< ನ್ಯಾಯಸ್ಥಾಪಕರು 21 >
1 ಇಸ್ರಾಯೇಲರು ತಮ್ಮಲ್ಲಿ, “ಯಾವನೂ ತನ್ನ ಮಗಳನ್ನು ಬೆನ್ಯಾಮೀನ್ಯರಿಗೆ ಮದುವೆಮಾಡಿ ಕೊಡುವುದಿಲ್ಲ,” ಎಂದು ಮಿಚ್ಪೆಯಲ್ಲಿ ಆಣೆಯಿಟ್ಟಿದ್ದರು.
೧ಇಸ್ರಾಯೇಲರೆಲ್ಲರೂ ಮಿಚ್ಪೆಯಲ್ಲಿದ್ದಾಗ ತಾವು ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವುದಿಲ್ಲವೆಂದು ಆಣೆಯಿಟ್ಟಿದ್ದರು.
2 ಆದ್ದರಿಂದ ಜನರು ಬೇತೇಲಿಗೆ ಬಂದು, ಅಲ್ಲಿ ದೇವರ ಮುಂದೆ ಸಾಯಂಕಾಲದವರೆಗೆ ಇದ್ದು, ತಮ್ಮ ಧ್ವನಿ ಎತ್ತಿ ಬಹಳವಾಗಿ ಅತ್ತು,
೨ಅವರು ಬೇತೇಲಿಗೆ ಬಂದು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತು, ಗಟ್ಟಿಯಾಗಿ ಅಳುತ್ತಾ,
3 “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದದ್ದೇನು?” ಎಂದರು.
೩“ಯೆಹೋವನೇ, ಇಸ್ರಾಯೇಲ್ಯರ ದೇವರೇ, ನಮ್ಮಲ್ಲಿ ಹೀಗೆ ಯಾಕೆ ಆಯಿತು? ಇಸ್ರಾಯೇಲರ ಒಂದು ಕುಲವು ಹಾಳಾಗಿ ಹೋಯಿತಲ್ಲಾ” ಎಂದು ಕೂಗಿದರು.
4 ಜನರು ಮಾರನೆಯ ದಿವಸ ಉದಯದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ, ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು.
೪ಮರುದಿನ ಅವರು ಬೆಳಿಗ್ಗೆ ಎದ್ದು ಯಜ್ಞವೇದಿಯನ್ನು ಕಟ್ಟಿ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
5 ಅನಂತರ ಅವರು, “ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಬಾರದವರು ಯಾರು?” ಎಂದರು. ಏಕೆಂದರೆ ಯೆಹೋವ ದೇವರ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆ ಇಟ್ಟುಕೊಂಡಿದ್ದರು.
೫ಮತ್ತು ಯೆಹೋವನ ಮುಂದೆ ಸಭೆ ಸೇರಿದಾಗ, ಬಾರದೆ ಇದ್ದಂಥ ಇಸ್ರಾಯೇಲರು ಯಾರಾರೆಂದು ವಿಚಾರಮಾಡಿದರು. ಯಾಕೆಂದರೆ ಮಿಚ್ಪೆಯಲ್ಲಿ, “ಯೆಹೋವನ ಸನ್ನಿಧಿಗೆ ಬಾರದವರನ್ನು ಕೊಂದು ಹಾಕುವೆವು” ಎಂದು ಆಣೆಯಿಟ್ಟು ಪ್ರಮಾಣಮಾಡಿದ್ದರು.
6 ಆಗ ಇಸ್ರಾಯೇಲರು ತಮ್ಮ ಸಹೋದರರಾದ ಬೆನ್ಯಾಮೀನನ ವಿಷಯವಾಗಿ ಪಶ್ಚಾತ್ತಾಪಪಟ್ಟು, “ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಕಡಿದು ಹೋಯಿತು.
೬ಇಸ್ರಾಯೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಅವಸ್ಥೆಯನ್ನು ಕಂಡು ದುಃಖದಿಂದ, “ಅಯ್ಯೋ, ಇಸ್ರಾಯೇಲರಾದ ನಮ್ಮಲ್ಲಿ ಒಂದು ಕುಲವು ಕಡಿಮೆಯಾಯಿತಲ್ಲಾ;
7 ನಾವು ನಮ್ಮ ಪುತ್ರಿಯರಲ್ಲಿ ಒಬ್ಬಳನ್ನಾದರೂ ಅವರಿಗೆ ಕೊಡುವುದಿಲ್ಲ, ಎಂದು ನಾವು ಯೆಹೋವ ದೇವರ ಮೇಲೆ ಆಣೆ ಇಟ್ಟುಕೊಂಡದ್ದರಿಂದ ಉಳಿದವರಿಗೆ ಹೆಂಡರು ದೊರಕುವಂತೆ ನಾವು ಅವರಿಗೋಸ್ಕರ ಏನು ಮಾಡೋಣ?
೭ಜೀವದಿಂದುಳಿದವರಿಗೆ ಹೆಂಡತಿಯರನ್ನು ದೊರಕಿಸಿಕೊಡುವುದು ಹೇಗೆ? ನಮ್ಮ ಹೆಣ್ಣುಗಳನ್ನು ಅವರಿಗೆ ಕೊಡುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟಿದ್ದೇವಲ್ಲಾ” ಎಂದು ಗೋಳಾಡಿದರು.
8 ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ.
೮ಮಿಚ್ಪೆಯಲ್ಲಿ ಯೆಹೋವನ ಮುಂದೆ ಸಭೆ ಸೇರಿದಾಗ, ಅದಕ್ಕೆ ಬಾರದಿದ್ದ ಇಸ್ರಾಯೇಲರು ಯಾರಾದರೂ ಇದ್ದಾರೋ ಎಂದು ವಿಚಾರಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಒಬ್ಬನೂ ಬರಲಿಲ್ಲವೆಂದು ಗೊತ್ತಾಯಿತು.
9 ಜನರು ಲೆಕ್ಕಿಸಿದಾಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಇರಲಿಲ್ಲ.
೯ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು.
10 ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ, ಅವರಿಗೆ, “ನೀವು ಹೋಗಿ, ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡ, ಖಡ್ಗದಿಂದ ಸಂಹರಿಸಿಬಿಡಿರಿ.
೧೦ಆಗ ಅವರು ತಮ್ಮಲ್ಲಿಂದ ಹನ್ನೆರಡು ಸಾವಿರ ಮಂದಿ ಪರಾಕ್ರಮಶಾಲಿಗಳನ್ನು ಆರಿಸಿಕೊಂಡು ಅವರಿಗೆ, “ನೀವು ಯಾಬೇಷ್ ಗಿಲ್ಯಾದಿಗೆ ಹೋಗಿ ಎಲ್ಲಾ ನಿವಾಸಿಗಳನ್ನೂ, ಸ್ತ್ರೀಯರನ್ನೂ, ಚಿಕ್ಕ ಮಕ್ಕಳನ್ನೂ ಬಿಡದೆ ಸಂಹರಿಸಬೇಕು;
11 ಎಲ್ಲಾ ಗಂಡಸರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲ ಮಾಡಿರಿ,” ಎಂದು ಆಜ್ಞಾಪಿಸಿದರು.
೧೧ಹೇಗೂ ಪುರುಷರನ್ನು, ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲಮಾಡುವುದು ನಿಮ್ಮ ಕೆಲಸ” ಎಂದು ಆಜ್ಞಾಪಿಸಿ ಕಳುಹಿಸಿದರು.
12 ಹಾಗೆಯೇ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡರು. ಅವರು ಯಾವುದೇ ಪುರುಷರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನ್ನು ಕಾನಾನ್ ದೇಶದಲ್ಲಿರುವ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತಂದರು.
೧೨ಯಾಬೇಷ್ ಗಿಲ್ಯಾದಿನಲ್ಲಿ ಇನ್ನೂ ಮದುವೆಯಾಗದಿದ್ದ ನಾನೂರು ಮಂದಿ ಯುವತಿಯರಿದ್ದರು. ಪಟ್ಟಣವನ್ನು ಸಂಹರಿಸುವುದಕ್ಕೆ ಹೋದವರು ಇವರನ್ನು ಉಳಿಸಿ, ಕಾನಾನ್ ದೇಶದ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತೆಗೆದುಕೊಂಡು ಬಂದರು.
13 ಆಗ ಸಭೆಯವರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾಮೀನ್ಯರ ಸಂಗಡ ಮಾತನಾಡಿ, ಅವರಿಗೆ ಸಮಾಧಾನವನ್ನು ಸಾರಲು ಕೆಲವರನ್ನು ಕಳುಹಿಸಿದರು.
೧೩ಅನಂತರ ಸರ್ವಸಭೆಯವರು ರಿಮ್ಮೋನ್ ಗಿರಿಯಲ್ಲಿದ್ದ ಬೆನ್ಯಾಮೀನ್ಯರ ಬಳಿಗೆ ದೂತರನ್ನು ಕಳುಹಿಸಿ ಅವರಲ್ಲಿ ಸಮಾಧಾನ ವಾಕ್ಯವನ್ನು ಪ್ರಕಟಿಸಲು ಅವರು ತಿರುಗಿ ಬಂದರು.
14 ಆ ಕಾಲದಲ್ಲಿ ಬೆನ್ಯಾಮೀನ್ಯರು ತಿರುಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯರಲ್ಲಿ ಜೀವದಿಂದ ಉಳಿಸಿದ ಕನ್ನಿಕೆಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಆದರೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ.
೧೪ಇಸ್ರಾಯೇಲರು ತಾವು ಯಾಬೇಷ್ ಗಿಲ್ಯಾದಿನಿಂದ ಉಳಿಸಿ ತಂದ ಕನ್ಯೆಯರನ್ನು ಅವರಿಗೆ ಮದುವೆಮಾಡಿಕೊಟ್ಟರು; ಆದರೂ ಅನೇಕರಿಗೆ ಕನ್ಯೆಯರು ದೊರೆಯಲಿಲ್ಲ.
15 ಯೆಹೋವ ದೇವರು ಇಸ್ರಾಯೇಲ್ ಗೋತ್ರಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನರಿಗಾಗಿ ಪಶ್ಚಾತ್ತಾಪ ಪಟ್ಟರು.
೧೫ಯೆಹೋವನು ಇಸ್ರಾಯೇಲಿನ ಕುಲಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನ್ಯರ ವಿಷಯದಲ್ಲಿ ದುಃಖಪಟ್ಟರು.
16 ಸಮೂಹದ ಹಿರಿಯರು, “ಬೆನ್ಯಾಮೀನನ ಗೋತ್ರದ ಸ್ತ್ರೀಯರು ನಾಶವಾದದ್ದರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವುದಕ್ಕಾಗಿ ಏನು ಮಾಡೋಣ?
೧೬ಸಭೆಯ ಹಿರಿಯರು, “ಉಳಿದಿರುವ ಬೆನ್ಯಾಮೀನ್ಯರಿಗೋಸ್ಕರ ಹೆಂಡತಿಯರನ್ನು ದೊರಕಿಸಿ ಕೊಡುವುದು ಹೇಗೆ? ಅವರ ಸ್ತ್ರೀಯರೆಲ್ಲಾ ಸಂಹಾರವಾದರಲ್ಲಾ.
17 ಇಸ್ರಾಯೇಲಿನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾಮೀನ್ಯರಿಗೆ ಬಾಧ್ಯತೆ ಇರಬೇಕು.
೧೭ಇಸ್ರಾಯೇಲ್ಯರ ಒಂದು ಪೂರ್ಣ ಕುಲವು ಅಳಿದುಹೋಗಬಾರದು; ತಪ್ಪಿಸಿಕೊಂಡು ಉಳಿದಿರುವ ಬೆನ್ಯಾಮೀನರಿಗೆ ಬಾಧ್ಯಸ್ಥರು ಹುಟ್ಟುಬೇಕಲ್ಲಾ.
18 ‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು.
೧೮ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಾಯೇಲರು ಶಾಪಗ್ರಸ್ತರಾಗಲಿ ಎಂದು ಆಣೆಯಿಟ್ಟುಕೊಂಡಿದ್ದ ಕಾರಣ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ” ಎಂದು ಮಾತನಾಡಿಕೊಳ್ಳುತ್ತಿದ್ದರು.
19 ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು.
೧೯ಆಗ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವನ ಉತ್ಸವ ನಡೆಯುತ್ತದೆಂಬುದು ಅವರ ನೆನಪಿಗೆ ಬಂದಿತು. (ಶೀಲೋ ಎಂಬುದು ಬೇತೇಲಿನ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ, ಲೆಬೋನದ ದಕ್ಷಿಣಕ್ಕೂ ಇರುತ್ತದೆ.)
20 ಅವರು ಬೆನ್ಯಾಮೀನ್ಯರಿಗೆ, “ನೀವು ಹೋಗಿ ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ.
೨೦ಆಗ ಅವರು ಬೆನ್ಯಾಮೀನ್ಯರನ್ನು ಕರೆದು ಅವರಿಗೆ, “ಇಗೋ, ನೀವು ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ;
21 ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು.
೨೧ಶೀಲೋವಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ, ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನತನಗೆ ಶೀಲೋವಿನ ಕನ್ಯೆಯರಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಸೀಮೆಗೆ ಓಡಿಹೋಗಿರಿ.
22 ಅವರ ತಂದೆಗಳಾದರೂ, ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯವಾಡುವುದಕ್ಕೆ ಬಂದರೆ, ನಾವು ಅವರಿಗೆ, “ಯುದ್ಧದಲ್ಲಿ ನಾವು ಅವನವನಿಗೆ ಹೆಂಡತಿಯನ್ನು ದೊರಕಿಸಿದ ಕಾರಣ, ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಏಕೆಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ,” ಎಂದರು.
೨೨ಅವರ ತಂದೆಗಳೂ, ಅಣ್ಣತಮ್ಮಂದಿರೂ ನಮ್ಮ ಹತ್ತಿರ ದೂರು ತಂದರೆ ನಾವು ಅವರಿಗೆ, ‘ನಮ್ಮನ್ನು ನೋಡಿ ಅವರಿಗೆ ಕೃಪೆತೋರಿಸಿರಿ; ಯುದ್ಧದಿಂದ ಪ್ರತಿಯೊಬ್ಬನಿಗೆ ಹೆಣ್ಣನ್ನು ದೊರಕಿಸುವುದು ನಮ್ಮಿಂದಾಗಲಿಲ್ಲವಲ್ಲಾ; ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಕೊಡಲಿಲ್ಲವಾದ್ದರಿಂದ ನೀವು ನಿರಪರಾಧಿಗಳು’ ಎಂದು ಹೇಳಿ ಸಮಾಧಾನಪಡಿಸುವೆವು” ಅಂದರು.
23 ಆಗ ಬೆನ್ಯಾಮೀನ್ಯರು ಅದೇ ಪ್ರಕಾರಮಾಡಿ, ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡಿದುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು, ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ, ಪಟ್ಟಣಗಳನ್ನು ಕಟ್ಟಿ, ಅವುಗಳಲ್ಲಿ ವಾಸಿಸಿದರು.
೨೩ಅದರಂತೆಯೇ ಬೆನ್ಯಾಮೀನ್ಯರು ನೃತ್ಯಮಾಡುತ್ತ ಹೊರಗೆ ಬಂದಿದ್ದ ಕನ್ಯೆಯರಲ್ಲಿ ತಮ್ಮ ಸಂಖ್ಯೆಗೆ ಸರಿಯಾಗುವಷ್ಟು ಮಂದಿಯನ್ನು ಹೆಂಡತಿಯರನ್ನಾಗಿ ಹಿಡಿದುಕೊಂಡು ತಮ್ಮ ಸ್ವಾಧೀನವಾದ ಭೂಮಿಗೆ ಹೋಗಿ ಅಲ್ಲಿ ಪಟ್ಟಣಗಳನ್ನು ಕಟ್ಟಿ ವಾಸಮಾಡಿದರು.
24 ಇಸ್ರಾಯೇಲರು ಆ ಕಾಲದಲ್ಲಿ ಆ ಸ್ಥಳವನ್ನು ಬಿಟ್ಟು, ತಮ್ಮ ತಮ್ಮ ಗೋತ್ರಕ್ಕೂ, ತಮ್ಮ ತಮ್ಮ ಕುಟುಂಬಕ್ಕೂ ಹೋದರು. ಅಲ್ಲಿಂದ ಒಬ್ಬೊಬ್ಬನು ತನ್ನ ಬಾಧ್ಯತೆಗೆ ಹೊರಟುಹೋದನು.
೨೪ಅನಂತರ ಇಸ್ರಾಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು.
25 ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.
೨೫ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.