< ಯಾಜಕಕಾಂಡ 12 >

1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, ಹೇಳಿದ್ದೇನೆಂದರೆ,
ಯೆಹೋವನು ಮೋಶೆಗೆ,
2 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಒಬ್ಬ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು. ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಒಬ್ಬ ಸ್ತ್ರೀ ಗಂಡುಮಗುವಿಗೆ ಜನ್ಮ ನೀಡಿದರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು.
3 ಎಂಟನೆಯ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು.
ಎಂಟನೆಯ ದಿನದಲ್ಲಿ ಆ ಮಗುವಿಗೆ ಸುನ್ನತಿಮಾಡಿಸಬೇಕು.
4 ಅವಳು ಮೂವತ್ತಮೂರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು. ಅವಳ ಶುದ್ಧೀಕರಣದ ದಿನಗಳು ಪೂರೈಸುವ ತನಕ ಅವಳು ಪರಿಶುದ್ಧವಾದದ್ದನ್ನು ಮುಟ್ಟಬಾರದು, ಇಲ್ಲವೆ ಪರಿಶುದ್ಧ ಸ್ಥಳಕ್ಕೆ ಬರಬಾರದು.
ಆ ಮೇಲೆ ಅವಳ ಶುದ್ಧೀಕರಣ ಪೂರ್ಣಗೊಳ್ಳಲು ಇನ್ನು ಮೂವತ್ತಮೂರು ದಿನ ಆಗುವುದು. ಅದು ಪೂರ್ಣಗೊಳ್ಳುವ ತನಕ ಅವಳು ದೇವರ ಪವಿತ್ರ ವಸ್ತುವನ್ನು ಮುಟ್ಟಬಾರದು ಅಥವಾ ದೇವಸ್ಥಾನಕ್ಕೆ ಬರಬಾರದು.
5 ಅವಳು ಹೆಣ್ಣು ಮಗುವನ್ನು ಹೆತ್ತರೆ, ಅವಳು ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಯಬೇಕು.
ಹೆಣ್ಣುಮಗುವಿಗೆ ಜನ್ಮ ನೀಡಿದರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು ಮತ್ತು ಶುದ್ಧೀಕರಣ ಪೂರ್ಣಗೊಳ್ಳಲು ಅರುವತ್ತಾರು ದಿನಗಳು ಆಗುವುದು.
6 “‘ಮಗನಿಗಾಗಿ ಇಲ್ಲವೆ ಮಗಳಿಗಾಗಿ ಅವಳ ಶುದ್ಧ ದಿನಗಳು ಪೂರ್ತಿಯಾದರೆ, ಅವಳು ದಹನಬಲಿಗಾಗಿ ಒಂದು ವರ್ಷದ ಕುರಿಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಪಾರಿವಾಳದ ಮರಿಯನ್ನೂ, ಇಲ್ಲವೆ ಬೆಳವಕ್ಕಿಯನ್ನೂ ದೇವದರ್ಶನದ ಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು.
“‘ಗಂಡುಮಗುವಿಗೆ ಜನ್ಮ ನೀಡಿದರೂ ಅಥವಾ ಹೆಣ್ಣುಮಗುವಿಗೆ ಜನ್ಮ ನೀಡಿದರೂ ಅವಳ ಶುದ್ಧೀಕರಣದ ದಿನಗಳು ಪೂರೈಸಿದಾಗ ಅವಳು ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಪಾರಿವಾಳದ ಮರಿಯನ್ನು ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.
7 ಅವನು ಯೆಹೋವ ದೇವರ ಮುಂದೆ ಅದನ್ನು ಅರ್ಪಿಸಿ, ಅವಳಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದಾದ ಅಶುದ್ಧತೆಯಿಂದ ಶುದ್ಧಳಾಗುವಳು. “‘ಗಂಡು ಮಗುವನ್ನಾಗಲಿ, ಹೆಣ್ಣು ಮಗುವನ್ನಾಗಲಿ ಹೆತ್ತವಳಿಗೆ ನಿಯಮವು ಇದೆ.
ಅವನು ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವಳಿಗೆ ರಕ್ತಸ್ರಾವದಿಂದುಂಟಾದ ಅಶುದ್ಧತೆಯಿಂದ ಶುದ್ಧಳಾಗುವಳು. ಗಂಡುಮಗುವಿಗಾಗಲಿ ಅಥವಾ ಹೆಣ್ಣು ಮಗುವಿಗಾಗಲಿ ಜನ್ಮ ನೀಡಿದವಳಿಗೆ ಇದೇ ನಿಯಮ.
8 ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ, ಅವಳು ದಹನಬಲಿಗಾಗಿ ಒಂದು ಪಾಪ ಪರಿಹಾರದ ಬಲಿಗಾಗಿ, ಇನ್ನೊಂದು ಎಂಬಂತೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧಳಾಗುವಳು.’”
ಕುರಿಯನ್ನು ಕೊಡುವುದಕ್ಕೆ ಗತಿಯಿಲ್ಲದಿದ್ದರೆ ಅವಳು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಸರ್ವಾಂಗಹೋಮಕ್ಕಾಗಿ ಒಂದನ್ನು, ದೋಷಪರಿಹಾರಕ್ಕಾಗಿ ಮತ್ತೊಂದನ್ನು ಸಮರ್ಪಿಸಬೇಕು. ಯಾಜಕನು ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಶುದ್ಧಳಾಗುವಳು’” ಎಂಬುದೆ.

< ಯಾಜಕಕಾಂಡ 12 >