< ಮತ್ತಾಯನು 28 >

1 ಸಬ್ಬತ್ ಮುಗಿದ ಮೇಲೆ, ವಾರದ ಮೊದಲನೆಯ ದಿನ ಬೆಳಗಾಗುವಾಗ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು.
2 ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು.
ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.
3 ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು.
ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು;
4 ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.
ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.
5 ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು.
ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು;
6 ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ.
ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ;
7 ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.
ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು.
8 ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು.
ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು.
9 ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು.
ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು.
10 ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು.
೧೦ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.
11 ಅವರು ಹೋಗುತ್ತಿರುವಾಗ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಮುಖ್ಯಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.
೧೧ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು.
12 ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು,
೧೨ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು,
13 “‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ.
೧೩“‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ;
14 ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು.
೧೪ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು.
15 ಹೀಗೆ ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಕಲಿಸಿದಂತೆ ವರದಿಮಾಡಿದರು. ಈ ಕಥೆಯು ಈ ದಿನದವರೆಗೂ ಯೆಹೂದ್ಯರಲ್ಲಿ ಹಬ್ಬಿದೆ.
೧೫ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ.
16 ಆಗ ಹನ್ನೊಂದು ಮಂದಿ ಶಿಷ್ಯರು ಯೇಸು ತಮಗೆ ನೇಮಿಸಿದ ಗಲಿಲಾಯದಲ್ಲಿರುವ ಬೆಟ್ಟಕ್ಕೆ ಹೋದರು.
೧೬ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು.
17 ಅವರು ಯೇಸುವನ್ನು ಕಂಡು ಆರಾಧಿಸಿದರು. ಆದರೆ ಕೆಲವರು ಸಂದೇಹ ಪಟ್ಟರು.
೧೭ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು.
18 ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ.
೧೮ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.
19 ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,
೧೯ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.
20 ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು. (aiōn g165)
೨೦ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು. (aiōn g165)

< ಮತ್ತಾಯನು 28 >