ಕಣ್ಣು ತುಂಬಾ ನೋಡೋಣ’” ಎಂದು ಯೋಚಿಸುವ ಬಹು ಜನಾಂಗಗಳು ನಿನಗೆ ವಿರುದ್ಧವಾಗಿ ಕೂಡಿ ಬಂದಿವೆ.
12 ಆದರೆ ಯೆಹೋವ ದೇವರ ಯೋಚನೆಗಳು ಅವರಿಗೆ ತಿಳಿದಿಲ್ಲ. ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ. ಏಕೆಂದರೆ ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವರು.
೧೨ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಲಿಲ್ಲ, ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ.
13 ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.
೧೩ಚೀಯೋನ್ ನಗರಿಯೇ ಎದ್ದು ಒಕ್ಕಣೆ ಮಾಡು, ನಾನು ನಿನ್ನ ಕೊಂಬನ್ನು ಕಬ್ಬಿಣದ ಕೊಂಬನ್ನಾಗಿಯೂ, ನಿನ್ನ ಗೊರಸನ್ನು ತಾಮ್ರದ ಗೊರಸನ್ನಾಗಿಯೂ ಮಾಡುವೆನು. ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ, ಆ ದೇಶಗಳು ಕೊಳ್ಳೆ ಹೊಡೆದು ಸಂಪಾದಿಸಿದ್ದ ಐಶ್ವರ್ಯವನ್ನು ನೀನು ಯೆಹೋವನಿಗಾಗಿ ಮೀಸಲಾಗಿಡುವೆ. ಅವರ ಆಸ್ತಿಯನ್ನು ಲೋಕದ ಕರ್ತನ ಮುಂದೆ ಸಮರ್ಪಿಸುವಿ.

< ಮೀಕನು 4 >