< ಯೋಬನು 7 >

1 “ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?
ಭೂಲೋಕದಲ್ಲಿ ಮನುಷ್ಯನಿಗೆ ದುಡಿಯುವ ಕಾಲ ಉಂಟಲ್ಲವೇ. ಅವನ ದಿನಗಳು ಜೀತದಾಳಿನ ದಿನಗಳಂತೆ ಕಳೆಯುತ್ತವೆ.
2 ಗುಲಾಮನು ಸಾಯಂಕಾಲದ ನೆರಳನ್ನು ಅಪೇಕ್ಷಿಸುವ ಪ್ರಕಾರವೂ, ನಾನು ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾರವೂ ಇದ್ದೇನೆ.
ನಾನು ಸಂಜೆಯನ್ನು ಬಯಸುವ ದಾಸನಂತೆಯೂ, ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ.
3 ನನಗೆ ನಿರರ್ಥಕತೆಯ ತಿಂಗಳುಗಳನ್ನು ನೀಡಲಾಗಿದೆ; ಬೇಸರಿಕೆಯ ರಾತ್ರಿಗಳು ನನಗೆ ನೇಮಕವಾಗಿವೆ.
ಬೇಸರಿಕೆಯ ಮಾಸಗಳೂ, ಆಯಾಸದ ರಾತ್ರಿಗಳೂ ನನ್ನ ಪಾಲಿಗೆ ನೇಮಕವಾಗಿವೆ.
4 ಮಲಗುವ ವೇಳೆಯಲ್ಲಿ, ‘ಯಾವಾಗ ಏಳುವೆನೋ?’ ಅಂದುಕೊಳ್ಳುವೆನು, ರಾತ್ರಿ ಬೆಳೆಯುತ್ತಾ ಹೋಗುತ್ತದೆ; ಉದಯದವರೆಗೂ ಹೊರಳಿ ಹೊರಳಿ ಸಾಕಾಗುತ್ತದೆ.
ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೋ ಅಂದುಕೊಳ್ಳುವೆನು; ರಾತ್ರಿಯು ಬೆಳೆಯುತ್ತಾ ಹೋಗುತ್ತದೆ. ಉದಯದವರೆಗೂ ಹೊರಹೊರಳಿ ಸಾಕಾಗುತ್ತದೆ.
5 ನನ್ನ ದೇಹವು ಹುಳಹಕ್ಕಳೆಗಳನ್ನೂ ಧರಿಸಿಕೊಂಡಿದೆ; ನನ್ನ ಚರ್ಮವು ಕಜ್ಜಿಯಿಂದ ಬಿರಿದು ಹೋಗಿದೆ.
ಹುಳಗಳೂ, ಮಣ್ಣುಹಕ್ಕಳೆಗಳೂ ನನ್ನ ಮಾಂಸವನ್ನು ಮುಸುಕಿವೆ. (ಬಿರಿದ) ಚರ್ಮವು ಕೂಡುತ್ತಾ ಬಂದು ಬಿರಿಯುತ್ತದೆ.
6 “ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ದಿನಗಳು ನಿರೀಕ್ಷೆ ಇಲ್ಲದೆ ಮುಗಿಯುತ್ತವೆ.
ನನ್ನ ದಿನಗಳು ಮಗ್ಗದ ಲಾಳಿಗಿಂತ ವೇಗವಾಗಿ, ನಿರೀಕ್ಷೆಯಿಲ್ಲದೆ ಕಳೆದು ಹೋಗುತ್ತವೆ.
7 ಓ ದೇವರೇ, ನನ್ನ ಜೀವವು ಕೇವಲ ಉಸಿರೆಂದು ನೆನಪುಮಾಡಿಕೊಳ್ಳಿರಿ. ನನ್ನ ಕಣ್ಣು ತಿರುಗಿ ಸಂತೋಷವನ್ನು ಕಾಣುವುದಿಲ್ಲ.
ನನ್ನ ಜೀವವು ಗಾಳಿಯಂತೆ ಇದೆಯೆಂತಲೂ, ನನ್ನ ಕಣ್ಣು ಇನ್ನು ಸುಖವನ್ನು ಕಾಣುವುದಿಲ್ಲವೆಂತಲೂ ನೆನಪು ಮಾಡಿಕೋ.
8 ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ.
ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವುದಿಲ್ಲ, ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವುದಿಲ್ಲ.
9 ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. (Sheol h7585)
ಮೋಡ ಹರಿದು ಮಾಯವಾಗುವಂತೆ, ಪಾತಾಳಕ್ಕೆ ಇಳಿದು ಹೋದವನು ತಿರುಗಿ ಬರುವುದಿಲ್ಲ. (Sheol h7585)
10 ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವುದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.
೧೦ಅವನು ತನ್ನ ಮನೆಗೆ ಪುನಃ ಸೇರುವುದಿಲ್ಲ, ಇನ್ನು ಮೇಲೆ ಅವನ ನಿವಾಸಕ್ಕೆ ಅವನ ಪರಿಚಯ ಇರುವುದಿಲ್ಲ.
11 “ಆದ್ದರಿಂದ ನಾನು ನನ್ನ ಬಾಯಿ ಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತಾಡುವೆನು, ನನ್ನ ಆತ್ಮದ ಕಹಿಯಲ್ಲಿ ನಾನು ವಾದಿಸುವೆನು.
೧೧ನಾನಂತೂ ಬಾಯಿಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತನಾಡುವೆನು, ಮನೋವ್ಯಥೆಯಿಂದ ಪ್ರಲಾಪಿಸುವೆನು.
12 ನೀವು ನನಗೆ ಕಾವಲಿಡುವುದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಿಲವೋ?
೧೨ನೀನು ನನ್ನ ಮೇಲೆ ಕಾವಲಿಡುವುದೇಕೆ? ನಾನೇನು ಸಮುದ್ರವೋ, ಸಾಗರವೆಂಬ ಘಟಸರ್ಪವೋ?
13 ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು; ನನ್ನ ಮಂಚವು ನನ್ನ ಚಿಂತೆಯನ್ನು ಶಮನ ಮಾಡಲಿ ಎಂದುಕೊಳ್ಳುವಾಗ,
೧೩ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು, ನನ್ನ ಮಂಚವು ನನ್ನ ಬಾಧೆಯನ್ನು ಹೊರುವುದು ಅಂದುಕೊಳ್ಳುವಾಗ
14 ನೀವು ಸ್ವಪ್ನಗಳಿಂದ ನನ್ನನ್ನು ಹೆದರಿಸುತ್ತೀರಿ; ದರ್ಶನಗಳಿಂದ ನನ್ನನ್ನು ಭಯಪಡಿಸುತ್ತೀರಿ.
೧೪ನೀನು ಸ್ವಪ್ನಗಳಿಂದ ನನ್ನನ್ನು ಬೆದರಿಸಿ, ದರ್ಶನಗಳ ಮೂಲಕ ಭಯಪಡಿಸುವಿ.
15 ಆದ್ದರಿಂದ ನನ್ನ ದೇಹದಲ್ಲಿ ಸಂಕಟಪಡುವುದಕ್ಕಿಂತಲೂ ಉಸಿರುಕಟ್ಟಿ, ನಾನು ನನ್ನ ಪ್ರಾಣಬಿಡುವುದು ಲೇಸು.
೧೫ನನ್ನ ಆತ್ಮವು ಈ ಅಸ್ಥಿಪಂಜರದಲ್ಲಿ ಉಳಿಯುವುದಕ್ಕಿಂತಲೂ, ಉಸಿರುಕಟ್ಟಿ ಸಾಯುವುದೇ ಲೇಸೆಂದು ಬಯಸುತ್ತದೆ.
16 ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ; ನಿರಂತರ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟುಬಿಡಿರಿ; ನನ್ನ ಬಾಳಿನ ದಿನಗಳಿಗೆ ಅರ್ಥವಿಲ್ಲ.
೧೬ನಾನು ಬೇಸರಗೊಂಡಿದ್ದೇನೆ, ಹೀಗೆ ನಿರಂತರ ಬದುಕುವುದಕ್ಕೆ ಇಷ್ಟವಿಲ್ಲ. ನನ್ನನ್ನು ಬಿಟ್ಟುಬಿಡು; ನನ್ನ ದಿನಗಳು ಉಸಿರಿನಂತಿವೆ.
17 “ದೇವರೇ, ಮಾನವನು ಎಷ್ಟರವನು? ನೀವು ಮಾನವನಿಗೆ ಬಹು ಗೌರವ ಕೊಡುತ್ತೀರಿ, ಅವನ ಕಡೆಗೆ ಗಮನಹರಿಸುತ್ತೀರಿ.
೧೭ಮಾನವನು ಎಷ್ಟರವನು, ಅವನನ್ನು ನೀನು ಏಕೆ ಲಕ್ಷಿಸಬೇಕು? ಅವನಲ್ಲಿ ಏಕೆ ಮನಸ್ಸಿಡಬೇಕು?
18 ಮನುಷ್ಯನನ್ನು ಪ್ರತಿ ಉದಯದಲ್ಲಿ ವಿಚಾರಿಸುತ್ತೀರಿ, ನೀವು ಕ್ಷಣಕ್ಷಣಕ್ಕೆ ಅವನನ್ನು ಪರೀಕ್ಷಿಸುವುದೇಕೆ?
೧೮ದಿನಂಪ್ರತಿ ಅವನ ಮೇಲೆ ಲಕ್ಷ್ಯವಿಟ್ಟು, ಕ್ಷಣಕ್ಷಣಕ್ಕೂ ಅವನನ್ನು ಪರಿಶೋಧಿಸುವುದೇಕೆ?
19 ನೀವು ನನ್ನ ಕಡೆಯಿಂದ ದೃಷ್ಟಿಯನ್ನು ತೊಲಗಿಸುವುದಿಲ್ಲವೋ? ನಾನು ಒಂದು ಕ್ಷಣ ಉಗುಳು ನುಂಗುವುದಕ್ಕೂ ನನ್ನನ್ನು ಬಿಡುವುದಿಲ್ಲ?
೧೯ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿ ತಿರುಗಿಸದೆ ಇರುವಿ? ಉಗುಳನ್ನು ನುಂಗುವಷ್ಟು ಕಾಲವಾದರೂ ನನ್ನನ್ನು ಬಿಡುವುದಿಲ್ಲವೇ?
20 ಮನುಷ್ಯರನ್ನು ಕಾಯುವವರೇ, ನಾನು ಪಾಪಮಾಡಿದ್ದರೆ, ನಾವು ಮಾಡುವ ಪ್ರತಿಯೊಂದನ್ನೂ ನೋಡುವವರೇ, ನಾನು ನಿಮಗೆ ಏನು ಮಾಡಿದೆ? ನಾನು ನಿಮಗೆ ಭಾರವಾಗಿದ್ದೇನೋ? ನನ್ನನ್ನು ನಿಮ್ಮ ಗುರಿಯಾಗಿ ಇಟ್ಟುಕೊಳ್ಳುವುದು ಏಕೆ?
೨೦ಮನುಷ್ಯರ ಮೇಲೆ ಕಾವಲಿಡುವವನೇ, ನಾನು ಪಾಪ ಮಾಡಿದ್ದರೂ ನನ್ನ ಕೃತ್ಯದಿಂದ ನಿನಗೆ ಏನಾಯಿತು? ನನ್ನನ್ನು ಶಿಕ್ಷೆಗೆ ಗುರಿಮಾಡಿಕೊಂಡದ್ದೇಕೆ? ನನಗೆ ನಾನೇ ಭಾರವಾಗಿದ್ದೇನೆ.
21 ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? ನನ್ನ ಪಾಪವನ್ನು ಕ್ಷಮಿಸಬಾರದೇ? ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.”
೨೧ನೀನು ನನ್ನ ಅಪರಾಧವನ್ನು ಕ್ಷಮಿಸಿ ನನ್ನ ದೋಷವನ್ನು ಏಕೆ ಪರಿಹರಿಸುವುದಿಲ್ಲ? ನಾನು ಈಗ ಮಣ್ಣಿನಲ್ಲಿ ಮಲಗಿಕೊಳ್ಳುವೆನು; ನೀನು ನನ್ನನ್ನು ಹುಡುಕುವಾಗ ನಾನು ಇಲ್ಲದೆ ಹೋಗಿರುವೆನು.

< ಯೋಬನು 7 >