< ನ್ಯಾಯಸ್ಥಾಪಕರು 3 >
1 ಕಾನಾನ್ ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲರನ್ನು ಪರೀಕ್ಷಿಸುವುದಕ್ಕೂ,
2 ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ:
3 ಐದು ಮಂದಿ ಫಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಸೀದೋನ್ಯರೂ ಬಾಳ್ ಹೆರ್ಮೋನ್ ಬೆಟ್ಟದಿಂದ ಪ್ರಾರಂಭಿಸಿ ಹಮಾತಿನ ಪ್ರದೇಶದವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾಗಿರುವ ಹಿವ್ವಿಯರು ಇವರೇ.
4 ತಾವು ಮೋಶೆಯ ಮುಖಾಂತರವಾಗಿ ಇಸ್ರಾಯೇಲರ ಪಿತೃಗಳಿಗೆ ಆಜ್ಞಾಪಿಸಿದ ಆಜ್ಞೆಗಳನ್ನು ಇಸ್ರಾಯೇಲರು ಕೇಳುವರೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕೆ ಯೆಹೋವ ದೇವರು ಅವರನ್ನು ಉಳಿಸಿಬಿಟ್ಟರು.
5 ಇಸ್ರಾಯೇಲರು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು,
6 ಅವರ ಪುತ್ರಿಯರನ್ನು ತಾವು ಹೆಂಡತಿಯರನ್ನಾಗಿ ತೆಗೆದುಕೊಂಡು, ತಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆ ಮಾಡಿಕೊಟ್ಟು, ಅವರ ದೇವರುಗಳನ್ನು ಸೇವಿಸಿದರು.
7 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತು, ಬಾಳನನ್ನೂ ಅಶೇರನನ್ನೂ ಸೇವಿಸಿದರು.
8 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡು, ಅವರನ್ನು ಅರಾಮ್ ನಹರೈಮ್ದ ಅರಸನಾದ ಕೂಷನ್ ರಿಷಾತಯಿಮನ ಕೈಗೆ ಮಾರಿಬಿಟ್ಟರು. ಇಸ್ರಾಯೇಲರು ಕೂಷನ್ರಿಷಾತಯಿಮ್ ಎಂಬವನಿಗೆ ಎಂಟು ವರ್ಷ ಗುಲಾಮರಾಗಿದ್ದರು.
9 ತರುವಾಯ ಇಸ್ರಾಯೇಲರು ಯೆಹೋವ ದೇವರನ್ನು ಕೂಗುವಾಗ, ಯೆಹೋವ ದೇವರು ಇಸ್ರಾಯೇಲರಿಗೆ ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ, ಕಾಲೇಬನ ತಮ್ಮನಾದ ಕೆನಾಜನ ಮಗ ಒತ್ನಿಯೇಲನನ್ನು ಎಬ್ಬಿಸಿದರು.
10 ಅವನ ಮೇಲೆ ಯೆಹೋವ ದೇವರ ಆತ್ಮವು ಬಂದದ್ದರಿಂದ, ಅವನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಯುದ್ಧಮಾಡುವುದಕ್ಕೆ ಹೊರಟಾಗ, ಯೆಹೋವ ದೇವರು ಅವನ ಕೈಗೆ ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಒಪ್ಪಿಸಿಕೊಟ್ಟರು. ಅವನು ಕೂಷನ್ ರಿಷಾತಯಿಮನ ಮೇಲೆ ಜಯಹೊಂದಿದನು.
11 ದೇಶವು ನಾಲ್ವತ್ತು ವರ್ಷದವರೆಗೆ ವಿಶ್ರಾಂತಿಯಿಂದಿತ್ತು. ತರುವಾಯ ಕೆನಾಜನ ಮಗ ಒತ್ನಿಯೇಲನು ಮರಣಹೊಂದಿದನು.
12 ಇಸ್ರಾಯೇಲರು ಯೆಹೋವ ದೇವರ ಮುಂದೆ ತಿರುಗಿ ಕೆಟ್ಟದ್ದನ್ನೇ ಮಾಡಿದರು. ಅವರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನೇ ಮಾಡಿದ್ದರಿಂದ, ಯೆಹೋವ ದೇವರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲಪಡಿಸಿದರು.
13 ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.
14 ಇಸ್ರಾಯೇಲರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರ್ಷ ಸೇವಿಸಿದರು.
15 ಆದರೆ ಇಸ್ರಾಯೇಲರು ಯೆಹೋವ ದೇವರನ್ನು ಕೂಗಿದಾಗ, ಯೆಹೋವ ದೇವರು ಅವರಿಗೆ ಬೆನ್ಯಾಮೀನನಾದ ಗೇರನ ಮಗ ಏಹೂದನನ್ನು ರಕ್ಷಿಸುವುದಕ್ಕೆ ಎಬ್ಬಿಸಿದರು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲರು ಮೋವಾಬಿನ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು.
16 ಏಹೂದನು ಇಬ್ಬಾಯಿಯುಳ್ಳ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿಕೊಂಡು, ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು,
17 ಕಾಣಿಕೆಯನ್ನು ಮೋವಾಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ದಪ್ಪ ಮನುಷ್ಯನಾಗಿದ್ದನು.
18 ಏಹೂದನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ, ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿಬಿಟ್ಟು,
19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, “ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ,” ಎಂದನು. ಅವನು, “ನಿಶ್ಶಬ್ದ,” ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು.
20 ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು.
21 ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು.
22 ಅದು ಅಲಗಿನ ಸಂಗಡ ಹಿಡಿ ಸಮೇತ ಅವನ ಹೊಟ್ಟೆಯಲ್ಲಿ ಹೊಕ್ಕು, ಕಿತ್ತು ತೆಗೆಯಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಅದರಿಂದ ಮಲವು ಹೊರಟಿತು.
23 ಆಗ ಏಹೂದನು ಕೊಠಡಿಯ ಬಾಗಿಲನ್ನು ತನ್ನ ಹಿಂಭಾಗದಲ್ಲಿ ಮುಚ್ಚಿ, ಬೀಗವನ್ನು ಹಾಕಿ, ದ್ವಾರಾಂಗಳದಿಂದ ಹೊರಟುಹೋದನು.
24 ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, “ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು,” ಎಂದುಕೊಂಡರು.
25 ಅವರು ತಮಗೆ ಬೇಸರವಾಗುವ ಮಟ್ಟಿಗೂ ಕಾದಿದ್ದರು. ಆದರೆ, ಅವನು ಕೊಠಡಿ ಬಾಗಿಲನ್ನು ತೆರೆಯದೆ ಇದ್ದುದರಿಂದ, ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆದರು. ಅವರ ಪ್ರಭುವು ನೆಲದ ಮೇಲೆ ಮರಣಹೊಂದಿದ್ದನು.
26 ಅವರು ಆಲಸ್ಯ ಮಾಡುತ್ತಿರುವಾಗ, ಏಹೂದನು ತಪ್ಪಿಸಿಕೊಂಡು ವಿಗ್ರಹಗಳನ್ನು ದಾಟಿ, ಸೇಯೀರಾತನ್ನು ಸೇರಿ ತಪ್ಪಿಸಿಕೊಂಡನು.
27 ಅವನು ಅಲ್ಲಿ ಬಂದಾಗ, ಎಫ್ರಾಯೀಮನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲರು ಅವನ ಸಂಗಡ ಬೆಟ್ಟದಿಂದ ಇಳಿದರು. ಅವನು ಇವರ ಮುಂದೆ ನಡೆದರು.
28 ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ,
29 ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಪುಷ್ಟರೂ, ಪರಾಕ್ರಮಿಗಳೂ ಆಗಿದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ.
30 ಹೀಗೆ ಆ ದಿವಸದಲ್ಲಿ ಮೋವಾಬ್ ಇಸ್ರಾಯೇಲರ ಆಳಿಕೆಗೆ ಅಧೀನವಾಗಿತ್ತು. ದೇಶವು ಎಂಬತ್ತು ವರ್ಷ ವಿಶ್ರಾಂತಿಗೊಂಡಿತು.
31 ಏಹೂದನ ತರುವಾಯ ಅನಾತನ ಮಗ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರುನೂರು ಜನರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲರನ್ನು ರಕ್ಷಿಸಿದನು.