< ನ್ಯಾಯಸ್ಥಾಪಕರು 5 >
1 ಆ ದಿವಸದಲ್ಲಿ ದೆಬೋರಳೂ, ಅಬೀನೋವಮನ ಮಗ ಬಾರಾಕನೂ ಹಾಡಿದ್ದೇನೆಂದರೆ:
2 “ಇಸ್ರಾಯೇಲಿನ ನಾಯಕರು ಮುನ್ನಡೆದಾಗ, ಜನರು ಸ್ವಇಚ್ಛೆಯಿಂದ ಅವರನ್ನು ಹಿಂಬಾಲಿಸಿದಾಗ ಯೆಹೋವ ದೇವರನ್ನು ಸ್ತುತಿಸಿರಿ!
3 “ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು.
4 “ಯೆಹೋವ ದೇವರೇ, ನೀವು ಸೇಯೀರಿನಿಂದ ಹೊರಟು, ಎದೋಮಿನ ಹೊಲದಿಂದ ಮುನ್ನಡೆಯುವಾಗ, ಭೂಮಿ ನಡುಗಿತು. ಆಕಾಶವು ಸಹ ಸುರಿಸಿತು. ಮೇಘಗಳು ಸಹ ನೀರು ಸುರಿಸಿದವು.
5 ಯೆಹೋವ ದೇವರ ಮುಂದೆ ಬೆಟ್ಟಗಳು ಕಂಪಿಸಿದವು. ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮುಂದೆ ಸೀನಾಯಿ ಪರ್ವತವು ಸಹ ಕಂಪಿಸಿತು.
6 “ಅನಾತನ ಮಗ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿವಸಗಳಲ್ಲಿಯೂ ಹೆದ್ದಾರಿಯ ಸಂಚಾರ ನಿಂತುಹೋಯಿತು. ಪ್ರಯಾಣಿಕರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
7 ದೆಬೋರಳಾದ ನಾನು ಏಳುವವರೆಗೂ, ಇಸ್ರಾಯೇಲಿನಲ್ಲಿ ತಾಯಿಯಾಗಿ ನಾನು ಏಳುವವರೆಗೂ ಇಸ್ರಾಯೇಲಿನ ಹಳ್ಳಿಗಳ ನಿವಾಸಿಗಳು ಯುದ್ಧಮಾಡಲಿಲ್ಲ.
8 ಅವರು ಹೊಸ ದೇವರುಗಳನ್ನು ಆಯ್ದುಕೊಂಡರು. ಆಗ ಯುದ್ಧವು ಬಾಗಿಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಲವತ್ತು ಸಾವಿರ ಸೈನಿಕರಲ್ಲಿ ಗುರಾಣಿಯೂ, ಕಠಾರಿಯೂ ಇರಲಿಲ್ಲ.
9 ನಾನು ಇಸ್ರಾಯೇಲ್ ನಾಯಕರೊಂದಿಗೂ ಸ್ವೇಚ್ಛೆಯಿಂದ ಬಂದ ಜನರೊಂದಿಗೆ ನನ್ನ ಹೃದಯವಿದೆ. ಯೆಹೋವ ದೇವರನ್ನು ಸ್ತುತಿಸಿರಿ.
10 “ಬಿಳಿ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾರ್ಗದಲ್ಲಿ ನಡೆಯುವವರೇ, ಗಾನಮಾಡಿರಿ.
11 ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. “ಆಗ ಯೆಹೋವ ದೇವರ ಜನರು ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು.
12 ‘ಎಚ್ಚರವಾಗು, ಎಚ್ಚರವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗಿ ಹಾಡನ್ನು ಹಾಡು; ಬಾರಾಕನೇ, ಏಳು; ಅಬೀನೋವಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡೆಸು.’
13 “ಆಗ ಉಳಿದವನನ್ನು ಅವರು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದರು. ಯೆಹೋವ ದೇವರ ಜನರು ನನ್ನ ಸಹಾಯಕ್ಕಾಗಿ ಬಂದು, ಪರಾಕ್ರಮಶಾಲಿಗಳ ವಿರುದ್ಧ ಯುದ್ಧಮಾಡಿದರು.
14 ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯೀಮಿನಿಂದ ಉಂಟಾಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾಮೀನನು ಮಾಕೀರನಲ್ಲಿಂದ ಅಧಿಪತಿಗಳೂ, ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವವರೂ ಬಂದರು.
15 ಇಸ್ಸಾಕಾರನ ಪ್ರಧಾನರು ದೆಬೋರಳ ಸಂಗಡ ಇದ್ದರು. ಹೌದು, ಇಸ್ಸಾಕಾರನ ಗೋತ್ರದವರು ಬಾರಾಕನ ಹಿಂದೆ ಅವನ ಕಟ್ಟಳೆಯ ಪ್ರಕಾರ, ಕಾಲುನಡಿಗೆಯಾಗಿ ಕಣಿವೆಯಲ್ಲಿ ನಡೆದರು. ರೂಬೇನನ ಕಡೆಯವರು ತಮ್ಮ ಹೃದಯಗಳನ್ನು ಮಹಾ ಪರಿಶೋಧನೆ ಮಾಡಿಕೊಂಡರು.
16 ಮಂದೆಗಳ ಕೂಗನ್ನು ಕೇಳಿ, ನೀನು ಕುರಿ ಹಟ್ಟಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನ್ಯರ ನಡುವೆ ಹೃದಯದ ಮಹಾ ಪರಿಶೋಧನೆಗಳು ಇದ್ದವು.
17 ಗಿಲ್ಯಾದನು ಯೊರ್ದನ್ ನದಿಯ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು, ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.
18 ಜೆಬುಲೂನ್ಯರು ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು. ನಫ್ತಾಲಿಯೂ ಸಹ ಹೊಲದ ಎತ್ತರವಾದ ಸ್ಥಳಗಳಲ್ಲಿ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು.
19 “ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸಮೀಪವಾದ ತಾನಕದಲ್ಲಿ ಯುದ್ಧಮಾಡಿದರು. ಅವರು ಬೆಳ್ಳಿ ದ್ರವ್ಯಗಳನ್ನು ತೆಗೆದುಕೊಳ್ಳಲಿಲ್ಲ.
20 ಆಕಾಶದಲ್ಲಿ ಇರುವವುಗಳು ಯುದ್ಧ ಮಾಡಿದವು. ನಕ್ಷತ್ರಗಳು ತಮ್ಮ ಓಟಗಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧ ಮಾಡಿದವು.
21 ಕೀಷೋನ್ ನದಿಯು, ಆ ಹಳೆಯದಾದ ಕೀಷೋನ್ ನದಿಯು ಅವರನ್ನು ಬಡಿದುಕೊಂಡು ಹೋಯಿತು. ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದೆ.
22 ಆಗ ನೆಲವನ್ನು ಘಟ್ಟಿಸಿ ಓಡುವ ಅವನ ಬಲವಾದ ಕುದುರೆಗಳ ಮೆಟ್ಟಿನಿಂದ ಗೊರಸುಗಳು ಸೀಳಿಹೋದವು.
23 ಯೆಹೋವ ದೇವರ ದೂತನು ಹೀಗೆ ಹೇಳುತ್ತಾನೆ, ‘ನೀವು ಮೆರೋಜನ್ನು ಶಪಿಸಿರಿ. ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ, ಏಕೆಂದರೆ ಅವರು ಯೆಹೋವ ದೇವರ ಸಹಾಯಕ್ಕೂ, ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಯೆಹೋವ ದೇವರ ಸಹಾಯಕ್ಕೂ ಬಾರದೆ ಹೋದರು.’
24 “ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳು ಆಶೀರ್ವಾದ ಹೊಂದಿದವಳು. ಗುಡಾರದಲ್ಲಿ ವಾಸಿಸುವ ಹೌದು, ಅವಳೇ ಸ್ತ್ರೀಯರೊಳಗೆ ಅಧಿಕ ಆಶೀರ್ವಾದ ಹೊಂದಿದವಳು.
25 ಅವನು ನೀರನ್ನು ಕೇಳಿದನು. ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.
26 ತನ್ನ ಕೈಯಲ್ಲಿ ಮೊಳೆಯನ್ನೂ, ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆಯನ್ನೂ ತೆಗೆದುಕೊಂಡಳು. ಸುತ್ತಿಗೆಯಿಂದ ಸೀಸೆರನನ್ನು ಅವಳು ಹೊಡೆದಳು. ಅವಳು ಅವನ ತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು.
27 ಅವಳ ಕಾಲುಗಳ ಹತ್ತಿರ ಮುದುರಿ ಬಿದ್ದು ಮಲಗಿದನು. ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು. ಎಲ್ಲಿ ಬಾಗಿ ಬಿದ್ದನೋ, ಅಲ್ಲಿಯೇ ಬಿದ್ದು ಮರಣಹೊಂದಿದನು.
28 “ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿಯಿಂದ ಕೂಗಿದಳು, ‘ಅವನ ರಥವು ಬರುವುದಕ್ಕೆ ಇಷ್ಟು ತಡವಾದದ್ದೇನು? ಅವನ ರಥಗಳ ಗಾಲಿಗಳು ಹಿಂದುಳಿದಿರುವುದೇನು?’
29 ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಉತ್ತರಕೊಟ್ಟರು. ಅವಳೇ ತನಗೆ ಬದಲು ಮಾತು ಕೇಳಿಕೊಂಡಳು:
30 ‘ಅವರು ಓಡಲಿಲ್ಲವೋ? ಕೊಳ್ಳೆ ಹಂಚಿಕೊಳ್ಳಲಿಲ್ಲವೋ? ಒಬ್ಬೊಬ್ಬ ಸೈನಿಕನಿಗೆ ಒಂದೆರಡು ದಾಸಿಯರು ಸೀಸೆರನಿಗಾದರೋ ನಾನಾ ವರ್ಣವುಳ್ಳ ಬಟ್ಟೆಗಳು. ನಾನಾ ವರ್ಣವುಳ್ಳ ವಿಚಿತ್ರವಾಗಿ ಕಸೂತಿಹಾಕಿದ ಬಟ್ಟೆಗಳು, ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ಬಟ್ಟೆಗಳೂ ಕೊಳ್ಳೆ ಹಿಡಿಯುವವರಿಗೆ ತಕ್ಕಂಥ ಕಂಠಮಾಲೆಗಳೂ ಸಿಕ್ಕಲಿಲ್ಲವೋ?’
31 “ಯೆಹೋವ ದೇವರೇ, ಹೀಗೆಯೇ ನಿಮ್ಮ ಶತ್ರುಗಳೆಲ್ಲರೂ ನಾಶವಾಗಲಿ. ಆದರೆ ಅವರನ್ನು ಪ್ರೀತಿ ಮಾಡುವವರು ಪರಾಕ್ರಮದಿಂದ ಹೊರಡುವ ಸೂರ್ಯನ ಹಾಗೆಯೇ ಇರಲಿ.” ಅನಂತರ ದೇಶವು ನಲವತ್ತು ವರ್ಷ ವಿಶ್ರಾಂತಿಯಲ್ಲಿತ್ತು.