< ನ್ಯಾಯಸ್ಥಾಪಕರು 13 >
1 ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ, ಯೆಹೋವ ದೇವರು ಅವರನ್ನು ನಾಲ್ವತ್ತು ವರ್ಷದವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟರು.
೧ಇಸ್ರಾಯೇಲರು ತಿರುಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದುದರಿಂದ ಆತನು ಅವರನ್ನು ನಲ್ವತ್ತು ವರ್ಷಗಳ ಕಾಲ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.
2 ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು.
೨ಚೊರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಬಂಜೆಯಾಗಿದ್ದರಿಂದ ಅವನಿಗೆ ಮಕ್ಕಳಿರಲಿಲ್ಲ.
3 ಯೆಹೋವ ದೇವರ ದೂತನು ಆ ಸ್ತ್ರೀಗೆ ಪ್ರತ್ಯಕ್ಷವಾಗಿ ಅವಳಿಗೆ, “ಇಗೋ, ನೀನು ಮಕ್ಕಳನ್ನು ಹೆರದೆ ಬಂಜೆಯಾಗಿದ್ದೀಯೆ. ಆದರೆ ನೀನು ಗರ್ಭಧರಿಸಿ ಒಬ್ಬ ಮಗನನ್ನು ಹೆರುವೆ.
೩ಒಂದಾನೊಂದು ದಿನ ಯೆಹೋವನ ದೂತನು ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ.
4 ಆದ್ದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ, ಅಶುಚಿಯಾದ ಒಂದನ್ನಾದರೂ ತಿನ್ನದೆ, ಎಚ್ಚರಿಕೆಯಾಗಿರಬೇಕು.
೪ಆದುದರಿಂದ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥಗಳನ್ನು ಊಟಮಾಡದಿರು.
5 ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು.
೫ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಲು ಪ್ರಾರಂಭಿಸುವನು” ಅಂದನು.
6 ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆ, “ಒಬ್ಬ ದೇವರ ಮನುಷ್ಯ ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾ ಭಯಂಕರವಾಗಿತ್ತು. ನಾನು ಅವನನ್ನು ಎಲ್ಲಿಂದ ಬಂದೆ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ.
೬ತರುವಾಯ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವರಪುರುಷನು ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದಂತಿದ್ದು ಭಯಂಕರನಾಗಿದ್ದನು. ನೀನು ಎಲ್ಲಿಂದ ಬಂದಿ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.
7 ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.”
೭ಆದರೆ ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವಿ; ಆದುದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು, ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಹುಡುಗನು ಹುಟ್ಟಿದಂದಿನಿಂದ ಸಾಯುವ ವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು’ ಎಂದು ಹೇಳಿದನು” ಅಂದಳು.
8 ಆಗ ಮಾನೋಹನು ಯೆಹೋವ ದೇವರಿಗೆ ಬೇಡಿಕೊಂಡು, “ನನ್ನ ಕರ್ತದೇವರೇ, ನೀವು ಕಳುಹಿಸಿದ ದೇವರ ಮನುಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು, ಹುಟ್ಟುವ ಕೂಸಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ,” ಎಂದು ಪ್ರಾರ್ಥಿಸಿದನು.
೮ಮಾನೋಹನು ಇದನ್ನು ಕೇಳಿ ಯೆಹೋವನಿಗೆ, “ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ” ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದನು.
9 ದೇವರು ಮಾನೋಹನ ಬೇಡಿಕೆಯನ್ನು ಕೇಳಿದರು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ, ದೇವದೂತನು ತಿರುಗಿ ಅವಳ ಬಳಿಗೆ ಬಂದನು. ಆಗ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ.
೯ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ ದೇವದೂತನು ಪುನಃ ಬಂದನು. ಆಕೆಯ ಗಂಡನಾದ ಮಾನೋಹನು ಅಲ್ಲಿರಲಿಲ್ಲ.
10 ಆದ್ದರಿಂದ ಅವಳು ಬೇಗ ಓಡಿಹೋಗಿ, ತನ್ನ ಗಂಡನಿಗೆ, “ಇಗೋ, ಆ ದಿನ ನನಗೆ ಪ್ರತ್ಯಕ್ಷನಾದ ಮನುಷ್ಯನು ತಿರುಗಿ ನನಗೆ ಪ್ರತ್ಯಕ್ಷನಾಗಿದ್ದಾನೆ,” ಎಂದು ತಿಳಿಸಿದಳು.
೧೦ಆದ್ದರಿಂದ ಆಕೆಯು ಬೇಗನೆ ಗಂಡನ ಬಳಿಗೆ ಹೋಗಿ, “ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷನು ತಿರುಗಿ ಬಂದಿದ್ದಾನೆ” ಎಂದು ತಿಳಿಸಲು
11 ಆಗ ಮಾನೋಹನು ಎದ್ದು ತನ್ನ ಹೆಂಡತಿಯೊಡನೆ ಹೋಗಿ, ಅವನ ಬಳಿಗೆ ಬಂದು, ಅವನಿಗೆ, “ಈ ಸ್ತ್ರೀಯ ಸಂಗಡ ಮಾತನಾಡಿದವನು ನೀನೋ?” ಎಂದನು. ಅವನು, “ನಾನೇ,” ಎಂದನು.
೧೧ಅವನೆದ್ದು ಹೆಂಡತಿಯೊಡನೆ ಬಂದು ಆ ಪುರುಷನಿಗೆ, “ಮೊನ್ನೆ ಈಕೆಯೊಡನೆ ಮಾತನಾಡಿದವನು ನೀನೋ” ಎಂದು ಕೇಳಲು ಅವನು, “ಹೌದು, ನಾನೇ” ಅಂದನು.
12 ಮಾನೋಹನು, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ಆ ಕೂಸಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದನು.
೧೨ಆಗ ಮಾನೋಹನು, “ನೀನು ಹೇಳಿದ್ದು ನೆರವೇರಿದಾಗ ನಾವು ಆ ಮಗುವಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ಬೆಳೆಸಬೇಕು” ಎಂದು ಕೇಳಲು
13 ಯೆಹೋವ ದೇವರ ದೂತನು ಮಾನೋಹನಿಗೆ, “ನಾನು ಈ ಸ್ತ್ರೀಗೆ ಹೇಳಿದ್ದೆಲ್ಲದರಲ್ಲಿ ಅವಳು ಎಚ್ಚರಿಕೆಯಾಗಿದ್ದು,
೧೩ಯೆಹೋವನ ದೂತನು ಮಾನೋಹನಿಗೆ, “ನಾನು ಹೇಳಿದ್ದನ್ನೆಲ್ಲಾ ಈಕೆಯು ಜಾಗರೂಕತೆಯಿಂದ ಕೈಕೊಳ್ಳಲಿ.
14 ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು.
೧೪ದ್ರಾಕ್ಷಾಫಲವನ್ನು ತಿನ್ನದಿರಲಿ; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರಲಿ; ನಿಷಿದ್ಧಾಹಾರವನ್ನು ಮುಟ್ಟದಿರಲಿ; ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳಲಿ” ಅಂದನು.
15 ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು.
೧೫ಮತ್ತು ಮಾನೋಹನು ಯೆಹೋವನ ದೂತನನ್ನು, “ನಾವು ನಿನಗೋಸ್ಕರ ಒಂದು ಹೋತಮರಿಯನ್ನು ಪಕ್ವಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು” ಎಂದು ಬೇಡಿಕೊಂಡನು.
16 ಯೆಹೋವ ದೇವರ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ, ನಾನು ನಿನ್ನ ರೊಟ್ಟಿಯನ್ನು ತಿನ್ನುವುದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ, ಅದನ್ನು ಯೆಹೋವ ದೇವರಿಗೆ ಅರ್ಪಿಸಬೇಕು,” ಎಂದನು.
೧೬ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ಆಹಾರವನ್ನು ಊಟಮಾಡುವುದಿಲ್ಲ; ಯಜ್ಞಮಾಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸಮರ್ಪಿಸು” ಅಂದನು. ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.
17 ಏಕೆಂದರೆ ಅವನು ಯೆಹೋವ ದೇವರ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಯೆಹೋವ ದೇವರ ದೂತನಿಗೆ, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ನಿನ್ನನ್ನು ಘನಪಡಿಸುವ ಹಾಗೆ ನಿನ್ನ ಹೆಸರೇನು?” ಎಂದನು.
೧೭ಆದ್ದರಿಂದ ಅವನು ಆ ದೂತನನ್ನು, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ, ನಿನ್ನ ಹೆಸರೇನು” ಎಂದು ಕೇಳಿದನು.
18 ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು.
೧೮ಯೆಹೋವನ ದೂತನು, “ನನ್ನ ಹೆಸರನ್ನು ಕೇಳುವುದೇಕೆ? ಅದು ಆಶ್ಚರ್ಯಕರವಾದದ್ದು” ಅಂದನು.
19 ಹೀಗೆ ಮಾನೋಹನು ಮೇಕೆಯ ಮರಿಯನ್ನೂ, ಧಾನ್ಯ ಸಮರ್ಪಣೆಯನ್ನೂ ತಂದು, ಅವುಗಳನ್ನು ಬಂಡೆಯ ಮೇಲೆ ಯೆಹೋವ ದೇವರಿಗೆ ಅರ್ಪಿಸಿದನು. ಮಾನೋಹನೂ, ಅವನ ಹೆಂಡತಿಯೂ ನೋಡುವಾಗ, ಯೆಹೋವ ದೇವರ ದೂತನು ಆಶ್ಚರ್ಯಕರವಾದ ಸಂಗತಿಯನ್ನು ಮಾಡಿದನು.
೧೯ಮಾನೋಹನು ಹೋತಮರಿಯನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. ಮಾನೋಹನೂ ಅವನ ಹೆಂಡತಿಯೂ ನೋಡುತ್ತಿರುವಾಗಲೇ ಯೆಹೋವನ ದೂತನು ಆಶ್ಚರ್ಯವನ್ನು ನಡಿಸಿದನು.
20 ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು.
೨೦ಏನೆಂದರೆ ಅವನು ಯಜ್ಞವೇದಿಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯೊಳಗೆ ಮೇಲಕ್ಕೇರಿ ಹೋದನು. ಅವರು ಇದನ್ನು ನೋಡುತ್ತಲೆ ನೆಲದ ಮೇಲೆ ಬೋರಲುಬಿದ್ದರು.
21 ಯೆಹೋವ ದೇವರ ದೂತನು ಮಾನೋಹನಿಗೂ, ಅವನ ಹೆಂಡತಿಗೂ ತಿರುಗಿ ಕಾಣಿಸಲಿಲ್ಲ. ಆಗ ಮಾನೋಹನು, ಅವನು ದೇವರ ದೂತನು ಎಂದು ತಿಳಿದುಕೊಂಡನು.
೨೧ಯೆಹೋವನ ದೂತನು ಮಾನೋಹನಿಗೂ ಅವನ ಹೆಂಡತಿಗೂ ಮತ್ತೆ ಕಾಣಿಸಲಿಲ್ಲ. ಆಗ ಮಾನೋಹನು ಆತನು ಯೆಹೋವನ ದೂತನೆಂದು ತಿಳಿದು
22 ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಂಡದ್ದರಿಂದ ನಿಶ್ಚಯವಾಗಿ ಸಾಯುವೆವು,” ಎಂದನು.
೨೨ತನ್ನ ಹೆಂಡತಿಗೆ, “ನಾವು ಸಾಯುವುದು ನಿಜ, ದೇವರನ್ನು ಕಣ್ಣಾರೆ ಕಂಡೆವಲ್ಲಾ” ಅಂದನು.
23 ಅವನ ಹೆಂಡತಿ ಅವನಿಗೆ, “ಯೆಹೋವ ದೇವರು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಅವರು ನಮ್ಮ ಕೈಯಿಂದ ದಹನಬಲಿಯನ್ನೂ, ಅರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯಮಾಡುತ್ತಿರಲಿಲ್ಲ,” ಎಂದಳು.
೨೩ಆದರೆ ಆಕೆಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಯಜ್ಞವನ್ನೂ, ನೈವೇದ್ಯವನ್ನೂ ಸ್ವೀಕರಿಸುತ್ತಿರಲಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ, ಹೇಳುತ್ತಿರಲಿಲ್ಲ” ಅಂದಳು.
24 ಆ ಸ್ತ್ರೀಯು ಮಗನನ್ನು ಹೆತ್ತು, ಅವನಿಗೆ ಸಂಸೋನ ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
೨೪ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನೆಂದು ಹೆಸರಿಟ್ಟಳು. ಹುಡುಗನು ದೊಡ್ಡವನಾದನು. ಯೆಹೋವನ ಆಶೀರ್ವಾದವು ಅವನ ಮೇಲಿತ್ತು.
25 ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು.
೨೫ಇದಲ್ಲದೆ ಅವನು ಚೊರ್ಗಕ್ಕೂ, ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಯೆಹೋವನ ಆತ್ಮವು ಅವನನ್ನು ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿತು.