< ಯಾಜಕಕಾಂಡ 12 >

1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, ಹೇಳಿದ್ದೇನೆಂದರೆ, 2 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಒಬ್ಬ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು. ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. 3 ಎಂಟನೆಯ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು. 4 ಅವಳು ಮೂವತ್ತಮೂರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. ಅವಳ ಶುದ್ಧೀಕರಣದ ದಿನಗಳು ಪೂರೈಸುವ ತನಕ ಅವಳು ಪರಿಶುದ್ಧವಾದದ್ದನ್ನು ಮುಟ್ಟಬಾರದು, ಇಲ್ಲವೆ ಪರಿಶುದ್ಧ ಸ್ಥಳಕ್ಕೆ ಬರಬಾರದು. 5 ಅವಳು ಹೆಣ್ಣು ಮಗುವನ್ನು ಹೆತ್ತರೆ, ಅವಳು ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. 6 “‘ಮಗನಿಗಾಗಿ ಇಲ್ಲವೆ ಮಗಳಿಗಾಗಿ ಅವಳ ಶುದ್ಧ ದಿನಗಳು ಪೂರ್ತಿಯಾದರೆ, ಅವಳು ದಹನಬಲಿಗಾಗಿ ಒಂದು ವರ್ಷದ ಕುರಿಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಪಾರಿವಾಳದ ಮರಿಯನ್ನೂ, ಇಲ್ಲವೆ ಬೆಳವಕ್ಕಿಯನ್ನೂ ದೇವದರ್ಶನದ ಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 7 ಅವನು ಯೆಹೋವ ದೇವರ ಮುಂದೆ ಅದನ್ನು ಅರ್ಪಿಸಿ, ಅವಳಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದಾದ ಅಶುದ್ಧತೆಯಿಂದ ಶುದ್ಧಳಾಗುವಳು. “‘ಗಂಡು ಮಗುವನ್ನಾಗಲಿ, ಹೆಣ್ಣು ಮಗುವನ್ನಾಗಲಿ ಹೆತ್ತವಳಿಗೆ ನಿಯಮವು ಇದೆ. 8 ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ, ಅವಳು ದಹನಬಲಿಗಾಗಿ ಒಂದು ಪಾಪ ಪರಿಹಾರದ ಬಲಿಗಾಗಿ, ಇನ್ನೊಂದು ಎಂಬಂತೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧಳಾಗುವಳು.’”

< ಯಾಜಕಕಾಂಡ 12 >