< ಯೋನನು 4 >

1 ಆದರೆ ಯೋನನು ತುಂಬಾ ಬೇಸರಗೊಂಡನು. ಅವನಿಗೆ ಬಹು ಕೋಪ ಬಂತು.
ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು.
2 ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ: “ಯೆಹೋವ ದೇವರೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನು ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು. ನೀವು ಕೃಪೆಯೂ ಅನುಕಂಪವೂ ಪ್ರೀತಿಯಲ್ಲಿ ಐಶ್ವರ್ಯವುಳ್ಳ ದೇವರೆಂದೂ ಕೇಡಿನ ವಿಷಯವಾಗಿ ಮನಮರುಗುವವರೆಂದೂ ನನಗೆ ತಿಳಿದಿತ್ತು.
ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು.
3 ಆದ್ದರಿಂದ ಯೆಹೋವ ದೇವರೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆಯಿರಿ, ಏಕೆಂದರೆ ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು.
ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು.
4 ಆದರೆ ಯೆಹೋವ ದೇವರು, “ನೀನು ಹೀಗೆ ಕೋಪ ಮಾಡಿಕೊಳ್ಳುವುದು ಸರಿಯೋ?” ಎಂದು ಯೋನನಿಗೆ ಹೇಳಿದರು.
ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು.
5 ಆಗ ಯೋನನು ಪಟ್ಟಣವನ್ನು ಬಿಟ್ಟು, ಪಟ್ಟಣದ ಪೂರ್ವದಿಕ್ಕಿನ ಕಡೆಯಲ್ಲಿ ಕುಳಿತುಕೊಂಡು, ಗುಡಿಸಲನ್ನು ಕಟ್ಟಿಕೊಂಡು, ಪಟ್ಟಣದಲ್ಲಿ ಏನಾಗುವುದೆಂದು ನೋಡುವವರೆಗೆ ಗುಡಿಸಲಿನ ನೆರಳಿನಲ್ಲಿ ಕುಳಿತುಕೊಂಡನು.
ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು.
6 ದೇವರಾದ ಯೆಹೋವ ದೇವರು ಒಂದು ಸೋರೆ ಬಳ್ಳಿಯನ್ನು ಹಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು, ಅವನ ತಲೆಗೆ ನೆರಳು ಕೊಟ್ಟು, ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದರು. ಯೋನನು ಆ ಸೋರೆ ಬಳ್ಳಿಯ ವಿಷಯವಾಗಿ ಬಹಳ ಸಂತೋಷಪಟ್ಟನು.
ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು.
7 ಮಾರನೆಯ ದಿವಸ ಉದಯವಾದಾಗ, ದೇವರು ಒಂದು ಹುಳುವನ್ನು ಸಿದ್ಧಮಾಡಿದರು. ಅದು ಸೋರೆ ಬಳ್ಳಿಯನ್ನು ಒಣಗುವ ಹಾಗೆ ಹೊಡೆಯಿತು.
ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು.
8 ಸೂರ್ಯೋದಯವಾದಾಗ ದೇವರು ಉಗ್ರವಾದ ಪೂರ್ವ ಗಾಳಿಯನ್ನು ಸಿದ್ಧಮಾಡಿದರು. ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ, ಅವನು ಮೂರ್ಛೆ ಹೋಗಿ, ಮರಣವನ್ನು ಕೇಳಿಕೊಂಡು, “ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು.
ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು.
9 ಆದರೆ ದೇವರು ಯೋನನಿಗೆ, “ನೀನು ಸೋರೆ ಬಳ್ಳಿಯನ್ನು ಕುರಿತು ಕೋಪ ಮಾಡುವುದು ಸರಿಯೋ?” ಎಂದರು. ಅವನು, “ನಾನು ಸಾಯುವಷ್ಟು ಕೋಪ ಮಾಡುವುದು ಒಳ್ಳೆಯದೇ,” ಎಂದನು.
ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು.
10 ಆದರೆ ಯೆಹೋವ ದೇವರು, “ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ, ಒಂದೇ ರಾತ್ರಿಯಲ್ಲಿ ನಾಶವಾದಂಥ ಸೋರೆ ಬಳ್ಳಿಗಾಗಿ ಚಿಂತಿಸಿದೆಯಲ್ಲಾ,
೧೦ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು;
11 ಹಾಗಾದರೆ ಎಡಬಲ ಕೈಗಳನ್ನು ತಿಳಿಯದವರಾದ ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು ಬಹಳ ಪಶುಪ್ರಾಣಿಗಳೂ ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆಯನ್ನು ನಾನು ಚಿಂತಿಸಬಾರದೋ?” ಎಂದರು.
೧೧ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.

< ಯೋನನು 4 >