< ಯಾಜಕಕಾಂಡ 18 >
೧ಯೆಹೋವನು ಮೋಶೆಯೊಂದಿಗೆ ಮಾತನಾಡಿ,
2 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು, ‘ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
೨“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮ ದೇವರಾಗಿರುವ ಯೆಹೋವನು.
3 ನೀವು ವಾಸವಾಗಿದ್ದ ಈಜಿಪ್ಟ್ ದೇಶದ ಆಚಾರಗಳನ್ನು ಅನುಸರಿಸಬಾರದು. ನಿಮ್ಮನ್ನು ಸೇರಿಸಲಿರುವ ಕಾನಾನ್ ದೇಶದವರ ಆಚಾರಗಳನ್ನು ನೀವು ಮಾಡಬಾರದು. ಇಲ್ಲವೆ ನೀವು ಅವರ ಪದ್ಧತಿಗಳನುಸಾರ ನಡೆಯಬಾರದು.
೩ನೀವು ವಾಸವಾಗಿದ್ದ ಐಗುಪ್ತ ದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್ ದೇಶದ ಆಚರಣೆಗಳನ್ನು ನೀವು ಅನುಸರಿಸಬಾರದು, ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು.
4 ನೀವು ನನ್ನ ನಿರ್ಣಯಗಳನ್ನು ಕೈಗೊಂಡು ಕಟ್ಟಳೆಗಳ ಪ್ರಕಾರ ನಡೆಯಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
೪ಯೆಹೋವನೆಂಬ ನಾನೇ ನಿಮ್ಮ ದೇವರಾಗಿರುವುದರಿಂದ ನನ್ನ ನಿರ್ಣಯಗಳ ಪ್ರಕಾರವೇ ನೀವು ನಡೆಯಬೇಕು, ನನ್ನ ನಿಯಮಗಳನ್ನು ಅನುಸರಿಸಬೇಕು.
5 ಆದ್ದರಿಂದ ನೀವು ನನ್ನ ನಿಯಮಗಳನ್ನೂ, ನನ್ನ ನಿರ್ಣಯಗಳನ್ನೂ ಕೈಗೊಳ್ಳಿರಿ. ಇವುಗಳನ್ನು ಅನುಸರಿಸುವವರು ನಿಯಮಗಳ ಮೂಲಕವೇ ಬದುಕುವರು, ನಾನೇ ಯೆಹೋವ ದೇವರು.
೫ನನ್ನ ಆಜ್ಞಾನಿಯಮಗಳ ಪ್ರಕಾರ ನಡೆದುಕೊಳ್ಳುವವರು ಆ ಆಜ್ಞಾನಿಯಮಗಳ ಮೂಲಕ ಬದುಕುವರು. ಆದುದರಿಂದ ನೀವು ಅವುಗಳನ್ನೇ ಅನುಸರಿಸಬೇಕು; ನಾನು ಯೆಹೋವನು.
6 “‘ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯೊಡನೆ ಲೈಂಗಿಕ ಸಂಬಂಧ ಬೆಳೆಸಬಾರದು, ನಾನೇ ಯೆಹೋವ ದೇವರು.
೬“‘ನಿಮ್ಮಲ್ಲಿ ಯಾರೂ ರಕ್ತಸಂಬಂಧವುಳ್ಳ ಸ್ತ್ರೀಯ ಸಹವಾಸವನ್ನು ಮಾಡಬಾರದು, ನಾನು ಯೆಹೋವನು.
7 “‘ನಿನ್ನ ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ, ನಿನ್ನ ತಂದೆಯನ್ನು ಅಗೌರವಿಸಬೇಡ. ಆಕೆ ನಿನ್ನ ತಾಯಿ: ಆಕೆಯೊಂದಿಗೆ ಇಂಥ ಸಂಬಂಧ ಬೇಡ.
೭ತಾಯಿಯನ್ನು ಎಷ್ಟು ಮಾತ್ರವೂ ಸಂಗಮಿಸಬಾರದು, ಆಕೆ ಹೆತ್ತವಳಲ್ಲವೇ; ಸಂಗಮಿಸಿದರೆ ತಂದೆಗೆ ಮಾನಭಂಗವಾಗುವುದು.
8 “‘ನಿನ್ನ ಮಲತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ತಂದೆಗೆ ಅಗೌರವವನ್ನುಂಟು ಮಾಡುವುದು.
೮ಮಲತಾಯಿಯ ಜೊತೆ ಸಂಗಮಿಸಬಾರದು; ಆಕೆ ತಂದೆಗೆ ಹೆಂಡತಿಯಾದವಳಲ್ಲವೇ.
9 “‘ನಿನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಮಗಳಾಗಿರಬಹುದು ಇಲ್ಲವೆ ತಾಯಿಯ ಮಗಳಾಗಿರಬಹುದು. ಆಕೆ ಒಂದೇ ಮನೆಯಲ್ಲಿ ಹುಟ್ಟಿರಬಹುದು ಇಲ್ಲವೆ ಬೇರೆ ಕಡೆಯಲ್ಲಿ ಹುಟ್ಟಿರಬಹುದು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
೯ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಬಾರದು; ಅವರು ಒಡ ಹುಟ್ಟಿದವರು ಇಲ್ಲವೇ ಪರಸ್ತ್ರೀಯಲ್ಲಿ ಹುಟ್ಟಿದವರಾದರೂ ನಿಮಗೆ ಅಕ್ಕತಂಗಿಯರಲ್ಲವೇ.
10 “‘ನಿನ್ನ ಮಗನ ಮಗಳ ಕೂಡ, ಇಲ್ಲವೆ ಮಗಳ ಮಗಳ ಕೂಡ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನಗೆ ಅಗೌರವವಾಗಿದೆ.
೧೦ಮಗನ ಮಗಳೊಂದಿಗೆ ಅಥವಾ ಮಗಳ ಮಗಳೊಂದಿಗೆ ಸಂಗಮಿಸಬಾರದು; ಅವರು ನಿಮಗೆ ಮಕ್ಕಳಂತಲ್ಲವೇ.
11 “‘ನಿನ್ನ ತಂದೆಯಿಂದ ಜನಿಸಿದ ನಿನ್ನ ತಂದೆಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ಸಹೋದರಿ.
೧೧ತಂದೆಯ ಮತ್ತೊಬ್ಬ ಹೆಂಡತಿಯಲ್ಲಿ ಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ಸಹೋದರಿ.
12 “‘ನಿನ್ನ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಆಕೆ ನಿನ್ನ ತಂದೆಯ ಸಮೀಪ ಬಂಧು.
೧೨ತಂದೆಯ ಒಡಹುಟ್ಟಿದವಳ ಸಂಗ ಮಾಡಬಾರದು; ಆಕೆ ನಿಮಗೆ ತಂದೆಯ ರಕ್ತಸಂಬಂಧಿ.
13 “‘ನಿನ್ನ ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ.
೧೩ತಾಯಿಯ ಒಡಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ನಿಮ್ಮ ತಾಯಿಯ ರಕ್ತಸಂಬಂಧಿ.
14 “‘ನಿನ್ನ ತಂದೆಯ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಬೇಡ. ನಿನ್ನ ತಂದೆಯ ಸಹೋದರನನ್ನು ಅಗೌರವಿಸಬೇಡ. ಆಕೆ ನಿನ್ನ ದೊಡ್ಡಮ್ಮ.
೧೪ತಂದೆಯ ಅಣ್ಣತಮ್ಮಂದಿರ ಹೆಂಡತಿಯರ ಜೊತೆ ಸಂಗಮಿಸಬಾರದು. ಅವರು ನಿಮ್ಮ ದೊಡ್ಡಮ್ಮ ಇಲ್ಲವೇ ಚಿಕ್ಕಮ್ಮ ಅಲ್ಲವೇ.
15 “‘ನಿನ್ನ ಸೊಸೆಯೊಂದಿಗೆ ಲೈಂಗಿಕ ಸಂಪರ್ಕ ಬೇಡ. ಆಕೆ ನಿನ್ನ ಮಗನ ಹೆಂಡತಿ. ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
೧೫ಸೊಸೆಯ ಸಹವಾಸ ಮಾಡಬಾರದು; ಆಕೆ ಮಗನ ಹೆಂಡತಿಯಾದವಳಲ್ಲವೇ.
16 “‘ನೀನು ನಿನ್ನ ಸಹೋದರನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ. ಅದು ನಿನ್ನ ಸಹೋದರನನ್ನು ಅಗೌರವಿಸುವುದು.
೧೬ಅತ್ತಿಗೆ ಮತ್ತು ನಾದಿನಿಯರನ್ನು ಸಂಗಮಿಸಬಾರದು; ಅವರು ಅಣ್ಣ ಅಥವಾ ತಮ್ಮಂದಿರ ಹೆಂಡತಿಯರಲ್ಲವೇ.
17 “‘ಸ್ತ್ರೀಯೊಂದಿಗೂ, ಆಕೆಯ ಮಗಳೊಂದಿಗೂ ಒಟ್ಟಿಗೆ ಲೈಂಗಿಕ ಸಂಪರ್ಕ ಬೇಡ. ಆಕೆಯ ಮಗನ ಮಗಳೊಂದಿಗಾದರೂ, ಮಗಳ ಮಗಳೊಂದಿಗಾದರೂ ಲೈಂಗಿಕ ಸಂಪರ್ಕ ಬೇಡ. ಅವರು ಆಕೆಯ ಹತ್ತಿರ ಸಂಬಂಧಿಗಳು. ಅದು ದುಷ್ಟತನ.
೧೭ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಂಡರೆ ಆಕೆಯ ಮಗಳನ್ನಾಗಲಿ ಇಲ್ಲವೇ ಮೊಮ್ಮಗಳನ್ನಾಗಲಿ ಸಂಗಮಿಸಬಾರದು; ಅವರು ರಕ್ತಸಂಬಂಧಿಗಳಾದುದರಿಂದ ಅದು ದುಷ್ಟ ಕಾರ್ಯವೇ.
18 “‘ನಿನ್ನ ಹೆಂಡತಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದುಕೊಳ್ಳಬೇಡ. ಒಬ್ಬಳು ಜೀವಂತವಾಗಿರುವಾಗ ಮತ್ತೊಬ್ಬಳೊಂದಿಗೆ ಲೈಂಗಿಕ ಸಂಬಂಧ ಮಾಡಬೇಡ.
೧೮ಹೆಂಡತಿಯು ಜೀವದಿಂದಿರುವಾಗಲೇ ಆಕೆಯ ಒಡಹುಟ್ಟಿದವಳನ್ನು ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನು ಉಂಟುಮಾಡಬಾರದು.
19 “‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯ ಸಂಪರ್ಕ ಮಾಡಬೇಡ.
೧೯“‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಬಾರದು.
20 “‘ಪರರ ಹೆಂಡತಿಯೊಂದಿಗೆ ನೀನು ಸಂಗಮಿಸಿ ಅಶುದ್ಧನಾಗಬೇಡ.
೨೦ಪರಸ್ತ್ರೀ ಸಂಗಮದಿಂದ ಅಶುದ್ಧರಾಗಬಾರದು.
21 “‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.
೨೧“‘ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು.
22 “‘ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರುಷನೊಂದಿಗೆ ಮಲಗಬಾರದು. ಅದು ಅಸಹ್ಯವಾದದ್ದು.
೨೨“‘ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಅಸಹ್ಯವಾದ ಕೆಲಸ.
23 “‘ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಅಶುದ್ಧಮಾಡಿಕೊಳ್ಳಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು. ಅದು ಸ್ವಭಾವಕ್ಕೆ ವ್ಯತಿರಿಕ್ತವಾದದ್ದು.
೨೩ಪಶುಸಂಗಮವನ್ನು ಮಾಡಿ ಅಶುದ್ಧರಾಗಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು; ಅದು ಸ್ವಭಾವಕ್ಕೆ ವಿರುದ್ಧವಾದದ್ದು.
24 “‘ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. ಏಕೆಂದರೆ ನಿಮ್ಮ ಮುಂದೆಯೇ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಿಂದ ಹೊಲೆಯಾಗಿವೆ.
೨೪“‘ಈ ದುರಾಚಾರಗಳಲ್ಲಿ ಯಾವುದರಿಂದಲೂ ನೀವು ಅಶುದ್ಧರಾಗಬಾರದು. ನಾನು ನಿಮ್ಮ ಎದುರಿನಿಂದ ಮೊದಲು ಹೊರಡಿಸಿದ ಜನಾಂಗಗಳವರು ಇಂಥ ದುರಾಚಾರಗಳಿಂದ ಅಶುದ್ಧರಾದರು.
25 ದೇಶವೂ ಅಶುದ್ಧವಾಗಿದೆ. ಆದ್ದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು. ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವುದು.
೨೫ಅವರ ದೇಶವು ಅಶುದ್ಧವಾಗಿ ಹೋದುದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ; ಆ ದೇಶವು ತನ್ನಲ್ಲಿ ವಾಸಿಸುತ್ತಿದ ಜನರನ್ನು ತ್ಯಜಿಸಿತು.
26 ಆದ್ದರಿಂದ ನೀವು ನನ್ನ ನಿಯಮಗಳನ್ನು, ನನ್ನ ನಿರ್ಣಯಗಳನ್ನು ಕೈಗೊಳ್ಳಬೇಕು. ಸ್ವದೇಶದವರಲ್ಲಿ ಯಾವನಾಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನೂ ಮಾಡಬಾರದು.
೨೬ಆದುದರಿಂದ ಸ್ವದೇಶದವರಾದ ನಿಮ್ಮಲ್ಲಿಯೂ ಮತ್ತು ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯೂ ಯಾರೂ ಈ ಅಸಹ್ಯವಾದ ಕಾರ್ಯಗಳಲ್ಲಿ ಒಂದನ್ನಾದರೂ ನಡೆಸದೆ ಎಲ್ಲರೂ ನನ್ನ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಬೇಕು.
27 ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲಾ ಅಸಹ್ಯವಾದವುಗಳನ್ನು ಮಾಡಿದ್ದರಿಂದ ದೇಶವೂ ಅಶುದ್ಧವಾಯಿತು.
೨೭ನಿಮಗಿಂತ ಮುಂಚೆ ಆ ದೇಶದಲ್ಲಿ ಇದ್ದವರು ಇಂಥ ಅಸಹ್ಯವಾದ ಕೆಲಸಗಳನ್ನು ಮಾಡಿದ್ದರಿಂದ ಆ ದೇಶವು ಅಶುದ್ಧವಾಗಿ ಹೋಯಿತಲ್ಲಾ.
28 ನೀವೂ ಅದನ್ನು ಅಶುದ್ಧಮಾಡಿದರೆ, ಅದು ನಿಮಗಿಂತ ಮೊದಲಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವುದು.
೨೮ಆ ದೇಶವು ನಿಮಗಿಂತ ಮುಂಚೆ ಇದ್ದ ಜನಾಂಗಗಳನ್ನು ತ್ಯಜಿಸಿದ ಪ್ರಕಾರವೇ ನಿಮ್ಮಿಂದ ಅಶುದ್ಧವಾದರೆ ನಿಮ್ಮನ್ನು ತ್ಯಜಿಸಿಬಿಡುತ್ತದೆ.
29 “‘ಏಕೆಂದರೆ ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವುದನ್ನಾದರೂ ಮಾಡಿದರೆ, ಅವನನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
೨೯ಯಾವನಾದರೂ ಈ ಅಸಹ್ಯವಾದ ಕೆಲಸಗಳಲ್ಲಿ ಒಂದನ್ನಾದರೂ ಮಾಡಿದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.
30 ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’”
೩೦ಆದುದರಿಂದ ನಿಮಗಿಂತ ಮುಂಚೆ ನಡೆಯುತ್ತಿದ್ದ ಅಸಹ್ಯವಾದ ಆಚರಣೆಗಳನ್ನು ನಡೆಸಿ ನಿಮ್ಮನ್ನು ಅಶುದ್ಧಮಾಡಿಕೊಳ್ಳದೆ ನನ್ನ ನಿಯಮಗಳನ್ನೇ ಅನುಸರಿಸಿ ನಡೆಯಬೇಕು; ನಾನು ನಿಮ್ಮ ದೇವರಾದ ಯೆಹೋವನು’” ಎಂದು ಹೇಳಿದನು.