< ಯೆಹೋಶುವನು 2 >

1 ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಶಿಟ್ಟೀಮಿನಿಂದ ಗುಪ್ತವಾಗಿ ಕಳುಹಿಸಿ, ಅವರಿಗೆ, “ನೀವು ಹೋಗಿ ದೇಶವನ್ನೂ, ವಿಶೇಷವಾಗಿ ಯೆರಿಕೋ ಪಟ್ಟಣವನ್ನೂ ಸುತ್ತಿ ನೋಡಿರಿ,” ಎಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದು ಅಲ್ಲಿಯೇ ಉಳಿದುಕೊಂಡರು.
וַיִּשְׁלַח יְהוֹשֻֽׁעַ־בִּן־נוּן מִֽן־הַשִּׁטִּים שְׁנַֽיִם־אֲנָשִׁים מְרַגְּלִים חֶרֶשׁ לֵאמֹר לְכוּ רְאוּ אֶת־הָאָרֶץ וְאֶת־יְרִיחוֹ וַיֵּלְכוּ וַיָּבֹאוּ בֵּית־אִשָּׁה זוֹנָה וּשְׁמָהּ רָחָב וַיִּשְׁכְּבוּ־שָֽׁמָּה׃
2 ಯೆರಿಕೋವಿನ ಅರಸನಿಗೆ, “ಇಗೋ, ಇಸ್ರಾಯೇಲರಲ್ಲಿ ಕೆಲವರು ದೇಶವನ್ನು ಗೂಢಚಾರ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾರೆ,” ಎಂದು ತಿಳಿಸಲಾಯಿತು.
וַיֵּאָמַר לְמֶלֶךְ יְרִיחוֹ לֵאמֹר הִנֵּה אֲנָשִׁים בָּאוּ הֵנָּה הַלַּיְלָה מִבְּנֵי יִשְׂרָאֵל לַחְפֹּר אֶת־הָאָֽרֶץ׃
3 ಆಗ ಯೆರಿಕೋವಿನ ಅರಸನು ರಾಹಾಬಳಿಗೆ, “ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರೆದುಕೊಂಡು ಬಾ. ಏಕೆಂದರೆ ಅವರು ದೇಶವನ್ನೆಲ್ಲಾ ಗೂಢಚಾರ ಮಾಡಲು ಬಂದಿದ್ದಾರೆ,” ಎಂದನು.
וַיִּשְׁלַח מֶלֶךְ יְרִיחוֹ אֶל־רָחָב לֵאמֹר הוֹצִיאִי הָאֲנָשִׁים הַבָּאִים אֵלַיִךְ אֲשֶׁר־בָּאוּ לְבֵיתֵךְ כִּי לַחְפֹּר אֶת־כׇּל־הָאָרֶץ בָּֽאוּ׃
4 ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು, “ನನ್ನ ಬಳಿಗೆ ಇಬ್ಬರು ಮನುಷ್ಯರು ಬಂದಿದ್ದರು. ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು.
וַתִּקַּח הָאִשָּׁה אֶת־שְׁנֵי הָאֲנָשִׁים וַֽתִּצְפְּנוֹ וַתֹּאמֶר ׀ כֵּן בָּאוּ אֵלַי הָאֲנָשִׁים וְלֹא יָדַעְתִּי מֵאַיִן הֵֽמָּה׃
5 ಪಟ್ಟಣದ ಬಾಗಿಲು ಮುಚ್ಚುವ ಮುಸ್ಸಂಜೆ ವೇಳೆಯಲ್ಲಿ ಆ ಮನುಷ್ಯರು ಹೊರಟು ಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ. ಅವರನ್ನು ಬೇಗ ಹಿಂದಟ್ಟಿರಿ. ನಿಮಗೆ ಸಿಕ್ಕುವರು,” ಎಂದಳು.
וַיְהִי הַשַּׁעַר לִסְגּוֹר בַּחֹשֶׁךְ וְהָאֲנָשִׁים יָצָאוּ לֹא יָדַעְתִּי אָנָה הָלְכוּ הָאֲנָשִׁים רִדְפוּ מַהֵר אַחֲרֵיהֶם כִּי תַשִּׂיגֽוּם׃
6 ಆದರೆ ಆಕೆಯು ಅವರನ್ನು ಮಾಳಿಗೆಯ ಮೇಲೆ ಏರಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನೊಳಗೆ ಬಚ್ಚಿಟ್ಟಿದ್ದಳು.
וְהִיא הֶעֱלָתַם הַגָּגָה וַֽתִּטְמְנֵם בְּפִשְׁתֵּי הָעֵץ הָעֲרֻכוֹת לָהּ עַל־הַגָּֽג׃
7 ಆ ಮನುಷ್ಯರು ಯೊರ್ದನ್ ನದಿ ದಾರಿ ಹಿಡಿದು ಹೋಗಿ ನದಿ ದಾಟುವ ಸ್ಥಳದವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ, ಪಟ್ಟಣದ ಹೆಬ್ಬಾಗಿಲು ಮುಚ್ಚಿದರು.
וְהָאֲנָשִׁים רָדְפוּ אַֽחֲרֵיהֶם דֶּרֶךְ הַיַּרְדֵּן עַל הַֽמַּעְבְּרוֹת וְהַשַּׁעַר סָגָרוּ אַחֲרֵי כַּאֲשֶׁר יָצְאוּ הָרֹדְפִים אַחֲרֵיהֶֽם׃
8 ಗೂಢಚಾರರು ಮಲಗುವುದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ, ಅವರ ಬಳಿಗೆ ಬಂದು,
וְהֵמָּה טֶרֶם יִשְׁכָּבוּן וְהִיא עָלְתָה עֲלֵיהֶם עַל־הַגָּֽג׃
9 “ಯೆಹೋವ ದೇವರು ನಿಮಗೆ ದೇಶವನ್ನು ಕೊಟ್ಟಿದ್ದಾರೆಂದೂ, ನಿಮ್ಮ ನಿಮಿತ್ತ ನಮಗೆ ಮಹಾ ಭೀತಿಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.
וַתֹּאמֶר אֶל־הָאֲנָשִׁים יָדַעְתִּי כִּֽי־נָתַן יְהֹוָה לָכֶם אֶת־הָאָרֶץ וְכִֽי־נָפְלָה אֵֽימַתְכֶם עָלֵינוּ וְכִי נָמֹגוּ כׇּל־יֹשְׁבֵי הָאָרֶץ מִפְּנֵיכֶֽם׃
10 ನೀವು ಈಜಿಪ್ಟಿನಿಂದ ಹೊರಡುವಾಗ ಯೆಹೋವ ದೇವರು ಹೇಗೆ ನಿಮಗೋಸ್ಕರ ಕೆಂಪುಸಮುದ್ರದ ನೀರನ್ನು ಬತ್ತಿಹೋಗಮಾಡಿದ್ದನ್ನೂ, ನೀವು ಸಂಪೂರ್ಣ ನಿರ್ಮೂಲ ಮಾಡಿದ ಯೊರ್ದನ್ ನದಿ ಆಚೆಯಲ್ಲಿದ್ದ ಅಮೋರಿಯರ ಇಬ್ಬರು ಅರಸುಗಳಾದ ಸೀಹೋನನಿಗೂ, ಓಗನಿಗೂ ಮಾಡಿದ್ದನ್ನೂ ನಾವು ಕೇಳಿದ್ದೇವೆ.
כִּי שָׁמַעְנוּ אֵת אֲשֶׁר־הוֹבִישׁ יְהֹוָה אֶת־מֵי יַם־סוּף מִפְּנֵיכֶם בְּצֵאתְכֶם מִמִּצְרָיִם וַאֲשֶׁר עֲשִׂיתֶם לִשְׁנֵי מַלְכֵי הָאֱמֹרִי אֲשֶׁר בְּעֵבֶר הַיַּרְדֵּן לְסִיחֹן וּלְעוֹג אֲשֶׁר הֶחֱרַמְתֶּם אוֹתָֽם׃
11 ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕುಂದಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ನಿಮ್ಮ ದೇವರಾದ ಯೆಹೋವ ದೇವರೇ ಮೇಲಿರುವ ಪರಲೋಕದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾರೆ.
וַנִּשְׁמַע וַיִּמַּס לְבָבֵנוּ וְלֹא־קָמָה עוֹד רוּחַ בְּאִישׁ מִפְּנֵיכֶם כִּי יְהֹוָה אֱלֹהֵיכֶם הוּא אֱלֹהִים בַּשָּׁמַיִם מִמַּעַל וְעַל־הָאָרֶץ מִתָּֽחַת׃
12 “ಈಗ ನೀವು ನನಗೊಂದು ಪ್ರಮಾಣಮಾಡಬೇಕು. ನಾನು ನಿಮಗೆ ದಯೆ ತೋರಿಸಿದ್ದರಿಂದ ನೀವು ನನಗೂ ನನ್ನ ತಂದೆಯ ಮನೆಗೂ ದಯೆ ತೋರಿಸಬೇಕು. ನನಗೆ ನಿಶ್ಚಯವಾದ ಗುರುತನ್ನು ಕೊಡಬೇಕು.
וְעַתָּה הִשָּֽׁבְעוּ־נָא לִי בַּֽיהֹוָה כִּֽי־עָשִׂיתִי עִמָּכֶם חָסֶד וַעֲשִׂיתֶם גַּם־אַתֶּם עִם־בֵּית אָבִי חֶסֶד וּנְתַתֶּם לִי אוֹת אֱמֶֽת׃
13 ನನ್ನ ತಂದೆಯನ್ನೂ ನನ್ನ ತಾಯಿಯನ್ನೂ, ನನ್ನ ಸಹೋದರರನ್ನೂ ನನ್ನ ಸಹೋದರಿಯರನ್ನೂ, ಅವರಲ್ಲಿರುವ ಎಲ್ಲರನ್ನೂ ಜೀವದಿಂದಿರಿಸಿ, ನಮ್ಮ ಪ್ರಾಣವನ್ನು ಸಾವಿನಿಂದ ತಪ್ಪಿಸಬೇಕು ಎಂದು ಯೆಹೋವ ದೇವರ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದಳು.
וְהַחֲיִתֶם אֶת־אָבִי וְאֶת־אִמִּי וְאֶת־אַחַי וְאֶת־[אַחְיוֹתַי] (אחותי) וְאֵת כׇּל־אֲשֶׁר לָהֶם וְהִצַּלְתֶּם אֶת־נַפְשֹׁתֵינוּ מִמָּֽוֶת׃
14 ಆಗ ಅವರು ಆಕೆಗೆ, “ನೀನು ಈ ನಮ್ಮ ಕಾರ್ಯವನ್ನು ಬಹಿರಂಗ ಮಾಡದೆ ಇದ್ದರೆ, ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿ ಇರುವೆವು. ಯೆಹೋವ ದೇವರು ನಮಗೆ ದೇಶವನ್ನು ಕೊಟ್ಟಾಗ, ಸತ್ಯದಿಂದಲೂ, ದಯೆಯಿಂದಲೂ ನಡೆದುಕೊಳ್ಳುವೆವು,” ಎಂದರು.
וַיֹּאמְרוּ לָהּ הָאֲנָשִׁים נַפְשֵׁנוּ תַחְתֵּיכֶם לָמוּת אִם לֹא תַגִּידוּ אֶת־דְּבָרֵנוּ זֶה וְהָיָה בְּתֵת־יְהֹוָה לָנוּ אֶת־הָאָרֶץ וְעָשִׂינוּ עִמָּךְ חֶסֶד וֶאֱמֶֽת׃
15 ಆಗ ಆಕೆಯು ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿಬಿಟ್ಟಳು. ಏಕೆಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು.
וַתּוֹרִדֵם בַּחֶבֶל בְּעַד הַחַלּוֹן כִּי בֵיתָהּ בְּקִיר הַחוֹמָה וּבַֽחוֹמָה הִיא יוֹשָֽׁבֶת׃
16 ಆಕೆಯು ಅವರಿಗೆ, “ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ, ಅವರು ತಿರುಗಿ ಬರುವವರೆಗೂ ಅಲ್ಲಿ ಮೂರು ದಿವಸ ಅಡಗಿಕೊಂಡಿದ್ದು, ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ,” ಎಂದಳು.
וַתֹּאמֶר לָהֶם הָהָרָה לֵּכוּ פֶּֽן־יִפְגְּעוּ בָכֶם הָרֹֽדְפִים וְנַחְבֵּתֶם שָׁמָּה שְׁלֹשֶׁת יָמִים עַד שׁוֹב הָרֹֽדְפִים וְאַחַר תֵּלְכוּ לְדַרְכְּכֶֽם׃
17 ಆಗ ಆ ಮನುಷ್ಯರು ಆಕೆಗೆ, “ನೀನು ನಮ್ಮಿಂದ ಮಾಡಿಸಿದ ಈ ನಿನ್ನ ಪ್ರಮಾಣದಿಂದ ಬಿಡುಗಡೆಯಾಗಿರುವೆವು.
וַיֹּאמְרוּ אֵלֶיהָ הָאֲנָשִׁים נְקִיִּם אֲנַחְנוּ מִשְּׁבֻעָתֵךְ הַזֶּה אֲשֶׁר הִשְׁבַּעְתָּֽנוּ׃
18 ಇಗೋ, ನಾವು ಈ ದೇಶದಲ್ಲಿ ಪ್ರವೇಶಿಸುವಾಗ, ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕಡುಗೆಂಪು ಹಗ್ಗವನ್ನು ಕಟ್ಟಿ, ನಿನ್ನ ತಂದೆಯನ್ನೂ, ನಿನ್ನ ತಾಯಿಯನ್ನೂ, ನಿನ್ನ ಸಹೋದರರನ್ನೂ, ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು.
הִנֵּה אֲנַחְנוּ בָאִים בָּאָרֶץ אֶת־תִּקְוַת חוּט הַשָּׁנִי הַזֶּה תִּקְשְׁרִי בַּֽחַלּוֹן אֲשֶׁר הוֹרַדְתֵּנוּ בוֹ וְאֶת־אָבִיךְ וְאֶת־אִמֵּךְ וְאֶת־אַחַיִךְ וְאֵת כׇּל־בֵּית אָבִיךְ תַּאַסְפִי אֵלַיִךְ הַבָּֽיְתָה׃
19 ಯಾವನಾದರೂ ನಿನ್ನ ಮನೆಯ ಬಾಗಿಲಿನಿಂದ ಹೊರಗೆ ಹೊರಟು ಬೀದಿಗೆ ಬಂದರೆ, ಅವನ ರಕ್ತವು ಅವನ ತಲೆಯ ಮೇಲೆ ಇರುವುದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಮಾಡಿದರೆ, ಅವನ ರಕ್ತ ಅಪರಾಧವು ನಮ್ಮ ತಲೆಯ ಮೇಲೆ ಇರುವುದು.
וְהָיָה כֹּל אֲשֶׁר־יֵצֵא מִדַּלְתֵי בֵיתֵךְ ׀ הַחוּצָה דָּמוֹ בְרֹאשׁוֹ וַאֲנַחְנוּ נְקִיִּם וְכֹל אֲשֶׁר יִֽהְיֶה אִתָּךְ בַּבַּיִת דָּמוֹ בְרֹאשֵׁנוּ אִם־יָד תִּֽהְיֶה־בּֽוֹ׃
20 ಆದರೆ ನೀನು ಈ ನಮ್ಮ ಕಾರ್ಯವನ್ನು ಬಹಿರಂಗಪಡಿಸಿದರೆ, ನೀನು ನಮಗೆ ಇಟ್ಟ ಆಣೆಯಿಂದ ನಾವು ಬಿಡುಗಡೆಯಾಗಿರುವೆವು,” ಎಂದರು.
וְאִם־תַּגִּידִי אֶת־דְּבָרֵנוּ זֶה וְהָיִינוּ נְקִיִּם מִשְּׁבֻעָתֵךְ אֲשֶׁר הִשְׁבַּעְתָּֽנוּ׃
21 ಅದಕ್ಕೆ ಆಕೆಯು, “ನಿಮ್ಮ ಮಾತುಗಳ ಪ್ರಕಾರವೇ ಆಗಲಿ,” ಎಂದು ಹೇಳಿದಳು. ಅನಂತರ ಅವರನ್ನು ಕಳುಹಿಸಿಬಿಟ್ಟಳು. ಅವರು ಹೋದಾಗ, ಆ ಕಡುಗೆಂಪು ಹಗ್ಗವನ್ನು ಕಿಟಿಕಿಯಲ್ಲಿ ಕಟ್ಟಿದಳು.
וַתֹּאמֶר כְּדִבְרֵיכֶם כֶּן־הוּא וַֽתְּשַׁלְּחֵם וַיֵּלֵכוּ וַתִּקְשֹׁר אֶת־תִּקְוַת הַשָּׁנִי בַּחַלּֽוֹן׃
22 ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರುಗಿ ಬರುವವರೆಗೂ ಮೂರು ದಿನ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವರನ್ನು ಹುಡುಕಿ ಕಾಣದೆ ಹೋದರು.
וַיֵּֽלְכוּ וַיָּבֹאוּ הָהָרָה וַיֵּשְׁבוּ שָׁם שְׁלֹשֶׁת יָמִים עַד־שָׁבוּ הָרֹֽדְפִים וַיְבַקְשׁוּ הָרֹדְפִים בְּכׇל־הַדֶּרֶךְ וְלֹא מָצָֽאוּ׃
23 ಆಗ ಅವರಿಬ್ಬರು ಹಿಂದಿರುಗಿ ಬೆಟ್ಟದಿಂದ ಇಳಿದು, ನದಿಯನ್ನು ದಾಟಿ, ನೂನನ ಮಗ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವರಿಗೆ ವಿವರಿಸಿದರು.
וַיָּשֻׁבוּ שְׁנֵי הָֽאֲנָשִׁים וַיֵּרְדוּ מֵֽהָהָר וַיַּֽעַבְרוּ וַיָּבֹאוּ אֶל־יְהוֹשֻׁעַ בִּן־נוּן וַיְסַפְּרוּ־לוֹ אֵת כׇּל־הַמֹּצְאוֹת אוֹתָֽם׃
24 ಅವರು ಯೆಹೋಶುವನಿಗೆ, “ನಿಶ್ಚಯವಾಗಿ ಯೆಹೋವ ದೇವರು ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ. ದೇಶದ ನಿವಾಸಿಗಳೆಲ್ಲರೂ ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ,” ಎಂದರು.
וַיֹּֽאמְרוּ אֶל־יְהוֹשֻׁעַ כִּֽי־נָתַן יְהֹוָה בְּיָדֵנוּ אֶת־כׇּל־הָאָרֶץ וְגַם־נָמֹגוּ כׇּל־יֹשְׁבֵי הָאָרֶץ מִפָּנֵֽינוּ׃

< ಯೆಹೋಶುವನು 2 >