< ಯೆಹೋಶುವನು 7 >
1 ಆದರೆ ಇಸ್ರಾಯೇಲರು ಅರ್ಪಿತವಾದ ವಸ್ತುಗಳ ವಿಷಯದಲ್ಲಿ ಅಪನಂಬಿಕೆಯಿಂದ ನಡೆದುಕೊಂಡರು. ಯೆಹೂದ ಗೋತ್ರದ ಜೆರಹನ ಮೊಮ್ಮಗನೂ, ಜಿಮ್ರಿಯ ಮಗನೂ ಆದ ಕರ್ಮೀಯ ಮಗನಾದ ಆಕಾನನು ಅರ್ಪಿತವಾದ ವಸ್ತುಗಳಲ್ಲಿ ಕೆಲವನ್ನು ಕದ್ದುಕೊಂಡನು. ಇದರಿಂದ ಇಸ್ರಾಯೇಲರ ಮೇಲೆ ಯೆಹೋವ ದೇವರ ಕೋಪವು ಉರಿಯಿತು.
೧ಯೆಹೂದ ಕುಲದವನೂ ಜೆರಹನ ಗೋತ್ರದವನೂ, ಜಬ್ದೀಯ ಕುಟುಂಬದವನೂ, ಕರ್ಮೀಯ ಮಗನೂ ಆದ ಆಕಾನನು ಯೆಹೋವನಿಗೆ ಮೀಸಲಾಗಿಟ್ಟ ವಸ್ತುಗಳಲ್ಲಿ ಕೆಲವನ್ನು ಕದ್ದುಕೊಂಡದ್ದರಿಂದ ಇಸ್ರಾಯೇಲ್ಯರೆಲ್ಲರು ದ್ರೋಹಿಗಳಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು.
2 ಆಗ ಯೆಹೋಶುವನು ಕೆಲವರನ್ನು ಕರೆದು, “ನೀವು ದೇಶವನ್ನು ಸಂಚರಿಸಿ ಸುತ್ತಿ ನೋಡಿ ಬನ್ನಿರಿ,” ಎಂದು ಹೇಳಿ, ಯೆರಿಕೋವಿನಿಂದ ಜನರನ್ನು ಬೇತೇಲಿನ ಪೂರ್ವದಕಡೆ ಬೇತಾವೆನಿನ ಬಳಿಯಲ್ಲಿರುವ ಆಯಿ ಎಂಬ ಪಟ್ಟಣಕ್ಕೆ ಕಳುಹಿಸಿದನು. ಆಗ ಅವರು ಹೋಗಿ ಆಯಿ ಎಂಬ ಪಟ್ಟಣವನ್ನು ರಹಸ್ಯವಾಗಿ ನೋಡಿ ಬಂದರು.
೨ಯೆಹೋಶುವನು ಕೆಲವು ಜನರನ್ನು ಕರೆದು “ನೀವು ಗಟ್ಟಾ ಹತ್ತಿ ಬೇತೇಲಿನ ಪೂರ್ವಕ್ಕೂ ಬೇತಾವೆನಿನ ಸಮೀಪದಲ್ಲೂ ಇರುವ ‘ಆಯಿ’ ಎಂಬ ಪ್ರಾಂತ್ಯದಲ್ಲಿ ರಹಸ್ಯವಾಗಿ ಸಂಚರಿಸಿ ನೋಡಿರಿ” ಎಂದು ಹೇಳಿ ಅವರನ್ನು ಯೆರಿಕೋವಿನಿಂದ ಕಳುಹಿಸಿದನು. ಅವರು ಹೋಗಿ ಆಯಿ ಎಂಬ ಊರಲ್ಲಿ ಸಂಚರಿಸಿ ನೋಡಿ,
3 ಯೆಹೋಶುವನ ಬಳಿಗೆ ತಿರುಗಿಬಂದು ಅವನಿಗೆ, “ಜನರೆಲ್ಲರೂ ಹೋಗುವ ಅವಶ್ಯಕತೆ ಇಲ್ಲ, ಆಯಿ ಎಂಬ ಪಟ್ಟಣವನ್ನು ಹೊಡೆಯುವುದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಹೋದರೆ ಸಾಕು. ಸೈನ್ಯವನ್ನು ಕಳುಹಿಸಿ ದಣಿಸಬೇಡ. ಏಕೆಂದರೆ ಸ್ವಲ್ಪ ಜನರು ಮಾತ್ರ ಅಲ್ಲಿ ಇದ್ದಾರೆ,” ಎಂದರು.
೩ಹಿಂದಿರುಗಿ ಬಂದು ಯೆಹೋಶುವನಿಗೆ “ಎಲ್ಲಾ ಜನರು ಹೋಗುವುದು ಅವಶ್ಯವಿಲ್ಲ; ಎರಡು ಅಥವಾ ಮೂರು ಸಾವಿರ ಮಂದಿ ಹೋದರೆ ಸಾಕು. ಅವರೇ ಪಟ್ಟಣವನ್ನು ಜಯಿಸಬಹುದು. ಎಲ್ಲರನ್ನೂ ಕಳುಹಿಸಿ ಸುಮ್ಮನೆ ದಣಿಸುವುದೇತಕೆ? ಅವರು ಕಡಿಮೆ ಜನರಿದ್ದಾರೆ” ಎಂದು ಹೇಳಿದರು.
4 ಆದ್ದರಿಂದ ಜನರಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಅಲ್ಲಿಗೆ ಹೋದರು. ಆದರೆ ಅವರು ಆಯಿ ಎಂಬ ಪಟ್ಟಣದ ಮನುಷ್ಯರನ್ನು ಎದುರಿಸಲಾಗದೆ ಓಡಿಹೋದರು.
೪ಅದರಂತೆ ಸುಮಾರು ಮೂರು ಸಾವಿರ ಮಂದಿ ಯುದ್ಧಕ್ಕೆ ಹೋದರು. ಆದರೆ ಅವರು ಆಯಿ ಊರಿನವರ ಎದುರಿನಿಂದ ಓಡಿ ಹೋಗಬೇಕಾಯಿತು.
5 ಆಯಿ ಎಂಬ ಪಟ್ಟಣದವರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಪಟ್ಟಣದ ಬಾಗಿಲಿನಿಂದ ಪ್ರಾರಂಭಿಸಿ ಶೆಬಾರಿಮಿನವರೆಗೂ ಅವರನ್ನು ಹಿಂದಟ್ಟಿ, ಅವರನ್ನು ಹೊಡೆದರು. ಆದ್ದರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
೫ಆಯಿ ಊರಿನವರು ಅವರನ್ನು ಊರ ಬಾಗಿಲಿನಿಂದ ಕಲ್ಲುಗಣಿಗಳವರೆಗೂ ಹಿಂದಟ್ಟಿ ಇಳಿನೆಲದಲ್ಲಿ ಅವರನ್ನು ಸೋಲಿಸಿ ಸುಮಾರು ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಇದರಿಂದ ಇಸ್ರಾಯೇಲರ ಧೈರ್ಯ ಕುಂದಿಹೋಯಿತು.
6 ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡನು. ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಂಜೆಯವರೆಗೆ ಯೆಹೋವ ದೇವರ ಮಂಜೂಷದ ಮುಂದೆ ನೆಲದ ಮೇಲೆ ಬೋರಲು ಬಿದ್ದರು.
೬ಆಗ ಯೆಹೋಶುವನೂ ಮತ್ತು ಇಸ್ರಾಯೇಲ್ಯರ ಹಿರಿಯರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಭೂದಿಯನ್ನು ಹಾಕಿಕೊಂಡು ಸಾಯಂಕಾಲದವರೆಗೂ ಯೆಹೋವನ ಮಂಜೂಷದ ಮುಂದೆ ಬೋರಲು ಬಿದ್ದರು.
7 ಇದಲ್ಲದೆ ಯೆಹೋಶುವನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ನಮ್ಮನ್ನು ಅಮೋರಿಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕಾಗಿ ನೀವು ಈ ಜನರನ್ನು ಯೊರ್ದನ್ ನದಿ ದಾಟಿಸಿದ್ದು ಏಕೆ? ನಾವು ಯೊರ್ದನ್ ನದಿ ಆಚೆಯಲ್ಲಿ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
೭ಯೆಹೋಶುವನು “ಅಯ್ಯೋ, ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶ ಮಾಡಬೇಕೆಂದಿರುವಿಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು.
8 ಯೆಹೋವ ದೇವರೇ, ಈಗ ಇಸ್ರಾಯೇಲರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದರಲ್ಲಾ. ನಾನು ಏನು ಹೇಳಲಿ.
೮ಕರ್ತನೇ, ಇಸ್ರಾಯೇಲ್ಯರು ಶತ್ರುಗಳಿಗೆ ಬೆನ್ನು ತೋರಿಸಬೇಕಾಯಿತಲ್ಲಾ.
9 ಕಾನಾನ್ಯರೂ ದೇಶವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದುಬಿಡುವರು, ಆಗ ನಿಮ್ಮ ಮಹತ್ತಾದ ಹೆಸರಿಗೆ ಏನು ಮಾಡುವಿರಿ?” ಎಂದನು.
೯ನಾನು ಏನು ತಾನೇ ಹೇಳಲಿ? ಕಾನಾನ್ಯರೂ ಮತ್ತು ದೇಶದ ಬೇರೆ ಎಲ್ಲಾ ನಿವಾಸಿಗಳೂ ಇದನ್ನು ಕೇಳಿ ನಮ್ಮನ್ನು ಸುತ್ತುವರೆದು ಲೋಕದಲ್ಲಿ ನಮ್ಮ ಹೆಸರು ಉಳಿಯದಂತೆ ಮಾಡುವರು. ಆಗ ನಿನ್ನ ಮಹತ್ತಾದ ಹೆಸರನ್ನು ಉಳಿಸಿಕೊಳ್ಳಲು ಏನು ಮಾಡುವಿ?” ಎಂದನು.
10 ಯೆಹೋವ ದೇವರು ಯೆಹೋಶುವನಿಗೆ, “ನೀನು ಎದ್ದೇಳು, ನೀನು ಈ ಪ್ರಕಾರ ಬೋರಲು ಬಿದ್ದಿರುವುದೇನು?
೧೦ಆಗ ಯೆಹೋವನು ಯೆಹೋಶುವನಿಗೆ ಹೇಳಿದ್ದೇನೆಂದರೆ “ಏಳು, ನೀನು ಈ ಪ್ರಕಾರ ಬೋರಲು ಬಿದ್ದಿರುವುದೇಕೆ?
11 ಇಸ್ರಾಯೇಲರು ಪಾಪಮಾಡಿದ್ದಾರೆ. ನಾನು ತಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿದರು. ಅವರು ಅರ್ಪಿತವಾದದ್ದರಲ್ಲಿ ಕೆಲವೊಂದನ್ನು ಕಳವು ಮಾಡಿ ತೆಗೆದುಕೊಂಡು, ವಂಚನೆಮಾಡಿ ಅದನ್ನು ತಮ್ಮ ಸಲಕರಣೆಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
೧೧ಇಸ್ರಾಯೇಲ್ಯರು ನನ್ನ ನಿಬಂಧನೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಕೊಳ್ಳೆಯಲ್ಲಿ ಮೀಸಲಾದ ವಸ್ತುಗಳನ್ನು ಕದ್ದು ತಮ್ಮ ಸಾಮಾನುಗಳಲ್ಲಿ ಅಡಗಿಸಿಟ್ಟು ವಂಚಕರಾಗಿದ್ದಾರೆ.
12 ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನು ತೋರಿಸಿದ್ದಾರೆ. ಅದರಿಂದ ಅವರು ನಾಶನಕ್ಕೆ ಪಾತ್ರರಾದರು. ನೀವು ಶಾಪಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ, ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವುದಿಲ್ಲ.
೧೨ಆದುದರಿಂದ ಇಸ್ರಾಯೇಲ್ಯರು ಶತ್ರುಗಳ ಮುಂದೆ ನಿಲ್ಲಲಾರದೆ ಅವರಿಗೆ ಬೆನ್ನು ತೋರಿಸಿದ್ದಾರೆ. ಅವರು ಶಾಪಗ್ರಸ್ತರೇ ಸರಿ. ಶಾಪಕ್ಕೆ ಕಾರಣವಾದವರನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವ ತನಕ ನಾನು ನಿಮ್ಮ ಸಂಗಡ ಬರುವುದಿಲ್ಲ.
13 “ನೀನು ಎದ್ದು ಜನರನ್ನು ಶುದ್ಧೀಕರಿಸಿ, ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ, ಏಕೆಂದರೆ, ‘ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು, ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವವರೆಗೂ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರೆ,’ ಎಂದು ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುತ್ತಾರೆ.
೧೩ನೀನೆದ್ದು ಜನರನ್ನು ಶುದ್ಧೀಕರಿಸು. ನೀನು ಅವರಿಗೆ ‘ಇಸ್ರಾಯೇಲ್ಯರೇ, ನಾಳೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಿಮ್ಮ ಮಧ್ಯದಲ್ಲಿ ಶಾಪಕ್ಕೆ ಕಾರಣವಾದ ವಸ್ತುವಿದೆ. ನೀವು ಅದನ್ನು ತೆಗೆದುಹಾಕುವ ತನಕ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ನಿಮ್ಮ ದೇವರಾದ ಯೆಹೋವನು ಹೇಳಿದ್ದಾನೆ.
14 “‘ಆದ್ದರಿಂದ ಬೆಳಿಗ್ಗೆ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಯೆಹೋವ ದೇವರು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರವಾಗಿಯೂ ಯೆಹೋವ ದೇವರು ಹಿಡಿಯುವ ಕುಟುಂಬವು ಮನೆಮನೆಯಾಗಿಯೂ ಯೆಹೋವ ದೇವರು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ.
೧೪ನಾಳೆ ಬೆಳಿಗ್ಗೆ ನೀವು ಕುಲ ಕುಲವಾಗಿ ನನ್ನ ಬಳಿಗೆ ಬನ್ನಿರಿ. ಯೆಹೋವನು ಯಾವ ಕುಲವನ್ನು ಸೂಚಿಸುತ್ತಾನೋ ಆ ಕುಲವು ಗೋತ್ರ ಗೋತ್ರವಾಗಿ, ಯಾವ ಗೋತ್ರವನ್ನು ಸೂಚಿಸುತ್ತಾನೋ ಆ ಗೋತ್ರವು ಕುಟುಂಬ ಕುಟುಂಬವಾಗಿ ನನ್ನ ಬಳಿಗೆ ಬರಬೇಕು. ಯಾವ ಕುಟುಂಬನ್ನು ಸೂಚಿಸುತ್ತಾನೋ ಆ ಕುಟುಂಬದವರು ಒಬ್ಬೊಬ್ಬರಾಗಿ ನನ್ನ ಬಳಿಗೆ ಬರಬೇಕು.
15 ಆಗ ಶಾಪಕ್ಕೀಡಾದದ್ದನ್ನು ತೆಗೆದುಕೊಂಡವನೆಂದು ಹಿಡಿಯಲಾಗುವನು. ಯೆಹೋವ ದೇವರ ಒಡಂಬಡಿಕೆಯನ್ನು ಮೀರಿ, ಇಸ್ರಾಯೇಲಿನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲಾಗಬೇಕು, ಎಂದು ಅವರಿಗೆ ಹೇಳು,’ ಎಂದರು.”
೧೫ಯಾವನು ಮೀಸಲಾದ ವಸ್ತುಗಳನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುತ್ತಾನೋ ಅವನು ಯೆಹೋವನ ನಿಬಂಧನೆಯನ್ನು ಮೀರಿ ಇಸ್ರಾಯೇಲರಲ್ಲಿ ಬುದ್ಧಿಹೀನಕಾರ್ಯ ನಡಿಸಿದ್ದರಿಂದ ತನ್ನ ಎಲ್ಲಾ ಆಸ್ತಿ ಸಹಿತವಾಗಿ ಸುಡಲ್ಪಡಬೇಕು’” ಎಂದು ಹೇಳು ಎಂಬುದೇ.
16 ಮರುದಿನ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲನ್ನು ಗೋತ್ರ ಗೋತ್ರವಾಗಿ ಕರೆದಾಗ, ಯೆಹೂದ ಗೋತ್ರವು ಸಿಕ್ಕಿಕೊಂಡಿತು.
೧೬ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲರ ಕುಲಗಳನ್ನು ಒಂದೊಂದಾಗಿ ಬರಮಾಡಲು ಯೆಹೂದ ಕುಲವು ಹಿಡಿಯಲ್ಪಟ್ಟಿತು.
17 ಅವನು ಯೆಹೂದ ಕುಟುಂಬವನ್ನು ಕರೆದಾಗ, ಜೆರಹನ ಗೋತ್ರ ಸಿಕ್ಕಿಕೊಂಡಿತು. ಜೆರಹನ ಗೋತ್ರವನ್ನು ಕರೆದಾಗ ಜಿಮ್ರಿಯು ಸಿಕ್ಕಿಕೊಂಡಿತು.
೧೭ಅದರ ಗೋತ್ರಗಳನ್ನು ಕರೆದಾಗ ಜೆರಹನ ಗೋತ್ರವು ಸಿಕ್ಕಿಕೊಂಡಿತು. ಅ ಗೋತ್ರದ ಕುಟುಂಬಗಳನ್ನು ಕರೆದಾಗ ಜಬ್ದೀಯ ಕುಟುಂಬವು ಹಿಡಿಯಲ್ಪಟ್ಟಿತು.
18 ಅವನ ಕುಟುಂಬಗಳು ಕುಟುಂಬಗಳಾಗಿ, ವ್ಯಕ್ತಿಗಳು ವ್ಯಕ್ತಿಗಳಾಗಿ ಬಂದಾಗ, ಜಿಮ್ರಿಯ ಮಗನಾದ ಕರ್ಮೀಯ ಮಗನಾದ ಆಕಾನನೂ ಯೆಹೂದ ಕುಲದವನೂ ಜೆರಹನ ಗೋತ್ರದವನೂ ಸಿಕ್ಕಿದನು.
೧೮ಆ ಕುಟುಂಬದ ಪುರುಷರನ್ನು ಕರೆದಾಗ ಯೆಹೂದ ಕುಲದವನೂ ಜೆರಹನ ಗೋತ್ರದವನೂ ಜಬ್ದೀಯ ಕುಟುಂಬದವನೂ ಕರ್ಮೀಯನ ಮಗನೂ ಆದ ಆಕಾನನು ಹಿಡಿಯಲ್ಪಟ್ಟನು.
19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ನೀನು ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಘನಪಡಿಸಿ, ಅವರಿಗೆ ಸ್ತೋತ್ರ ಸಲ್ಲಿಸು. ಏನು ಮಾಡಿದೆಯೋ ಅದನ್ನು ನನಗೆ ತಿಳಿಸು, ನನಗೆ ಮರೆಮಾಡಬೇಡ,” ಎಂದನು.
೧೯ಆಗ ಯೆಹೋಶುವನು ಆಕಾನನಿಗೆ “ನನ್ನ ಮಗನೇ, ನೀನು ಇಸ್ರಾಯೇಲರ ದೇವರಾದ ಯೆಹೋವನನ್ನು ಘನಪಡಿಸಿ ಆತನಿಗೆ ಸ್ತೋತ್ರ ಸಲ್ಲಿಸು. ನೀನು ಮಾಡಿದ್ದನ್ನು ನನಗೆ ಹೇಳು, ಯಾವುದನ್ನೂ ಮುಚ್ಚಿಡಬೇಡ” ಅಂದನು.
20 ಆಕಾನನು ಯೆಹೋಶುವನಿಗೆ, “ನಿಜವಾಗಿ ನಾನು ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಇಂಥಿಂಥವುಗಳನ್ನು ಮಾಡಿದ್ದೇನೆ.
೨೦ಆಕಾನನು, “ನಾನು ಇಂಥ ಕಾರ್ಯವನ್ನು ಮಾಡಿ ಇಸ್ರಾಯೇಲಿನ ದೇವರಾದ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡ್ದಿದು ನಿಜ. ನಾನು ಕೊಳ್ಳೆಯಲ್ಲಿ ಶಿನಾರ್ ದೇಶದ ಒಂದು ಉತ್ತಮವಾದ ನಿಲುವಂಗಿಯನ್ನೂ ಇನ್ನೂರು ರೂಪಾಯಿ ತೂಕದ ಬೆಳ್ಳಿಯನ್ನೂ ಐವತ್ತು ರೂಪಾಯಿ ತೂಕದ ಬಂಗಾರದ ಗಟ್ಟಿಯನ್ನೂ ಕಂಡು ಅದನ್ನು ಮೋಹಿಸಿ ಆಸೆಯಿಂದ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ಹೂತಿಟ್ಟಿದ್ದೇನೆ; ಬೆಳ್ಳಿಯು ಅಂಗಿಯ ಕೆಳಗಿರುತ್ತದೆ” ಎಂದನು.
21 ನಾನು ಕೊಳ್ಳೆಯಲ್ಲಿ ಒಂದು ಶಿನಾರ್ ದೇಶದ ಒಳ್ಳೆಯ ವಸ್ತ್ರವನ್ನೂ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಅರ್ಧ ಕಿಲೋಗ್ರಾಂ ತೂಕದ ಒಂದು ಬಂಗಾರದ ಗಟ್ಟಿಯನ್ನು ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ, ಬೆಳ್ಳಿಯೂ ಅದರ ಕೆಳಗೆ ಇದೆ,” ಎಂದನು.
೨೧
22 ಆಗ ಯೆಹೋಶುವನು ದೂತರನ್ನು ಕಳುಹಿಸಿದನು. ಅವರು ಡೇರೆಗಳಿಗೆ ಓಡಿದರು. ಆ ಡೇರೆಯಲ್ಲಿ ಹೂತಿಟ್ಟವುಗಳನ್ನು ತೆಗೆದರು. ಬೆಳ್ಳಿಯು ಅದರ ಕೆಳಗೆ ಮರೆಮಾಡಲಾಗಿತ್ತು.
೨೨ಆಗ ಯೆಹೋಶುವನು ಆಳುಗಳನ್ನು ಕಳುಹಿಸಲು ಅವರು ಓಡಿಹೋಗಿ ಹುಡುಕಲಾಗಿ ಆ ನಿಲುವಂಗಿಯು ಗುಡಾರದಲ್ಲಿ ಹೂತಿಡಲಾಗಿತ್ತು. ಬೆಳ್ಳಿಯು ಅದರ ಕೆಳಗೆ ಇತ್ತು.
23 ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲರ ಬಳಿಗೂ ತಂದು, ಯೆಹೋವ ದೇವರ ಮುಂದೆ ಇಟ್ಟರು.
೨೩ಆಳುಗಳು ಅವುಗಳನ್ನು ಗುಡಾರದೊಳಗಿನಿಂದ ತೆಗೆದುಕೊಂಡು ಯೆಹೋಶುವನೂ ಇಸ್ರಾಯೇಲ್ಯರೂ ಇದ್ದಲ್ಲಿಗೆ ಬಂದು ಯೆಹೋವನ ಮುಂದಿಟ್ಟರು.
24 ಆಗ ಯೆಹೋಶುವನೂ ಅವನೊಂದಿಗೆ ಇಸ್ರಾಯೇಲರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಪುತ್ರಪುತ್ರಿಯರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ಕಣಿವೆಗೆ ತಂದರು.
೨೪ಯೆಹೋಶುವನೂ ಮತ್ತು ಎಲ್ಲಾ ಇಸ್ರಾಯೇಲ್ಯರೂ, ಜೆರಹನ ಮಗನಾದ ಆಕಾನನನ್ನು ಹಿಡಿದು ಬೆಳ್ಳಿ, ನಿಲುವಂಗಿ, ಬಂಗಾರದ ಗಟ್ಟಿ, ಅವನ ಗಂಡುಹೆಣ್ಣು ಮಕ್ಕಳನ್ನು, ದನ ಕರು, ಕತ್ತೆ, ಆಡುಕುರಿಗಳನ್ನು ಮತ್ತು ಗುಡಾರದ ಸಹಿತವಾಗಿ ಹಿಡಿದು ಆಕೋರಿನ ತಗ್ಗಿಗೆ ಒಯ್ದರು.
25 ಆಗ ಯೆಹೋಶುವನು ಅವನಿಗೆ, “ನೀನು ನಮ್ಮನ್ನು ಸಂಕಷ್ಟಪಡಿಸಿದ್ದೇನು? ಇಂದು ಯೆಹೋವ ದೇವರು ನಿನ್ನನ್ನು ಸಂಕಷ್ಟಪಡಿಸುವರು,” ಎಂದನು. ಆಗ ಇಸ್ರಾಯೇಲರೆಲ್ಲರೂ ಅವನ ಮೇಲೆ ಕಲ್ಲೆಸೆದರು. ಕಲ್ಲೆಸೆದ ತರುವಾಯ ಉಳಿದವರನ್ನು ಬೆಂಕಿಯಿಂದ ಸುಟ್ಟುಬಿಟ್ಟು,
೨೫ಆಗ ಯೆಹೋಶುವನು ಆಕಾನನಿಗೆ “ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ಹೊತ್ತು ಯೆಹೋವನು ನಿನ್ನ ಮೇಲೆ ಆಪತ್ತನ್ನು ಬರಮಾಡುವನು” ಎಂದು ಹೇಳಿದ ಕೂಡಲೆ ಇಸ್ರಾಯೇಲ್ಯರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಅವನಿಗಿದ್ದದ್ದೆಲ್ಲವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
26 ಅವರ ಮೇಲೆ ಕಲ್ಲುಕುಪ್ಪೆ ಕೂಡಿಸಿದರು. ಅದು ಈ ದಿನದವರೆಗೂ ಇದೆ. ಆಗ ಯೆಹೋವ ದೇವರು ತಮ್ಮ ಕೋಪದ ಉರಿಯನ್ನು ಬಿಟ್ಟು ತಿರುಗಿದರು. ಆದ್ದರಿಂದ ಆ ಸ್ಥಳವು ಈವರೆಗೂ ಆಕೋರಿನ ಕಣಿವೆ ಎಂದು ಕರೆಯಲಾಗುತ್ತದೆ.
೨೬ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ರಾಶಿಯು ನಿರ್ಮಾಣವಾಯಿತು. ಅದು ಇಂದಿನ ವರೆಗೂ ಇದೆ. ಆಗ ಯೆಹೋವನ ಕೋಪಾಗ್ನಿ ತಣ್ಣಗಾಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ.