< ಯೋಬನು 15 >
1 ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು:
2 “ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಪೂರ್ವದಿಕ್ಕಿನ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟೋ?
3 ನಿಷ್ಪ್ರಯೋಜಕವಾದ ನುಡಿಗಳಿಂದಲೂ, ಕೆಲಸಕ್ಕೆ ಬಾರದ ಮಾತುಗಳಿಂದಲೂ ಜ್ಞಾನಿಯು ವಾದಿಸುವನೋ?
4 ನೀನಾದರೋ ದೇವರ ಭಯಭಕ್ತಿಯನ್ನು ಹಾಳುಮಾಡುತ್ತಿರುವೆ. ದೇವರ ಮೇಲಿನ ಭಕ್ತಿಯನ್ನು ಕಡಿಮೆ ಮಾಡುತ್ತಿರುವೆ.
5 ಏಕೆಂದರೆ ನಿನ್ನ ಪಾಪವೇ ನಿನ್ನ ಬಾಯಿಯನ್ನು ಪ್ರೇರೇಪಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆಯ್ದುಕೊಳ್ಳುತ್ತಿರುವೆ.
6 ನಾನಲ್ಲ, ನಿನ್ನ ಬಾಯಿಯೇ ನಿನ್ನನ್ನು ಖಂಡಿಸುತ್ತದೆ; ಹೌದು, ನಿನ್ನ ತುಟಿಗಳೇ ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.
7 “ನೀನು ಮೊದಲು ಹುಟ್ಟಿದ ಪುರುಷನೋ? ಬೆಟ್ಟಗಳಿಗೆ ಮುಂಚಿತವಾಗಿ ಹುಟ್ಟಿದವನೋ?
8 ನೀನು ದೇವರ ಆಲೋಚನಾ ಸಭೆಯಲ್ಲಿ ಸದಸ್ಯನೋ? ಜ್ಞಾನವು ನಿನಗೆ ಮಾತ್ರ ಮೀಸಲೋ?
9 ನಮಗೆ ತಿಳಿಯದೆ ಇರುವುದನ್ನು ನೀನು ಏನು ತಿಳಿದುಕೊಂಡಿರುವೆ? ನಮ್ಮಲ್ಲಿ ಇಲ್ಲದ ಯಾವ ಒಳನೋಟವನ್ನು ನೀನು ಅರ್ಥಮಾಡಿಕೊಂಡಿರುವೆ?
10 ತಲೆ ನರೆತವರೂ, ಹೆಚ್ಚು ಮುದುಕರಾದವರೂ, ನಿನ್ನ ತಂದೆಗಿಂತ ವೃದ್ಧರಾದವರೂ ನಮ್ಮಲ್ಲಿ ಇದ್ದಾರೆ.
11 ದೇವರ ಸಂತೈಸುವಿಕೆಗಳೂ ಮೃದುವಾದ ಹಿತವಚನಗಳು ನಿನಗೆ ಸಾಕಾಗಿರುವುದಿಲ್ಲವೋ?
12 ನಿನ್ನ ಹೃದಯವು ನಿನ್ನನ್ನು ಸೆಳೆದಿರುವುದು ಏಕೆ? ಏಕೆ ನಿನ್ನ ಕಣ್ಣು ಕಿಡಿಕಾರುತ್ತಿದೆ?
13 ನೀನು ದೇವರ ವಿರುದ್ಧ ನಿನ್ನ ಕೋಪವನ್ನು ಹೊರಹಾಕುತ್ತಿರುವೆ? ನಿನ್ನ ಬಾಯಿಂದ ಕೋಪದ ಮಾತುಗಳನ್ನು ಹೊರಡಿಸುತ್ತೀಯಲ್ಲಾ?
14 “ಮನುಷ್ಯನು ಎಷ್ಟರವನು? ಅವನು ಶುದ್ಧನಿರಲು ಸಾಧ್ಯವೇ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
15 ದೇವರು ತಮ್ಮ ಪರಿಶುದ್ಧರನ್ನು ಆತುಕೊಂಡಿರುವುದಿಲ್ಲ; ಆಕಾಶಗಳೂ ದೇವರ ದೃಷ್ಟಿಯಲ್ಲಿ ಶುದ್ಧವಲ್ಲ.
16 ಹಾಗಿರುವಾಗ, ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು, ದೇವರ ದೃಷ್ಟಿಯಲ್ಲಿ ಎಷ್ಟು ಅಲ್ಪನೂ ಅಶುದ್ಧನೂ ಆಗಿದ್ದಾನಲ್ಲವೇ?
17 “ಕೇಳು, ನಾನು ನಿನಗೆ ವಿವರಿಸುತ್ತೇನೆ, ನಾನು ನೋಡಿದ್ದನ್ನು ನಿನಗೆ ಹೇಳುತ್ತೇನೆ,
18 ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನ್ನೇ ಮರೆಮಾಡದೆ ನಮಗೆ ಪ್ರಕಟಿಸಿದರು.
19 ಅವರಿಗೆ ದೇಶವು ಕೊಡಲಾಗಿತ್ತು; ಅವರ ಮಧ್ಯದಲ್ಲಿ ಅಂದು ಪರದೇಶೀಯರು ಹಾದುಹೋಗುವಂತಿರಲಿಲ್ಲ.
20 ಜ್ಞಾನಿಗಳು ಹೇಳಿದ್ದೇನೆಂದರೆ: ದುಷ್ಟನು ತನ್ನ ಜೀವಮಾನವೆಲ್ಲಾ ವೇದನೆಪಡುತ್ತಾನೆ; ನಿರ್ದಯನು ತನ್ನ ವರ್ಷಗಳೆಲ್ಲ ತೊಂದರೆಗಳನ್ನು ಸಂಗ್ರಹಿಸುತ್ತಾನೆ.
21 ಭಯಂಕರವಾದ ಸಂಗತಿಗಳು ಅವನ ಕಿವಿಗೆ ಬೀಳುತ್ತವೆ; ಎಲ್ಲವು ಸುಖವಾಗಿರುವಾಗ ಸುಲಿಗೆ ಮಾಡುವವನು ದುಷ್ಟನ ಮೇಲೆ ದಾಳಿ ಮಾಡುತ್ತಾನೆ.
22 ಕತ್ತಲೆಯೊಳಗಿಂದ ಪಾರಾಗುತ್ತೇನೆಂದು ದುಷ್ಟನು ನಂಬುವುದಿಲ್ಲ; ಅವನ ಖಡ್ಗವು ಅವನಿಗಾಗಿ ಕಾದಿದೆ.
23 ಅವನು ಆಹಾರ ಎಲ್ಲಿ ಎಂದು ರಣಹದ್ದಿನ ಹಾಗೆ ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.
24 ಇಕ್ಕಟ್ಟೂ, ಸಂಕಟವೂ ಅವನನ್ನು ಹೆದರಿಸಿ, ಆಕ್ರಮಣ ಮಾಡಲು ಸಿದ್ಧನಾದ ರಾಜನಂತೆ ತೊಂದರೆಗಳು ಅವನನ್ನು ಆವರಿಸುತ್ತವೆ,
25 ಏಕೆಂದರೆ ದುಷ್ಟನು ದೇವರಿಗೆ ವಿರೋಧವಾಗಿ ಮುಷ್ಠಿ ತೋರಿಸಿದನಲ್ಲಾ, ಸರ್ವಶಕ್ತರ ಎದುರು ನಿಂತು ಶೂರನಂತೆ ಮೆರೆದನಲ್ಲಾ.
26 ದೇವರ ವಿರೋಧವಾಗಿ ಬಲವುಳ್ಳ ದೊಡ್ಡ ಗುರಾಣಿಯೊಂದಿಗೆ ಓಡುತ್ತಾನೆ.
27 “ದುಷ್ಟನು ತನ್ನ ಮುಖದಲ್ಲಿ ಕೊಬ್ಬೇರಿಸಿಕೊಂಡು, ತನ್ನ ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದಾನೆ.
28 ಹಾಳಾದ ಪಟ್ಟಣಗಳಲ್ಲಿಯೂ, ಯಾರೂ ವಾಸಿಸದ, ಕುಸಿಯಲು ಸಿದ್ಧವಾದಂಥ ಮನೆಗಳಲ್ಲಿಯೂ ವಾಸಮಾಡಿಕೊಂಡಿದ್ದಾನೆ.
29 ದುಷ್ಟನು ಐಶ್ವರ್ಯವಂತನಾಗುವುದಿಲ್ಲ; ಆದರೂ ಅವನ ಆಸ್ತಿಯು ಸ್ಥಿರವಲ್ಲ; ಅವನ ಸೊತ್ತು ಭೂಮಿಯ ಮೇಲೆ ವಿಸ್ತಾರವಾಗುವುದಿಲ್ಲ.
30 ಕತ್ತಲೆಯೊಳಗಿಂದ ಅವನು ಪಾರಾಗುವದಿಲ್ಲ; ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು; ದೇವರ ಬಾಯಿಯ ಶ್ವಾಸದಿಂದ ಅವನು ತೊಲಗಿ ಹೋಗುವನು.
31 ದುಷ್ಟನು ವ್ಯರ್ಥವಾದದ್ದನ್ನು ನಂಬಿ ಮೋಸಹೋಗದಿರಲಿ. ಏಕೆಂದರೆ, ವ್ಯರ್ಥವಾದವುಗಳಿಂದ ಅವನಿಗಾಗುವ ಪ್ರತಿಫಲವು ಶೂನ್ಯವೇ.
32 ದುಷ್ಟನು ತನ್ನ ಸಮಯಕ್ಕಿಂತ ಮೊದಲು ಬತ್ತಿ ಹೋಗುವನು; ಅವನ ಕೊಂಬೆಯು ಹಸಿರಾಗಿರುವುದಿಲ್ಲ.
33 ದ್ರಾಕ್ಷೆಯ ಬಳ್ಳಿಯಂತೆ ಅವನು ತನ್ನ ಮಾಗದ ಫಲವನ್ನು ಹಾಳುಮಾಡಿಕೊಳ್ಳುವನು; ದುಷ್ಟನು ಹೂವುಗಳನ್ನು ಉದುರಿಸುವ ಓಲಿವ್ ಎಣ್ಣೆಯ ಮರದ ಹಾಗೆ ಇರುವನು.
34 ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.
35 ಅವರು ಹಿಂಸೆಯನ್ನು ಗರ್ಭಧರಿಸಿ, ಕೆಟ್ಟದ್ದನ್ನು ಹೆರುವರು; ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”